ಮಂಡ್ಯ : ಮದ್ದೂರು ನಗರದ ಶಿವಪುರ ಧ್ವಜ ಸತ್ಯಾಗ್ರಹ ಸೌಧದ ಸಂರಕ್ಷಣೆ ಹಾಗೂ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರದಿಂದ 2 ಕೋಟಿ ರೂ ಅನುದಾನ ಬಿಡುಗಡೆಯಾಗಿದ್ದು, ಆದಷ್ಟು ಬೇಗ ನೀಲನಕ್ಷೆ ತಯಾರಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕುಮಾರ್ ಸೂಚನೆ ನೀಡಿದರು.
ಶಿವಪುರದ ಧ್ವಜ ಸೌಧಕ್ಕೆ ಶುಕ್ರವಾರ ನಗರಸಭೆ, ಲೋಕೋಪಯೋಗಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಬಳಿಕ ನಗರಸಭೆ ಕಛೇರಿಯ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದರು.
ಮದ್ದೂರಿನ ಶಿವಪುರದಲ್ಲಿರುವ ಐತಿಹಾಸಿಕ ಪಾರಂಪರಿಕ ಸ್ಥಳವಾದ ಧ್ವಜ ಸತ್ಯಾಗ್ರಹ ಸೌಧವು ದೇಶದ ಸ್ವಾತಂತ್ರ್ಯ ಹೋರಾಟದ ಪ್ರಮುಖ ಐತಿಹಾಸಿಕ ಸ್ಮಾರಕವಾಗಿದ್ದು, ಹೀಗಾಗಿ ಸೌಧದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ 2 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಹೀಗಾಗಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ಸೌಧದ ಅನೆಕ್ಸ್ ಕಟ್ಟಡದಲ್ಲಿರುವ ಶೌಚಾಲಯ ದುರಸ್ತಿ, ಬೋರ್ವೆಲ್, ನಾಮಫಲಕ, ಶಿಲಾಫಲಕ ಅಳವಡಿಕೆ ಹಾಗೂ ಸ್ವಾಗತ ಕಮಾನು ನಿರ್ಮಾಣ ಮಾಡಬೇಕಿದೆ ಎಂದರು.
ಸೌಧದ ಆವರಣದ ತಗ್ಗು ಪ್ರದೇಶಗಳನ್ನು ಎತ್ತರಿಸುವುದು, ಪೇಂಟಿಂಗ್, ಇಂಟರ್ಲಾಕ್ ಪೇಪರ್ಸ್, ಹಾಗೂ ಒಳ ಭಾಗದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದ ಸುತ್ತ ಕಾಂಪೌಂಡ್ ನಿರ್ಮಾಣ, ಕಬ್ಬಿಣದ ಬಾಗಿಲುಗಳನ್ನು ಅಳವಡಿಸುವುದು ಸೇರಿದಂತೆ ಇನ್ನಿತರೆ ಕಾಮಗಾರಿಗಳನ್ನು ನಿರ್ಮಿಸಬೇಕಿದೆ ಎಂದು ಹೇಳಿದರು.
ಸೌಧದ ಒಳಭಾಗದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸತ್ಯಾಗ್ರಹಕ್ಕೆ ಸಂಬಂಧಿಸಿದ ಏಳು ಭಾವಚಿತ್ರಗಳನ್ನು ಅಳವಡಿಸುವುದು, ಕಾವಲುಗಾರರ ನೇಮಕ, ಅನೆಕ್ಸ್ ಕಟ್ಟಡದಲ್ಲಿ ರಾಜ್ಯ ಹಾಗೂ ದೇಶದಾದ್ಯಂತ ನಡೆದ ಸ್ವಾತಂತ್ರ್ಯ ಹೋರಾಟಗಳ ಮಾಹಿತಿ ಮತ್ತು ಮಹಾತ್ಮ ಗಾಂಧೀಜಿಯವರ ಕುರಿತು ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸುವ ವ್ಯವಸ್ಥೆ, ಸೌಧದ ಆವರಣದಲ್ಲಿರುವ ಸಂಗೀತ ಕಾರಂಜಿಯನ್ನು ಪುನರುಜ್ಜೀವನಗೊಳಿಸುವ ಕಾಮಗಾರಿಗಳನ್ನು ಅತೀ ತುರ್ತಾಗಿ ಪ್ರಾರಂಭಿಸಿ, ಉತ್ಕೃಷ್ಟ ದರ್ಜೆಯಲ್ಲಿ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕುಮಾರ್ ಅವರು ಸ್ಪಷ್ಟ ನಿರ್ದೇಶನ ನೀಡಿದರು.
ಇನ್ನು, ಎಸ್.ಎಂ.ಕೃಷ್ಣ ಅವರು
ಮುಖ್ಯಮಂತ್ರಿಯಾಗಿದ್ದ ವೇಳೆ ಸೌಧದ ಅಭಿವೃದ್ಧಿಗೆ ಕ್ರಿಯಾಯೋಜನೆ ಸಿದ್ದಪಡಿಸಲಾಗಿತ್ತು. ಆದರೆ, ಬದಲಾದ ರಾಜಕೀಯ ಸನ್ನಿವೇಶದಿಂದ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಸಾಧ್ಯವಾಗಲಿಲ್ಲ. ಆದರೆ, ಶಾಸಕ ಉದಯ್ ಅವರ ಸತತ ಪ್ರಯತ್ನದಿಂದಾಗಿ ಸೌಧದ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ 2 ಕೋಟಿ ರೂ ಅನುದಾನ ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದು, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಜಿಲ್ಲೆಯ ಜನತೆಯ ಹಲವು ವರ್ಷಗಳ ಅಭಿವೃದ್ಧಿ ಕೂಗು ಫಲಿಸಿದಂತಾಗಿದೆ.
ಇದೇ ವೇಳೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ನರಸಿಂಹಮೂರ್ತಿ, ಪೌರಾಯುಕ್ತೆ ರಾಧಿಕಾ, ಲೋಕೋಪಯೋಗಿ ಇಲಾಖೆ ಎಇಇ ದೇವಾನಂದ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ಶಿವಮೊಗ್ಗ: ಸಾಗರದಲ್ಲಿ ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆಗೆ ಯತ್ನ, ಗಂಭೀರ ಗಾಯ
ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ: ಮುಂದಾಲೋಚನೆಯಿಂದ ಟೆಂಡರ್ ಆಹ್ವಾನ- ಸಚಿವ ಎಂ.ಬಿ ಪಾಟೀಲ್








