ಬೆಂಗಳೂರು: ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ, 2025″ ಈ ಕಾನೂನು ಭಾರತದ ಸಂವಿಧಾನಕ್ಕೆ ವಿರೋಧವಾಗಿದೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಈ ವಿಧೇಯಕವನ್ನು ಜಾರಿಯಾಗೋದಕ್ಕೆ ಬಿಡೋದಿಲ್ಲ ಎಂಬುದಾಗಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ತಿಳಿಸಿದ್ದಾರೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಕರ್ನಾಟಕ ಸರ್ಕಾರವು ಪರಿಚಯಿಸಿರುವ “ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ, 2025” ಈ ಕಾನೂನು ಭಾರತದ ಸಂವಿಧಾನಕ್ಕೆ ವಿರೋಧವಾಗಿದೆ. ಇದು ನಾಗರಿಕರ ಮೂಲ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಕರ್ನಾಟಕ ರಕ್ಷಣಾ ವೇದಿಕೆಯು ಇದನ್ನು ತೀವ್ರವಾಗಿ ಖಂಡಿಸುತ್ತದೆ. ಈ ವಿಧೇಯಕವು ಸರ್ಕಾರದ ವಿರುದ್ಧ ಮಾತನಾಡುವವರ ಬಾಯಿ ಮುಚ್ಚಿಸುವ ಸಾಧನವಾಗಿದೆ. ಕೂಡಲೇ ಇದನ್ನು ಹಿಂದಕ್ಕೆ ಪಡೆಯಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸುತ್ತದೆ ಎಂದಿದ್ದಾರೆ.
ಭಾರತದ ಸಂವಿಧಾನದ ಅನುಚ್ಛೇದ 19(1)(ಎ)ಯಲ್ಲಿ ಮಾತನಾಡುವ ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಲಾಗಿದೆ. ಆದರೆ ಈ ವಿಧೇಯಕದಲ್ಲಿ “ದ್ವೇಷ ಭಾಷಣ”ಕ್ಕೆ ನೀಡಿರುವ ವ್ಯಾಖ್ಯೆಯೇ ಅಸ್ಪಷ್ಟವಾಗಿದೆ. ಸರ್ಕಾರದ ಉದ್ದೇಶವೇ ಅನುಮಾನ ಹುಟ್ಟಿಸುವಂತಿದೆ. ಹಿಂಸೆಗೆ ಪ್ರಚೋದನೆ ನೀಡುವ ಭಾಷಣಗಳನ್ನು ತಡೆಯಲು ಈಗಿರುವ ಕಾನೂನುಗಳಲ್ಲೇ ಅವಕಾಶ ಇದೆ. ಆದರೆ ಸರ್ಕಾರ ಈಗ ರೂಪಿಸಿರುವ ದ್ವೇಷಭಾಷಣ ಕಾಯ್ದೆಯ ಕರಡಿನಲ್ಲಿ ಧರ್ಮ, ಜಾತಿ, ಲಿಂಗ, ಭಾಷೆ, ಲೈಂಗಿಕತೆ ಮುಂತಾದವುಗಳ ಆಧಾರದಲ್ಲಿ “ಅಸಾಮರಸ್ಯ ಅಥವಾ ದ್ವೇಷದ ಭಾವನೆಗಳನ್ನು” ಮೂಡಿಸುವ ಯಾವುದೇ ಮಾತು ಅಥವಾ ಬರಹವನ್ನು ಅಪರಾಧ ಎಂದು ಕರೆಯಲಾಗಿದೆ. ಇದರಿಂದ ಸರ್ಕಾರದ ನೀತಿಗಳ ವಿರುದ್ಧದ ಟೀಕೆ, ಸಾಮಾಜಿಕ ಚರ್ಚೆ, ಹಾಸ್ಯ ಅಥವಾ ಸತ್ಯವನ್ನು ಹೇಳುವುದು ಕೂಡ ದ್ವೇಷ ಎಂದು ಪರಿಗಣಿಸುವ ಅಪಾಯವಿದೆ. ಜನರು ಭಯದಿಂದ ಮಾತನಾಡದೆ ಇರುವುದು ಸರ್ಕಾರದ ಉದ್ದೇಶವಾಗಿದ್ದಂತಿದೆ. ಇದು ಪ್ರಜಾಪ್ರಭುತ್ವದ ಮೂಲ ತತ್ವಕ್ಕೆ ಹಾನಿ ಮಾತ್ರವಲ್ಲ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಯತ್ನ ಎಂಬುದಾಗಿ ಗುಡುಗಿದ್ದಾರೆ.
