ಬೆಳಗಾವಿ ಸುವರ್ಣ ವಿಧಾನಸೌಧ: ರಾಜ್ಯದಲ್ಲಿ ಅಬಕಾರಿ ಆದಾಯದ ಪ್ರಮಾಣ ಏರಿಕೆಯಾಗುತ್ತಿದ್ದು, ಪ್ರಸಕ್ತ 2025-26ನೇ ಹಣಕಾಸು ವರ್ಷದ ನವೆಂಬರ್ ಅಂತ್ಯದ ವೇಳೆಗೆ ಸರ್ಕಾರಕ್ಕೆ 24,287.83 ಕೋಟಿ ರೂಪಾಯಿ ಆದಾಯ ಹರಿದುಬಂದಿದೆ.
ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಲಿಖಿತ ಉತ್ತರ ನೀಡಿದ್ದು, ರಾಜ್ಯದ ಅಬಕಾರಿ ವಹಿವಾಟಿನ ಕಂಪು ಮತ್ತು ಪರವಾನಗಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಆದಾಯದ ಹರಿವು: ಕಳೆದ ವರ್ಷಕ್ಕೆ ಹೋಲಿಸಿದರೆ ಸಾಧನೆ
2024-25ನೇ ಸಾಲಿನಲ್ಲಿ ಒಟ್ಟು ಅಬಕಾರಿ ಆದಾಯ 34,636.11 ಕೋಟಿ ರೂ. ಆಗಿತ್ತು (ಇದರಲ್ಲಿ 28,852.53 ಕೋಟಿ ರೂ. ಮೌಲ್ಯದ ಹಾಟ್ ಡ್ರಿಂಕ್ಸ್ ಮತ್ತು ಬಿಯರ್‌ನಿಂದ 5,783.58 ಕೋಟಿ ರೂ. ಆದಾಯ ಬಂದಿತ್ತು). ಪ್ರಸಕ್ತ ಸಾಲಿನ ನವೆಂಬರ್ 2025ರ ಅಂತ್ಯಕ್ಕೆ ಹಾಟ್ ಡ್ರಿಂಕ್ಸ್’ನಿಂದ 20,614.08 ಕೋಟಿ ರೂ. ಹಾಗೂ ಬಿಯರ್ ಮಾರಾಟದಿಂದ 3,673.75 ಕೋಟಿ ರೂ. ಸಂಗ್ರಹವಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆ.
ಪರವಾನಗಿಗಳ ವಿವರ: ಸಿಎಲ್-2 ಮತ್ತು ಸಿಎಲ್-9 ಗೆ ಬ್ರೇಕ್
ರಾಜ್ಯದಲ್ಲಿ ಒಟ್ಟು ಎಲ್ಲ ವಿಧವಾದ ಅಬಕಾರಿ ಪರವಾನಗಿಗಳು ಒಟ್ಟು 14,099 ಇವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಗಮನಾರ್ಹ ಅಂಶವೆಂದರೆ, 1992ರಿಂದಲೇ ಹೊಸದಾಗಿ ಸಿಎಲ್-2 (ಚಿಲ್ಲರೆ ಮದ್ಯದ ಅಂಗಡಿ) ಮತ್ತು ಸಿಎಲ್-9 (ಬಾರ್ ಮತ್ತು ರೆಸ್ಟೋರೆಂಟ್) ಸನ್ನದುಗಳನ್ನು ನೀಡಲು ನಿರ್ಬಂಧ ವಿಧಿಸಲಾಗಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಪ್ರಮುಖ ಸನ್ನದುಗಳ ವಿವರ ಹೀಗಿದೆ:
• ಸಿಎಲ್-2 (ಚಿಲ್ಲರೆ ಅಂಗಡಿಗಳು): 4,006
• ಸಿಎಲ್-7 (ಹೋಟೆಲ್ ಮತ್ತು ವಸತಿಗೃಹ): 3,472
• ಸಿಎಲ್-9 (ಬಾರ್ ಮತ್ತು ರೆಸ್ಟೋರೆಂಟ್): 3,652
• ಸಿಎಲ್-11ಸಿ (ಎಂ.ಎಸ್.ಐ.ಎಲ್): 1,077
ಮಾರಾಟದ ಪ್ರಮಾಣ (ಲಕ್ಷ ಕೇಸ್‌ಗಳಲ್ಲಿ)
ಮದ್ಯದ ಮಾರಾಟದ ಅಂಕಿ-ಅಂಶಗಳನ್ನು ಗಮನಿಸಿದರೆ, 2024-25ರಲ್ಲಿ 708.85 ಲಕ್ಷ ಕೇಸ್ ಹಾಟ್ ಡ್ರಿಂಕ್ಸ್ ಹಾಗೂ 450.36 ಲಕ್ಷ ಕೇಸ್ ಬಿಯರ್ ಮಾರಾಟವಾಗಿತ್ತು. 2025-26ರ ನವೆಂಬರ್ ಅಂತ್ಯಕ್ಕೆ 458.95 ಲಕ್ಷ ಕೇಸ್ ಹಾಟ್ ಡ್ರಿಂಕ್ಸ್ ಹಾಗೂ 257.34 ಲಕ್ಷ ಕೇಸ್ ಬಿಯರ್ ಮಾರಾಟವಾಗಿದೆ








