ಬೆಂಗಳೂರು : ರಾಜ್ಯದ ಖಾಸಗಿ ಜಮೀನುಗಳಲ್ಲಿ ನೆಲೆಸಿರುವ ದಾಖಲೆರಹಿತ ಜನವಸತಿಗಳನ್ನು ಕಂದಾಯ ಗ್ರಾಮ/ಗ್ರಾಮದ ಭಾಗವಾಗಿ ಪರಿವರ್ತಿಸಿ ಅಲ್ಲಿಯ ನಿವಾಸಿಗಳಿಗೆ ಹಕ್ಕು ಪತ್ರವನ್ನು ನೀಡುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ನೆಲೆಗೊಂಡಿರುವ ಜನವಸತಿಗಳ ಪೈಕಿ ಹಲವಾರು ಜನವಸತಿಗಳು ವಿಶೇಷವಾಗಿ ಲಂಬಾಣಿ ತಾಂಡ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ನಾಯಕರ ಹಟ್ಟಿ, ಕುರುಬರಹಟ್ಟಿ, ಹಾಡಿ, ಮಜರೆ, ದೊಡ್ಡಿ, ಪಾಳ್ಯ, ಕ್ಯಾಂಪ್, ಕಾಲೋನಿ ಇತ್ಯಾದಿ, ಹೆಸರುಗಳಿಂದ ಗುರುತಿಸಲ್ಪಟ್ಟಿರುವ ಜನವಸತಿಗಳು ದಾಖಲೆರಹಿತವಾಗಿಯೇ ಸಮಾಜದ ಮುಖ್ಯ ವಾಹಿನಿಗೆ ಬರದೇ ಉಳಿದುಕೊಂಡಿರುತ್ತವೆ. ಇಂತಹ ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಅಥವಾ ಅಸ್ತಿತ್ವದಲ್ಲಿರುವ ಕಂದಾಯ ಗ್ರಾಮದ ಭಾಗವಾಗಿ ಪರಿವರ್ತಿಸಿ ಅಲ್ಲಿಯ ನಿವಾಸಿಗಳಿಗೆ ವಾಸ್ತವ್ಯದ ಹಕ್ಕು ದಾಖಲೆಗಳನ್ನು ಒದಗಿಸಿ, ಅಂತಹ ಕುಟುಂಬಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ. ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಕಾಲಕಾಲಕ್ಕೆ ಉಲ್ಲೇಖಗಳನ್ವಯ ಸರ್ಕಾರವು ಮಾರ್ಗಸೂಚಿಗಳನ್ನು ಹೊರಡಿಸಿರುತ್ತದೆ.
ಸರ್ಕಾರವು ಕರ್ನಾಟಕ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಕಲಂ 38-ಎ ಮತ್ತು ನಿಯಮ 9-ಸಿ ಸೇರ್ಪಡೆಗೊಳಿಸುವ ಮೂಲಕ ಖಾಸಗಿ ಜಮೀನಿನಲ್ಲಿ ನೆಲೆಗೊಂಡಿರುವ ದಾಖಲೆರಹಿತ ಜನವಸತಿ ಪ್ರದೇಶಗಳಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಅವಕಾಶ ಕಲ್ಪಿಸಿದೆ.
ಖಾಸಗಿ ಜಮೀನುಗಳಲ್ಲಿ ನೆಲೆಸಿರುವ ದಾಖಲೆರಹಿತ ಜನವಸತಿಗಳನ್ನು ಕಂದಾಯ ಗ್ರಾಮ/ಗ್ರಾಮದ ಭಾಗವಾಗಿ ಪರಿವರ್ತಿಸಿ ಅಲ್ಲಿಯ ನಿವಾಸಿಗಳಿಗೆ ಹಕ್ಕು ಪತ್ರವನ್ನು ನೀಡಲು ಈ ಕೆಳಕಂಡ ಅಂಶಗಳನ್ನು ಅನುಸರಿಸುವುದು.
ದಾಖಲೆರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಉಲ್ಲೇಖ(1)ರಲ್ಲಿ ತಿಳಿಸಿರುವ ಮಾನದಂಡಗಳನ್ವಯ ಖಾಸಗಿ ಜಮೀನಿನಲ್ಲಿ ಜನವಸತಿಗಳು ಇದ್ದಲ್ಲಿ, ಅಂತಹ ಸರ್ವೆ ನಂಬರ್ ಮತ್ತು ವಿಸ್ತೀರ್ಣವನ್ನು ಗುರುತಿಸುವುದು.
