ಕೊಪ್ಪಳ : ವಿದ್ಯುತ್ ಕಂಬ, ಟ್ರಾನ್ಸಫಾರ್ಮರ್ ಸೇರಿದಂತೆ ಇತರೆ ಯಾವುದೇ ಕೆಲಸ ಕಾರ್ಯಗಳನ್ನು ಮಾಡುವಾಗ ನಮ್ಮ ಇಲಾಖೆಯ ಅಧಿಕಾರಿಗಳು ಆಯಾ ಭಾಗದ ಜನಪ್ರತಿನಿಧಿಗಳ ಗಮನಕ್ಕೆ ತಂದು ಕೆಲಸ ಮಾಡಬೇಕು ಮತ್ತು ತಮ್ಮ ಯಾವುದೇ ಸಮಸ್ಯೆಗಳಿದ್ದರೆ ಮೇಲಾಧಿಕಾರಿಗಳ ಗಮನಕ್ಕೆ ತರಬೇಕೆಂದು ಇಂಧನ ಸಚಿವರಾದ ಕೆ.ಜೆ. ಜಾರ್ಜ್ ಹೇಳಿದರು.
ಅವರು ಬುಧವಾರ ಕೊಪ್ಪಳ ಜಿಲ್ಲಾ ಪಂಚಾಯತ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಹಾಗೂ ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ಸಹಯೋಗದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಇಂಧನ ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಆಯಾ ಭಾಗದ ಸಮಸ್ಯೆಗಳು ತಮಗಿಂತ ಜನಪ್ರತಿನಿಧಿಗಳಿಗೆ ಚೆನ್ನಾಗಿ ಗೊತ್ತಿರುತ್ತವೆ. ಅವರ ಸಹಾಯ ಪಡೆದುಕೊಳ್ಳುವುದರ ಜೊತೆಗೆ ಅಧಿಕಾರಿಗಳು ಪಿಲ್ಡಿಗೆ ಹೋಗಿ ಕೆಲಸ ಮಾಡಬೇಕು. ಅಕ್ರಮ ಸಕ್ರಮ, ಶೀಘ್ರ ಸಂಪರ್ಕ ಯೋಜನೆ ಸಣ್ಣ ಮತ್ತು ದೊಡ್ಡ ರೈತರಿಗೆ ನೀಡುವ ಸಹಾಯ ಸೌಲಭ್ಯಗಳನ್ನು ಅವರಿಗೆ ತಿಳಿಸಬೇಕು. ಈ ಸಭೆ ಕಾಟಾಚಾರಕ್ಕೆ ಆಗದೆ ಇದರಿಂದ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ತಾವು ಕೆಲಸ ಮಾಡಬೇಕೆಂದರು.
ವಿದ್ಯುತ್ ಪೂರೈಕೆಯನ್ನು ಸಮರ್ಪಕಗೊಳಿಸುವುದು ಅವಶ್ಯವಾಗಿದ್ದು, ಪಂಪ್ ಸೆಟ್ಗಳಿಗಾಗಿ ಹಾಗೂ ಇತರೆ ಅವಶ್ಯಕತೆಗಳು ಮತ್ತು ಕೈಗಾರಿಕೆಗಳ ವ್ಯಾಪ್ತಿಯಲ್ಲಿ ವಿದ್ಯುತ್ ಕಳ್ಳತನ ಆಗದಂತೆ ನಿಗಾವಹಿಸಬೇಕು. ಇದರ ಜೊತೆಗೆ ಅಧಿಕ ಲೋಡ್ ನಿಂದಾಗಿ ಟ್ರಾನ್ಸ್ ಫಾರ್ಮರ್ಗಳು ಸುಟ್ಟು ಹೋಗದಂತೆ ನೋಡಿಕೊಳ್ಳಬೇಕು. ಈಗಾಗಲೇ ಸ್ಥಾಪಿಸಿರುವ ವಿದ್ಯುತ್ ಉಪ ಕೇಂದ್ರಗಳ ವ್ಯಾಪ್ತಿಯಲ್ಲಿ ವಿದ್ಯುತ್ ಲಿಂಕ್ ಲೈನ್ಗಳನ್ನು ಸ್ಥಾಪಿಸುವ ಮೂಲಕ ಬೇಡಿಕೆಗೆ ಅನುಸಾರವಾಗಿ ಸಮರ್ಪಕ ವಿದ್ಯುತ್ ಪೂರೈಕೆಗೆ ಆದ್ಯತೆ ಮೇಲೆ ಕ್ರಮ ಕೈಗೊಳ್ಳಬೇಕು. ವಿದ್ಯುತ್ ಕೇಂದ್ರವಾರು ಸಂಪೂರ್ಣ ಲಿಂಕ್ ಲೈನ್ ಆಗಿರುವ ಬಗ್ಗೆ ಕೆಪಿಟಿಸಿಎಲ್ ಹಾಗೂ ಜೆಸ್ಕಾಂಗಳು ತೀವ್ರ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಸಿರುವ ಕಡೆಗಳಲ್ಲಿ ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. `ಕುಸುಮ್-ಬಿ’ ಯೋಜನೆಯಡಿ ಸೋಲಾರ್ ಪಂಪ್ಸೆಟ್ ಗಳನ್ನು ಅವಡಿಸಿಕೊಳ್ಳುವಂತೆ ರೈತರನ್ನು ಉತ್ತೇಜಿಸಬೇಕು. ಪ್ರವಾಹ ಸಂದರ್ಭದಲ್ಲಿ ಹಾನಿಗೊಳಗಾದ ವಿದ್ಯುತ್ ಮೂಲಸೌಕರ್ಯಗಳನ್ನು ತ್ವರಿತವಾಗಿ ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ವಿದ್ಯುತ್ ಉಪ ಕೇಂದ್ರಗಳ ಸ್ಥಾಪನೆ, ಉನ್ನತೀಕರಣ ಸೇರಿದಂತೆ ಪ್ರಗತಿಯಲ್ಲಿರುವ ಇತರೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಜನರಿಗೆ ಸಮಪರ್ಕ ವಿದ್ಯುತ್ ಪೂರೈಕೆಗೆ ಅನುಕೂಲ ಮಾಡಬೇಕು ಎಂದು ಸಚಿವರು ಹೇಳಿದರು.
ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೆಶಕರಾದ (ಎಂ.ಡಿ) ಪಂಕಜ ಕುಮಾರ್ ಪಾಂಡೆ ಅವರು ಇಂಧನ ಇಲಾಖೆಯ ಪ್ರಗತಿ ಕುರಿತು ಮಾಹಿತಿ ನೀಡಿ ಮಾತನಾಡಿ, ಟ್ರಾನ್ಸ್ ಫಾರ್ಮರ್ಗಳ ರಿಪೇರಿ, ಅದರಲ್ಲೂ ಮುಖ್ಯವಾಗಿ ರೈತರಿಗೆ ವಿದ್ಯುತ್ ಪೂರೈಸುವ ಟ್ರಾನ್ಸ್ ಫಾರ್ಮರ್ಗಳ ದುರಸ್ತಿ ಅಥವಾ ಬದಲಾವಣೆಗೆ ತುರ್ತು ಕ್ರಮ ಕೈಗೊಳ್ಳಬೇಕು. ವಿದ್ಯುತ್ ತಂತಿ, ಕಂಬಗಳ ದುರಸ್ತಿ ಸೇರಿದಂತೆ ವಿದ್ಯುತ್ ಪೂರೈಕೆಯಲ್ಲಿ ಆಗುವ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಿ ಬಗೆಹರಿಸಬೇಕು. ಸ್ಥಳೀಯ ಜನಪ್ರತಿನಿಧಿಗಳನ್ನು ಭೇಟಿಯಾಗಿ ಅವರ ವ್ಯಾಪ್ತಿಯಲ್ಲಿರುವ ಸಮಸ್ಯೆಗಳ ಕುರಿತು ಚರ್ಚಿಸಿ ಅವುಗಳನ್ನು ಬಗೆಹರಿಸಬೇಕು. ವಿದ್ಯುತ್ ಪೂರೈಕೆಗೆ ಯಾವುದೇ ಸಮಸ್ಯೆಗಳಿದ್ದಲ್ಲಿ ಅವುಗಳನ್ನು ಜಪ್ರತಿನಿಧಿಗಳ ಗಮನಕ್ಕೆ ತಂದು ಅವರ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸಭೆಯಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ಶಾಸಕರಾದ ಬಸವರಾಜ ರಾಯರಡ್ಡಿ, ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ಸಂಸದರಾದ ರಾಜಶೇಖರ ಬಸವರಾಜ ಹಿಟ್ನಾಳ, ಜೆಸ್ಕಾಂ ಅಧ್ಯಕ್ಷರಾದ ಪ್ರವೀಣ್ ಪಾಟೀಲ್ ಹರವಾಳ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರಿನಿವಾಸ ಗುಪ್ತ, ಜೆಸ್ಕಾಂ ವ್ಯವಸ್ಥಾಪಕ ನಿರ್ದೆಶಕ ಕೃಷ್ಣ ಭಾಜಪೇಯಿ, ಕೊಪ್ಪಳ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಹಾಯಕ ಆಯುಕ್ತರಾದ ಮಹೇಶ್ ಮಾಲಗಿತ್ತಿ ಸೇರಿದಂತೆ ಜೆಸ್ಕಾಂ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳು ಉಪಸ್ಥಿತರಿದ್ದರು.








