ಮುಂಬೈ : ಚೊಚ್ಚಲ ಆವೃತ್ತಿಯ ಮಹಿಳಾ ಅಂಧರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು ಹೊಸ ಇತಿಹಾಸ ಬರೆದ ಕನ್ನಡತಿ ದೀಪಿಕಾ ಟಿ.ಸಿ. ಸಾರಥ್ಯದ ಭಾರತೀಯ ಅಂಧ ಮಹಿಳಾ ಕ್ರಿಕೆಟ್ ತಂಡವನ್ನು ನೀತಾ ಎಂ. ಅಂಬಾನಿ ಅವರು ಅಭಿನಂದಿಸಿದ್ದಾರೆ. ಶ್ರೀಲಂಕಾದ ಕೊಲಂಬೊದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ನೇಪಾಳ ತಂಡವನ್ನು 7 ವಿಕೆಟ್ಗಳಿಂದ ಮಣಿಸಿ ಪ್ರಶಸ್ತಿ ಗೆದ್ದುಕೊಂಡ ಭಾರತ ತಂಡ, ನಿಜವಾದ ದೃಷ್ಟಿ ಹೃದಯದಿಂದ ಬರುತ್ತದೆ ಎಂಬುದನ್ನು ನಮಗೆ ತೋರಿಸಿಕೊಟ್ಟಿದೆ ಎಂದು ಅವರು ಬಣ್ಣಿಸಿದ್ದಾರೆ.
“ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡವು ಚೊಚ್ಚಲ ಟಿ20 ಕ್ರಿಕೆಟ್ ವಿಶ್ವಕಪ್ ಗೆಲುವಿನೊಂದಿಗೆ, ನಮ್ಮ ನೀಲಿ ಬಣ್ಣದ ಜೆರ್ಸಿ ಧರಿಸಿದ ಹುಡುಗಿಯರು ಮತ್ತೊಮ್ಮೆ ನಾವು ಹೆಮ್ಮೆ ಪಡುವಂತೆ ಮಾಡಿದ್ದಾರೆ. ನಿಜವಾದ ದೃಷ್ಟಿ ಹೃದಯದಿಂದ ಬರುತ್ತದೆ ಎಂದು ಅವರು ನಮಗೆ ತೋರಿಸಿದ್ದಾರೆ. ಅವರ ಧೈರ್ಯ, ಸ್ಥಿತಿಸ್ಥಾಪಕತ್ವ ಮತ್ತು ಅಬೇಧ್ಯ ಸ್ಫೂರ್ತಿಯ ವಿಜಯ ಇದಾಗಿದೆ. ಅವರು ಕೋಟ್ಯಂತರ ಜನರಿಗೆ ಭರವಸೆ, ಸಾಧ್ಯತೆ ಮತ್ತು ಪ್ರೇರಣೆಯ ಹಾದಿಯನ್ನು ಬೆಳಗಿಸಿದ್ದಾರೆ. ಅವರಿಗೆ ಮತ್ತು ಅವರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು’ ಎಂದು ನೀತಾ ಎಂ. ಅಂಬಾನಿ ಅವರು ಹೇಳಿದ್ದಾರೆ.
ಕೊಲಂಬೊದ ಪಿ.ಸಾರಾ ಓವಲ್ ಮೈದಾನದಲ್ಲಿ ನಡೆದ ಪ್ರಶಸ್ತಿ ಕಾದಾಟದಲ್ಲಿ ಭಾರತ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ನೇಪಾಳ ತಂಡ 5 ವಿಕೆಟ್ಗೆ 114 ರನ್ ಗಳಿಸಲಷ್ಟೇ ಶಕ್ತಗೊಂಡಿತು. ಪ್ರತಿಯಾಗಿ ಭಾರತ ತಂಡ 12.1 ಓವರ್ಗಳಲ್ಲೇ 3 ವಿಕೆಟ್ಗೆ 117 ರನ್ ಗಳಿಸಿ ಜಯಭೇರಿ ಬಾರಿಸಿತು. ಪೌಲಾ ಸರೆನ್ 27 ಎಸೆತಗಳಲ್ಲಿ 44 ರನ್ ಸಿಡಿಸಿ ಭಾರತವನ್ನು ಗೆಲುವಿನ ದಡ ಸೇರಿಸುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಭಾರತ ತಂಡ ಟೂರ್ನಿಯಲ್ಲಿ ಸತತ 7 ಜಯದೊಂದಿಗೆ ಅಜೇಯವಾಗಿ ಪ್ರಶಸ್ತಿಗೆ ಮುತ್ತಿಕ್ಕಿದ್ದು ವಿಶೇಷವಾಗಿದೆ.
ಹರ್ಮಾನ್ಪ್ರೀತ್ ಕೌರ್ ನೇತೃತ್ವದ ಭಾರತದ ರಾಷ್ಟ್ರೀಯ ಮಹಿಳಾ ತಂಡವೂ ಇತ್ತೀಚೆಗಷ್ಟೇ ನಡೆದ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿತ್ತು. ಇದೀಗ ಅಂಧ ಮಹಿಳಾ ತಂಡದ ವಿಶ್ವಕಪ್ ಗೆಲುವು, ಭಾರತೀಯರ ಸಂಭ್ರಮವನ್ನು ದ್ವಿಗುಣಗೊಳಿಸಿದೆ. ತಂಡದಲ್ಲಿ ಮೂವರು ಕನ್ನಡತಿಯರೂ ಇದ್ದರು. ಅವರೆಂದರೆ ತುಮಕೂರಿನ ದೀಪಿಕಾ ಟಿ.ಎಸ್., ಕಾವ್ಯಾ ಎನ್.ಆರ್. ಮತ್ತು ಶಿವಮೊಗ್ಗದ ಹೊಸನಗರದ ರಿಪ್ಪನ್ ಪೇಟೆಯ ಕಾವ್ಯಾ ವಿ.
ಟಿ20 ಅಂಧರ ವಿಶ್ವ ಕಪ್ ನಲ್ಲಿ ಭಾರತ ತಂಡದ ಗೆಲುವಿಗೆ ಕಾರಣವಾದ ಕಾವ್ಯಾಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅಭಿನಂದನೆ
SHOCKING: ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಕೃತ್ಯ: ಹೆಣ್ಣುಮಗುವೆಂದು ಹಸುಗೂಸನ್ನೇ ಕೊಂದ ಪಾಪಿ ತಾಯಿ








