ಬೆಂಗಳೂರು : ಅನರ್ಹ ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ನೀಡಿದ್ದು, ರಾಜ್ಯಾದ್ಯಂತ ಆದ್ಯತಾ ಪಡಿತರ ಚೀಟಿಗಳನ್ನು (PHH) ಹೊಂದಿರುವ ಅನರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚಿ ನಿಯಮಾನುಸಾರ ಕ್ರಮಕೈಗೊಳ್ಳುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (1)(2) ಮತ್ತು (3) ರಲ್ಲಿನ ಆದೇಶಗಳಲ್ಲಿ ಸಾರ್ವಜನಿಕ ವಿತರಣಾ ಪದ್ಧತಿಯಲ್ಲಿ ಆದ್ಯತೇತರ ಕುಟುಂಬಗಳನ್ನು ಗುರುತಿಸಲು ಹೊರಗಿಡುವ ಮಾನದಂಡಗಳನ್ನು (Exclusion criteria) ಹೊರಡಿಸಲಾಗಿದೆ. ಸದರಿ ಮಾನದಂಡಗಳಲ್ಲಿ ಸ್ಪಷ್ಟಿಕರಿಸಿರುವಂತೆ ಪಡಿತರ ಚೀಟಿಗಳನ್ನು ವಿತರಿಸಲಾಗುತ್ತಿದ್ದು, ಪ್ರಸ್ತುತ ಕೇಂದ್ರ ಸರ್ಕಾರವು ಎನ್ಎಫ್ಎಸ್ಎ ಮಿತಿಯನ್ನು 4,01,93,000ಕ್ಕೆ ನಿಗಧಿಪಡಿಸಿದೆ. ಆದಾಗ್ಯೂ ದಿನಾಂಕ:25.08.2025ಕ್ಕೆ ಇರುವಂತೆ ರಾಜ್ಯದಲ್ಲಿ ಒಟ್ಟು 4,54,00,838 ಪಡಿತರ ಫಲಾನುಭವಿಗಳಿದ್ದು ಕೇಂದ್ರ ಸರ್ಕಾರವು ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಫಲಾನುಭವಿಗಳಿರುತ್ತಾರೆ.
ಮೇಲೆ ಓದಲಾದ ಕ್ರಮ ಸಂಖ್ಯೆ (4)ರಲ್ಲಿನ ಆರ್ಥಿಕ ಇಲಾಖೆಯ ದಿನಾಂಕ:16.09.2023 ರ ಹಿಂಬರಹದಲ್ಲಿ ಈ ಕೆಳಕಂಡಂತೆ ಅಭಿಪ್ರಾಯಿಸಲಾಗಿದೆ.
“ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ. ಹಣಕಾಸು ಇಲಾಖೆಯು ಅಸ್ತಿತ್ವದಲ್ಲಿರುವ 2.96 PHH ಅರ್ಜಿಗಳನ್ನು ಈ ಕೆಳಗಿನ ಷರತ್ತುಗಳಿಗೆ ಒಳಪಟ್ಟು ಪ್ರಕ್ರಿಯೆಗೊಳಿಸಲು ಸಮ್ಮತಿಸುತ್ತದೆ.
1. ಹೊಸ ಪಡಿತರ ಚೀಟಿಗಳಿಗಾಗಿ ಅಸ್ತಿತ್ವದಲ್ಲಿರುವ 2.96 ಲಕ್ಷ ಅರ್ಜಿಗಳ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಯಾವುದೇ ಹೊಸ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
2. ಹಣಕಾಸಿನ ನಿರ್ಬಂಧಗಳನ್ನು ಪರಿಗಣಿಸಿ, ಎಪಿಎಲ್ ಕಾರ್ಡ್ಗಳಿಗಾಗಿ ಯಾವುದೇ ಹೊಸ ಅಥವಾ ಅಸ್ತಿತ್ವದಲ್ಲಿರುವ ಅರ್ಜಿಗಳನ್ನು ಈಗ ಪ್ರಕ್ರಿಯೆಗೊಳಿಸಲು ಸಾಧ್ಯವಿಲ್ಲ.
3. ಈ 2.96 ಲಕ್ಷ ಅರ್ಜಿಗಳ ಪ್ರಕ್ರಿಯೆಯ ನಂತರವೂ ಒಟ್ಟಾರೆ PHH/AAY ಕಾರ್ಡ್ಗಳ ಸಂಖ್ಯೆ ರಾಜ್ಯ ಮಟ್ಟದಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಸಂಖ್ಯೆಗಳನ್ನು ದಾಟಬಾರದು.
4. ಪ್ರಕ್ರಿಯೆ ಮುಗಿದ ನಂತರ, ADಯು NFSA ಮತ್ತು ರಾಜ್ಯ ವರ್ಗದ ಅಡಿಯಲ್ಲಿ PHH, NPHH ಮತ್ತು AAY ಕಾರ್ಡ್ಗಳ ಸಂಖ್ಯೆಯ ವಿವರಗಳನ್ನು FD ಗೆ ನೀಡಬೇಕು.
