ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಇಂದಿನಿಂದ ಟ್ರಯಲ್ ಪ್ರಾರಂಭ ಆಗುತ್ತಿದೆ. ಪ್ರಕರಣದಲ್ಲಿ ಮೊದಲ ಹಂತವಾಗಿ ಇಂದು ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ, ತಾಯಿ ರತ್ನಪ್ರಭಾ ಸಾಕ್ಷಿ ನುಡಿಯಲಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಇಂದು ಕಾಶಿನಾಥಯ್ಯ ಹಾಗೂ ತಾಯಿ ರತ್ನಪ್ರಭಾ ನ್ಯಾಯಾಧೀಶರ ಮುಂದೆ ಹಾಜರಾಗಲಿದ್ದು, ಘಟನಾವಳಿಯ ಬಗ್ಗೆ ಸಂಪೂರ್ಣ ಹೇಳಿಕೆಯನ್ನು ನುಡಿಯಲಿದ್ದಾರೆ. ರೇಣುಕಾಸ್ವಾಮಿ ಯಾವಾಗ ಮನೆಯಿಂದ ಹೊರಟ, ಮಧ್ಯಾಹ್ನ ಊಟಕ್ಕೆ ಬರೋದಿಲ್ಲ ಅಂದಿದ್ದು, ಬಳಿಕ ಸಾವಿನ ವಿಚಾರ ತಿಳಿದಿದ್ದು, ಈ ಎಲ್ಲಾ ಮಾಹಿತಿಯನ್ನು ನ್ಯಾಯಾಲಯದ ಮುಂದೆ ಹೇಳಲಿದ್ದಾರೆ.
ನಟ ದರ್ಶನ್ ಆರೋಪಿಯಾಗಿರುವ ಕೊಲೆ ಪ್ರಕರಣದಲ್ಲಿ ಸಾಕ್ಷ್ಯ ನುಡಿಯಲು ಕೊಲೆಯಾದ ರೇಣುಕಾಸ್ವಾಮಿಯ ಪಾಲಕರಿಗೆ ಸಮನ್ಸ್ ಜಾರಿಗೊಳಿಸಿರುವ ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ, ಡಿಸೆಂಬರ್ 17ರಂದು ವಿಚಾರಣೆಗೆ ಹಾಜರಾಗುವಂತೆ ನಿರ್ದೇಶಿಸಿತ್ತು.
ಪ್ರಕರಣ ಸಂಬಂಧ ಸಾಕ್ಷ್ಯ ನುಡಿಯಲು ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಮತ್ತು ತಾಯಿ ರತ್ನಮ್ಮಗೆ (ಸಾಕ್ಷಿ ಸಂಖ್ಯೆ 7 ಹಾಗೂ 8) ಸಮನ್ಸ್ ಜಾರಿಗೊಳಿಸಬೇಕು ಎಂದು ಕೋರಿ ತನಿಖಾಧಿಕಾರಿಗಳು (ಪ್ರಾಸಿಕ್ಯೂಷನ್) ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ಪುರಸ್ಕರಿಸಿರುವ ನ್ಯಾಯಾಧೀಶ ಐ.ಪಿ.ನಾಯಕ್ ಅವರು ಈ ಆದೇಶ ಮಾಡಿದ್ದಾರೆ.
ದರ್ಶನ್ ಸೇರಿ ಪ್ರಕರಣದ 17 ಆರೋಪಿಗಳ ವಿರುದ್ಧ ಕೊಲೆ, ಅಪಹರಣ, ಹಲ್ಲೆ, ಅಪರಾಧಿಕ ಒಳಸಂಚು, ಅಕ್ರಮ ಕೂಟ ರಚನೆ, ಹಣ ವಸೂಲಿ, ಅಕ್ರಮ ಬಂಧನ ಇನ್ನಿತರ ಆರೋಪಗಳನ್ನು ನಿಗದಿಪಡಿಸಿ ನವೆಂಬರ್ 3ರಂದು ನ್ಯಾಯಾಲಯ ಆದೇಶಿಸಿತ್ತು. ಜತೆಗೆ ನವೆಂಬರ್ 10ರಿಂದ ಪ್ರಕರಣದ ಮುಖ್ಯ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತ್ತು. ಅದಾದ ಬಳಿಕ ಪ್ರಕರಣ ಕುರಿತು ನ್ಯಾಯಾಲಯ ನಡೆಸುತ್ತಿರುವ ಮೊದಲ ಸಾಕ್ಷಿ ವಿಚಾರಣೆ ಇದೇ ಆಗಿದೆ. ಕೋರ್ಟ್ ಸೂಚನೆಯಂತೆ ಡಿಸೆಂಬರ್ 17ರಂದು ರೇಣುಕಾಸ್ವಾಮಿಯ ತಂದೆ-ತಾಯಿ ವಿಚಾರಣೆಗೆ ಖುದ್ದು ಹಾಜರಾಗಿ, ಸಾಕ್ಷ್ಯ ನುಡಿಯಬೇಕಿದೆ.








