ಬೆಂಗಳೂರು: ಹಾವು ಕಡಿದಿದೆ ಅಂದ್ರೆ ಸಾವೇ ಗ್ಯಾರಂಟಿ ಎನ್ನುವು ಒಂದು ಕಾಲದ ಮಾತಾಗಿತ್ತು. ಈಗ ಅದು ಬದಲಾಗಿದೆ. ಹಾವು ಕಡಿತಕ್ಕು ಔಷಧಿ ಬಂದಿದೆ. ಹೀಗಾಗಿ ಹಾವು ಕಡಿದಿದೆ ಎಂದ ಮಾತ್ರಕ್ಕೆ ಆತಂಕ ಬೇಡ. ಅದರ ಬದಲಾಗಿ ಕೆಲ ಮುನ್ನೆಚ್ಚರಿಕೆ ವಹಿಸಿದ್ರೇ ಖಂಡಿತವಾಗಿ ಜೀವ ಉಳಿಸಬಹುದು.
ಈ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಿದ್ದು, ಹಾವು ಕಡಿತವು ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ, ಸೆಕ್ಷನ್ 3ರ ಅಡಿಯಲ್ಲಿ ಅಧಿಸೂಚಿತ ಕಾಯಿಲೆ ಎಂದು ಘೋಷಿಸಿರುವುದಾಗಿ ತಿಳಿಸಿದೆ.
ಹಾವು ಕಟ್ಟಿದ ಸಂದರ್ಭದಲ್ಲಿ ಏನು ಮಾಡಬೇಕು?
- ಹೆದರದಿರಿ
- ಹಾವು ಕಚ್ಚಿದ ವ್ಯಕ್ತಿಯನ್ನು ಸಮಾಧಾನವಾಗಿರಿಸಿ
- ಹಾವಿನಿಂದ ನಿಧಾನವಾಗಿ ದೂರ ಸರಿಯಿರಿ
- ಹಾವು ಕಚ್ಚಿದ ದೇಹದ ಭಾಗವನ್ನು ಏನೂ ಮಾಡದಿರಿ
- ಹಾವು ಕಚ್ಚಿದ ದೇಹದ ಭಾಗದಲ್ಲಿರುವ ಪಾದರಕ್ಷೆ, ಕಾಲುಂಗುರ, ಬೆಲ್ಟ್ ಆಭರಣಗಳು, ವಾಚ್, ಬಿಗಿಯಾದ ಬಟ್ಟೆಯನ್ನು ಕಳಚಿರಿ.
- ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯನ್ನು ಎಡಭಾಗಕ್ಕೆ ಮಲಗಿಸಿ
- ಹಾವು ಕಚ್ಚಿದ ಭಾಗವನ್ನು ಅಲುಗಾಡದಂತೆ ನೋಡಿಕೊಳ್ಳಿ.
- ತಕ್ಷಣವೇ ನೇರವಾಗಿ ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಿರಿ.
ಹಾವು ಕಟ್ಟಿದಾಗ ಏನು ಮಾಡಬಾರದು.?
- ಗಾಬರಿಯಾಗಬೇಡಿ.
- ರಕ್ತಬಂಧಕ ಪಟ್ಟಿ, ಬಿಗಿಯಾದ ಬಟ್ಟೆಯನ್ನು ಕಟ್ಟಬೇಡಿ
- ಗಾಯವನ್ನು ಕೊಯ್ಯಬೇಡಿ ಹಾಗೂ ಏನನ್ನೂ ಹಚ್ಚಬೇಡಿ
- ನಿಮ್ಮ ಬಾಯಿಯಿಂದ ವಿಷವನ್ನು ಹೀರಬೇಡಿ
- ಹಾವು ಕಚ್ಚಿದ ವ್ಯಕ್ತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ. ನಾಟಿ ಮದ್ದು ಸೇರಿದಂತೆ ಇನ್ಯಾವುದೇ ಅಸುರಕ್ಷಿತ ಚಿಕಿತ್ಸಾ ಪದ್ದತಿಯನ್ನು ಅವಲಂಬಿಸಬೇಡಿ.
- ಹಾವನ್ನು ಹಿಡಿಯುವ ಅಥವಾ ಕೊಲ್ಲುವ ಪ್ರಯತ್ನ ಮಾಡಬೇಡಿ. ಅದು ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತದೆ.








