ಬೆಂಗಳೂರು : ರಾಜ್ಯದಲ್ಲಿ ಹೃದಯಾಘಾತದಿಂದ ಮತ್ತೆ ಮೂವರು ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ನಲ್ಲಿ ಹಿರಿಯ ಪತ್ರಕರ್ತ ಸಾವನ್ನಪ್ಪಿದ್ದಾರೆ, ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಶಿಕ್ಷಕಿ ಸೇರಿ ಇಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ದೊಡ್ಡಳ್ಳಿ ಗ್ರಾಮದ ಸುಧಾಮಣಿ (58), ಹೊಳೆನರಸೀಪುರ ತಾಲೂಕಿನ ಗುಲಗಂಜಿಹಳ್ಳಿ ಗ್ರಾಮದ ಪರಮೇಶ್ (35) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಸುಧಾಮಣಿ ಅವರು ದೊಡ್ಡಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದರು. ಪರಮೇಶ್ ಹೊಳೆನರಸೀಪುರ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು.
ಹಿರಿಯ ಪತ್ರಕರ್ತ, ಸಂಜೆ ವಾಣಿ ಪತ್ರಿಕೆಯ ವರದಿಗಾರ ದೊಡ್ಡ ಬೊಮ್ಮಯ್ಯ ಹೃದಯಾಘಾತದಿಂದ ನಿಧನ
ಬೆಂಗಳೂರಿನಲ್ಲಿ ಹಿರಿಯ ಪತ್ರಕರ್ತ ದೊಡ್ಡಬೊಮ್ಮಯ್ಯ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ನಲ್ಲಿ ಹೃದಯಾಘಾತದಿಂದ ಹಿರಿಯ ಪತ್ರಕರ್ತ ದೊಡ್ಡಬೊಮ್ಮಯ್ಯ ಅವರು ಸಾವನ್ನಪ್ಪಿದ್ದಾರೆ. ದೊಡ್ಡಬೊಮ್ಮಯ್ಯ ಅವರು ಬೆಳಗಾವಿ ಅಧಿವೇಶನದ ವರದಿಗೆ ತೆರಳಿದ್ದರು.
ಅಧಿವೇಶನ ಮುಗಿದ ಹಿನ್ನೆಲೆ ಬೆಳಗ್ಗೆ ಬೆಂಗಳೂರಿಗೆ ವಾಪಸ್ ಆಗಿದ್ದರು. ಮೆಜೆಸ್ಟಿಕ್ ಗೆ ಬಂದು ಮನೆಗೆ ಹೋಗಲು ಬಿಎಂಟಿಸಿ ಬಸ್ ಹತ್ತಿದ್ದರು. ಈ ವೇಳೆ ಬಸ್ ನಲ್ಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ.
ದೊಡ್ಡಬೊಮ್ಮಯ್ಯ ಮೂಲತಃ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ರೊಪ್ಪ ಗ್ರಾಮದ ನಿವಾಸಿಯಾಗಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸಂಜೆವಾಣಿ, ದೂರದರ್ಶನ, ಆಕಾಶವಾಣಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಅವರು ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಉಪಾಧ್ಯಕ್ಷರಾಗಿದ್ದರು. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.