ಸಂವಿಧಾನದ ಅನುಚ್ಛೇದ 19(2)ಯಲ್ಲಿ ವಾಕ್ ಸ್ವಾತಂತ್ರ್ಯಕ್ಕೆ ನಿರ್ಬಂಧಗಳು ಇದ್ದರೂ, ಈ ವಿಧೇಯಕವು ಅದನ್ನು ಮೀರಿ ಹೋಗುತ್ತದೆ. ಈ ಕಾನೂನು ಪೊಲೀಸರಿಗೆ ಮತ್ತು ಸರ್ಕಾರಕ್ಕೆ ನಿರಂಕುಶ ಅಧಿಕಾರ ನೀಡುತ್ತದೆ. ಕಾಯ್ದೆ ಹೇಳುವಂತೆ ಇಲ್ಲಿನ ಅಪರಾಧಗಳು ಸಂಜ್ಞೆಯವು ಮತ್ತು ಜಾಮೀನು ಇಲ್ಲದ್ದು. ಯಾರಾದರೂ ದೂರು ಕೊಟ್ಟರೆ ಸಾಕು, ಪೊಲೀಸರು ತಕ್ಷಣ ಬಂಧನ ಮಾಡಬಹುದು. ಆರೋಪಿಗಳಿಗೆ ನೋಟಿಸ್ ನೀಡುವ ಅಗತ್ಯವೂ ಇರುವುದಿಲ್ಲ. ಇದು ಎಂಥ ಕರಾಳ ಕಾಯ್ದೆ? ಜನಸಾಮಾನ್ಯರನ್ನು ಅಪರಾಧಿಗಳಾಗಿ ಮಾಡುವ ಈ ಕೀಳುಮಟ್ಟದ ಕಾಯ್ದೆ ನಮಗೆ ಬೇಕೆ? ಎಂದು ಪ್ರಶ್ನಿಸಿದ್ದಾರೆ.
ವಿಧೇಯಕದ ಕಲಂ 4ರಲ್ಲಿ ಪ್ರತಿಬಂಧಕ ಕ್ರಮಗಳನ್ನೂ ಸಹ ಉಲ್ಲೇಖಿಸಲಾಗಿದೆ. ಪೊಲೀಸರು ಅಥವಾ ಅಧಿಕಾರಿಗಳು “ಸಂಭಾವ್ಯ ಅಪರಾಧ” ಎಂದು ಭಾವಿಸಿ ಮುಂಚಿತವಾಗಿ ಕ್ರಮ ಕೈಗೊಳ್ಳಬಹುದು. ಇದರಿಂದ ಪ್ರತಿಭಟನೆಗಳು, ಸಭೆಗಳು ಅಥವಾ ಸಾಮಾಜಿಕ ಚಳವಳಿಗಳನ್ನು ತಡೆಯಬಹುದು. ಕಲಂ 6ರಲ್ಲಿ ಸರ್ಕಾರ ಹೇಳುತ್ತಿರುವ ʻದ್ವೇಷ ಭಾಷಣʼಗಳನ್ನು ಬ್ಲಾಕ್ ಮಾಡುವ ಅಧಿಕಾರವನ್ನೂ ನೀಡಲಾಗಿದೆ. ಇದರ ಮೂಲಕ ಸರ್ಕಾರದ ಟೀಕೆ ಮಾಡುವ ಪೋಸ್ಟ್ಗಳನ್ನು ಸುಲಭವಾಗಿ ತೆಗೆದುಹಾಕಬಹುದು. ಇದು ಸಂವಿಧಾನದಲ್ಲಿ ನೀಡಿರುವ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತದೆ ಎಂದು ಗುಡುಗಿದ್ದಾರೆ.
