ಬೆಂಗಳೂರು: ಕಾಯಿಲೆ ವಾಸಿಗೆ ಪ್ರಿಸ್ಕ್ರಪ್ಪನ್‌ನಲ್ಲಿ (ಔಷಧ ಚೀಟಿ) ವೈದ್ಯರು ಬರೆಯುವ ಔಷಧವನ್ನೇ ಕಡ್ಡಾಯವಾಗಿ ರೋಗಿಗಳಿಗೆ ನೀಡುವುದು ಔಷಧ ಮಳಿಗೆಗಳ ಕರ್ತವ್ಯ. ಆದರೆ,ವೈದ್ಯರು ಬರೆದಿರುವ ಔಷಧ ಬದಲು ಇನ್ಯಾವುದೋ ಕೊಡುವ ಔಷಧವನ್ನು ಸೇವಿಸಿದರೆ ರೋಗಿಗಳ ದೇಹದಲ್ಲಿ ಅಡ್ಡ ಪರಿಣಾಮ ಅಥವಾ ಕೆಲವೊಮ್ಮೆ ಪ್ರಾಣಕ್ಕೂ ಅಪಾಯ ಇರುತ್ತದೆ. ಅದರಂತೆ, ರಾಜ್ಯದ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಯಾದ ವಿಕ್ಟೋರಿಯಾ ಹಾಗೂ ನಿಮ್ಹಾನ್ಸ್ ಆವರಣದಲ್ಲಿರುವ ‘ಜನತಾ ಬಜಾರ್ ಔಷಧ ಮಳಿಗೆಗಳು, ಬದಲಿ ಔಷಧ ಕೊಟ್ಟು ಸಾವಿರಾರು ರೋಗಿಗಳ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿವೆ.
ಸಹಕಾರ ಇಲಾಖೆಯ ಅಧೀನದ ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ನಿಯಮಿತ (ಕೆಎಸ್‌ಸಿಸಿಎಫ್) ದಿಂದ ಅನುಮತಿ ಪಡೆದು 40 ವರ್ಷದಿಂದ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ‘ಜನತಾ ಬಜಾರ್ ಔಷಧ ಮಳಿಗೆ’ ಕಾರ್ಯನಿರ್ವಹಿಸುತ್ತಿವೆ. ಜ್ವರದಿಂದ ಹಿಡಿದು ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಬಡ ಮತ್ತು ಮಧ್ಯಮ ವರ್ಗದ ಸಾವಿರಾರು ರೋಗಿಗಳು ಪ್ರತಿನಿತ್ಯ ಮೇಲಿನ ಆಸ್ಪತ್ರೆಗೆ ಬರುತ್ತಾರೆ. ಇದರಲ್ಲಿ ಸಾಕಷ್ಟು ಅನಕ್ಷರಸ್ಥ ರೋಗಿಗಳು ಸಹ ಇರುತ್ತಾರೆ. ಚಿಕಿತ್ಸೆ ಪಡೆಯುವ ಸಲುವಾಗಿ ವೈದ್ಯರ ಬಳಿ ತೆರಳಿ ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ. ಈ ವೇಳೆ ರೋಗಿಯನ್ನು ಪರೀಕ್ಷಿಸುವ ವೈದ್ಯರು, ಕಾಯಿಲೆ ನಿವಾರಣೆಗೆ ಪ್ರಿಸ್ಕ್ರಪ್ಪನ್‌ನಲ್ಲಿ ಔಷಧ ಬರೆಯುತ್ತಾರೆ. ಆಮೇಲೆ ಆ ಚೀಟಿ ಕೊಂಡೊಯ್ಯುವ ರೋಗಿಗಳು, ಜನತಾ ಬಜಾರ್ ಔಷಧ ಮಳಿಗೆಗಳಿಗೆ ತೆರಳುತ್ತಾರೆ.