ಖಾಸಗಿ ಜಮೀನುಗಳಲ್ಲಿ ನೆಲೆಗೊಂಡಿರುವ ಜನವಸತಿಗಳನ್ನು ಕಂದಾಯ ಗ್ರಾಮ/ಗ್ರಾಮದ ಭಾಗ ಬಡಾವಣೆ/ ಉಪ ಗ್ರಾಮ ಆಗಿ ಪರಿವರ್ತಿಸಲು ಪ್ರಸ್ತಾವನ ಸಲ್ಲಿಸುವ ಮುನ್ನ ಜಿಲ್ಲಾಧಿಕಾರಿಗಳು ಮೊದಲಿಗೆ ಅವು ನೆಲೆಗೊಂಡಿರುವ ಜಾಗಗಳನ್ನು ಸರ್ಕಾರದಲ್ಲಿ ನಿಹಿತಗೊಳಿಸಲು ಕರ್ನಾಟಕ ಭೂ ಸುಧಾರಣ ಕಾಯ್ದೆ 1961 ರ ಕಲಂ 38-ಎ ಪ್ರಕಾರ ಅಧಿಸೂಚನೆಯನ್ನು ನಮೂನೆ 2-ಇ ರಲ್ಲಿ ಹೊರಡಿಸಿಬೇಕು.
ಸದರಿ 2-ಇ ಅಧಿಸೂಚನೆಯನ್ನು ಸಾರ್ವಜನಿಕರ ಸಲಹೆ/ಆಕ್ಷೇಪಣೆಗಳನ್ನು ಆಹ್ವಾನಿಸಿ, ಜಿಲ್ಲಾಧಿಕಾರಿಗಳ ಹೆಸರಿನಲ್ಲಿ, ಜಿಲ್ಲಾಧಿಕಾರಿಗಳು ಅವರ ಹಂತದಲ್ಲೇ ರಾಜ್ಯಪತ್ರದಲ್ಲಿ ಪ್ರಕಟಿಸಬೇಕು.
ದಾಖಲೆರಹಿತ ಜನವಸತಿಯು ನೆಲೆಸಿರುವ ಖಾಸಗಿ ಜಮೀನಿನ ವಿಸ್ತೀರ್ಣಕ್ಕೆ ಮಾತ್ರ 2-ಇ ಅಧಿಸೂಚನೆ ಹೊರಡಿಸಬೇಕು. ಖಾಸಗಿ ಹೆಸರಿನ ಜಾಗದಲ್ಲಿ ಭೂಮಾಲೀಕರೇ ಸ್ವತಃ ಮನೆಗಳನ್ನು ನಿರ್ಮಿಸಿಕೊಂಡಿದ್ದರೆ ಅದರ ವಿಸ್ತೀರ್ಣವನ್ನು 2-ಇ ಅಧಿಸೂಚನೆಯಲ್ಲಿ ತರಬಾರದು. ಆದರೆ ಗ್ರಾಮಠಾಣಾ ವಿಸ್ತೀರ್ಣಕ್ಕೆ ಒಳಪಡಿಸಬೇಕು.
2-ಇ ಅಧಿಸೂಚನೆ ಸಂಬಂಧ ಸಾರ್ವಜನಿಕರ ಸಲಹೆ/ಆಕ್ಷೇಪಣೆಗಳು ನಿಗದಿತ ಅವಧಿಯೊಳಗೆ ಸ್ವೀಕೃತಗೊಂಡಲ್ಲಿ, ಜಿಲ್ಲಾಧಿಕಾರಿಗಳು ಅಂತಹ ಸಲಹೆ/ಆಕ್ಷೇಪಣೆಗಳನ್ನು ಪರಿಶೀಲಿಸಿ, ಸೂಕ್ತ ಲಿಖಿತ ಆದೇಶದೊಂದಿಗೆ ಆಕ್ಷೇಪಣೆಗಳನ್ನು ಒಪ್ಪಬಹುದು/ತಿರಸ್ಕರಿಸಬಹುದು.









