ಬೆಳಗಾವಿ: ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ತಿದ್ದುಪಡಿಗೆ ಕಳೆದ ಅಕ್ಟೋಬರ್ ತಿಂಗಳಲ್ಲೇ ಕರಡು ರಚಿಸಲಾಗಿದ್ದು, ಮುಂದಿನ ಒಂದು ತಿಂಗಳೊಳಗೆ ಅಧಿಸೂಚನೆ ಹೊರಡಿಸಿ ಕಾರ್ಯರೂಪಕ್ಕೆ ತರಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ವಿಧಾನ ಪರಿಷತ್ ಗೆ ಮಾಹಿತಿ ನೀಡಿದ್ದಾರೆ.
ಬುಧವಾರ ಪರಿಷತ್ನ ಪ್ರಶ್ನೋತ್ತರ ಅವಧಿಯ ವೇಳೆ ಶಾಸಕ ರಾಮೋಜಿ ಗೌಡ ಅವರು, “ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಕಲಂ 95ರ ತಿದ್ದುಪಡಿ ಅಧಿಸೂಚನೆಯನ್ನು ಇದುವರೆವಿಗೂ ಜಾರಿಗೆ ತರದಿರಲು ಕಾರಣಗಳೇನು.? ಕಳೆದ ಅಧಿವೇಶನದಲ್ಲಿ ಈ ಅಧಿಸೂಚನೆಯನ್ನು ಗೊತ್ತುಪಡಿಸಿದ ದಿನಾಂಕದಿಂದ ಜಾರಿಗೆ ಬರುವುದು ಎಂದು ತಿಳಿಸಲಾಗಿತ್ತು. ಆದರೆ, ಇದುವರೆವಿಗೂ ಈ ಅಧಿಸೂಚನೆಯನ್ನು ಜಾರಿಗೆ ತರದಿರುವುದರಿಂದ ನಗರ ಪ್ರದೇಶದ ಜನತೆಗೆ ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಎಂದು ಪ್ರಶ್ನೆ ಮಾಡಿದ್ದರು.
ಈ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಕೃಷ್ಣ ಬೈರೇಗೌಡ ಅವರು, “ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರಲ್ಲಿ ಜಾರಿಯಾಗಿದ್ದರೂ ಈ ಹಿಂದೆ ಅಗತ್ಯ ತಿದ್ದುಪಡಿಗಳಾಗಿರಲಿಲ್ಲ. ಆದರೆ, ಪ್ರಸ್ತುತ ಅತ್ಯಧಿಕ ಹಾಗೂ ಅಗತ್ಯ ತಿದ್ದುಪಡಿಗಳನ್ನು ತರಲಾಗುತ್ತಿದೆ. ಕಲಂ 95ರಕ್ಕೆ ಸಾಕಷ್ಟು ತಿದ್ದುಪಡಿ ಮಾಡಿದ್ದು, ಕಳೆದ ಅಕ್ಟೋಬರ್ 20 ರಂದೇ ಕರಡು ರಚಿಸಲಾಗಿದೆ. ಈ ಪೈಕಿ ಬಹುಮುಖ್ಯವಾಗಿ ಜನರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಭೂ ಪರಿವರ್ತನೆಯನ್ನು ಮತ್ತಷ್ಟು ಸರಳೀಕರಣಗೊಳಿಸಲಾಗಿದೆ. ಬಹು ಕಾಲದಿಂದಲೂ ಭೂ ಪರಿವರ್ತನೆ ಎಂಬುದೇ ಹಗರಣ ಎಂಬಂತಹ ಪರಿಸ್ಥಿತಿ ಇತ್ತು. ಇದರಲ್ಲಿ ಅಧಿಕಾರಿಗಳು ಭಾಗಿಯಾಗಿದ್ದಾರೋ.. ಇಲ್ಲವೋ ನಮಗೆ ಗೊತ್ತಿಲ್ಲ. ಆದರೆ, ಅನೇಕ ಮಧ್ಯವರ್ತಿಗಳಂತೂ ಹುಟ್ಟಿಕೊಂಡಿದ್ದಾರೆ. ಇದರಿಂದ ಅಧಿಕಾರಿಗಳಿಗೂ ಕೆಟ್ಟ ಹೆಸರು, ಸರ್ಕಾರಕ್ಕೂ ಕೆಟ್ಟ ಹೆಸರು. ಹೀಗಾಗಿ ಈ ಭೂ ಪರಿವರ್ತನೆ ದಂಧೆಗೆ ಸಂಪೂರ್ಣ ಬ್ರೇಕ್ ಹಾಕುವ ನಿಟ್ಟಿನಲ್ಲಿ ಮಹತ್ವದ ತಿದ್ದುಪಡಿಗಳನ್ನು ತರಲಾಗಿದೆ” ಎಂದರು.
