ಶಿವಮೊಗ್ಗ : ಮಾಹಿತಿಹಕ್ಕು ಅಧಿನಿಯಮದಡಿ ಅರ್ಜಿದಾರರು ಮಾಹಿತಿ ಕೋರಿ ತಮ್ಮ ಕಚೇರಿಗಳಿಗೆ ಸಲ್ಲಿಸುವ ಅರ್ಜಿಗಳನ್ನು ನಿಗಧಿಪಡಿಸಿದ ಕಾಲಮಿತಿಯೊಳಗಾಗಿ ನಿಯಮಾನುಸಾರ ಸಕಾಲದಲ್ಲಿ ವಿಲೇವಾರಿ ಮಾಡುವಂತೆ ಮಾಹಿತಿ ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟೆ ಅವರು ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಿಯೋಜಿತ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ಕರ್ನಾಟಕ ಮಾಹಿತಿ ಆಯೋಗವು ಜಿಲ್ಲೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆಯ ಕುರಿತು ಏರ್ಪಡಿಸಲಾಗಿದ್ದ ಕಾರ್ಯಾಗಾರ ಜಾಗೃತಿ ಕಾರ್ಯಕ್ರಮ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ವಿವಿಧ ಇಲಾಖೆಗಳ ಜವಾಬ್ದಾರಿಯುತ ಅಧಿಕಾರಿಗಳು ತಮ್ಮ ಕಚೇರಿಯ ಅಧಿಕಾರಿ ಸಿಬ್ಬಂಧಿಗಳ ವಿವರಗಳನ್ನು 4-1ಎ ಮತ್ತು 4-1ಬಿ ನಮೂನೆಗಳನ್ನು ಭರ್ತಿ ಮಾಡಿ ಪ್ರತಿ ವರ್ಷ ಇಲಾಖೆಯ ಜಾಲತಾಣದಲ್ಲಿ ಉನ್ನತೀಕರಿಸಿ ಸಾರ್ವಜನಿಕ ಮಾಹಿತಿಗೆ ಲಭ್ಯವಿರುವಂತೆ ಗಮನಿಸಬೇಕು. ಇದರಿಂದಾಗಿ ಇಲಾಖೆಗೆ ಮಾಹಿತಿ ಕೋರಿ ಬರುವ ಅರ್ಜಿಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿವೆ ಎಂದ ಅವರು ಅರ್ಜಿದಾರರು ಅರ್ಜಿ ಸಲ್ಲಿಸಿದ 30 ದಿನಗಳೊಳಗಾಗಿ ತಮ್ಮ ಕಚೇರಿಯಲ್ಲಿ ಲಭ್ಯವಿರುವ ಮಾಹಿತಿಯನ್ನು ಒದಗಿಸಬೇಕೆಂದವರು ಸೂಚಿಸಿದರು.
ಮಾಹಿತಿ ಹಕ್ಕು ಅಧಿನಿಯಮದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿರುವಂತೆಯೇ ಇಲಾಖೆಗಳಿಗೆ ಸಲ್ಲಿಕೆಯಾಗುವ ಅರ್ಜಿಗಳಿಗೆ ಮಾಹಿತಿ ಒದಗಿಸುವಲ್ಲಿ ಅಧಿಕಾರಿಗಳಿಗೆ ಆತಂಕವೂ ಇಲ್ಲದಿಲ್ಲ. ಕಚೇರಿಯಲ್ಲಿ ಇರುವ ಮಾಹಿತಿಯನ್ನು ಅರ್ಜಿದಾರರಿಗೆ ಯಾವುದೇ ಆತಂಕವಿಲ್ಲದೇ ನೀಡಬೇಕು ತಪ್ಪಿದಲ್ಲಿ ಮೇಲ್ಮನವಿ ಪ್ರಾಧಿಕಾರಗಳಲ್ಲಿ ದಂಡನೆಗೆ ಗುರಿಯಾಗುವ ಸಂಭವವಿದೆ ಎಂದವರು ಎಚ್ಚರಿಸಿದರು.