ಈ ವೇಳೆ ಚೀಟಿಯಲ್ಲಿ ಬರೆದಿದ್ದ ಔಷಧವನ್ನು ಮಳಿಗೆಯವರು ಕಡ್ಡಾಯವಾಗಿ ಕೊಡಬೇಕು. ಆದರೆ, ಚೀಟಿಯಲ್ಲಿ ಬರೆದಿರುವ ಔಷಧ ಬದಲು ಬೇರೆ ಔಷಧವನ್ನು ನಿಗದಿಗಿಂತ ಹೆಚ್ಚಿನ ಬೆಲೆಗೆ ರೋಗಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಈ ಮಳಿಗೆಯವರು ಪ್ರತಿನಿತ್ಯ ಲಕ್ಷಾಂತರ ರೂ.ಮೌಲ್ಯದ ಬದಲಿ ಔಷಧಗಳನ್ನು ಹೆಚ್ಚಿನ ಬೆಲೆಗೆ ರೋಗಿಗಳಿಗೆ ನೀಡುತ್ತಾ ಅಡ್ಡದಾರಿಯಲ್ಲಿ ಕೋಟ್ಯಂತರ ರೂ. ಹಣ ಮಾಡುವ ದಂಧೆಯಲ್ಲಿ ತೊಡಗಿದ್ದಾರೆ. ಹಲವು ವರ್ಷಗಳಿಂದ ರಾಜಾರೋಷವಾಗಿ ಬದಲಿ ಔಷಧ ಮಾರಾಟ ದಂಧೆ ಜೋರಾಗಿ ನಡೆಯುತ್ತಿದೆ.
ಬದಲಿ ಔಷಧ ದಂಧೆ ಹೇಗೆ?
ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಒಂದೇ ಕಟ್ಟಡದಲ್ಲಿ ‘ಜನತಾ ಬಜಾರ್ ಔಷಧ ಮಳಿಗೆ’ ಹಾಗೂ ಜೆನೆರಿಕ್ ಔಷಧ ಮಳಿಗೆಗಳಿವೆ. ಅಕ್ಕಪಕ್ಕದಲ್ಲಿ ಈ 2 ಔಷಧ ಮಳಿಗೆಗಳು ಪ್ರತ್ಯೇಕ ಕೌಂಟರ್ ಹೊಂದಿವೆ. ‘ಜನತಾ ಬಜಾರ್ ಔಷಧ ಮಳಿಗೆಯಲ್ಲಿ ಎರಡು ಕೌಂಟರ್‌ಗಳಿವೆ. ಬ್ರ್ಯಾಂಡೆಂಡ್ ಕಂಪನಿಗಳು ತಯಾರಿಸಿರುವ ಔಷಧಗಳು ಬಡ ರೋಗಿಗಳಿಗೆ ಕಡಿಮೆ ದರದಲ್ಲಿ ಸಿಗಬೇಕೆಂಬ ಉದ್ದೇಶದಿಂದ ಜೆನೆರಿಕ್ ಔಷಧ ಮಳಿಗೆಯನ್ನು ತೆರೆಯಲಾಗಿದೆ.
ಸರ್ಕಾರದ ನಿಯಮದಂತೆ ಜೆನೆರಿಕ್ ಔಷಧ ಮಳಿಗೆ, ಕಡಿಮೆ ದರದಲ್ಲಿ ಮೆಡಿಷನ್ ಮಾರಾಟ ಮಾಡುತ್ತಿದೆ. ಜೆನೆರಿಕ್ ಔಷಧ ಮಳಿಗೆಯಲ್ಲಿ ದೊರೆಯುವ ಔಷಧವನ್ನು ಜನತಾ ಬಜಾರ್ ಔಷಧ ಮಳಿಗೆಯಲ್ಲಿ ಮಾರಾಟ ಮಾಡುವಂತಿಲ್ಲ. ಆದರೆ, ಈ ನಿಯಮ ಉಲ್ಲಂಘಿಸಿ ಜನತಾ ಬಜಾರ್ ಔಷಧ ಮಳಿಗೆಯಲ್ಲಿ ಸಾಕಷ್ಟು ಜೆನೆರಿಕ್ ಔಷಧಗಳನ್ನು ನಿಗದಿಗಿಂತ ಹೆಚ್ಚಿನ ಬೆಲೆಗೆ ರೋಗಿಗಳಿಗೆ ಮಾರಾಟ ಮಾಡುತ್ತಿದ್ದಾರೆ.

