ಬೆಂಗಳೂರು : ತಾಯಿ ಶಿಶು ಮರಣ ಹಾಗೂ ಅಪೌಷ್ಠಿಕತೆ ನಿವಾರಿಸುವ ದೂರದೃಷ್ಟಿಯ ಯೋಜನೆಯಾಗಿದ್ದು, 69,922 ಅಂಗನವಾಡಿ ಕೇಂದ್ರಗಳಿಂದ 40 ಲಕ್ಷಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳಿಗೆ ಅನುಕೂಲವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಇವರ ವತಿಯಿಂದ ಆಯೋಜಿಸಲಾಗಿದ್ದ ಕರ್ನಾಟಕದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಸುವರ್ಣ ಮಹೋತ್ಸವ ಹಾಗೂ ಮಕ್ಕಳ ದಿನಾಚರಣೆಯ ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹತ್ವಕಾಂಕ್ಷಿ ಯೋಜನೆಗಳನ್ನು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರ ದೂರದೃಷ್ಟಿಯ ಯೋಜನೆ
ಅಕ್ಟೋಬರ್ 2, 2025 ಕ್ಕೆ ಐಸಿಡಿಎಸ್ ಕಾರ್ಯಕ್ರಮಕ್ಕೆ 50 ವರ್ಷಗಳು ತುಂಬಿರುವುದು ಮೈಲುಗಲ್ಲು ಸಾಧನೆಯಾಗಿದೆ. ಭಾರತದ ಪ್ರಧಾನಿಯಾಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರು ಹಮ್ಮಿಕೊಂಡಿದ್ದ ದೂರದೃಷ್ಟಿಯ ಯೋಜನೆಯೇ ಐಸಿಡಿಎಸ್. ಎಪ್ಪತ್ತರ ದಶಕದಲ್ಲಿ ಮಹಿಳೆ ಮತ್ತು ಮಕ್ಕಳಲ್ಲಿ ಅಪೌಷ್ಠಿಕತೆ ,ಶಿಶು ಮತ್ತು ತಾಯಿಮರಣ ಹೆಚ್ಚಿದ ಸಂದರ್ಭದಲ್ಲಿ ಈ ಕಾರ್ಯಕ್ರಮ ಜಾರಿಯಾಗಿತ್ತು. ಶ್ರೀಮತಿ ಇಂದಿರಾಗಾಂಧಿಯವರು, ತಾಯಿ ಮತ್ತು ಮಕ್ಕಳ ಮರಣ ತಡೆಗಟ್ಟಲು ಹಾಗೂ ಅವರಲ್ಲಿ ಅಪೌಷ್ಠಿಕತೆ ನಿವಾರಿಸುವ ಉದ್ದೇಶದಿಂದ ಜಾರಿ ಮಾಡಿದರು. ರಾಜ್ಯದಲ್ಲಿ 69,922 ಅಂಗನವಾಡಿ ಕೇಂದ್ರಗಳಿದ್ದು, ಸುಮಾರು 40 ಲಕ್ಷಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ಈ ಕೇಂದ್ರಗಳಿಂದ ಲಾಭ ಪಡೆಯುತ್ತಿದ್ದಾರೆ. ಟಿ.ನರಸೀಪುರ ತಾಲ್ಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಮೊದಲು ಪ್ರಾರಂಭಗೊಂಡ ಅಂಗನವಾಡಿ ಕೇಂದ್ರ, 33 ತಾಲ್ಲೂಕುಗಳಲ್ಲಿ ಕಾರ್ಯನಿರ್ವಹಿಸಿತು. ಪ್ರಸ್ತುತ ರಾಜ್ಯಾದ್ಯಂತ 69,922 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
ಮಕ್ಕಳ ಆರೈಕೆ ಉದಾತ್ತವಾದ ಕೆಲಸ
ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಯಕರ್ತೆಯರು ಹಾಗೂ ಸಹಾಯಕರು ಪ್ರಾಮಾಣಿಕ ಸೇವೆಸಲ್ಲಿಸುತ್ತಿದ್ದು, ಮಕ್ಕಳ ಆರೈಕೆಯಲ್ಲಿ ನಿರತವಾಗಿರುವ ಎರಡನೇ ತಾಯಿಯಂತೆ ಎಂದು ಮುಖ್ಯಮಂತ್ರಿಗಳು ಅಭಿನಂಧಿಸಿದರು. ಇದು ಉದಾತ್ತವಾದ ಕೆಲಸ. ಮಕ್ಕಳು ದೇಶದ ಮುಂದಿನ ಭವಿಷ್ಯ. ಐಸಿಡಿಎಸ್ ಕಾರ್ಯಕ್ರಮದಿಂದ ಶಿಶು ಹಾಗೂ ತಾಯಿಮರಣ ಗಣನೀಯವಾಗಿ ಕಡಿಮೆಯಾಗಿದೆ.ವಿವಿಧೋದ್ದೇಶ ಸಹಕಾರ ಸಂಘವನ್ನು ಪ್ರಾರಂಭಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಸಹಾಯ ಮಾಡಲಿ ಎಂದು ಮುಖ್ಯಮಂತ್ರಿಗಳು ಹಾರೈಸಿದರು.
