ಬೆಳಗಾವಿ : “ಕೃಷ್ಣಾ ಮೇಲ್ದಂಡೆ ಯೋಜನೆ ಹಂತ- 3ರ ಅನುಷ್ಠಾನಕ್ಕೆ 2013 ರಿಂದ ಇಲ್ಲಿಯವರೆಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸದೆ ಬಾಕಿ ಉಳಿಸಿಕೊಂಡಿದೆ. ಮೊದಲನೇ ಬಾರಿಗೆ ಮಹಾರಾಷ್ಟ ಎರಡನೇ ಬಾರಿಗೆ ಆಂಧ್ರ ಪ್ರದೇಶದ ಅಡ್ಡಗಾಲು ಹಾಕಿವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ವಿಧಾನಸಭೆ ಪ್ರಶ್ನೋತ್ತರ ಕಲಾಪದ ವೇಳೆ ವಿವಿಧ ಶಾಸಕರುಗಳು ನೀರಾವರಿ ಯೋಜನೆಗಳ ಸಂಬಂಧ ಕೇಳಿದ ಪ್ರಶ್ನೆಗಳಿಗೆ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಉತ್ತರಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆ (ಹಂತ-3) ಸಂಬಂಧ ಭೂಸ್ವಾಧೀನ ಪರಿಹಾರ ಸೇರಿದಂತೆ ಇತರೇ ವಿಚಾರಗಳ ಬಗ್ಗೆ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ ಅವರ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, “ದೆಹಲಿಯಲ್ಲಿರುವ ತಮ್ಮ ಸ್ನೇಹಿತರ ಮೇಲೆ ಒತ್ತಡ ಹೇರಿ ಈ ಯೋಜನೆಗೆ ಅನುಮತಿ ಕೊಡಿಸಿದರೆ, ಕೂಡಲೇ ಸಾಲ ಮಾಡಿ ಈ ಯೋಜನೆ ಪೂರ್ಣಗೊಳಿಸಲಾಗುವುದು. ಕೇಂದ್ರ ಸಚಿವರಾದ ಸೋಮಣ್ಣ ಅವರ ಜೊತೆ ಮೂರು ಬಾರಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿದ್ದೇವೆ. ಕೇಂದ್ರ ಜಲಶಕ್ತಿ ಸಚಿವರು ಈ ಬಗ್ಗೆ ಕರೆದಿದ್ದ ಸಂಬಂಧಪಟ್ಟ ರಾಜ್ಯಗಳ ಸಭೆಯನ್ನು ಕಾರಾಣಾಂತರಗಳಿಂದ ಮುಂದೂಡಿದ್ದೇನೆ ಎಂದು ತಿಳಿಸಿದ್ದರು” ಎಂದರು.
ಯೋಜನೆ ಪೂರ್ಣಗೊಳಿಸಲು ಬದ್ಧ
“ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರವಾಗಿ ಸಿದ್ದರಾಮಯ್ಯ ಅವರು ಹಾಗೂ ನಾವು ಚರ್ಚೆ ಮಾಡಿ ಭೂ ಪರಿಹಾರದ ಬಗ್ಗೆ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದೇವೆ. ಬಸವರಾಜ ಬೊಮ್ಮಾಯಿ ಅವರ ಕಾಲದಲ್ಲಿ ಆಗಿದ್ದ ಭೂ ಪರಿಹಾರ ತೀರ್ಮಾನವನ್ನ ಮಾರ್ಪಾಡು ಮಾಡಿ ಒಂದು ಹಂತಕ್ಕೆ ತಂದಿದ್ದೇವೆ. ಈ ಯೋಜನೆ ಪೂರ್ಣಗೊಳಿಸಲು ನಾವು ಬದ್ದವಾಗಿದ್ದೇವೆ. ಎಲ್ಲಾದರೂ ಹಣ ತಂದು ವೆಚ್ಚ ಮಾಡಲು ಯೋಜನೆ ರೂಪಿಸಿದ್ದೇವೆ. ವರ್ಷಕ್ಕೆ 15-20 ಸಾವಿರ ಕೋಟಿ ನೀಡಬೇಕು, ಮುಂದಿನ ಮೂರ್ನಾಲ್ಕು ವರ್ಷದಲ್ಲಿ ಭೂಸ್ವಾಧೀನ ಪೂರ್ಣಗೊಳಿಸಬೇಕು ಎಂದು ಹೊರಟಿದ್ದೇವೆ. ಕೆಲವು ಕಡೆ ಕೆಲಸವನ್ನೂ ಪ್ರಾರಂಭ ಮಾಡಿದ್ದೇವೆ” ಎಂದರು.
