ಮಂಡ್ಯ : ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮ ಪಂಚಾಯಿತಿಯನ್ನು ಮದ್ದೂರು ನಗರಸಭೆಗೆ ಸೇರ್ಪಡೆಗೊಳಿಸಿರುವುದನ್ನು ವಿರೋಧಿಸಿ ಸ್ಥಳೀಯ ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಕೈಗೊಂಡು ಗ್ರಾಮ ಪಂಚಾಯಿತಿ ಕಚೇರಿ ಎದುರು ಸೋಮವಾರದಿಂದ ಪ್ರತಿಭಟನೆ ಕೈಗೊಂಡಿದ್ದಾರೆ.
ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾ.ಪಂ. ಕಚೇರಿ ಬಳಿ ಆಗಮಿಸಿದ ನೂರಾರು ಸಂಖ್ಯೆಯ ನಿವಾಸಿಗಳು ಪಂಚಾಯಿತಿಯನ್ನು ನಗರಸಭೆಯನ್ನಾಗಿಸಲು ಸಹಿ ಹಾಕಿರುವ ಸ್ಥಳೀಯ ಚುನಾಯಿತ ಪ್ರತಿನಿಧಿಗಳ ವಿರುದ್ಧ ಮತ್ತು ಶಾಸಕರ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಾದ್ಯಂತ ಇರುವ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿರುವ ಸರ್ಕಾರ ಹಾಗೂ ಶಾಸಕ ವಿರುದ್ಧ ಕಿಡಿಕಾರಿದ ಪ್ರತಿಭಟನಾಕಾರರು ಕೂಡಲೇ ಗೆಜ್ಜಲಗೆರೆ ಪಂಚಾಯಿತಿಯನ್ನು ನಗರಸಭೆಯಿಂದ ಕೈಬಿಡುವಂತೆ ತಪ್ಪಿದಲ್ಲಿ ನಿರಂತರ ಪ್ರತಿಭಟನೆಯನ್ನು ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ರೈತನಾಯಕಿ ಸುನಂದ ಜಯರಾಮ್ ಮಾತನಾಡಿ, ಬೆಂಗಳೂರಿನಿಂದ ಮೈಸೂರಿನವರೆಗೂ ಶಾಸಕರುಗಳು ನಗರೀಕರಣ ಮಾಡಲು ಕೈ ಜೋಡಿದಸಿದ್ದಾರೆಂದು ಆರೋಪಿಸಿದರಲ್ಲದೆ ಈಗಾಗಲೇ ನಗರಸಭೆಯಿಂದ ಕೈಬಿಡುವಂತೆ ಹಲವಾರು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗದೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿದ್ದಾರೆಂದು ದೂರಿದರು.
ಈ ದೇಶದ ಬೆನ್ನೆಲುಬಾದ ರೈತರು ಮತ್ತು ಪ್ರಜೆಗಳ ಹಕ್ಕುಗಳನ್ನು ರಕ್ಷಿಸಬೇಕಾದವರೇ ರಿಯಲ್ ಎಸ್ಟೇಟ್ ವ್ಯವಸ್ಥೆ ಮತ್ತು ನಗರೀಕರಣಕ್ಕೆ ಮುಂದಾಗುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರಲ್ಲದೆ ತಾವು ಈಗಾಗಲೇ ಕಾನೂನಾತ್ಮಕವಾಗಿ ಹೋರಾಟ ಮಾಡಿದ್ದು ಮತ್ತು ಪಂಚಾಯಿತಿಯನ್ನು ನಗರಸಭೆಗೆ ಸೇರಿಸುವ ಸಂಬಂಧ ಸ್ಥಳೀಯ ನಿವಾಸಿಗಳೊಟ್ಟಿಗೆ ಚರ್ಚಿಸದೆ ಶಾಸಕರು ದ್ರೋಹವೆಸಗಿದ್ದಾರೆಂದು ದೂರಿದರು.
ನಗರಸಭೆಗೆ ಸೇರ್ಪಡೆಯಾಗುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವಾರು ಯೋಜನೆಗಳು ಕೈತಪ್ಪಲಿದ್ದು ನರೇಗಾ, ಗ್ರಾಮೀಣ ಕೃಪಾಂಕ ರದ್ದು ಇನ್ನಿತರ ಮೂಲ ಸೌಲಭ್ಯಗಳಿಂದ ವಂಚಿತವಾಗಲಿದ್ದು ಶಾಸಕರು ಅಭಿವೃದ್ಧಿಯನ್ನು ಮಾಡಿದರೆ ತಾವು ಸಹ ಕೈಜೋಡಿಸಲಿದ್ದು, ಆದರೆ ನಗರೀಕರಣ ಹೆಸರಿನಲ್ಲಿ ಗ್ರಾಮದ ಜನರಿಗೆ ಮೋಸವೆಸಗುತ್ತಿದ್ದಾರೆಂದು ಗಂಭೀರವಾಗಿ ಆರೋಪಿಸಿದರು.