ಮಹಿಳೆಯರಲ್ಲಿ ಶೇ ನೂರರಷ್ಟು ಸಾಕ್ಷರತೆ, ವೈಚಾರಿಕ ಹಾಗೂ ವೈಜ್ಞಾನಿಕ ಜ್ಞಾನ ಬರಬೇಕಿದೆ
ಮಹಿಳೆಯರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸ್ವಾವಲಂಬಿಗಳಾಗದೆ ಹೋದರೆ,ಸಮಾಜ ಮುಂದುವರೆಯುವುದು ಕಷ್ಟ. ಸಮಾಜದಲ್ಲಿ ಅಸಮಾನತೆ ಇದ್ದು , ಮಹಿಳೆಯರೂ ಕೂಡ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ಸುಶಿಕ್ಷಿತರಾಗುತ್ತಿರುವುದು ಸಂತಸದ ಸಂಗತಿ. ಮಹಿಳೆಯರಲ್ಲಿ ಶೇ ನೂರರಷ್ಟು ಸಾಕ್ಷರತೆ ಬರಬೇಕಲ್ಲದೆ ವೈಚಾರಿಕ ಹಾಗೂ ವೈಜ್ಞಾನಿಕ ಜ್ಞಾನ ಬರಬೇಕಿದೆ ಎಂದರು.
ಗ್ಯಾರಂಟಿಗಳಿಗೆ 1 ಲಕ್ಷ ನಾಲ್ಕು ಸಾವಿರ ಕೋಟಿ ರೂಗಳಿಗೂ ಹೆಚ್ಚು ಹಣ ವೆಚ್ಚ
ಹೆಣ್ಣೊಂಬ್ಬಳು ವಿದ್ಯಾವಂತೆ ಯಾದರೆ ಇಡೀ ಕುಟುಂಬ ಶಿಕ್ಷಣ ಪಡೆಯುತ್ತದೆ. ನಮ್ಮ ಸರ್ಕಾರ ಶಕ್ತಿ ಯೋಜನೆಯಡಿ 600 ಕೋಟಿಗೂ ಹೆಚ್ಚು ಮಹಿಳೆಯರು ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ. ಗೃಹಲಕ್ಷ್ಮಿಯೋಜನೆಯಡಿ 1 ಕೋಟಿ 26 ಲಕ್ಷ ಕುಟುಂಬಗಳ ಯಜಮಾನಿಯರಿಗೆ 2000 ರೂ.ಗಳನ್ನು ಒದಗಿಸಲಾಗಿದೆ. ಹೆಣ್ಣುಮಕ್ಕಳು ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಬಲರಾಗಬೇಕೆಂದು ಹಾಗೂ ಮಹಿಳೆಯರು ಮುಖ್ಯವಾಹಿನಿಗೆ ಬಂದು, ಸಮಾನ ಅವಕಾಶಗಳನ್ನು ಪಡೆಯಬೇಕೆನ್ನುವ ಉದ್ದೇಶದಿಂದ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ.ಇಲ್ಲಿಯವರೆಗೆ ಗ್ಯಾರಂಟಿಗಳಿಗೆ ಸರ್ಕಾರ 1 ಲಕ್ಷ ನಾಲ್ಕು ಸಾವಿರ ಕೋಟಿ ರೂಗಳಿಗೂ ಹೆಚ್ಚು ಹಣವನ್ನು ವೆಚ್ಚ ಮಾಡಿದೆ ಎಂದರು.