ಮಾಹಿತಿ ಹಕ್ಕು ಅಧಿನಿಯಮದ ವ್ಯವಸ್ಥಿತ ಅನುಷ್ಠಾನದಿಂದ ಆಡಳಿತದಲ್ಲಿ ಪಾರದರ್ಶಕತೆ, ಮುಕ್ತತೆ. ತ್ವರಿತ ಸೇವೆ ಹಾಗೂ ನೌಕರರಲ್ಲಿ ಹೊಣೆಗಾರಿಕೆ ಹೆಚ್ಚಲಿದೆ ಎಂದ ಅವರು, ಕಾಯ್ದೆಯನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸುವುದು ಸಾರ್ವಜನಿಕ ಪ್ರಾಧಿಕಾರಗಳ ಜವಾಬ್ದಾರಿಯಾಗಿದೆ ಎಂದವರು ನುಡಿದರು.
ವೈಯಕ್ತಿಕ ದ್ವೇಷ ಕ್ಷುಲ್ಲಕ ಕಾರಣಕ್ಕೆ ಮಾಹಿತಿಹಕ್ಕು ಅಧಿನಿಯಮವನ್ನು ಬಳಸಿಕೊಳ್ಳಬಾರದು ಅಗತ್ಯತೆಗಳಿಗಾಗಿ ನಿಯಮಾನುಸಾರ ಅರ್ಜಿಯನ್ನು ಸಲ್ಲಿಸಿ ಮಾಹಿತಿ ಪಡೆದುಕೊಳ್ಳುವ ಮೂಲಕ ಸಾರ್ವಜನಿಕರು ಅಧಿನಿಯಮದ ಲಾಭ ಪಡೆದುಕೊಳ್ಳುವಂತೆ ಸೂಚಿಸಿದ ಅವರು, ಕಾಯ್ದೆಯ ದುರ್ಬಳಕೆ, ಅಧಿಕಾರಿಗಳ ವಿರುದ್ಧದ ಕ್ರಮಗಳಿಗಾಗಿ ಕಾಯ್ದೆಯನ್ನು ಬಳಸಿಕೊಳ್ಳುವಂತಾಗಬಾರದು ಎಂದರು.
150ಪದಗಳಿಗಿಂತ ಹೆಚ್ಚಿನ ವಿವರಣೆ ಹೊಂದಿರುವ ಅರ್ಜಿಗಳನ್ನು, ಪ್ರಶನೋತ್ತರ ರೂಪದ ಮಾಹಿತಿ ಕೋರಿರುವ ಅರ್ಜಿಗಳನ್ನು, ಅನೇಕ ಪ್ರಶ್ನೆಗಳಿರುವ ಅರ್ಜಿಗಳನ್ನು ಹಿಂಬರಹ ನೀಡಿ, ಹಿಂದಿರುಗಿಸುವಂತೆಯೂ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.
ತಾವು ಅಧಿಕಾರ ವಹಿಸಿಕೊಂಡ ಅತ್ಯಲ್ಪ ಅವಧಿಯಲ್ಲಿ ಆಯೋಗದಲ್ಲಿ ಬಾಕಿ ಉಳಿದಿದ್ದ 55000ಅರ್ಜಿಗಳ ವಿಲೇವಾರಿಗೆ ವೇಗ ದೊರೆತಿದೆ. ಈವರೆಗೆ ಅಂದಾಜು 25000ಅರ್ಜಿಗಳನ್ನು ವಿಲೇಗೊಳಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿಲೇಯಾಗದೆ ಉಳಿದಿರುವ ಅರ್ಜಿಗಳನ್ನು ಸಕಾಲದಲ್ಲಿ ವಿಲೇ ಮಾಡಲು ಹಾಗೂ ಅಧಿಕಾರಿಗಳಿಗೆ ಅಧಿನಿಯಮದ ಕುರಿತು ಅರಿವು ಮೂಡಿಸುವಲ್ಲಿ ಆಯೋಗದ ಆಯುಕ್ತರೆಲ್ಲರೂ ನಿರ್ಣಯ ಕೈಗೊಂಡು ಈಗಾಗಲೇ ರಾಜ್ಯದ 19ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಅಧಿಕಾರಿಗಳಿಗೆ ಮಾಹಿತಿ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ನಿಯಮ ಪಾಲಿಸದ ಹಾಗೂ ಸಕಾಲದಲ್ಲಿ ಮಾಹಿತಿಯನ್ನು ಅರ್ಜಿದಾರರಿಗೆ ಒದಗಿಸದಿರುವ 10754 ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಂದ 10. 20ಕೋಟಿ ಮೊತ್ತದ ದಂಡ ವಿಧಿಸಲಾಗಿದೆ. ಈ ಪೈಕಿ 3080 ಅಧಿಕಾರಿಗಳಿಂದ 2.70ಕೋಟಿ ರೂ.ಗಳ ದಂಡ ವಸೂಲಿ ಮಾಡಲಾಗಿದೆ ಶಿವಮೊಗಜಿಲ್ಲೆಯಲ್ಲಿ ಸಕಾಲದಲ್ಲಿ ಮಾಹಿತಿ ಒದಗಿಸದಿರುವ 140ಮಂದಿ ಅಧಿಕಾರಿಗಳಿಗೆ 14.40ಲಕ್ಷ ರೂ.ಗಳ ಡಂಡ ವಿಧಿಸಲಾಗಿದ್ದು, ಆ ಪೈಕಿ 30ಅಧಿಕಾರಿಗಳಿಂದ 4.12ಲಕ್ಷ ರೂ.ಗಳ ಡಂಡ ವಸೂಲಿ ಮಾಡಲಾಗಿದೆ. ದಂಡ ಪಾವತಿ ಮಾಡದಿರುವ ಅಧಿಕಾರಿಗಳಿಗೆ ನಿವೃತ್ತಿಯ ನಂತರದ ಉಪಾಧಾನ ಪಡೆಯುವಲ್ಲಿ ತೀವ್ರ ತರಹದ ಅಡಚಣೆ ಉಂಟಾಗಲಿದೆ ಎಂದ ಅವರು ರಾಜ್ಯದಲ್ಲಿ ಬೆಂಗಳೂರುನಗರ, ಬೆಳಗಾವಿ, ರಾಯಚೂರು ನಂತರದಲ್ಲಿ ಶಿವಮೊಗ್ಗ ಜಿಲ್ಲೆ 22ನೇ ಸ್ಥಾನ ಪಡೆದಿದೆ ಎಂದರು.
ಮಾಹಿತಿಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಕೆಯಾಗುವ ಇಲಾಖೆಗಳಲ್ಲಿ ಗ್ರಾಮೀಣಾಭಿವೃದ್ಧಿ, ಕಂದಾಯ, ನಗರಾಭಿವೃದ್ಧಿ, ಶಿಕ್ಷಣ, ಲೋಕೋಪಯೋಗಿ ಮುಂತಾದ ಇಲಾಖೆಗಳು ಅಗ್ರಪಂಕ್ತಿಯಲ್ಲಿವೆಎಂದರು.
ಮುಂದಿನ ದಿನಗಳಲ್ಲಿ ಅರ್ಜಿ ವಿಲೇಯಾಗದೇ ಉಳಿದಿರುವ ಹಾಗೂ ಮೇಲ್ಮನವಿ ಪ್ರಾಧಿಕಾರಕ್ಕೆ ಬರುವ ಅರ್ಜಿಗಳನ್ನು ಆಯಾ ಜಿಲ್ಲಾ ಕೇಂದ್ರದಲ್ಲಿಯೇ ವಿಲೇವಾರಿ ಮಾಡಲು ಚಿಂತನೆ ನಡೆಸಲಾಗಿದೆ. ಈ ಸಂಬಂಧ ಜನವರಿ ಮೊದಲ ವಾರದಲ್ಲಿ ಬೆಳಗಾವಿಗೆ ಭೇಟಿ ನೀಡಿ, ಅಲ್ಲಿನ ಆಯುಕ್ತರ ಕಚೇರಿ ವರದಿ ಪಡೆದು, ಕ್ರಮ ವಹಿಸಲಾಗುವುದು ಎಂದವರು ನುಡಿದರು.
