ಬೆಂಗಳೂರು: ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಷನ್ ಅವರ ಮನವಿಗೆ ಕರ್ನಾಟಕ ಸರ್ಕಾರದ ನಗರಾಭಿವೃದ್ದಿ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಇದೇ ಡಿಸೆಂಬರ್ 13 ರಂದು ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಷನ್ ಪ್ರತಿನಿಧಿಗಳೊಂದಿಗೆ ವಿಧಾನಸೌಧದ ಬ್ವಾಂಕ್ವೇಟ್ ಹಾಲ್‌ನಲ್ಲಿ ಸನ್ಮಾನ್ಯ ಉಪಮುಖ್ಯಮಂತ್ರಿಗಳೊಂದಿಗೆ ಸಂವಾದವನ್ನು ಆಯೋಜಿಸಿದೆ. ಈ ಸಂವಾದದಲ್ಲಿ ಅಪಾರ್ಟ್‌ಮೆಂಟ್ ಮಾಲೀಕರುಗಳ ಬಹುದಿನಗಳ ಬೇಡಿಕೆ ಹಾಗೂ ಆಶೋತ್ತರಗಳು ಈಡೇರಲಿವೆ ಎಂದು ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಷನ್ ಅಧ್ಯಕ್ಷರಾದ ಸತೀಶ್ ಮಲ್ಯ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು, ಡಿಸೆಂಬರ್ 2 ರಂದು ಬೆಂಗಳೂರು ನಗರದಲ್ಲಿ ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಷನ್ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯನ್ನು ಆಯೋಜಿಸಿ, ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ, 2025 ಅನ್ನು ಮಂಡಿಸುವಂತೆ ಆಗ್ರಹಿಸಲಾಗಿತ್ತು. ಅಲ್ಲದೇ, ನಗರಾಭಿವೃದ್ದಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ತುಷಾರ್ ಗಿರಿನಾಥ್ ಅವರಿಗೆ ಭೇಟಿಯಾಗಿ ಮನವಿ ಸಲ್ಲಿಸಲಾಗಿತ್ತು. ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಅವರು ಶನಿವಾರ, ಡಿಸೆಂಬರ್ 13, 2025 ರಂದು ವಿಧಾನಸೌಧದ ಬ್ವಾಂಕ್ವೇಟ್ ಹಾಲ್ ನಲ್ಲಿ ಅಪಾರ್ಟ್‌ಮೆಂಟ್ ಫೆಡರೇಷನ್ ಪ್ರತಿನಿಧಿಗಳೊಂದಿಗೆ ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರ ಸಂವಾದ ಕಾರ್ಯಕ್ರಮ ಆಯೋಜಿಸಿದ್ದಾರೆ. ಈ ಬಗ್ಗೆ ಅಧಿಕೃತ ಆಹ್ವಾನವನ್ನು ನೀಡಿದ್ದು, ಬೆಂಗಳೂರು ನಗರದಲ್ಲಿರುವ ಅಪಾರ್ಟ್‌ಮೆಂಟ್ ಮಾಲೀಕರ ಜೊತೆಯಲ್ಲಿ ಭಾಗವಹಿಸುವಂತೆ ಸೂಚನೆ ನೀಡಿದ್ದಾರೆ.
ಈ ಸಂವಾದ ಕಾರ್ಯಕ್ರಮದಲ್ಲಿ ಅಪಾರ್ಟ್‌ಮೆಂಟ್ ಮಾಲೀಕರು ಬಹಳಷ್ಟು ದಿನಗಳಿಂದ ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ ಅಲ್ಲದೇ, ನಮ್ಮ ಪ್ರಮುಖ ಬೇಡಿಕೆಯಾಗಿರುವಂತಹ ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ, 2025 ರ ಅನುಷ್ಠಾನ ಈಡೇರಲಿದೆ ಎನ್ನುವ ಆಶಾಭಾವನೆ ನಮ್ಮದಾಗಿದೆ ಎಂದು ಹೇಳಿದರು.
ಡಿಸೆಂಬರ್ 13 ರಂದು ಬೆಳಿಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ ನಡೆಯಲಿರುವ ಈ ಸಂವಾದ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಪಾರ್ಟ್‌ಮೆಂಟ್ ಮಾಲೀಕರು ಭಾಗವಹಿಸಬೇಕು. ತಾವುಗಳ ಎದುರಿಸುತ್ತಿರುವ ಸಮಸ್ಯೆಗಳು ಬಗ್ಗೆ ಗಮನ ಸೆಳೆಯಬಹುದಲ್ಲದೇ, ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ ಮಂಡಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬಹುದಾಗಿದೆ BAF ಪ್ರಧಾನ ಕಾರ್ಯದರ್ಶಿ ಶ್ರೀ ಕೆ. ಅರುಣ್ ಕುಮಾರ್ ಪತ್ರಿಕಾ ಪ್ರಕಟಣೆಯ ಮೂಲಕ ಆಹ್ವಾನಿಸಿದ್ದಾರೆ.








