ದಾವಣಗೆರೆ: ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನಿಧನ ಹಿನ್ನಲೆಯಲ್ಲಿ ದಾವಣಗೆರೆ ವಿವಿಯ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ. ಅಲ್ಲದೇ ನಾಳೆ ದಾವಣಗೆರೆ ವಿಶ್ವ ವಿದ್ಯಾಲಯಕ್ಕೆ ರಜೆಯನ್ನು ಘೋಷಣೆ ಮಾಡಲಾಗಿದೆ.
ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ನಿಧನರಾದ ಹಿನ್ನಲೆಯಲ್ಲಿ ದಾವಣಗೆರೆ ವಿವಿಯ ಪರೀಕ್ಷೆ ಮುಂದೂಡಿಕೆ ಮಾಡಲಾಗಿದೆ. ನಾಳೆ ವಿವಿ, ಸ್ವಾಯತ್ತ, ಸ್ನಾತಕೋತ್ತರ ಕೇಂದ್ರಗಳಿಗೂ ರಜೆಯನ್ನು ಘೋಷಿಸಿ ವಿವಿಯ ಕುಲಪತಿ ಪ್ರೊ.ಬಿ.ಡಿ ಕುಂಬಾರ್ ಆದೇಶಿಸಿದ್ದಾರೆ.
ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಸಚಿವ ಎಂ.ಬಿ.ಪಾಟೀಲ ಸಂತಾಪ
ಬೆಂಗಳೂರು: ಮಾಜಿ ಸಚಿವರು, ಶಾಸಕರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ ಅವರ ನಿಧನದ ಸುದ್ದಿ ತಿಳಿದು ಅತೀವ ದುಃಖವಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಸಂತಾಪ ಸೂಚಿಸಿದ್ದಾರೆ.
ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದೆ. ಸಾರ್ವಜನಿಕ ಜೀವನದಲ್ಲಿ ಅವರ ಸೇವೆ, ಸಂಘಟನೆಗೆ ನೀಡಿದ ನಾಯಕತ್ವ ಮತ್ತು ಸಮಾಜಕ್ಕೆ ಸಲ್ಲಿಸಿದ ಅಮೂಲ್ಯ ಕೊಡುಗೆಗಳು ಸದಾ ಸ್ಮರಣೀಯ. ಅವರ ಅಗಲಿಕೆಯಿಂದ ರಾಜ್ಯಕ್ಕೆ ಮತ್ತು ಸಮಾಜಕ್ಕೆ ಅಪಾರ ನಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.
ನನ್ನ ಸಂಬಂಧಿಯೂ ಆಗಿದ್ದ ಅವರು, ಕಾಂಗ್ರೆಸ್ ಪಕ್ಷದ ಕಟ್ಟಾಳುಗಳಾಗಿ ಪಕ್ಷದಲ್ಲಿ ತಳಮಟ್ಟದಿಂದ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ಬಾಪುಜಿ ಶಿಕ್ಷಣ ಸಂಸ್ಥೆಯನ್ನು ಅತ್ಯಂತ ಎತ್ತರಕ್ಕೆ ಕಟ್ಟಿ ಬೆಳೆಸಿದವರು. ದೊಡ್ಡ ದಾನಿಗಳಾಗಿದ್ದ ಅವರು, ಶ್ರೀಶೈಲ ಕ್ಷೇತ್ರ ಅಭಿವೃದ್ಧಿಗೆ ಮತ್ತು ಉಳವಿ ಕ್ಷೇತ್ರದ ಅಭಿವೃದ್ಧಿಗೆ, ಗುಡ್ಡಾಪುರ ದಾನಮ್ಮ ಕ್ಷೇತ್ರದ ಅಭಿವೃದ್ಧಿಗೆ ಅವರು ಬಹಳಷ್ಟು ಶ್ರಮಿಸಿದ್ದರು ಎಂದಿದ್ದಾರೆ.
ಅತ್ಯಂತ ಧಾರ್ಮಿಕ ವ್ಯಕ್ತಿಯಾಗಿದ್ದ ಅವರು ಅದನ್ನು ಪಾಲಿಸಿಕೊಂಡು ಬಂದಿದ್ದರು. ಶಿಸ್ತಿನಿಂದ ತುಂಬು ಜೀವನ, ಕೂಡು ಕುಟುಂಬದ ಸಂಭ್ರಮ ಅನುಭವಿಸಿದ್ದಾರೆ. ವ್ಯಾಪಾರ, ವ್ಯವಹಾರ, ಸಂಘ-ಸಂಸ್ಥೆಗಳು, ಸಮಾಜ, ಸಹಕಾರ ಕ್ಷೇತ್ರ ಹೀಗೆ ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಎಲ್ಲ ಕ್ಷೇತ್ರಗಳಲ್ಲಿಯೂ ವಿಶಿಷ್ಠ ಸಾಧನೆ ಮಾಡಿದ್ದಾರೆ. ಅವರ ಸಾಧನೆಗಳಿಗೆ ಲೆಕ್ಕವೇ ಇಲ್ಲ ಎಂದು ಸಚಿವ ಎಂ. ಬಿ. ಪಾಟೀಲ ಕಂಬನಿ ಮಿಡಿದಿದ್ದಾರೆ.








