ಬೆಂಗಳೂರು : ರಾಜ್ಯದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅನಧಿಕೃತ ಶಾಲೆಗಳ ಮಾಹಿತಿಯನ್ನು ಸಲ್ಲಿಸುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖದ ಕಾಯ್ದೆಗಳನ್ವಯ ಖಾಸಗಿ ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ನೋಂದಣಿ ಮತ್ತು ಮಾನ್ಯತೆ ಪಡೆದು ಶಾಲೆಗಳನ್ನು ನಡೆಸಬೇಕಾಗಿರುತ್ತದೆ. ಅದರಂತೆ ಇಲಾಖೆಯು ಪ್ರತಿ ವರ್ಷವು ಹೊಸ ಖಾಸಗಿ ಶಾಲೆಗಳನ್ನು ಪ್ರಾರಂಭಿಸಲು ಅರ್ಜಿಗಳನ್ನು ಆಹ್ವಾನಿಸಿ, ನಿಯಮಾನುಸಾರ ಪರಿಶೀಲಿಸಿ ಮಾನದಂಡಗಳನ್ನು ಪೂರೈಸಿದ ಅರ್ಹ ಶಾಲೆಗಳಿಗೆ ಅನುಮತಿಯನ್ನು ನೀಡಲಾಗುತ್ತಿದ್ದು, ಅದರಂತೆ 2025-26ನೇ ಸಾಲಿನಲ್ಲಿ ಹೊಸದಾಗಿ ಪ್ರಾರಂಭಿಸಲು ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ ನಿಗಧಿಪಡಿಸಿದ ಅಂತಿಮ ದಿನಾಂಕದೊಳಗೆ ಅನುಮತಿ ನೀಡಲಾಗಿರುತ್ತದೆ.
ಸೂಚಿತ ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿ ಇಲಾಖೆಯ ಅನುಮತಿ ಇಲ್ಲದೆ ಖಾಸಗಿ ಶಾಲೆಗಳನ್ನು ಪ್ರಾರಂಭಿಸಿದಲ್ಲಿ ಅಂತಹ ಶಾಲೆಗಳ ಪಟ್ಟಿಯನ್ನು ಮತ್ತು ಕೇಂದ್ರ ಪರೀಕ್ಷಾ ಮಂಡಳಿಗೆ ಸಂಯೋಜನೆ ಹೊಂದದೇ ಅನಧಿಕೃತವಾಗಿ ಕೇಂದ್ರ ಹಾಗೂ ಇತರೆ ಪಠ್ಯಕ್ರಮ ಅನುಸರಿಸುತ್ತಿರುವ ಶಾಲೆಗಳ ಪಟ್ಟಿಯನ್ನು ರಾಜ್ಯದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಂಬಂಧಪಟ್ಟ ಉಪನಿರ್ದೇಶಕರು(ಆಡಳಿತ) ರವರಿಗೆ ಸಲ್ಲಿಸತಕ್ಕದ್ದು, ಉಪನಿರ್ದೇಶಕರು(ಆಡಳಿತ) ರವರು ಅನಧಿಕೃತ ಶಾಲೆಯೆಂದು ಗುರುತಿಸಿರುವ ಬಗ್ಗೆ ಸ್ಪಷ್ಟಿಕರಿಸಿಕೊಂಡು ಕೆಳಕಂಡ ನಮೂನೆಯಲ್ಲಿ ಅನಧಿಕೃತ ಶಾಲೆಗಳ ಮಾಹಿತಿಯನ್ನು ಕ್ರೋಢೀಕರಿಸಿ, ದೃಢೀಕರಿಸಿ ದಿನಾಂಕ: 28-11-2025 ರೊಳಗಾಗಿ ಇ-ಮೇಲ್ ವಿಳಾಸ giaprimarycpi@gmail.com ಗೆ ಸಲ್ಲಿಸಲು ಸೂಚಿಸಿದೆ.
ಅನಧಿಕೃತ ಶಾಲೆ ಎಂದು ಗುರುತಿಸುವ ವಿಧ:
1. ಶಾಲಾ ನೋಂದಣಿ/ ಅನುಮತಿ ಪಡೆಯದೇ ನಡೆಯುತ್ತಿರುವ ಶಾಲೆಗಳು:- ಕರ್ನಾಟಕ ಶಿಕ್ಷಣ ಕಾಯಿದೆ-1983 ಸೆಕ್ಷನ್-30 ಮತ್ತು 31ರಂತೆ ನೋಂದಣಿ ಅನುಮತಿಯನ್ನು ಪಡೆಯದೆ ಶಾಲೆಯನ್ನು ನಡೆಸುತ್ತಿದ್ದಲ್ಲಿ ಅಂತಹ ಶಾಲೆಗಳನ್ನು ಅನಧಿಕೃತ ಶಾಲೆ ಎಂಬುದಾಗಿ ಪರಿಗಣಿಸಲಾಗುತ್ತದೆ.
