ಶಿವಮೊಗ್ಗ: ಸಾಗರದ ನಗರಸಭೆ ಆವರಣದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ನಡೆಸಿದಂತ ಜನ ಸಂಪರ್ಕ ಸಭೆಗೆ ಭರ್ಜರಿ ರೆಸ್ಪಾನ್ಸ್ ದೊರೆತಿದೆ. ಸಾರ್ವಜನಿಕರ ಅಹವಾಲುಗಳಿಗೆ ಸ್ಥಳದಲ್ಲಿಯೇ ಪರಿಹರಿಸುವಂತ ಕೆಲಸ ಮಾಡಿದರು. ಜೊತೆ ಜೊತೆಗೆ ಸರಿಯಾಗಿ ಕರ್ತವ್ಯ ನಿರ್ವಹಿಸದಂತ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಚಳಿಬಿಡಿಸಿದಂತ ಪ್ರಸಂಗವೂ ನಡೆಯಿತು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ನಗರಸಭೆ ಆವರಣದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಜನ ಸಂಪರ್ಕ ಸಭೆಯನ್ನು ನಡೆಸಿದರು. ಕೆಲ ದಿನಗಳ ಹಿಂದೆ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಜನ ಸಂಪರ್ಕ ಸಭೆ ನಡೆಸಿದ್ದ ಬಳಿಕ, ನಗರ ವ್ಯಾಪ್ತಿಯಲ್ಲಿ ಇದೇ ಮೊದಲ ಬಾರಿಗೆ ನಡೆಸಿದಂತ ಶಾಸಕರ ಜನ ಸಂಪರ್ಕ ಸಭೆಗೆ ಉತ್ತಮ ಪ್ರತಿಸ್ಪಂದನೆ ದೊರೆಯಿತು.
214 ಅರ್ಜಿ, ತಾಳ್ಮೆಯಿಂದಲೇ ಶಾಸಕರು ಅಹವಾಲು ಸ್ವೀಕಾರ, ಪರಿಹಾರ
ಕುಡಿಯುವ ನೀರು, ಬೀದಿ ದೀಪ, ಸ್ವಚ್ಛತೆ, ನಗರೋತ್ಥಾನದ ಕೆಲಸ, ಸಾಗರ ನಗರದ ಆಯ ಕಟ್ಟಿನ ಜಾಗಗಳಲ್ಲಿ ಹೆಚ್ಚುತ್ತಿರುವ ಗಾಂಜಾ ವ್ಯಸನಿಗಳು ಹಾಗೂ ತ್ಯಾಜ್ಯದ ಸಮಸ್ಯೆ ಕುರಿತಂತೆ ಸಾಗರ ನಗರಸಭೆ ಆವರಣದಲ್ಲಿ ಗುರುವಾರ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಇವುಗಳನ್ನು ಕೂಡಲೇ ಪರಿಹರಿಸುವಂತೆ ಸಾರ್ವಜನಿಕರು ಮನವಿ ನೀಡಿದ ಪ್ರಸಂಗ ನಡೆಯಿತು. ಬೆಳಗ್ಗೆ 11 ಗಂಟೆಗೆ ಆರಂಭವಾದ ಜನ ಸಂಪರ್ಕ ಸಭೆ, ಮಧ್ಯಾಹ್ನ 3 ಗಂಟೆಯವರೆಗೂ ನಡೆದಂತ ಶಾಸಕ ಜನ ಸಂಪರ್ಕ ಸಭೆಗೆ 214 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅವುಗಳನ್ನು ಸ್ಥಳದಲ್ಲೇ ಪರಿಹರಿಸುವಂತ ಕೆಲಸವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಮಾಡಿದರು.