ವೈದ್ಯರ ಚೀಟಿಯಲ್ಲಿ ‘ ಅಟೋರ್ವಾ’ 40 ಎಂಜಿ ಔಷಧ ಬರೆದಿದ್ದರೆ, ಜನತಾ ಬಜಾರ್ ಔಷಧ ಮಳಿಗೆಯವರು ಬೇರೆ ಕಂಪನಿಯ ‘ವಾಸಾಫ್’ 40 ಎಂಜಿ ಔಷಧ ಕೊಟ್ಟಿದ್ದಾರೆ. ಬಿಲ್‌ನಲ್ಲಿ ‘ಲಿಪ್‌ವಾಸ್’ 40 ಎಂಜಿ ಎಂದು ನಮೂದಿಸಿದ್ದಾರೆ. ಜೆನೆರಿಕ್ ಔಷಧ ಮಳಿಗೆಯಲ್ಲಿ ಒಂದು ಮಾತ್ರೆ ಸೀಟ್ 50 ರೂ. ಇದ್ದರೆ, ಇದೇ ಔಷಧ‘ಜನತಾ ಬಜಾರ್ ಔಷಧ ಮಳಿಗೆಯಲ್ಲಿ 80 ರೂ.ಗೆ ಮಾರಾಟ ಮಾಡುತ್ತಿದ್ದಾರೆ.
ಇಂಥಹ ಹತ್ತಾರು ಜೆನೆರಿಕ್ ಔಷಧಗಳನ್ನು ಜನತಾ ಬಜಾರ್ ಔಷಧ ಮಳಿಗೆಯಲ್ಲಿ ಜಾಸ್ತಿ ಬೆಲೆಗೆ ಮಾರಾಟ ಮಾಡಿ ಫಾರ್ಮಾಸಿಸ್ಟ್‌ಗಳು ಕೋಟ್ಯಂತರ ರೂ.ಹಣ ಮಾಡಿಕೊಳ್ಳುತ್ತಿದ್ದಾರೆ. ಬೆನ್ನುನೋವು, ಕ್ಯಾಲ್ಸಿಯಂ, ಜ್ವರ, ಕಾಲುನೋವು, ಹೊಟ್ಟೆ ನೋವು ಸೇರಿ ಹಲವು ಔಷಧಗಳನ್ನು ಬದಲಿಯಾಗಿ ಕೊಟ್ಟಿದ್ದಾರೆ. ಕೆಲವೊಂದು ಔಷಧಗಳು ಆಸ್ಪತ್ರೆ ಒಳಗೆ ಇರುವ ಮಳಿಗೆಯಲ್ಲಿ ಉಚಿತವಾಗಿ ಸಿಗುತ್ತದೆ. ಆದರೂ, ರೋಗಿಗಳನ್ನು ಯಾಮಾರಿಸಿ ಹೆಚ್ಚಿನ ಬೆಲೆಗೆ ಜನತಾ ಬಜಾರ್ ಔಷಧ ಮಳಿಗೆಯುವರು ಕೊಡುತ್ತಿದ್ದಾರೆ.

