ಬೆಂಗಳೂರು : ರಾಜ್ಯದ ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ವರ್ಗಾವಣೆ ಪ್ರಮಾಣ ಪತ್ರವನ್ನು ಸಕಾಲದಲ್ಲಿ ವಿತರಿಸುವಂತೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ರಾಜ್ಯದಲ್ಲಿನ ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿನ ವಿದ್ಯಾರ್ಥಿಗಳ ವರ್ಗಾವಣೆ ಪ್ರಮಾಣ ಪತ್ರವನ್ನು ಸಕಾಲದಲ್ಲಿ ವಿತರಿಸದೇ ಕಾಲಹರಣ ಮಾಡಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಅಧಿಕೃತವಾಗಿ ಶಾಲೆಗೆ ದಾಖಲಾಗದೇ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗಿ ಆತಂಕದಲ್ಲಿ ಸಿಲುಕಿ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಹಲವಾರು ದೂರು ಸಲ್ಲಿಸಿರುವ ಅಂಶವನ್ನು ಗಂಭೀರವಾಗಿ ಪರಿಗಣಿಸಿ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಗಳ ಕಾಯ್ದೆ-2005ರ ಸೆಕ್ಷನ್ 13(ಜೆ) ರಡಿಯಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳಲ್ಲಿ ದೂರುಗಳನ್ನು ಆಯೋಗವು ಸ್ವೀಕರಿಸಿ, ವಿಚಾರಣೆ ನಡೆಸುತ್ತಿದೆ.
ವಿದ್ಯಾರ್ಥಿಗಳ ವರ್ಗಾವಣೆ ಪತ್ರ ವಿತರಣೆ ಸಂಬಂಧ ರಾಷ್ಟ್ರದ ವಿವಿಧ ರಾಜ್ಯಗಳ ರಾಜ್ಯ ಉಚ್ಚನ್ಯಾಯಾಲಯಗಳಲ್ಲಿ ದಾಖಲಾಗಿರುವ ದಾವೆಗಳ ತೀರ್ಪಿನ ಅಡಿಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಯಿಂದ ವಂಚಿತರಾಗದಂತೆ, ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳನ್ನು ಮುಂದುವರೆಸಲು ಪೋಷಕರು ಬಯಸಿದಲ್ಲಿ “ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009″ ಸೆಕ್ಷನ್ 5(1)ರ ಉಲ್ಲಂಘನೆಯಾಗದಂತೆ, ಅರ್ಜಿ ಸಲ್ಲಿಸಿದ 15 ದಿನಗಳ ಒಳಗಾಗಿ ವರ್ಗಾವಣೆ ಪತ್ರವನ್ನು ವಿತರಿಸುವುದು ಶಾಲಾ ಮುಖ್ಯಸ್ಥರ ಅದ್ಯ ಕರ್ತವ್ಯವಾಗಿರುತ್ತದೆ.
ಶಾಲಾ ಮುಖ್ಯಸ್ಥರು ಸಕಾಲದಲ್ಲಿ ವರ್ಗಾವಣೆ ಪತ್ರವನ್ನು ವಿತರಿಸದಿದ್ದಲ್ಲಿ ಪೋಷಕರು ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸತಕ್ಕದ್ದು. ಮನವಿ ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸದರಿ ಶಾಲಾ ಮುಖ್ಯಸ್ಥರಿಗೆ ಒಂದು ವಾರ ಕಾಲಾವಕಾಶ ನೀಡಿ, ಮನವಿಯನ್ನು ಇತ್ಯರ್ಥಪಡಿಸಲು ಕ್ರಮವಹಿಸತಕ್ಕದು.
ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡಿದ ಕಾಲಾವಧಿಯಲ್ಲಿ ವರ್ಗಾವಣೆ ಪತ್ರವನ್ನು ವಿತರಿಸಲು ಶಾಲೆಯು ವಿಫಲವಾದಲ್ಲಿ, ಸಂಬಂಧಪಟ್ಟ ಶಾಲಾ ಆಡಳಿತ ಮಂಡಳಿ ಮತ್ತು ಶಾಲಾ ಮುಖ್ಯಸ್ಥರ ವಿರುದ್ಧ ಕರ್ನಾಟಕ ಶಿಕ್ಷಣ ಕಾಯ್ದೆ-1983ರ ಸೆಕ್ಷನ್ 106(2)(ಬಿ)ರಡಿ ಸಕ್ಷಮ ಪ್ರಾಧಿಕಾರಿಗಳಾದ ಜಿಲ್ಲಾ ಉಪನಿರ್ದೇಶಕರು(ಆಡಳಿತ) ರವರು ಕ್ರಮವಹಿಸಿ, ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಂದ ವಂಚಿತರಾಗದಂತೆ ಕ್ರಮವಹಿಸಲು ಸೂಚಿಸಿದೆ.