5. ಕಳೆದ ಆರು ತಿಂಗಳಿನಿಂದ ನಿರಂತರವಾಗಿ ಆಹಾರ ಧಾನ್ಯಗಳನ್ನು ಸಂಗ್ರಹಿಸದ ಪಡಿತರ ಚೀಟಿಗಳನ್ನು ಅಮಾನತುಗೊಳಿಸಲು ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯಬೇಕು. ಕಳೆದ ಆರು ತಿಂಗಳಿನಿಂದ ಪಡಿತರವನ್ನು ಪಡೆಯದ PHH ಪಡಿತರ ಚೀಟಿಗಳನ್ನು ಅಮಾನತುಗೊಳಿಸುವ ಪ್ರಕ್ರಿಯೆಯು 2.96 ಲಕ್ಷ ಅರ್ಜಿಗಳ ಪ್ರಕ್ರಿಯೆಯೊಂದಿಗೆ ಏಕಕಾಲದಲ್ಲಿ ಪ್ರಾರಂಭವಾಗಬೇಕು.
6. ಒಮ್ಮೆ ಅಮಾನತುಗೊಂಡ ನಂತರ, ಆ ಅಮಾನತುಗೊಂಡ ಪ್ರಕರಣಗಳನ್ನು ರದ್ದುಗೊಳಿಸಲು, ತಹಶೀಲ್ದಾರ್ ಅವರ ಸ್ಥಳ ಪರಿಶೀಲನೆ ಮತ್ತು ದಾಖಲೆ ಪರಿಶೀಲನೆಯ ಆಧಾರದ ಮೇಲೆ ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಡಿಡಿ ಅನುಮೋದನೆಯ ನಂತರ ಮಾತ್ರ ಮಾಡಬಹುದು. ಅಮಾನತುಗೊಂಡ ಪ್ರಕರಣಗಳ ಮಾಹಿತಿ ಮತ್ತು ರದ್ದುಗೊಂಡ ಪ್ರಕರಣಗಳ ಸಂಖ್ಯೆಯನ್ನು ಎಫ್ಡಿ ಜೊತೆ ಹಂಚಿಕೊಳ್ಳಬೇಕು.
ಈ ಹಿನ್ನೆಲೆಯಲ್ಲಿ ಪ್ರಸ್ತುತ ರಾಜ್ಯದಲ್ಲಿರುವ ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿರುತ್ತದೆ. ಅನರ್ಹ ಪಡಿತರ ಚೀಟಿಗಳನ್ನು ಸಮರ್ಪಕವಾಗಿ ಪತ್ತೆ ಹಚ್ಚಿ ಸದರಿ ಅನರ್ಹ ಆದ್ಯತಾ ಪಡಿತರ ಚೀಟಿಗಳನ್ನು ಆದ್ಯತೇತರ ಪಡಿತರ ಚೀಟಿಗಳನ್ನಾಗಿ ಮಾರ್ಪಡಿಸಿದಲ್ಲಿ ಅಷ್ಟೇ ಪ್ರಮಾಣದ ಆದ್ಯತಾ ಪಡಿತರ ಚೀಟಿಗಳನ್ನು (PHH) ಬಡತನ ರೇಖೆಗಿಂತ ಕೆಳಗಿರುವ ಅರ್ಹ ನಾಗರಿಕರಿಗೆ ವಿತರಿಸಬಹುದಾಗಿದೆ. ಆದ್ದರಿಂದ ಅನರ್ಹ ಪಡಿತರ ಚೀಟಿಗಳನ್ನು ಪತ್ತೆಹಚ್ಚಿ ಸದರಿ ಅನರ್ಹ ಪಡಿತರ ಚೀಟಿಗಳನ್ನು ಆದ್ಯತೇತರ ಪಡಿತರ ಚೀಟಿಗಳನ್ನಾಗಿ (NPHH) ಪರಿವರ್ತಿಸುವುದು ಸಮಂಜಸವಾಗಿರುತ್ತದೆ.
ಕೇಂದ್ರ ಸರ್ಕಾರವು ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಪಡಿತರ ಚೀಟಿಗಳಲ್ಲಿ ಈ ಕೆಳಕಂಡ ಪಡಿತರ ಚೀಟಿಗಳನ್ನು ಅನರ್ಹ ಪಡಿತರ ಚೀಟಿಗಳೆಂದು ಗುರುತಿಸಿ ಮಾಹಿತಿಯನ್ನು ಹಂಚಿಕೊಂಡಿರುತ್ತದೆ. ವಿವರ ಈ ಕೆಳಕಂಡಂತಿದೆ.