ಕೆ.ಡಿ.ಪಿ ಸಭೆಗಳಲ್ಲಿ ಮಾಹಿತಿ ಕಾಯ್ದೆಯ ಪ್ರಗತಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಮಾಹಿತಿ ಫಲಕ ಅಳವಡಿಸಲು ಸೂಚಿಸಲಾಗಿದೆ. ಸರ್ಕಾರಿ ಪಠ್ಯಕ್ರಮದಲ್ಲಿ ಮಾಹಿತಿ ಕಾಯ್ದೆ ಪಠ್ಯವಿಷಯವನ್ನಾಗಿ ಅಳವಡಿಸಲು ಹಾಗೂ ಇಲಾಖಾ ಪರೀಕ್ಷೆಗಳಲ್ಲಿ ಮಾಹಿತಿಕಾಯ್ದೆಯ ವಿಷಯವನ್ನು ಅಳವಡಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದರು.
ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದ ಮಾಹಿತಿ ಆಯೋಗದ ಆಯುಕ್ತ ಎನ್.ರಾಜಶೇಖರ್ ಅವರು ಮಾತನಾಡಿ, ಮಾಹಿತಿ ಕಾಯ್ದೆ ಪ್ರಬಲವಾದ ಮತ್ತು ಸರಳವಾದ ಕಾಯಿದೆಯಾಗಿದ್ದು ಜನಸ್ನೇಹಿಯಾಗಿದೆ. ಮಾತ್ರವಲ್ಲ ಇದೂ ಕೂಡ ಸಂವಿಧಾನದತ್ತವಾದ ಹಕ್ಕಾಗಿದೆ. ಅಧಿಕಾರಿಗಳು ಕೋರಿಕೆಯ ಅರ್ಜಿಗಳಿಗೆ ಸಕಾಲದಲ್ಲಿ ಮಾಹಿತಿ ಒದಗಿಸುವಂತೆ ಸೂಚಿಸಿದ ಅವರು ಶಿವಮೊಗ್ಗ ಜಿಲ್ಲೆಯಲ್ಲಿ ಅರ್ಜಿಗಳ ವಿಲೇವಾರಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಅಧಿಕಾರಿಗಳು ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಯನ್ನು ತಮ್ಮ ಜಾಲತಾಣದಲ್ಲಿ ಪ್ರಕಟಿಸಿದಲ್ಲಿ ಇಲಾಖೆಗೆ ಬರುವ ಅರ್ಜಿಗಳ ಸಂಖ್ಯೆಯಲ್ಲಿ ಇಳಿಮುಖವಾಗಲಿದೆ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಬಹುತೇಕ ಇಲಾಖಾ ಅಧಿಕಾರಿಗಳಿಗೆ ಮಾಹಿತಿ ಕಾಯ್ದೆಯ ಅರಿವಿನ ಕೊರತೆ ಇರುವುದನ್ನು ಗಮನಿಸಲಾಗಿದೆ. ಅದಕ್ಕಾಗಿ ಕಾರ್ಯಾಗಾರಗಳನ್ನು ಆಯೋಜಿಸುವ ಹಾಗೂ ಅವರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್ ಹೇಮಂತ್, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ., ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶ್ರೀಮತಿ ಸುಜಾತಾ ಸೇರಿದಂತೆ ಜಿಲ್ಲೆಯ ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು, ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಮೇಲ್ಮನವಿ ಪ್ರಾಧಿಕಾರಿಗಳು ಉಪಸ್ಥಿತರಿದ್ದರು.
BREAKING: ಡಿ.ಕೆ ಶಿವಕುಮಾರ್ ಗೆ ಸಿಎಂ ಪಟ್ಟ ಸಿಗುತ್ತೆ, ಆದ್ರೆ ಸಿಗುವ ಮುನ್ನ ಸಾಗುವ ದಾರಿ ಎಚ್ಚರವೆಂದು ದೈವವಾಣಿ








