ಮಂಡ್ಯ : ಮದ್ದೂರು ನಗರದ ಪ್ರವಾಸಿ ಮಂದಿರದ ವೃತ್ತದಿಂದ ಕೊಲ್ಲಿ ವೃತ್ತದವರೆಗಿನ ರಸ್ತೆಯನ್ನು 80 ಅಡಿ ಗೆ ಅಗಲೀಕರಣ ಮಾಡುವುದಾಗಿ ಮದ್ದೂರು ಶಾಸಕ ಕೆ.ಎಂ.ಉದಯ್ ಶನಿವಾರ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಸ್ಪಷ್ಟಪಡಿಸಿದರು.
ಮದ್ದೂರು ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಪೇಟೆ ಬೀದಿಯ ವರ್ತಕರು, ಬೀದಿ ಬದಿ ವ್ಯಾಪಾರಿಗಳು, ಕಟ್ಟಡಗಳ ಮಾಲೀಕರು, ನಾಗರೀಕರು, ಜನಪ್ರತಿನಿಧಿಗಳು ಸೇರಿದಂತೆ ಕ್ಷೇತ್ರದ ಸಾರ್ವಜನಿಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆಂಗಳೂರು – ಮೈಸೂರು ನಗರಗಳ ಮಧ್ಯೆ ಇರುವ ಮದ್ದೂರು ಪಟ್ಟಣ ಸಾಕಷ್ಟು ಅಭಿವೃದ್ಧಿಯಿಂದ ಹಿಂದುಳಿದಿದೆ. ನಗರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ನಿಮ್ಮೆಲ್ಲರ ಸಹಕಾರದಿಂದ ಮಾತ್ರ ಸಾಧ್ಯ. ಹೀಗಾಗಿ ನಗರದ ಪೇಟೆ ಬೀದಿ ಅಗಲೀಕರಣಕ್ಕೆ ಕಟ್ಟಡ ಮಾಲೀಕರು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದರು.
ಮದ್ದೂರು ನಗರದ ರಸ್ತೆ ಅಭಿವೃದ್ಧಿ ಮಹರಾಜರ ಕಾಲದಲ್ಲಿ ನಿರ್ಮಾಣವಾಗಿದ್ದು, ಆ ಬಳಿಕ ರಸ್ತೆ ಅಭಿವೃದ್ಧಿ ಮತ್ತು ಅಗಲೀಕರಣವಾಗಿಲ್ಲ. ಈಗಿರುವ ರಸ್ತೆ ಕಿರಿದಾಗಿದ್ದು, ಸಾರ್ವಜನಿಕರು ಓಡಾಡಲು ಹಾಗೂ ವಾಹನಗಳ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದ್ದು, ರಸ್ತೆ ಅಗಲೀಕರಣ ಅನಿವಾರ್ಯತೆ ಮನಗಂಡು 100 ಅಡಿ ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿತ್ತು. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ನನ್ನ ಮನವಿಗೆ ಸ್ಪಂದಿಸಿ ಮದ್ದೂರಿನಲ್ಲಿ ನಡೆದ ಸಾಧನ ಸಮಾವೇಶ ಕಾರ್ಯಕ್ರಮದಲ್ಲಿ 100 ಅಡಿ ರಸ್ತೆ ಮಾಡುವುದಾಗಿ ಘೋಷಣೆ ಮಾಡಿದ್ದರು ಎಂದು ತಿಳಿಸಿದರು.
ಮುಂದಿನ 50 ವರ್ಷಗಳ ಭವಿಷ್ಯದ ದೃಷ್ಟಿಯಿಂದ ಮದ್ದೂರು ನಗರವನ್ನು ಅಭಿವೃದ್ಧಿಪಡಿಸುವುದು ಅತ್ಯಗತ್ಯವಾಗಿದೆ. ಹೀಗಾಗಿ ಪ್ರಥಮ ಹಂತದಲ್ಲಿ ಹಳೇ ಎಂ.ಸಿ ರಸ್ತೆಯ ಕೊಲ್ಲಿ ವೃತ್ತದಿಂದ ಪ್ರವಾಸಿ ಮಂದಿರದ ವೃತ್ತದವರೆಗೆ ಅಗಲೀಕರಣ ಮಾಡುವುದಕ್ಕೆ ತೀರ್ಮಾನ ಕೈಗೊಂಡು ಡಿಪಿಆರ್ ಕೂಡ ಸಿದ್ಧವಾಗಿತ್ತು. ಆದರೆ, ಅಗಲೀಕರಣದಿಂದ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ 80 ಅಡಿ ಗೆ ಮಾತ್ರ ಸೀಮಿತಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ರಸ್ತೆ ಅಗಲೀಕರಣ ಸಂದರ್ಭದಲ್ಲಿ ಎರಡು ಬದಿಯಲ್ಲಿ 10 ಅಡಿ ಪುಟ್ ಪಾತ್ ಗೆ ಸೀಮಿತಗೊಳಿಸಿ ಅತ್ಯುನ್ನತ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ರಸ್ತೆ ಅಗಲೀಕರಣ ಸಂದರ್ಭದಲ್ಲಿ ಎಸ್ ಬಿ ಎಂ ರಸ್ತೆ ಹಾಗೂ ಜಾಮೀಯಾ ಶಾದಿ ಮಹಲ್ ರಸ್ತೆಯ ಅಗಲೀಕರಣಕ್ಕೂ ಆದ್ಯತೆ ನೀಡಲಾಗುವುದು ಎಂದರು.