“ಮಾಸ್ಟರ್ ಪ್ಲಾನ್ ಪ್ರಕಾರ ಉದ್ಯಮ ನಡೆಸುವವರಿಗೆ ಆಟೋ ಕನ್ವರ್ಷನ್ಗೆ ಅವಕಾಶ ನೀಡಲಾಗಿದೆ. ಮಾಸ್ಟರ್ ಪ್ಲಾನ್ ಹೊರಗಿನ ಹಾಗೂ ಡೀಮ್ಡ್ ಕನ್ವರ್ಷನ್ಗೂ ಸಹ ಈ ಹಿಂದೆ ಮೂರು ನಾಲ್ಕು ತಿಂಗಳು ಸಮಯ ಆಗುತ್ತಿತ್ತು. ಆದರೆ, ಪ್ರಸ್ತುತ 30 ದಿನಗಳಲ್ಲಿ ಭೂ ಪರಿವರ್ತನೆಗೆ ಅವಕಾಶ ನೀಡಲಾಗುತ್ತಿದೆ. ಭೂ ಪರಿವರ್ತನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಜಿಲ್ಲಾಧಿಕಾರಿಗಳು 30ದಿನಗಳ ಒಳಗಾಗಿ ಸಂಬಂಧಿತ ಯಾವುದೇ ಇಲಾಖೆಯ ಜೊತೆಗೆ ಚರ್ಚಿಸಿ ಪರಿವರ್ತನೆಗೆ ಅವಕಾಶ ನೀಡಬಹುದು ಅಥವಾ ತಿರಸ್ಕರಿಸಬಹುದು. 30ದಿನಗಳ ಒಳಗಾಗಿ ಜಿಲ್ಲಾಧಿಕಾರಿಗಳು ಯಾವ ನಿರ್ಧಾರವೂ ತೆಗೆದುಕೊಳ್ಳದಿದ್ದಲ್ಲಿ, ಆಟೋಮೇಟಿಕ್ ಆಗಿ ಭೂ ಪರಿವರ್ತನೆಗೆ ಅವಕಾಶ ಲಭ್ಯವಾಗುತ್ತದೆ” ಎಂದು ಮಾಹಿತಿ ನೀಡಿದರು.
ಸಣ್ಣ ಕೈಗಾರಿಕೆಗಳು ಎರಡು ಎಕರೆ ವರೆಗೆ ಕೈಗಾರಿಕಾ ಉದ್ದೇಶಕ್ಕಾಗಿ ಭೂ ಪರಿವರ್ತನೆ ಅಗತ್ಯವಿಲ್ಲ
ಸಣ್ಣ ಕೈಗಾರಿಕೆಗಳು ಎರಡು ಎಕರೆ ವರೆಗೆ ಕೈಗಾರಿಕಾ ಉದ್ದೇಶಕ್ಕಾಗಿ ಭೂ ಪರಿವರ್ತನೆ ಅಗತ್ಯ ಇಲ್ಲ. ಭಾರತ ದೇಶದಲ್ಲಿ ಪ್ರಸ್ತುತ ನವೀಕರಿಸಬಹುದಾದ ಇಂಧನದ ಕಡೆ ಹೆಜ್ಜೆ ಇಡುತ್ತಿದೆ. ಹೀಗಾಗಿ ಇದಕ್ಕೂ ಭೂ ಪರಿವರ್ತನೆ ಬೇಕಿಲ್ಲ. ಇಂಧನ ಇಲಾಖೆಯ ಅನುಮತಿ ಪಡೆದಿದ್ದರೆ, ನವೀಕರಿಸಬಹುದಾದ ಇಂಧನದ ಪ್ಲಾಂಟ್ ನಿರ್ಮಿಸಲು ಭೂ ಪರಿವರ್ತನೆ ಅಗತ್ಯ ಇಲ್ಲ. ಹೀಗೆ ಭೂ ಪರಿವರ್ತನೆಗೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಸರಳೀಕರಣಗೊಳಿಸಲಾಗಿದೆ” ಎಂದು ತಿಳಿಸಿದರು.
ಇದಲ್ಲದೆ, “ಉಪ ವಿಭಾಗಾಧಿಕಾರಿಗಳ ಕಂದಾಯ ನ್ಯಾಯಾಲಯಗಳನ್ನು ಹೇಗೆ ನಡೆಸಬೇಕು ಎಂದು ಈ ಹಿಂದೆ ಯಾವುದೇ ಸ್ಪಷ್ಟ ನಿಯಮ (ರೂಲ್ಸ್) ಇರಲಿಲ್ಲ. ಪರಿಣಾಮ ಉಪ ವಿಭಾಗಾಧಿಕಾರಿಗಳು ಕೋರ್ಟ್ನಲ್ಲಿ ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಅನೇಕ ಆದೇಶಗಳನ್ನು ಹೊರಡಿಸಿರುವ ಉದಾಹರಣೆಗಳು ಸಾಕಷ್ಟಿವೆ. ಹೀಗಾಗಿ ಅದಕ್ಕೂ ನಿಯಮಗಳನ್ನು ರೂಪಿಸಿ ಸರಿಪಡಿಸಿದ್ದೇವೆ. ಈ ಅನೇಕ ಸೆಕ್ಷನ್ಗಳಿಗೆ ಹೊಸ ನಿಯಮಗಳನ್ನು ತಿದ್ದುಪಡಿ ಮೂಲಕ ಜಾರಿಗೊಳಿಸುತ್ತಿದ್ದೇವೆ. ಮುಂದಿನ ಒಂದು ತಿಂಗಳೊಳಗೆ ಅಧಿಸೂಚನೆ ಹೊರಡಿಸಿ ಕಾರ್ಯರೂಪಕ್ಕೆ ತರಲಾಗುವುದು” ಎಂದು ಪರಿಷತ್ನಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಭರವಸೆ ನೀಡಿದರು.