ಮೊದಲೇ ಭೂಮಿ ನೀಡಿರುವ ರೈತರಿಗೆ ಭೂಪರಿಹಾರ ನೀಡಿ ಎಂದು ಯತ್ನಾಳ್ ಅವರು ಕೇಳಿದಾಗ, “ಭೂ ಪರಿಹಾರ ವಿಚಾರ ಮಾಫಿಯಾವಾಗಿ ಹೋಗಿದೆ. 10 ಲಕ್ಷ ಭೂಮಿ ಬೆಲೆಯಿದ್ದರೆ 10 ಕೋಟಿ ಅವಾರ್ಡ್ ಮಾಡಲಾಗಿದೆ. ವಕೀಲರು ಹಾಗೂ ಅಧಿಕಾರಿಗಳು ಹೊಂದಾಣಿಕೆ ಮಾಡಿಕೊಂಡ ಕಾರಣಕ್ಕೆ ಇಷ್ಟೊಂದು ಪರಿಹಾರ ನೀಡಲು ಆಗುವುದಿಲ್ಲ. ನಾನು ಇದನ್ನು ಒಪ್ಪುವುದಿಲ್ಲ. ನಾವು ರಾಜ್ಯದ ಹಿತ ಕಾಪಾಡಲು ಬದ್ಧ” ಎಂದರು.
ಘಟಪ್ರಭಾ ಕಾಲುವೆಗಳ ಅಭಿವೃದ್ದಿಗೆ ₹1,722 ಕೋಟಿ ಯೋಜನೆ; ಅನುದಾನಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ
ಹಿಡಕಲ್ ಜಲಾಶಯದ ಬಲ ಹಾಗೂ ಎಡ ದಂಡೆ ಕಾಲುವೆಗಳ ದುರಸ್ತಿ ಹಾಗೂ ಕಾಲುವೆಗಳಿಗೆ ಅಕ್ರಮ ಪಂಪ್ ಸೆಟ್ ಅಳವಡಿಕೆ ವಿರುದ್ದ ಕ್ರಮ ತೆಗೆದುಕೊಳ್ಳಿ ಎನ್ನುವ ಶಾಸಕ ಜಿ.ಟಿ.ಪಾಟೀಲ್ ಅವರು ಕೇಳಿದ ಪ್ರಶ್ನೆಗೆ, “ಘಟಪ್ರಭಾ ಬಲ ಹಾಗೂ ಎಡ ದಂಡೆ ಕಾಲುವೆಗಳ ಅಭಿವೃದ್ಧಿಗೆ ₹1722 ಕೋಟಿ ಯೋಜನೆ ತಯಾರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ಇದಕ್ಕೆ ಒಪ್ಪಿಗೆ ಸಿಕ್ಕರೆ ಕೇಂದ್ರ ಸರ್ಕಾರದ ಶೇ. 60, ರಾಜ್ಯ ಸರ್ಕಾರದ ಶೇ.40 ವೆಚ್ಚದ ಸಹಭಾಗಿತ್ವದಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು. ನೀವು ಹಾಗೂ ನಿಮ್ಮ ಸಂಸದರು ಕೇಂದ್ರ ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ಹಾಕಬೇಕಿದೆ” ಎಂದರು.
“ಕಾಲುವೆಗಳಿಗೆ ಅಕ್ರಮ ಪಂಪ್ ಸೆಟ್ ಗಳನ್ನು ಹಾಕುವುದರ ವಿರುದ್ಧ ಹೊಸ ಕಾನೂನು ತರಲಾಗಿದೆ. ಇದರ ಬಗ್ಗೆ ತರಬೇತಿ ಕಾರ್ಯಕ್ರಮ ನಡೆಯುತ್ತಿದೆ. ಕಾಲುವೆ ಕೊನೆ ಭಾಗಗಳಿಗೆ ನೀರು ತಲುಪಲೇ ಬೇಕಿದೆ. ಉದಾಹರಣೆಗೆ ಪಾಂಡವಪುರ ಭಾಗದವರೇ ಹೆಚ್ಚು ನೀರು ಬಳಸುತ್ತಾರೆ. ಮಳವಳ್ಳಿ ಭಾಗಕ್ಕೆ ನೀರೇ ತಲುಪುತ್ತಿಲ್ಲ. ಇದರ ಬಗ್ಗೆ ಎಲ್ಲಾ ಶಾಸಕರು ಒಪ್ಪಿಕೊಂಡರೆ ಅಭಿಯಾನವನ್ನೇ ಪ್ರಾರಂಭ ಮಾಡೋಣ” ಎಂದರು.