ಈ ವಿಧೇಯಕದಿಂದ ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ಸಾಮಾಜಿಕ ಮಾಧ್ಯಮ ಬಳಸುವವರು ಹೆಚ್ಚು ತೊಂದರೆಗೀಡಾಗುತ್ತಾರೆ. ಅನ್ಯಾಯ ಅಥವಾ ಸರ್ಕಾರದ ತಪ್ಪುಗಳ ಬಗ್ಗೆ ಮಾತನಾಡಿದರೆ “ಭಾವನಾತ್ಮಕ ಹಾನಿ” ಎಂದು ಆರೋಪಿಸಿ ಬಂಧನ ಮಾಡಲು ಇದು ಪೊಲೀಸರಿಗೆ ಅಧಿಕಾರ ನೀಡುತ್ತದೆ. ಪತ್ರಕರ್ತರ ತನಿಖಾ ವರದಿಗಳು ಅಪಾಯಕ್ಕೆ ಸಿಲುಕುತ್ತವೆ. ಸಾಮಾಜಿಕ ಮಾಧ್ಯಮದಲ್ಲಿ ಹಾಸ್ಯ ಅಥವಾ ಟೀಕೆಯನ್ನು ದ್ವೇಷ ಎಂದು ಕರೆದು ಬ್ಲಾಕ್ ಮಾಡಬಹುದು. ಪ್ರಜಾಪ್ರಭುತ್ವದಲ್ಲಿ ಮಾಧ್ಯಮ ಮತ್ತು ಜನರ ಧ್ವನಿಯನ್ನು ನಾಶಪಡಿಸುವ ಇಂಥ ಕಾಯ್ದೆ ಯಾವುದೇ ಕಾರಣಕ್ಕೂ ಜಾರಿಯಾಗಕೂಡದು ಎಂದಿದ್ದಾರೆ.
ಈ ವಿಧೇಯಕವು ಹಳೆಯ ರಾಜದ್ರೋಹ ಕಾನೂನು (ಐಪಿಸಿ ಸೆಕ್ಷನ್ 124ಎ) ಅಥವಾ ಯುಎಪಿಎಯಂತೆ ರಾಜಕೀಯ ದುರುಪಯೋಗಕ್ಕೆ ಬಳಕೆಯಾಗುವ ಸಾಧ್ಯತೆಯೇ ಹೆಚ್ಚಾಗಿದೆ. ಐಟಿ ಆಕ್ಟ್ ಸೆಕ್ಷನ್ 66ಎಯನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿತು. ರಾಜ್ಯ ಸರ್ಕಾರ ತಂದಿರುವ ವಿಧೇಯಕ ಇದೇ ಮಾದರಿಯದ್ದು. “ಸಾಮಾಜಿಕ ಸಾಮರಸ್ಯ”ದ ಹೆಸರಲ್ಲಿ ಅಭಿವ್ಯಕ್ತಿಯನ್ನು ನಿರ್ಬಂಧಿಸುವುದು ಪ್ರಜಾಸತ್ತೆಯನ್ನು ದುರ್ಬಲಗೊಳಿಸುತ್ತದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆಯು ಈ ವಿಧೇಯಕವನ್ನು ತಕ್ಷಣ ಹಿಂಪಡೆಯಬೇಕೆಂದು ಒತ್ತಾಯಿಸುತ್ತದೆ. ಹಿಂದಕ್ಕೆ ಪಡೆಯದೇ ಹೋದರೆ ನಾವು ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ. ಈ ದೇಶದ ನಾಗರಿಕರಿಗೆ ಸಂವಿಧಾನದ ಹಕ್ಕುಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ. ಈ ಕಾನೂನು ನಾಗರಿಕರ ಸ್ವಾತಂತ್ರ್ಯವನ್ನು ಕೊಲ್ಲುತ್ತದೆ. ಹೀಗಾಗಿ ಇದು ಜಾರಿಯಾಗಲು ನಾವು ಅವಕಾಶ ನೀಡುವುದಿಲ್ಲ ಎಂಬುದಾಗಿ ಹೇಳಿದ್ದಾರೆ.
ಪೋಷಕರೇ ಗಮನಿಸಿ : ಮಕ್ಕಳಿಗೆ ‘ಬ್ಲೂ ಆಧಾರ್ ಕಾರ್ಡ್’ ಮಾಡಿಸುವುದು ಹೇಗೆ.? ಇಲ್ಲಿದೆ ಮಾಹಿತಿ
ನಕಲಿ ಐಡಿಗಳ ವಿರುದ್ಧ ರೈಲ್ವೆ ಸಮರ: 3.03 ಕೋಟಿ ಖಾತೆಗಳು ನಿಷ್ಕ್ರಿಯ, 2.7 ಕೋಟಿ ಖಾತೆ ಬಗ್ಗೆ ತನಿಖೆ