ಅಭಿವೃದ್ಧಿ ಯೋಜನೆಗಳಿಗೂ ಅನುದಾನದ ಕೊರತೆಯಿಲ್ಲ
ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿದವರ ಕಣ್ಣು ತೆರೆಯಬೇಕು. ಬಿಜೆಪಿಯವರು, ಪ್ರಧಾನಿ ನರೇಂದ್ರ ಮೋದಿಯವರು ಇದನ್ನು ವಿರೋಧಿಸಿದ್ದರು. ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಅಭಿವೃದ್ಧಿ ಯೋಜನೆಗೂ ವೆಚ್ಚ ಮಾಡಲಾಗುತ್ತಿದೆ. ಮಹಿಳೆಯರು ಸಬಲರಾದರೆ ಮಾತ್ರ ನಮಗೆ ದೊರೆತಿರುವ ಸ್ವಾತಂತ್ರ್ಯ ಸಾರ್ಥಕವಾಗುತ್ತದೆ ಎಂದರು.
ಮಹಿಳಾ ಕಲ್ಯಾಣಕ್ಕಾಗಿ 95000 ಕೋಟಿ ರೂ. ಗಳು ಮೀಸಲು
ಸಮಾಜದಲ್ಲಿ ಅಸಮಾನತೆ, ಲಿಂಗ ತಾರತಮ್ಯ ಹೋಗಲಾಡಿಸಬೇಕು. ಈ ವರ್ಷದ ಬಜೆಟ್ ನಲ್ಲಿ 95000ಕೋಟಿ ರೂ. ಗಳನ್ನು ಮಹಿಳಾ ಕಲ್ಯಾಣಕ್ಕಾಗಿ ಮೀಸಲಿಡಲಾಗಿದೆ. ಲಿಂಗ ತಾರಾತಮ್ಯ ಹೋಗಲಾಡಿಸಲು ಎಲ್ಲಾ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ನಮ್ಮ ಸರ್ಕಾರ ಎಲ್ಲರನ್ನು ಒಳಗೊಂಡ, ಸಾಮಾಜಿಕ ಆರ್ಥಿಕ ಶಕ್ತಿ ನೀಡುತ್ತಿದೆ. ಜಾತಿ, ಲಿಂಗ ಮತ್ತು ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿಲ್ಲ. ಸಮಗ್ರ ಅಭಿವೃದ್ಧಿ ನಮ್ಮ ಗುರಿ. ಬಡವ ಬಲ್ಲಿದ ಎಂಬ ತಾರತಮ್ಯ ಹೋಗಲಾಡಿಸಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದರು.
ದೇಶದಲ್ಲಿ ಹೆಚ್ಚಿನ ಗೌರವಧನವನ್ನು ಕರ್ನಾಟಕ ಸರ್ಕಾರ ನೀಡುತ್ತಿದೆ
ಐಸಿಡಿಎಸ್ ಕೇಂದ್ರ ಸರ್ಕಾರದ ಕಾರ್ಯಕ್ರಮವಾದರೂ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ಕೊಡುತ್ತಿದೆ. ಕೇಂದ್ರದಿಂದ 2700 ರೂ ಬಂದರೆ, ರಾಜ್ಯ ಸರ್ಕಾರ 8500 ಒದಗಿಸುತ್ತಿದೆ. ಇಡೀ ದೇಶದಲ್ಲಿ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರಿಗೆ ಹೆಚ್ಚಿನ ಗೌರವಧನವನ್ನು ಕರ್ನಾಟಕ ಸರ್ಕಾರ ನೀಡುತ್ತಿದೆ ಎಂದರು.
ಐಸಿಡಿಎಸ್ ಪರಿಣಾಮಕಾರಿ ಅನುಷ್ಠಾನ: ದೇಶದಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ
ಶಕ್ತಿ ಮತ್ತು ಗೃಹಲಕ್ಷ್ಮಿ ಯೋಜನೆ ಜಾರಿಯಾದ ಮೇಲೆ ತಲಾ ಆದಾಯದಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ ಐಸಿಡಿಎಸ್ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿರುವ ರಾಜ್ಯಗಳಲ್ಲಿ ದೇಶದಲ್ಲಿಯೇ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ. ಮಹಿಳೆಯರಿಗೆ ಶಕ್ತಿ ಯೋಜನೆ ಜಾರಿಯಾದ ಮೇಲೆ ಉದ್ಯೋಗಕ್ಕೆ ಹೋಗುವ ಮಹಿಳೆಯರ ಪಾಲು ಶೇ 23% ಇದ್ದರೆ , ಗ್ರಾಮೀಣ ಭಾಗದಲ್ಲಿ 21% ಹೆಚ್ಚಾಗಿದೆ. ಶಕ್ತಿ ಮತ್ತು ಗೃಹಲಕ್ಷ್ಮಿ ಯೋಜನೆ ಜಾರಿಯಾದ ಮೇಲೆ ತಲಾ ಆದಾಯದಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದರು.