ಜೆನೆರಿಕ್ ಮತ್ತು ಬ್ರಾಂಡೆಡ್ ಔಷಧಗಳು ಒಂದೇ ರೀತಿಯಲ್ಲಿ ರೋಗಿಗಳಿಗೆ ವೈದ್ಯಕೀಯ ಪ್ರಯೋಜನ ನೀಡುತ್ತದೆ. ಜೆನೆರಿಕ್, ಬ್ರಾಂಡೆಡ್ ಔಷಧಗಳ ನಡುವೆ ಬೆಲೆ, ಬ್ರ್ಯಾಂಡಿಂಗ್ ವ್ಯತ್ಯಾಸ ಇರುತ್ತದೆ. ಬ್ರಾಂಡೆಡ್ ಔಷಧಗಳಗಿಂತ ಅತಿ ಕಡಿಮೆ ಬೆಲೆಯಲ್ಲಿ ಜೆನೆರಿಕ್ ಔಷಧಗಳು ದೊರೆಯಲಿದೆ. ಬ್ರಾಂಡೆಡ್ ಔಷಧಿಯು ಉತ್ಪಾದಕ ಕಂಪನಿ ನೀಡುವ ನಿರ್ದಿಷ್ಟ ಹೆಸರು ಹೊಂದಿರುತ್ತದೆ. ಜೆನೆರಿಕ್ ಔಷಧವು ಆ ಬ್ರಾಂಡ್‌ನ ಔಷಧಕ್ಕೆ ಪರ್ಯಾಯವಾಗಿದೆ. ಇವರೆಡು ಔಷಧಗಳು ಭಿನ್ನವಾಗಿದ್ದರೂ ಒಂದೇ ರೀತಿಯಲ್ಲಿ ರೋಗಿಗಳಿಗೆ ಪ್ರಯೋಜನವಿದೆ.

ಈ ಕುರಿತು ಪರಿಶೀಲನೆ ನಡೆಸಿ, ಸೂಕ್ತ ಕ್ರಮವನ್ನು ಕೈಗೊಳ್ಳುವಂತೆಯೂ ಬಿ.ಹೆಚ್ ವೀರೇಶ್ ಎಂಬುವರು ದೂರು ನೀಡಿದ್ದಾರೆ. ಆ ದೂರಿನ ಬಳಿಕ ಬಡ ರೋಗಿಗಳ ಜೀವದ ಜೊತೆಗೆ ಚೆಲ್ಲಾಟವಾಡುವಂತ ಜನತಾ ಬಜಾರ್ ನಕಲಿ ಔಷಧಿ ದಂಧೆ ಬಗ್ಗೆ ಸಂಬಂಧಿಸಿದಂತ ಅಧಿಕಾರಿಗಳು ಬ್ರೇಕ್ ಹಾಕಬೇಕಿತ್ತು. ಅದು ಆಗದೇ ಇರೋದು ವಿಪರ್ಯಾಸವೇ ಸರಿ. ಇನ್ನಾದರೂ ಎಚ್ಚೆತ್ತುಕೊಂಡು ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಜನತಾ ಬಜಾರ್ ಔಷಧ ಮಳಿಗೆಯ ವಂಚನೆ ಹೇಗೆ?