ಜೈಕಾರ ಹಾಕಿದವರ ವಿರುದ್ಧ ಶಾಸಕರು ಗರಂ
ಶಾಸಕ ಗೋಪಾಲಕೃಷ್ಣ ಬೇಳೂರು ಬಹಳ ತಾಳ್ಮೆಯಿಂದ ಜನರ ಅಹವಾಲಿಗೆ ಉತ್ತರ ನೀಡಿದ್ದಲ್ಲದೇ ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರೋಪಾಯ ಕಂಡು ಹಿಡಿದು ಜನಮೆಚ್ಚುಗೆ ಗಳಿಸಿದರು. ಕೆಲವರು ಅವರ ಕಾರ್ಯ ವೈಖರಿಗೆ ಜೈಕಾರ ಹಾಕಿದಾಗ ಸಿಡಿಮಿಡಿಗೊಂಡು ಇದು ಪಕ್ಷದ ಸಭೆಯಲ್ಲ, ಸರ್ಕಾರದ ಕಾರ್ಯಕ್ರಮ. ಜನತೆಯ ಅಹವಾಲು ಸ್ವೀಕರಿಸಿ ಉತ್ತರ ಕೊಡಬೇಕಾದದ್ದು ನಮ್ಮ ಧರ್ಮ. ಯಾರ ಮೆಚ್ಚುಗೆ, ಜಯಕಾರ ಇಲ್ಲಿ ಅವಶ್ಯಕತೆಯಿಲ್ಲ ಎಂದರು.
2 ವರ್ಷ ಕಳೆದರು ಬೋರ್ ವೆಲ್ ಗೆ ಸಂಪರ್ಕ ಕಲ್ಪಿಸದ ಅಧಿಕಾರಿಗಳಿಗೆ ಶಾಸಕರು ತರಾಟೆ
ಸಾಗರ ನಗರದ ಬಸವೇಶ್ವರ ನಗರದಲ್ಲಿ ಕುಡಿಯುವ ನೀರಿಗೆ ಕೊಳವೆ ಬಾವಿ ತೆಗೆದು ಎರಡು ವರ್ಷಗಳೇ ಆಗಿದ್ದರೂ ಅದಕ್ಕೆ ಸಂಪರ್ಕ ನೀಡದೇ ಇರುವ ಬಗ್ಗೆ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ ಶಾಸಕರು ಬೋರ್‌ವೆಲ್‌ಗೆ ಊದುಬತ್ತಿ ಹಚ್ಚಿ ಪೂಜೆ ಮಾಡಿ. ಕೊಳವೆಬಾವಿ ಕೊರೆದು ಎರಡು ವರ್ಷವಾದರೂ ಈತನಕ ಸಂಪರ್ಕ ಕೊಟ್ಟಿಲ್ಲ ಎಂದರೆ ಅದನ್ನು ಇರಿಸಿಕೊಂಡು ಏನು ಮಾಡುತ್ತೀರಿ. ಇನ್ನು ಎರಡು ಮೂರು ದಿನಗಳಲ್ಲಿ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ನೀಡಿ ಜನರಿಗೆ ನೀರು ಪೂರೈಕೆ ಮಾಡಿ ಎಂದು ಎಚ್ಚರಿಕೆ ನೀಡಿದರು.
ಪ್ರತಿ ಅರ್ಜಿಗೂ ಮಾನ್ಯತೆ ಇದೆ ಎಂದ ಶಾಸಕರು
ಜನಸಂಪರ್ಕ ಸಭೆಯಲ್ಲಿ ನೀಡುವ ಪ್ರತಿಯೊಂದು ಅರ್ಜಿಗೂ ಮಾನ್ಯತೆ ಇದೆ. ಅರ್ಜಿ ಮೂಲಕ ನಮ್ಮ ಗಮನಕ್ಕೆ ತಂದಿರುವ ಪ್ರತಿಯೊಂದು ಸಮಸ್ಯೆಗೂ ಕಾಲಮಿತಿಯೊಳಗೆ ಪರಿಹಾರ ಕಲ್ಪಿಸಲಾಗುತ್ತದೆ. ನ್ಯಾಯಾಲಯದಲ್ಲಿ ಇರುವ ಪ್ರಕರಣ ಹೊರತುಪಡಿಸಿ ಇತರೆ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.