ಏಕ ಪಕ್ಷೀಯ ನಿರ್ಧಾರ ಕೈಗೊಂಡು ವಿರೋಧದ ನಡುವೆಯೂ ನಗರಸಭೆಯನ್ನಾಗಿಸಲು ಹೊರಟರೆ ಮುಂದಾಗುವ ಅನಾಹುತಕ್ಕೆ ಶಾಸಕರೇ ನೇರ ಹೊಣೆಯಾಗಲಿದ್ದು ಇದು ಪ್ರಥಮ ಹಂತವಾಗಿ ಇಂದು ಶಾಂತಿಯುತ ಪ್ರತಿಭಟನೆ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪವಾದ ಹೋರಾಟವನ್ನು ರೂಪಿಸುವುದಾಗಿ ಪ್ರತಿಭಟನಕಾರರು ಎಚ್ಚರಿಸಿದರು.
ಸ್ಥಳದಲ್ಲೇ ಅಡುಗೆ
ಗ್ರಾ.ಪಂ. ಕಚೇರಿ ಬಳಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹದ ವೇಳೆ ಪ್ರತಿಭಟನಾಕಾರರು ಸ್ಥಳದಲ್ಲೇ ಅಡುಗೆ ತಯಾರಿಸಿ ಧರಣಿ ನಿರತರಿಗೆ ಬಡಿಸುವ ಮೂಲಕ ವಿನೂತನ ಪ್ರತಿಭಟನೆಗೂ ಮುಂದಾದರು.
ಶಾಸಕ ಕೆ.ಎಂ.ಉದಯ್ ಹೇಳಿದ್ದೇನು?
ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾ.ಪಂ.ಯನ್ನು ನಗರಸಭೆಗೆ ಸೇರ್ಪಡಿಸಿರುವ ಸಂಬಂಧ ಗ್ರಾ.ಪಂ. ಕಚೇರಿ, ತಾಲೂಕು ಕಚೇರಿ, ಪುರಸಭೆ ಇನ್ನಿತರೆಡೆ ಕೆಲವರು ಪ್ರತಿಭಟನೆ ನಡೆಸಿದ್ದು, ಹೋರಾಟ ನಡೆಸಲು ಪ್ರತಿಯೊಬ್ಬರಿಗೂ ಸ್ವತಂತ್ರವಿದ್ದು ಇದರಿಂದ ಯಾವುದೇ ಬದಲಾವಣೆ ಆಗುವುದಿಲ್ಲ ಮುಂದಿನ ದಿನಗಳಲ್ಲಿ ಗ್ರಾ.ಪಂ. ಕಚೇರಿಗಳನ್ನೇ ನಗರಸಭೆಯ ವಾರ್ಡ್ ಕಚೇರಿಗಳನ್ನಾಗಿಸಿ ಸ್ಥಳೀಯ ಸಾರ್ವಜನಿಕರ ಸಮಸ್ಯೆಗಳ ನಿವಾರಣೆಗೆ ಕ್ರಮ ವಹಿಸಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಸುದ್ದಿಗಾರರಿಗೆ ಸೋಮವಾರ ತಿಳಿಸಿದರು.
ಪ್ರತಿಭಟನೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ರಾಧಾ, ಸದಸ್ಯ ದೀಪಕ್, ಸ್ಥಳೀಯ ಮುಖಂಡರಾದ ಜಿ.ಟಿ.ವೀರಪ್ಪ, ರಾಮಣ್ಣ, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಜಿ.ಸಿ.ಮಹೇಂದ್ರ, ತಾ.ಪಂ ಮಾಜಿ ಅಧ್ಯಕ್ಷ ಯೋಗೇಶ್, ಲಿಂಗಪ್ಪಾಜಿ, ಕೃಷ್ಣಪ್ಪ, ಜಿ.ಟಿ.ಪುಟ್ಟಸ್ವಾಮಿ, ಕಂಡೇಗೌಡ, ಶಿವನಂಜು, ಶೇಖರ್, ನಾಗೇಶ್, ಜಿ.ಎ.ಶಂಕರ್ ನೇತೃತ್ವ ವಹಿಸಿದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ಮೈಸೂರಿನ ನೈರುತ್ಯ ರೈಲ್ವೆ ವಿಭಾಗದ ಈ ರೈಲುಗಳ ಸಂಚಾರ ರದ್ದು/ಭಾಗಶಃ ರದ್ದು