2. ನೋಂದಣಿ ಇಲ್ಲದೇ ಅನಧಿಕೃತವಾಗಿ ಉನ್ನತೀಕರಿಸಿದ ತರಗತಿಗಳನ್ನು ನಡೆಸುತ್ತಿರುವ ಶಾಲೆಗಳು:- ಕರ್ನಾಟಕ ಶಿಕ್ಷಣ ಕಾಯಿದೆ-1983 ಉನ್ನತೀಕರಿಸಿದ ತರಗತಿಗಳನ್ನು ಪ್ರಾರಂಭಿಸಲು ಸೆಕ್ಷನ್-32 ರಲ್ಲಿ ಸಕ್ಷಮ ಪ್ರಾಧಿಕಾರದಿಂದ ಅನುಮತಿಯನ್ನು ಪಡೆಯದೆ ಅನಧಿಕೃತವಾಗಿ ಉನ್ನತೀಕರಿಸಿದ ತರಗತಿಗಳನ್ನು ನಡೆಸುತ್ತಿದ್ದಲ್ಲಿ ಉನ್ನತೀಕರಿಸಿಲ್ಲದ ತರಗತಿಗಳಿಗೆ ಅನಧಿಕೃತ ಶಾಲೆ ಎಂಬುದಾಗಿ ಪರಿಗಣಿಸಲಾಗುತ್ತದೆ.
3. ರಾಜ್ಯ ಪಠ್ಯಕ್ರಮದಲ್ಲಿ ಬೋಧಿಸಲು ಅನುಮತಿ ಪಡೆದು ಅನಧಿಕೃತವಾಗಿ ಕೇಂದ್ರ ಪಠ್ಯಕ್ರಮದಲ್ಲಿ ಬೋಧಿಸುತ್ತಿರುವ ಶಾಲೆಗಳು:- ರಾಜ್ಯ ಪಠ್ಯಕ್ರಮದಲ್ಲಿ ಅನುಮತಿಯನ್ನು ಪಡೆದು ಕೇಂದ್ರ ಪಠ್ಯಕ್ರಮಕ್ಕೆ ನಿರಾಕ್ಷೇಪಣಾ ಪತ್ರ ಮತ್ತು ಅಫಿಲಿಯೇಷನ್ ಪಡೆಯದೆ ಕೇಂದ್ರ ಪಠ್ಯಕ್ರಮದ ಶಾಲೆ ನಡೆಸುತ್ತಿದ್ದಲ್ಲಿ ಅಂತಹ ಶಾಲೆಗಳನ್ನು ಅನಧಿಕೃತ ಶಾಲೆ ಎಂಬುದಾಗಿ ಪರಿಗಣಿಸಲಾಗುತ್ತದೆ.
4. ನೋಂದಣಿ ಪಡೆದ ಮಾಧ್ಯಮದಲ್ಲಿ ಬೋಧಿಸದೇ ಅನಧಿಕೃತವಾಗಿ ಬೇರೆ ಮಾಧ್ಯಮದಲ್ಲಿ ಬೋಧಿಸುತ್ತಿರುವ ಶಾಲೆಗಳು:-ರಾಜ್ಯ ಪಠ್ಯಕ್ರಮಕ್ಕೆ ನೋಂದಣಿ/ಅನುಮತಿ ಪಡೆಯುವಂತಹ ಸಂದರ್ಭದಲ್ಲಿ ಅನುಮತಿ ಪಡೆದಿರುವಂತಹ ಮಾಧ್ಯಮವನ್ನು ಹೊರತುಪಡಿಸಿ ಬೇರೆ ಬೇರೆ ಮಾಧ್ಯಮದಲ್ಲಿ ನಡೆಸುತ್ತಿರುವಂತಹ ಶಾಲೆಗಳನ್ನು ಅನಧಿಕೃತ ಶಾಲೆ ಎಂಬುದಾಗಿ ಪರಿಗಣಿಸಲಾಗುತ್ತದೆ.
5. ಹಿಂದಿನ ಸಾಲುಗಳ ಮಾನ್ಯತೆ ನವೀಕರಣವನ್ನು ಪಡೆಯದಿರುವುದು:- ರಾಜ್ಯ ಪಠ್ಯಕ್ರಮವನ್ನು ಅನುಸರಿಸುತ್ತಿರುವ ಶಾಲೆಗಳು ಆಯಾ ವರ್ಷವೇ ಅಗತ್ಯ ದಾಖಲೆಗಳನ್ನು ಇಲಾಖಾ ಮಾರ್ಗದರ್ಶನದಂತೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಿ, ನಿಗದಿತ ಸಮಯದೊಳಗೆ ಮಾನ್ಯತೆ ನವೀಕರಣವನ್ನು ಪಡೆಯುವುದು ಆದ್ಯ ಕರ್ತವ್ಯವಾಗಿರುತ್ತದೆ.









