ಬೆಂಗಳೂರು: ಹೈಕೋರ್ಟ್ ಆದೇಶದ ಪ್ರಕಾರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ನ 3ನೇ ಸುತ್ತಿನ ಸೀಟು ಹಂಚಿಕೆಯ ಪರಿಷ್ಕೃತ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶನಿವಾರ ಪ್ರಕಟಿಸಿದೆ.
ಅಕ್ಟೋಬರ್ 24ರಂದು ಕೆಇಎ ಪ್ರಕಟಿಸಿದ್ದ ತಾತ್ಕಾಲಿಕ ಫಲಿತಾಂಶ ವನ್ನು ಹೈಕೋರ್ಟ್ ಆದೇಶದಂತೆ ರದ್ದುಪಡಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪರಿಷ್ಕೃತ ತಾತ್ಕಾಲಿಕ ಫಲಿತಾಂಶಕ್ಕೆ ಏನಾದರು ಆಕ್ಷೇಪಣೆಗಳು ಇದ್ದಲ್ಲಿ ಡಿ.7ರಂದು ಮಧ್ಯಾಹ್ನ 3ಗಂಟೆಯೊಳಗೆ ಇ-ಮೇಲ್ ( keauthority-ka@nic.in ) ಮೂಲಕ ಕಳುಹಿಸಬೇಕು ಎಂದು ಅವರು ಹೇಳಿದ್ದಾರೆ.
ಡಿ. 8ರಂದು ಬೆಳಿಗ್ಗೆ 11ರ ನಂತರ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ಸೀಟು ಹಂಚಿಕೆಯಾದವರು ಡಿ.10ರೊಳಗೆ ಶುಲ್ಕ ಪಾವತಿಸಬೇಕು (ಈಗಾಗಲೇ ಪಾವತಿಸಿರುವ ಶುಲ್ಕವನ್ನು ಕಡಿತಗೊಳಿಸುವ ಮೂಲಕ). ಸೀಟು ಖಾತರಿ ಚೀಟಿ ಡೌನ್ಲೋಡ್ ಮಾಡಿಕೊಂಡು, ಡಿ.11ರೊಳಗೆ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅಭ್ಯರ್ಥಿಗಳು ಈಗಾಗಲೇ ದಾಖಲಿಸಿರುವ ಇಚ್ಚೆ/ಆಯ್ಕೆಗಳನ್ನು ಪರಿಗಣಿಸಿ ಸೀಟು ಹಂಚಿಕೆ ಮಾಡಲಾಗಿದೆ. ಈ ಸುತ್ತಿನಲ್ಲಿ ಸೀಟು ಹಂಚಿಕೆಯಾದವರು ಕಡ್ಡಾಯವಾಗಿ ಸಂಬಂಧಪಟ್ಟ ಕಾಲೇಜಿಗಳಲ್ಲಿ ವರದಿ ಮಾಡಿಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದರು.
3ನೇ ಸುತ್ತಿಗೆ ಹೊಸದಾಗಿ ಸೇರ್ಪಡೆಯಾದ 9 ಕಾಲೇಜುಗಳ 443 ಸೀಟುಗಳಿಗೆ ಎಲ್ಲ ಅಭ್ಯರ್ಥಿಗಳನ್ನು ಹಂಚಿಕೆಗೆ ಪರಿಗಣಿಸಲಾಗಿದೆ. 443 ಸೀಟುಗಳನ್ನು ಪಡೆದ ಅಭ್ಯರ್ಥಿಗಳಲ್ಲಿ ಒಟ್ಟು 301 ಅಭ್ಯರ್ಥಿಗಳು, ಈಗಾಗಲೇ ಎಂಬಿಬಿಎಸ್ ಸೀಟನ್ನು ಮೊದಲ ಮತ್ತು ಎರಡನೇ ಸುತ್ತಿನಲ್ಲಿ ಪಡೆದವರಾಗಿದ್ದು, ಅವರಿಂದ ತೆರವಾಗುವ 301 ಸೀಟುಗಳಿಗೆ ಕೂಡ ಎಲ್ಲ ಅಭ್ಯರ್ಥಿಗಳನ್ನು ಹಂಚಿಕೆಗೆ ಪರಿಗಣಿಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಮೂರನೇ ಸುತ್ತಿನ ಆರಂಭದಲ್ಲಿ ಇದ್ದ ಸೀಟು ಹಾಗೂ ಡಿ.5ರವರೆಗೆ ವಿವಿಧ ಕಾರಣಗಳಿಂದ ರದ್ದುಪಡಿಸಿಕೊಂಡಿರುವ ಸೀಟು ಹಾಗೂ ಮೇಲಿನ ಕ್ರಮದ ಸೀಟು ಹಂಚಿಕೆ ನಂತರ ಉಳಿಕೆಯಾಗುವ ಸೀಟುಗಳನ್ನು ನಿಯಮಾನುಸಾರ ಸೀಟು ಹಂಚಿಕೆಗೆ ಪರಿಗಣಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
BREAKING : ಕೆಲಸದ ನಂತರ ಕರೆ-ಇಮೇಲ್ ಗೆ ಉತ್ತರಿಸುವ ಅಗತ್ಯವಿಲ್ಲ : ಸಂಸತ್ತಿನಲ್ಲಿ ಮಂಡನೆಯಾಯ್ತು ಹೊಸ ಮಸೂದೆ!
ನಿಂಬೆಹಣ್ಣಿನಿಂದ ಯಾವ ರೀತಿ ಮಾಟ-ಮಂತ್ರ, ಕೆಟ್ಟ ದೃಷ್ಟಿಯನ್ನು ಹೋಗಲಾಡಿಸಬಹುದು ಗೊತ್ತೇ..?