ಮಾರಿಕಾಂಬ ಜಾತ್ರೆ ಯಶಸ್ವಿಗೊಳಿಸಲು ಮನವಿ
ಮಾರಿಕಾಂಬಾ ಜಾತ್ರೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸ್ವಚ್ಚತೆ ಮತ್ತು ಕುಡಿಯುವ ನೀರಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಜಾತ್ರೆ ಸಂದರ್ಭದಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಮೆಸ್ಕಾಂ ಗಮನ ಹರಿಸಬೇಕು. ಎಲ್ಲರೂ ಸೇರಿ ಜಾತ್ರೆಯನ್ನು ಅತ್ಯಂತ ಯಶಸ್ವಿಯಾಗಿ ಮಾಡಬೇಕು. ಬಂದೋಬಸ್ತು ವ್ಯವಸ್ಥೆ, ಅಮ್ಮನವರ ದರ್ಶನಕ್ಕೆ ನೂಕುನುಗ್ಗಲು ಉಂಟಾಗದಂತೆ ಹೆಚ್ಚಿನ ಪೊಲೀಸ್ ಬಂದೋಬಸ್ತು ವಹಿಸಲಾಗುತ್ತದೆ. ಮಾರಿಕಾಂಬ ಜಾತ್ರೆಯಲ್ಲಿ ಸಾಮಾನ್ಯ ಭಕ್ತರ ದರ್ಶನಕ್ಕೆ ಅವಕಾಶದ್ದೇ ಪ್ರತಿ ಸಲ ಸಮಸ್ಯೆ ಆಗುತ್ತದೆ.
ಈ ಬಾರಿ ಮಾರಿಕಾಂಬ ಜಾತ್ರೆಯಲ್ಲಿ ವಿಐಪಿ ದರ್ಬಾರ್ ಇಲ್ಲ
ಈ ಬಾರಿ ವಿಐಪಿ ದರ್ಬಾರ್ ಇಲ್ಲ. ಪಾಸ್ ಪಡೆದವರು ಮಧ್ಯಾಹ್ನ 12 ಗಂಟೆಯ ಮೇಲೆ ದೇವರ ದರ್ಶನ ಮಾಡಬೇಕು. ಸಮುದಾಯದ ಹೆಸರಿನಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಬಂದು ದೇವರಿಗೆ ಹಾರ ಸಮರ್ಪಿಸುವ ಹಾಗೆ ಇಲ್ಲ. ಒಂದು ದಿನ ಮುಂಚಿತವಾಗಿ ಆಯಾ ಸಮುದಾಯದವರು ಹೆಸರು ನಮೂದಿಸಬೇಕು. ಅಂತಹ ಸಮುದಾಯದ ಹತ್ತು ಜನರಿಗೆ ಮಾತ್ರ ದೇವಿಗೆ ಹಾರ ಸಮರ್ಪಿಸುವ ಅವಕಾಶ ಮಾಡಿಕೊಡಲಾಗುತ್ತದೆ. ಆಡಳಿತಾತ್ಮಕ ದೃಷ್ಠಿಯಿಂದ ಈ ಬಾರಿಯ ಮಾರಿಕಾಂಬ ಜಾತ್ರೆಗೆ ಹಲವು ಮಾರ್ಪಾಡುಗಳನ್ನು ಮಾಡಲಾಗುವುದು. ಎಲ್ಲರೂ ಸಹಕರಿಸಬೇಕು ಎಂದರು.
ಜಾತ್ರೆ ಹಿನ್ನೆಲೆಯಲ್ಲಿ ಎರಡು ತಿಂಗಳು ಹೆಚ್ಚಿನ ಪೌರ ಕಾರ್ಮಿಕರನ್ನು ನೇಮಿಸಿ ಕೊಳ್ಳಲಾಗುತ್ತದೆ. ಬೀದಿದೀಪ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಗಮನ ಹರಿಸಲಾಗುತ್ತದೆ. ವಿಧಾನಸಭಾ ಅಧಿವೇಶನ ನಂತರ ಬೆಳಿಗ್ಗೆ 6 ಗಂಟೆಯಿಂದ ನಗರದ ಎಲ್ಲ ವಾರ್ಡ್ಗಳಿಗೂ ಭೇಟಿ ನೀಡಿ ಕುಂದು ಕೊರತೆಯನ್ನು ಗಮನಿಸುತ್ತೇನೆ ಎಂದರು.
ಮಾರಿಕಾಂಬ ಜಾತ್ರೆ ವೇಳೆಯಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಣೆಗಾಗಿ ಈಗಾಗಲೇ ಎಸ್ಪಿಯೊಂದಿಗೆ ಮಾತನಾಡಲಾಗಿದೆ. ಜಾತ್ರೆಯ ವೇಳೆಯಲ್ಲಿ ಮೂವರು ಡಿವೈಎಸ್ಪಿ, ಎಎಸ್ಪಿಗಳನ್ನು ಹಾಕಲಿದ್ದಾರೆ. 9 ದಿನಗಳ ಕಾಲ ಸಾಗರದಲ್ಲೇ ಮೊಕ್ಕಾಂ ಹೂಡಲಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಲಿದ್ದಾರೆ ಎಂಬುದಾಗಿ ತಿಳಿಸಿದರು.
ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ
ಸಾಗರದ ಹೃದಯ ಭಾಗಕ್ಕೆ ತಾಗಿಕೊಂಡಿರುವ ತಿಮ್ಮಣ್ಣನಾಯಕನ ಕೆರೆ ಸೇರಿದಂತೆ ಅನೇಕ ಕೆರೆಗಳು ಒತ್ತುವರಿಯಾಗಿರುವುದಲ್ಲದೇ ತ್ಯಾಜ್ಯಗಳನ್ನು ತಂದು ಕೆರೆಗಳ ಅಸ್ಥಿತ್ವವನ್ನು ಹಾಳು ಮಾಡಲಾಗುತ್ತಿದೆ. ಆಯ ಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಅಂತವರ ಮೇಲೆ ನಿರ್ಧಾಕ್ಷಣ್ಯವಾಗಿ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಸಾಗರ ನಗರವನ್ನು ವ್ಯವಸ್ಥಿತವಾಗಿ ಕಟ್ಟುವಲ್ಲಿ ಎಲ್ಲರ ಸಹಕಾರದ ಅಗತ್ಯತೆ ಇದೆ. ಶೀಘ್ರದಲ್ಲಿಯೇ ಸುಸಜ್ಜಿತ ರಂಗಮಂದಿರದ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.
ಹಾನಂಬಿ ಹೊಳೆ ಮೇಲ್ಭಾಗದ ನಾಗರೀಕರು ತಮ್ಮ ಭಾಗದಲ್ಲಿ ವಿಪರೀತ ಗಾಂಜಾ ಸೇವನೆ ಮಾಡುತ್ತಿದ್ದು, ಕಸ ಎಲ್ಲೆಂದರಲ್ಲಿ ಎಸೆದು ಹೋಗುತ್ತಿದ್ದು, ಅಪರಾಧ ಕೃತ್ಯಗಳು ನಡೆಯುತ್ತಿದೆ. ಸೂಕ್ತ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರೇ, ನಿವೃತ್ತ ನೌಕರರ ಸಂಘದಿಂದ ನಿವೇಶನಕ್ಕಾಗಿ ಅರ್ಜಿ ನೀಡಿ ದಶಕ ಕಳೆದರೂ ಈತನಕ ಮಂಜೂರಾಗಿಲ್ಲ ಎಂದು ಪ್ರಸ್ತಾಪಿಸಿದರು. ಸವಿತಾ ಸಮಾಜ ಮತ್ತು ದೈವಜ್ಞ ಸಮಾಜದವರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಈತನಕ ನೀಡಿಲ್ಲ ಎಂದು ಹೇಳಿದರು. ಜಿಲ್ಲಾ ಹೋರಾಟ ಸಮಿತಿ ವತಿಯಿಂದ ಸಾಗರ ಜಿಲ್ಲೆ ಘೋಷಣೆ ಮಾಡಲು ಮುಖ್ಯಮಂತ್ರಿಗಳ ಬಳಿ ನಿಯೋಗ ಕರೆದೊಯ್ಯುವಂತೆ ಮನವಿ ಸಲ್ಲಿಸಲಾಯಿತು. ಸಾಗರ ಪಟ್ಟಣದ ಎಲ್ಲಾ ವಾರ್ಡ್ ಗಳ ಉದ್ಯಾನವನಗಳು ಸಂಪೂರ್ಣ ಹಾಳಾಗಿದ್ದು, ಅವುಗಳನ್ನು ಮತ್ತೆ ಅಭಿವೃದ್ಧಿಗೊಳಿಸಲು ವಿಶೇಷವಾಗಿ ಅನುದಾನವನ್ನು ತೆಗೆದಿರಿಸಲಾಗಿದೆ ಎಂದರು.
ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯೋರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ಕೊಟ್ಟ ಪೌರಾಯುಕ್ತ ಹೆಚ್.ಕೆ ನಾಗಪ್ಪ
ನಗರಸಭೆ ಪೌರಾಯುಕ್ತ ಹೆಚ್.ಕೆ ನಾಗಪ್ಪ ಮಾತನಾಡಿ ಇಂದಿನ ಜನಸಂಪರ್ಕ ಸಭೆಯಲ್ಲಿ ಸಲ್ಲಿಸಲಾಗಿರುವ ಎಲ್ಲಾ ಅರ್ಜಿಗಳನ್ನು ನಿಗದಿತ ಸಮಯದಲ್ಲಿ ವಿಲೇವಾರಿ ಮಾಡಲಾಗುವುದು. ಈಗಾಗಲೇ 200ಕ್ಕೂ ಹೆಚ್ಚು ಅರ್ಜಿಗಳು ಸ್ವೀಕೃತವಾಗಿವೆ. ಜನ ಸಂಪರ್ಕ ಸಭೆಯಲ್ಲಿ ತ್ಯಾಜ್ಯ ವಿಲೇವಾರಿ, ಬೀದಿ ದೀಪ, ಕುಡಿಯುವ ನೀರು ಕುರಿತಂತೆ ಹೆಚ್ಚು ಮನವಿಗಳು ಸಲ್ಲಿಕೆಯಾಗಿದ್ದು, ಅವುಗಳನ್ನು ಹಂತ ಹಂತವಾಗಿ ಪರಿಶೀಲಿಸಿ ಕ್ರಮವಹಿಸುವಂತ ಕೆಲಸ ಮಾಡಲಾಗುತ್ತದೆ. ಮನ ಬಂದಂತೆ ತ್ಯಾಜ್ಯ ವಿಲೇವಾರಿ ಮಾಡುವ ವ್ಯಕ್ತಿಗಳ ಮೇಲೆ ಸಿಸಿ ಕ್ಯಾಮೆರಾದ ಮೂಲಕ ಕಣ್ಗಾವಲು ಹಾಕಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಬೀದಿ ವ್ಯಾಪಾರಿಗಳು ಎಲ್ಲೆಂದರಲ್ಲಿ ಇನ್ಮುಂದೆ ಅಂಗಡಿಗಳನ್ನು ಹಾಕುವಂತಿಲ್ಲ. ಸಾಗರದ ಮೂರು ಕಡೆಯಲ್ಲಿ ಪುಡ್ ಕೋರ್ಟ್ ಅನ್ನು ನಿರ್ಮಿಸಲಾಗುವುದು. ಈಗಾಗಲೇ ಅದಕ್ಕೆ ನೀಲಿ ನಕ್ಷೆ ಕೂಡ ತಯಾರಾಗಿದ್ದು ಶೀಘ್ರದಲ್ಲಿಯೇ ಕಾರ್ಯ ಪ್ರವೃತ್ತರಾಗಲಿದ್ದೇವೆ. ವಿಶ್ವ ವಿಖ್ಯಾತ ಜೋಗ ಜಲಪಾತ, ಸಿಗಂದೂರು ಸೇತುವೆ, ಕೆಳದಿ, ಇಕ್ಕೇರಿ ಮುಂತಾದ ಐತಿಹಾಸಿಕ ಸ್ಥಳಗಳನ್ನು ವೀಕ್ಷಣೆಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗಳು ಬರುತ್ತಿರುವುದರಿಂದ ಹಲವು ಅಭಿವೃದ್ಧಿ ಕಾರ್ಯಗಳನ್ನು ತುರ್ತಾಗಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.
ಈ ವೇಳೆ ಪ್ರೊಬೇಷನರಿ ಉಪವಿಭಾಗಾಧಿಕಾರಿ ನಾಗೇಂದ್ರ, ಉಪವಿಭಾಗಾಧಿಕಾರಿ ವಿರೇಶ ಕುಮಾರ್, ತಹಶೀಲ್ದಾರ್ ರಶ್ಮಿ ಮಹೇಶ್, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಶಿವಪ್ರಕಾಶ್, ಯೋಜನಾ ನಿರ್ದೇಶಕ ರಂಗಸ್ವಾಮಿ, ಮಧುಮಾಲತಿ, ಸೋಮಶೇಖರ ಲ್ಯಾವಿಗೆರೆ, ಮಕ್ಬೂಲ್ ಅಹ್ಮದ್, ಸುರೇಶಬಾಬು, ಮಂಡಗಳಲೆ ಗಣಪತಿ, ಸಾಗರ ನಗರಸಭೆ, ತಾಲ್ಲೂಕು ಆಡಳಿತ ಅಧಿಕಾರಿ, ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು…