ಕೇಂದ್ರ ಸರ್ಕಾರ ಪ್ರಚಾರ ಗಿಟ್ಟಿಸಿಕೊಳ್ಳುವಷ್ಟು ಕೆಲಸವನ್ನು ಮಾಡುತ್ತಿಲ್ಲ
ಕೇಂದ್ರ ಸರ್ಕಾರ ಪ್ರಚಾರ ಗಿಟ್ಟಿಸಿಕೊಳ್ಳುವಷ್ಟು ಕೆಲಸವನ್ನು ಮಾಡುತ್ತಿಲ್ಲ ಎಂದರು. ಮುಂದಿನ ದಿನಗಳಲ್ಲಿ ಮಕ್ಕಳು, ತಾಯಂದಿರ ಅಪೌಷ್ಟಿಕತೆ ತೊಲಗಿಸಿ ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡಲಾಗುವುದು ಎಂದರು.ರಾಜ್ಯದ ಒಟ್ಟು 5000 ಅಂಗನವಾಡಿ ಕೇಂದ್ರಗಳಲ್ಲಿ ಎಲ್ ಕೆ ಜಿ , ಯುಕೆಜಿ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ತರಗತಿಗಳನ್ನು ಇನ್ನೂ ಹೆಚ್ಚಿನ ಕೇಂದ್ರಗಳಲ್ಲಿ ಪ್ರಾರಂಭಿಸಲಾಗುವುದು. ಮಹಿಳೆಯರ ಬದುಕಿನಲ್ಲಿ ಚೈತನ್ಯ ತುಂಬಲು ಹಾಗೂ ಮಕ್ಕಳು ಅಪೌಷ್ಠಿಕತೆಯಿಂದ ಬಳಲಬಾರದೆಂಬ ಸಾರ್ಥಕ ಉದ್ದೇಶವನ್ನು ಐಸಿಡಿಎಸ್ ಕಾರ್ಯಕ್ರಮ ಪೂರೈಸಿದೆ. ವಿಶ್ವ ಹಿರಿಯನಾಗರಿಕರ ದಿನಾಚರಣೆಯ ಶುಭಾಶಯ ಕೋರಿದ ಮುಖ್ಯಮಂತ್ರಿಗಳು ಹಿರಿಯ ನಾಗರಿಕರು ನೆಮ್ಮದಿಯ ಹಾಗೂ ಗೌರವಯುತ ಜೀವನ ನಡೆಸುವಂತಾಗಬೇಕೆಂದರು. ಇದೇ ಸಂದರ್ಭದಲ್ಲಿ ಮಹಿಳೆಯರ ರಕ್ಷಣೆ ಹಾಗೂ ಭದ್ರತೆಯನ್ನು ಖಾತ್ರಿಪಡಿಸುವ ‘ಅಕ್ಕಾ’ ಪಡೆಯನ್ನು ಇಂದು ಲೋಕಾರ್ಪಣೆಗೊಳಿಸಲಾಗಿದೆ ಎಂದರು.
ಶಕ್ತಿ ಮತ್ತು ಗೃಹಲಕ್ಷ್ಮಿ ಯೋಜನೆ ಜಾರಿಯಾದ ಮೇಲೆ ತಲಾ ಆದಾಯದಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಐಸಿಡಿಎಸ್ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿರುವ ರಾಜ್ಯಗಳಲ್ಲಿ ದೇಶದಲ್ಲಿಯೇ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ. ಶಕ್ತಿ ಯೋಜನೆ ಜಾರಿಯಾದ ಮೇಲೆ ಉದ್ಯೋಗಕ್ಕೆ ಹೋಗುವ ಮಹಿಳೆಯರ ಪಾಲು ಶೇ 23% ಇದ್ದರೆ, ಗ್ರಾಮೀಣ… pic.twitter.com/nrMLsc6Kw6
— CM of Karnataka (@CMofKarnataka) November 28, 2025