* ಪ್ರಿಸ್ಕ್ರಪ್ಪನ್‌ನಲ್ಲಿ ವೈದ್ಯರು ಬರೆದಿರುವ ಔಷಧ ಕೊಡುತ್ತಿಲ್ಲ
* ಬೇರೆ ಕಂಪನಿ ಔಷಧ ಕೊಟ್ಟು ಬಿಲ್‌ನಲ್ಲಿ ಇನ್ಯಾವುದೋ ಕಂಪನಿಯ ಔಷಧ ನಮೂದು
* ನಿಯಮಬಾಹಿರವಾಗಿ ಜನತಾ ಬಜಾರ್ ಔಷಧ ಮಳಿಗೆಯಲ್ಲಿ ಜೆನರಿಕ್ ಔಷಧ ಮಾರಾಟ
* 10 ರೂ.ಗೆ ಸಿಗುವ ಔಷಧವನ್ನು 40 ರೂ.ಗೆ ಮಾರಾಟ
* ಔಷಧಗಳ ವಿತರಣೆಗೆ ‘ಬಿ’ಫಾರ್ಮಾ, ‘ಡಿ’ಫಾರ್ಮ ಓದಿರುವರನ್ನು ನೇಮಿಸುವ ಬದಲು 10ನೇ ತರಗತಿ ಅಥವಾ ಪಿಯುಸಿ ಓದಿರುವ ಹುಡುಗರ ನೇಮಕ
* ಜನತಾ ಬಜಾರ್‌ನಲ್ಲಿ ಪ್ರತಿ ಕೌಂಟರ್‌ಗೆ ಕೆಎಸ್ಸಿಸಿಎಫ್ನಿಂದ ಫಾರ್ಮಾಸಿಸ್ಟ್‌ಗಳ ನೇಮಕ
* ಸರ್ಕಾರಿ ಹುದ್ದೆಯಿಂದ ನಿವೃತ್ತಿ ಹೊಂದಿರುವ ಫಾರ್ಮಸಿಸ್ಟ್‌ಗಳಿಂದ ಮಳಿಗೆ ವ್ಯವಹಾರ
* ಪ್ರತಿನಿತ್ಯ ಔಷಧ ಮಾರಾಟದಿಂದ ಬರುವ ಹಣವನ್ನು ಸರ್ಕಾರಕ್ಕೆ ಸಂದಾಯ ಮಾಡಬೇಕಿತ್ತು. ಆದರೆ, ದಿನಕ್ಕೆ 1 ಲಕ್ಷ ರೂ. ವ್ಯಾಪಾರವಾದರೆ ಸರ್ಕಾರಕ್ಕೆ 60 ಸಾವಿರ ರೂ, ತೋರಿಸಿ ಉಳಿದ ಹಣ ಗುಳುಂ
* ಓದಿಲ್ಲದ ಹುಡುಗರನ್ನು ಇಟ್ಟುಕೊಂಡು ಅಕ್ರಮವಾಗಿ ಮಳಿಗೆ ನಡೆಸುತ್ತಿರುವ ಫಾರ್ಮಸಿಸ್ಟ್‌ಗಳು
* ಫಾರ್ಮಸಿಸ್ಟ್‌ಗಳ ಹಣ ದಾಹಕ್ಕೆ ರೋಗಿಗಳ ಪ್ರಾಣಕ್ಕೆ ಕಂಟಕ
* ಔಷಧ ತೆಗೆದುಕೊಳ್ಳುವ ರೋಗಿಗಳಿಗೆ ಬಿಲ್ ಕೊಡುತ್ತಿಲ್ಲ
* ಕೆಲವರು ಬಿಲ್ ನೀಡುವಂತೆ ಕೇಳಿದರೆ ಕಂಫ್ಯೂಟರ್ ರಿಪೇರಿ ಆಗಿರುವುದೂ ಸೇರಿ ಹಲವು ಕುಂಟುನೆಪ
* ಜೆನೆರಿಕ್ ಔಷಧಗಳ ಮಾರಾಟದಿಂದ ಒಂದೇ ವರ್ಷದಲ್ಲಿ ಕೋಟ್ಯಂತರ ರೂ. ಹಣ ಮಾಡಿರುವ ಫಾರ್ಮಾಸಿಸ್ಟ್‌ಗಳು.
ಮೈಸೂರಿನ ನೈರುತ್ಯ ರೈಲ್ವೆ ವಿಭಾಗದ ಈ ರೈಲುಗಳ ಸಂಚಾರ ರದ್ದು/ಭಾಗಶಃ ರದ್ದು
BREAKING: ಎಲ್ಲಾ ಮಾದರಿಯ ಕ್ರಿಕೆಟಿಗೆ ಕರ್ನಾಟಕದ ಆಲ್ ರೌಂಡರ್ ಕೃಷ್ಣಪ್ಪ ಗೌತಮ್ ನಿವೃತ್ತಿ ಘೋಷಣೆ








