ಬೆಂಗಳೂರು : ಇಡೀ ದಿನ ರಸ್ತೆಯ ಮೇಲೆ ಕರ್ತವ್ಯ ನಿರ್ವಹಿಸುವ ಸಂಚಾರಿ ಪೊಲೀಸರು ಶೌಚಾಲಯಕ್ಕೆ ಹೋಗಲು ತೀವ್ರ ಪರದಾಟ ಅನುಭವಿಸುವುದು ಎಲ್ಲರಿಗೂ ತಿಳಿಸಿದೆ. ಎಲ್ಲೆಡೆ ಸಾರ್ವಜನಿಕ ಶೌಚಾಲಯಗಳು ಲಭ್ಯವಿಲ್ಲದೆ ಇರುವುದರಿಂದ ಮಹಿಳಾ ಟ್ರಾಫಿಕ್ ಪೊಲೀಸರಂತೂ ಬಹಳ ಕಷ್ಟ ಅನುಭವಿಸುತ್ತಾರೆ. ಇದಕ್ಕೆ ಪರಿಹಾರವೆಂಬಂತೆ ಬೆಂಗಳೂರಿನಲ್ಲಿ ಸಂಚಾರಿ ಪೊಲೀಸರಿಗೆ ಇನ್ನುಮುಂದೆ ‘ಹೈಜೀನ್ ಆನ್ ಗೋ’ ಹೆಸರಿನ ಮೊಬೈಲ್ ಟಾಯ್ಲೆಟ್‌ಗಳು ನೈಸರ್ಗಿಕ ಬಾಧೆ ಪೂರೈಸಿಕೊಳ್ಳಲು ಲಭ್ಯವಾಗಲಿವೆ.
ರೆನಾಲ್ಟ್ ನಿಸಾನ್ ಟೆಕ್ನಾಲಜಿ ಅಂಡ್ ಬಿಸಿನೆಸ್ ಸೆಂಟರ್ ಇಂಡಿಯಾ ಪ್ರೈ.ಲಿ. (ಆರ್‌ಎನ್‌ಟಿಬಿಸಿಐ) ಕಂಪನಿಯ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಹಣಕಾಸಿನ ನೆರವಿನಡಿ ಹ್ಯಾಂಡ್ ಇನ್ ಹ್ಯಾಂಡ್ ಇಂಡಿಯಾ ಸಂಸ್ಥೆಯು ಸಂಚಾರಿ ಶೌಚಾಲಯಗಳನ್ನು ರೂಪಿಸಿದ್ದು, ಅವುಗಳಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಶುಕ್ರವಾರ ಚಾಲನೆ ನೀಡಿದರು. ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಆರಂಭಿಕವಾಗಿ ಮೂರು ‘ಹೈಜೀನ್ ಆನ್ ಗೋ’ ವಾಹನಗಳನ್ನು ಡಾ.ಪರಮೇಶ್ವರ್ ಅವರು ಉದ್ಘಾಟಿಸಿದರು. ಕರ್ನಾಟಕದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಡಾ.ಎಂ.ಎ.ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಶ್ರೀ ಸೀಮಂತ ಕುಮಾರ್ ಸಿಂಗ್ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.
ಶ್ರೀ ಸೀಮಂತ ಕುಮಾರ್ ಸಿಂಗ್ ಅವರ ಮಾರ್ಗದರ್ಶನದಲ್ಲಿ ಹ್ಯಾಂಡ್ ಇನ್ ಹ್ಯಾಂಡ್ ಇಂಡಿಯಾ ಸಂಸ್ಥೆಯು ಮೂರು ವಾಹನಗಳನ್ನು ಖರೀದಿಸಿ, ಅವುಗಳನ್ನು ಶೌಚಾಲಯಗಳಾಗಿ ಪರಿವರ್ತಿಸಿದೆ. ತೀವ್ರ ಸಂಚಾರ ದಟ್ಟಣೆಯಿರುವ ಬೆಂಗಳೂರು ನಗರದ ವಿವಿಧ ರಸ್ತೆಗಳಲ್ಲಿ ಇವು ಲಭ್ಯವಿರುವಂತೆ ನೋಡಿಕೊಂಡು, ಸಂಚಾರಿ ಪೊಲೀಸರಿಗೆ ಅನುಕೂಲ ಒದಗಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ.
ಬೆಂಗಳೂರು ನಗರದಲ್ಲಿ ಸಂಚಾರಿ ಪೊಲೀಸರು ಟ್ರಾಫಿಕ್ ಸಿಗ್ನಲ್‌ಗಳನ್ನು ನಿರ್ವಹಣೆ ಮಾಡುವಾಗ ಅವರಿಗೆ ಶೌಚಾಲಯಕ್ಕೆ ಹೋಗಿ ಬರುವುದಕ್ಕೂ ಸಮಯ ಸಿಗುವುದಿಲ್ಲ. ಕೊಂಚ ಬಿಡುವು ಮಾಡಿಕೊಂಡು ಹೋಗಿ ಬರೋಣವೆಂದರೆ ಸಮೀಪದಲ್ಲಿ ಶೌಚಾಲಯ ಸಿಗುವುದು ಕಷ್ಟ. ನಿಸರ್ಗದ ಕರೆ ಬಂದಾಗ ದೇಹಬಾಧೆ ತೀರಿಸಿಕೊಳ್ಳಲು ಸಾಧ್ಯವಾಗದೆ ಸಂಚಾರಿ ಪೊಲೀಸರು ನಿರ್ಜಲೀಕರಣ, ಮೂತ್ರನಾಳದ ಸೋಂಕು ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಮಹಿಳಾ ಸಿಬ್ಬಂದಿಯಂತೂ ಜನನಿಬಿಡ ರಸ್ತೆಗಳಲ್ಲಿ ಕಾರ್ಯನಿರ್ವಹಿಸುವಾಗ ಇನ್ನೂ ಹೆಚ್ಚು ಕಷ್ಟ ಅನುಭವಿಸುತ್ತಾರೆ. ಈ ಸಮಸ್ಯೆಯನ್ನು ಪರಿಹರಿಸಲು ‘ಹೈಜೀನ್ ಆನ್ ಗೋ’ ವಾಹನಗಳನ್ನು ಸಿದ್ಧಪಡಿಸಲಾಗಿದೆ. ಮೂರು ವಾಹನಗಳನ್ನು ಖರೀದಿಸಿ ಮರುವಿನ್ಯಾಸ ಮಾಡಲು 80 ಲಕ್ಷ ರೂ.ಗಳನ್ನು ವ್ಯಯಿಸಲಾಗಿದೆ. ಒಟ್ಟಾರೆ 2.06 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ರೂಪಿಸಲಾಗಿದ್ದು, 2028ರ ಮಾರ್ಚ್‌ವರೆಗೆ ಒಟ್ಟು 27 ತಿಂಗಳ ಕಾಲ ಈ ವಾಹನಗಳು ಸಂಚರಿಸಲಿವೆ.









