ಬೆಳಗಾವಿ ವಿಧಾನಸಭೆ: ಹುಬ್ಬಳ್ಳಿ-ಧಾರವಾಡ ಮಹಾ ನಗರಪಾಲಿಕೆಯನ್ನು ವಿಭಜನೆ ಮಾಡುವ ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ರಾಜ್ಯಪಾಲರು ಅಂಕಿತ ಹಾಕಬೇಕಿದ್ದು, ಸಹಿ ಹಾಕಿದ ನಂತರ ವಿಭಜನೆ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುತ್ತದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಶುಕ್ರವಾರ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಅಬ್ಬಯ್ಯ ಪ್ರಸಾದ್ ಅವರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ ಹೊಸದಾಗಿ ಧಾರವಾಡ ಮಹಾನಗರ ಪಾಲಿಕೆಯನ್ನು ರಚಿಸಲು ಮತ್ತು ಇನ್ನುಳಿದ ಪ್ರದೇಶವನ್ನು ಹುಬ್ಬಳ್ಳಿ ಮಹಾನಗರ ಪಾಲಿಕೆ ಎಂಬುದಾಗಿ ಮುಂದುವರೆಸಲು ದಿನಾಂಕ: 21-01-2025ರಂದು ಪ್ರಾಥಮಿಕ ಅಧಿಸೂಚನೆಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿರುತ್ತದೆ. ಆದರೆ ಈ ಬಗ್ಗೆ ಯಾವುದೇ ಕ್ರಮ ಆಗಿರುವುದಿಲ್ಲ ಎಂದು ಸದನದಲ್ಲಿ ಪ್ರಸ್ತಾಪಿಸಿದರು.
ಇದಕ್ಕೆ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು, ಹುಬ್ಬಳ್ಳಿ –ಧಾರವಾಡ ಮಹಾ ನಗರಪಾಲಿಕೆಯನ್ನು ವಿಭಜನೆ ಮಾಡುವ ಬಗ್ಗೆ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡು ಏಳು ತಿಂಗಳುಗಳೇ ಕಳೆದಿವೆ. ಈ ಕಡತಕ್ಕೆ ಅಂಕಿತ ಹಾಕುವಂತೆ ರಾಜ್ಯಪಾಲರಿಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.
ಹೀಗಾಗಿ ಸರ್ಕಾರದ ಕಡೆಯಿಂದ ಯಾವುದೇ ವಿಳಂಬವಾಗಿಲ್ಲ. ಕಡತಕ್ಕೆ ಸಹಿ ಹಾಕುವಂತೆ ರಾಜ್ಯಪಾಲರಿಗೆ ಎರಡು ಬಾರಿ ಪತ್ರ ಬರೆದಿದ್ದರೂ ಇದುವರೆಗೂ ಸಹಿ ಬಿದ್ದಿಲ್ಲ. ಈ ಹಿನ್ನೆಲೆಯಲ್ಲಿ ಈ ಭಾಗದ ಬಿಜೆಪಿ ಶಾಸಕರನ್ನು ಒಳಗೊಂಡ ನಿಯೋಗದ ನೇತೃತ್ವದಲ್ಲಿ ನಾನು ರಾಜ್ಯಪಾಲರನ್ನು ಭೇಟಿ ಮಾಡಿ ಕಡತಕ್ಕೆ ಸಹಿ ಹಾಕುವಂತೆ ಮನವಿ ಮಾಡಲು ಸಿದ್ಧವಿದ್ದೇನೆ ಎಂದು ಹೇಳಿದರು.
ಆಡಳಿತಾತ್ಮಕ ಹಿತದೃಷ್ಟಿಯಿಂದ ಬಿಜೆಪಿ ಶಾಸಕರೂ ಸಹ ರಾಜ್ಯಪಾಲರ ಮೇಲೆ ಒತ್ತಡ ಹಾಕಿ ಕಡತಕ್ಕೆ ಸಹಿ ಹಾಕಿಸುವಂತೆ ಸಚಿವರು ಮನವಿ ಮಾಡಿದರು.
BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : ‘ಆರೋಗ್ಯ ಸಂಜೀವಿನಿ ಯೋಜನೆ’ಗೆ ಜಸ್ಟ್ ಈ ರೀತಿ ಅರ್ಜಿ ಸಲ್ಲಿಸಿ.!
Alert : ಈ `ಬ್ಲಡ್ ಗ್ರೂಪ್’ ಹೊಂದಿರುವವರಿಗೆ `ಕ್ಯಾನ್ಸರ್’ ಅಪಾಯ ಹೆಚ್ಚು.!