ರಸ್ತೆ ಅಗಲೀಕರಣ ಮಾಡುವುದರ ಜೊತೆಗೆ ಆಯ್ದ ಸ್ಥಳಗಳಲ್ಲಿ ವೃತ್ತಗಳನ್ನು ನಿರ್ಮಿಸಿ ಈ ಮಣ್ಣಿನ ಮಹನೀಯರ ಪ್ರತಿಮೆಗಳನ್ನು ನಿರ್ಮಿಸಲಾಗುವುದು. ಹಾಗೂ ಅಗಲೀಕರಣ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸುವುದರ ಜೊತೆಗೆ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ನೂತನ ಮಾರುಕಟ್ಟೆ ಸಂಕೀರ್ಣ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು.
ಸಭೆಗೂ ಮುನ್ನ ರಸ್ತೆ ಅಗಲೀಕರಣ ಸಂಬಂಧ ಸಾರ್ವಜನಿಕರ ಅಹವಾಲು, ಸಲಹೆ ಹಾಗೂ ಸೂಚನೆಗಳನ್ನು ಆಲಿಸಲಾಯಿತು. ಸಭೆಯಲ್ಲಿ ಕೆಲವರು ರಸ್ತೆ ಅಗಲೀಕರಣವನ್ನು 100 ಅಡಿ , 80 ಅಡಿ ಹಾಗೂ 60 ಅಡಿಗಳಿಗೆ ಸೀಮಿತಗೊಳಿಸಬೇಕು ಹಾಗೂ ಕಟ್ಟಡ ಮಾಲೀಕರಿಗೆ ಸರ್ಕಾರದಿಂದ ಸಮರ್ಪಕವಾದ ಪರಿಹಾರ ದೊರಕಿಸಲು ಆಧ್ಯತೆ ನೀಡಬೇಕೆಂದು ವಾದ ಮಂಡಿಸಿದರು.
ಬಳಿಕ ಶಾಸಕ ಕೆ.ಎಂ.ಉದಯ್ ಅವರು ಮಾತನಾಡಿ ಕಟ್ಟಡ ಮಾಲೀಕರಿಗೆ ಪರಿಹಾರ ವಿತರಣೆಯಲ್ಲಿ ಯಾವುದು ರೀತಿಯ ಅನ್ಯಾಯವಾಗದಂತೆ ಎಚ್ಚರವಹಿಸುವುದಾಗಿ ಆಶ್ವಾಸನೆ ನೀಡಿದರು.
ಸಭೆಯಲ್ಲಿ ತಹಶೀಲ್ದಾರ್ ಹಾಗೂ ನಗರಸಭೆ ಪ್ರಭಾರ ಪೌರಾಯುಕ್ತ ಪರಶುರಾಮ್ ಸತ್ತಿಗೇರಿ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ವರ್ತಕರು, ಸಭೆಯಲ್ಲಿ ಹಾಜರಿದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
‘KSET-ಪರೀಕ್ಷೆ’ 2023, 2024, 2025ರಲ್ಲಿ ಪಾಸ್ ಆಗಿರೋರಿಗೆ ‘KEA’ಯಿಂದ ಗುಡ್ ನ್ಯೂಸ್ | KSET Exam
BREAKING : ಕೆಲಸದ ನಂತರ ಕರೆ-ಇಮೇಲ್ ಗೆ ಉತ್ತರಿಸುವ ಅಗತ್ಯವಿಲ್ಲ : ಸಂಸತ್ತಿನಲ್ಲಿ ಮಂಡನೆಯಾಯ್ತು ಹೊಸ ಮಸೂದೆ!








