ಬೆಂಗಳೂರು : ರಾಜ್ಯದ ಗ್ರಾಮೀಣ ಜನತೆಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಗ್ರಾ.ಪಂ ವ್ಯಾಪ್ತಿಯ ಸ್ವತ್ತುಗಳಿಗೆ ಇ-ಖಾತಾ ಪಡೆಯಲು ಕಾಲಾವಧಿ ನಿಗದಿ ಮಾಡಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಇ-ಸ್ವತ್ತು ಪ್ರಕ್ರಿಯೆ ಮತ್ತು ತಂತ್ರಾಂಶವನ್ನು ಹೆಚ್ಚು ನಾಗರಿಕ ಸ್ನೇಹಿಯಾಗಿ ಅನುಷ್ಠಾನಗೊಳಿಸಲು ಇಲಾಖೆ ಬದ್ಧವಾಗಿದೆ. ಈವರೆಗೆ ಆನ್ಲೈನ್ನಲ್ಲಿ 365 ಆರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ವ್ಯವಸ್ಥೆಯನ್ನು ಮತ್ತಷ್ಟು ಸರಳೀಕರಿಸಲು ಕ್ರಮವಹಿಸಲಾಗುತ್ತಿದೆ. ಸಾರ್ವಜನಿಕರು ಆತಂಕಪಡುವ ಅವಶ್ಯಕತೆ ಇಲ್ಲ. ಸಾರ್ವಜನಿಕರಿಗೆ ಅರ್ಜಿ ಸಲ್ಲಿಸಲು ಕಾಲಾವಧಿ ನಿಗದಿಪಡಿಸಿಲ್ಲ. ತಾವು ಇರುವಲ್ಲಿಯೇ ಆಸ್ತಿಗೆ ಸಂಬಂಧಿಸಿದಂತೆ ನಮೂನೆಗಳನ್ನು ಇ-ಸ್ವತ್ತು ತಂತ್ರಾಂಶದ ಮೂಲಕ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ರಾಜ್ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು, 2025ಅನ್ನು ಅಧಿಸೂಚನೆ ಹೊರಡಿಸಿದೆ. ಈ ಹಿಂದೆ ಇದ್ದ ಇ-ಸ್ವತ್ತು ತಂತ್ರಾಂಶವನ್ನು ನಾಗರಿಕ ಸ್ನೇಹಿಯಾಗಿ ಮಾರ್ಪಡಿಸಲಾಗಿದೆ. ನಿಯಮಗಳಿಗೆ ಹಾಗೂ ಇ-ಸ್ವತ್ತು ತಂತ್ರಾಂಶದ ಬಳಕೆಗೆ ಸಂಬಂಧಿಸಿದಂತೆ ಇಲಾಖೆಯಿಂದ ಸಹಾಯವಾಣಿ (94834-76000) ಪ್ರಾರಂಭಿಸಲಾಗಿದೆ.
ಹಳ್ಳಿಗಳ ಅಭಿವೃದ್ಧಿಯಲ್ಲಿ ದೇಶದ ಅಭಿವೃದ್ಧಿ ಅಡಗಿದೆ. ಗ್ರಾಮೀಣ ಭಾಗದಲ್ಲಿ ಪ್ರತಿಯೊಬ್ಬರಿಗೂ ಉತ್ತಮ ಮೂಲಸೌಕರ್ಯ ಒದಗಿಸುವುದು ಸರ್ಕಾರದ ಮುಖ್ಯ ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಗ್ರಾಮೀಣ ಜನರ ಆಸ್ತಿಗಳ ಭದ್ರತೆಗಾಗಿ ಇ-ಸ್ವತ್ತು ಅಭಿಯಾನವನ್ನು ಪ್ರಾರಂಭಿಸಲಾಗಿದೆ.
ಗ್ರಾಮೀಣ ಜನರು ಆಸ್ತಿಗಳ ಇ-ಖಾತಾ ಪಡೆಯುವುದು ಈಗ ಮತ್ತಷ್ಟು ಸುಲಭವಾಗಿದೆ. https://eswathu.karnataka.gov.in ಪೋರ್ಟಲ್ಗೆ ಲಾಗಿನ್ ಆಗಿ ನಿಮ್ಮ ಆಸ್ತಿ ವಿವರಗಳನ್ನು ತುಂಬಿಸಿ, ಅರ್ಜಿ ಸಲ್ಲಿಸಿ ಇ-ಖಾತಾ ಪಡೆಯಬಹುದು. ಅದಕ್ಕಾಗಿ ನಮ್ಮ ಇಲಾಖೆಯಿಂದ ಇ-ಸ್ವತ್ತು ಸಹಾಯವಾಣಿ 9483476000 ಅನ್ನು ಪ್ರಾರಂಭಿಸಿದ್ದು ನಿಮ್ಮ ಯಾವುದೇ ಗೊಂದಲಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು.
ಗ್ರಾಮೀಣ ಭಾಗದ ಜನರು ತಮ್ಮ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸುಲಭವಾಗಿ ಮತ್ತು ಡಿಜಿಟಲ್ ರೂಪದ ಇ – ಖಾತಾ ಪಡೆಯಲು ಇಲಾಖೆಯು ಅವಕಾಶ ಕಲ್ಪಿಸಿದೆ. ಇದನ್ನು ಪ್ರತಿಯೊಬ್ಬರೂ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿಸಿದ್ದಾರೆ.
ಪ್ರತಿದಿನ ಮೂರು ಸಾವಿರಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಲಾಗುತ್ತಿದೆ. ಹೆಚ್ಚಿನ ಪ್ರಶ್ನೆಗಳು ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಅನುಮೋದನೆ ಪ್ರಕ್ರಿಯೆ, ಆಸ್ತಿ ವರ್ಗೀಕರಣ ಆಯ್ಕೆ ಮಾಡುವ ವಿಧಾನ, ಇ-ಸ್ವತ್ತು ನಮೂನೆ ವಿತರಿಸಲು ನಿಗದಿಯಾಗಿರುವ ಕಾಲಾವಧಿ ಮತ್ತು ತಾಂತ್ರಿಕ ಸಮಸ್ಯೆಗಳಿಗೆ ಸಂಬಂಧಿಸಿದ ಮಾಹಿತಿ ಕೋರುತ್ತಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.