2026 ಮಾರ್ಚ್ ವೇಳೆಗೆ ನಾಗರಬೆಟ್ಟ ಯೋಜನೆ ಲೋಕಾರ್ಪಣೆಗೆ ಕ್ರಮ
ನಾಗರಬೆಟ್ಟ ಏತ ನೀರಾವರಿ ಯೋಜನೆಗೆ ಬಾಕಿ ಉಳಿದಿರುವ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿ ಎನ್ನುವ ಶಾಸಕರಾದ ಅಪ್ಪಾಜಿ ಸಿ.ಎಸ್ ನಾಡಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ, “2026 ಮಾರ್ಚ್ ವೇಳೆಗೆ ಲೋಕಾರ್ಪಣೆ ಮಾಡುವಂತೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಸುಮಾರು 3,200 ಹೆಕ್ಟೇರ್ ಗೆ ನೀರು ಒದಗಿಸುವ ಪ್ರಮುಖ ಯೋಜನೆ ಇದಾಗಿದ್ದು. ₹170 ಕೋಟಿ ವೆಚ್ಚದಲ್ಲಿ ಈ ಯೋಜನೆ ಮುಕ್ತಾಯಗೊಳಿಸಲು 2017 ರಲ್ಲಿಯೇ ಅನುಮೋದನೆ ನೀಡಲಾಗಿತ್ತು. ಮೂರು ಪ್ಯಾಕೇಜ್ ಗಳಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಸ್ಥಳೀಯ ಸಮಸ್ಯೆಗಳು ಹಾಗೂ ಭೂ ಸ್ವಾಧೀನ ವಿಳಂಬ ಸಮಸ್ಯೆಯಿಂದ ಕಾಮಗಾರಿ ತಡವಾಗಿದೆ. ಇದರ ಬಗ್ಗೆ ಪ್ರತ್ಯೇಕ ತಂಡ ರಚನೆ ಮಾಡಿ ಯೋಜನೆಯನ್ನು ಬೇಗ ಮುಗಿಸಲು ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಉತ್ತರಿಸಿದರು.
₹110 ಕೋಟಿ ವೆಚ್ಚದಲ್ಲಿ ಹೇಮಾವತಿ ನಾಲೆಗಳ ಅಭಿವೃದ್ದಿ
ಹೇಮಾವತಿ ಎಡದಂಡೆ ವಿತರಣಾ ನಾಲೆಗಳ ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ ಹಾಗೂ ಅಭಿವೃದ್ಧಿ ಕೆಲಸಗಳ ನಿಧಾನಗತಿಯ ಬಗ್ಗೆ ಶ್ರವಣಬೆಳಗೊಳ ಕ್ಷೇತ್ರದ ಶಾಸಕರಾದ ಸಿ.ಎನ್.ಬಾಲಕೃಷ್ಙ ಅವರ ಪ್ರಶ್ನೆಗೆ ಉತ್ತರಿಸಿದ ಅವರು, “₹110 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಹೇಮಾವತಿ ಎಡದಂಡೆಯ ವಿತರಣಾ ನಾಲೆಗಳ ಅಭಿವೃದ್ದಿಗೆ ಯೋಜನೆ ರೂಪಿಸಲಾಗಿದೆ. ಆದಷ್ಟು ಬೇಗ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು. ವಿತರಣಾ ನಾಲೆ 33 ಕ್ಕೆ 10 ಕೋಟಿ ರೂಪಾಯಿ, 34 ರಿಂದ 40 ರವರೆಗಿನ ನಾಲೆಗಳಿಗೆ 5 ಕೋಟಿ ರೂಪಾಯಿ ನೀಡಲಾಗಿದೆ. ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಎಡದಂಡೆ ನಾಲ ವಿಭಾಗದಲ್ಲಿ ಒಟ್ಟು 14 ವಿತರಣಾ ನಾಲೆಗಳಲ್ಲಿ ಎಂಟು ನಾಲೆಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಆರು ನಾಲೆಗಳು ಬಾಕಿಯಿವೆ. ಇಲ್ಲಿ ಒಂದಷ್ಟು ಹಳೇ ನಾಲೆಗಳಿವೆ. ಇವುಗಳ ಬಗ್ಗೆ ವರದಿ ತರಿಸಿಕೊಂಡಿದ್ದೇನೆ” ಎಂದರು.
ಚನ್ನರಾಯಪಟ್ಟಣ ಅಮಾನಿಕೆರೆಗೆ ಹೇಮಾವತಿ ನೀರು ತುಂಬಿಸುವ ಕೆಲಸ ಹಾಗೂ ಭೂಪರಿಹಾರಕ್ಕೆ ತ್ವರಿತ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು, “ಇದರ ಬಗ್ಗೆ ಪ್ರತ್ಯೇಕ ಪ್ರಶ್ನೆಯನ್ನು ಕೇಳಿ ಹಾಗೂ ನನಗೆ ಭೂ ಸ್ವಾಧೀನದ ಬಗ್ಗೆ ಮಾಹಿತಿಯಿಲ್ಲ. ಇದಕ್ಕೆ ಉತ್ತರ ಒದಗಿಸೋಣ” ಎಂದರು.








