ಬೆಂಗಳೂರು: ಶಾಸಕರುಗಳಿಗೆ ಆಪ್ತ ಸಹಾಯಕರನ್ನು ನಿಯೋಜನೆ, ಒಪ್ಪಂದ ಇಲ್ಲವೇ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಬಹುದಾಗಿದೆ. ಹಾಗಾದ್ರೆ ಶಾಸಕರ ಪಿಎ ನೇಮಕ ಮಾಡಿಕೊಳ್ಳೋದಕ್ಕೆ ಇರುವಂತ ನಿಯಮಗಳು ಏನು ಎನ್ನುವ ಬಗ್ಗೆ ಮಾಹಿತಿ ಮುಂದಿದೆ ಓದಿ.
ವಿಧಾನಸಭೆಯ ಸದಸ್ಯರುಗಳ ಆಪ್ತ ಸಹಾಯಕರುಗಳ ವೇತನವನ್ನು ಸೆಳೆಯುವ ಮತ್ತು ಬಟವಾಡೆ ಮಾಡುವ ಅಧಿಕಾರವನ್ನು ವಿಧಾನಸಭೆ ಕಾರ್ಯದರ್ಶಿಗಳಿಗೆ ಹಂಚಿಕೆ ಮಾಡಿ ಸದರಿಯವರನ್ನು ನಿಯಂತ್ರಣ ಪ್ರಾಧಿಕಾರಿಯನ್ನಾಗಿ ನೇಮಕ ಮಾಡಲಾಗಿರುತ್ತದೆ. ಶಾಸಕರುಗಳ ಆಪ್ತ ಸಹಾಯಕರುಗಳನ್ನು ನಿಯೋಜನೆ/ಒಪ್ಪಂದ/ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸರ್ಕಾರವು ಅನೇಕ ಮಾರ್ಗಸೂಚಿಗಳನ್ನು ಆಗಿಂದ್ದಾಗ್ಗೆ ಹೊರಡಿಸಿದ್ದು, ಈ ಬಗ್ಗೆ ಮೇಲೆ ಉಲ್ಲೇಖಿಸಿರುವ ಆದೇಶಗಳು ಪ್ರಮುಖವಾಗಿವೆ.
ಸದರಿ ಆದೇಶಗಳನ್ನು ಕ್ರೂಢೀಕರಿಸಿ ನಿಯೋಜನೆ/ಒಪ್ಪಂದ/ಗುತ್ತಿಗೆ ಆಧಾರದ ಮೇಲೆ ಮಾನ್ಯ ಶಾಸಕರುಗಳು ಇಬ್ಬರು ಆಪ್ತ ಸಹಾಯಕರುಗಳನ್ನು ಮಾತ್ರ ನೇಮಿಸಿಕೊಳ್ಳುವುದಕ್ಕೆ ಅವಕಾಶವಿದ್ದು, ಆ ಸಂಬಂಧ ಪ್ರಸ್ತಾವನೆಗಳನ್ನು ತ್ವರಿತವಾಗಿ ಪರಿಶೀಲಿಸಿ ಸೂಕ್ತ ಆದೇಶ ಹೊರಡಿಸಲು ಅನುವಾಗುವಂತೆ ಕೆಳಕಂಡ ಮಾರ್ಗಸೂಚಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹೊರಡಿಸಲಾಗಿದೆ.
ನಿಯೋಜನೆ/ಒಪ್ಪಂದದ ಸಿಬ್ಬಂದಿಗೆ ಸಂಬಂಧಿಸಿದಂತೆ:
1. ಉಲ್ಲೇಖಿತ ಆದೇಶಗಳಲ್ಲಿ ಕಲ್ಪಿಸಲಾಗಿರುವ ಅವಕಾಶದಂತೆ ವಿಧಾನಸಭೆಯ ಮಾನ್ಯ ಸದಸ್ಯರುಗಳು ಕಂದಾಯ, ಆರೋಗ್ಯ, ಶಿಕ್ಷಣ, ಪೊಲೀಸ್ ಇಲಾಖೆಗಳ ತಾಂತ್ರಿಕ ಸಿಬ್ಬಂದಿಗಳು ಹಾಗೂ ವಾಣಿಜ್ಯ ತೆರಿಗೆ, ಅಬಕಾರಿ, ರಾಜ್ಯ ಲೆಕ್ಕಪತ್ರ ಮತ್ತು ಖಜಾನೆ ಇಲಾಖೆಗಳ ಸಿಬ್ಬಂದಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಇಲಾಖೆಗಳ ‘ಸಿ’ ವೃಂದದ ಸಿಬ್ಬಂದಿಗಳನ್ನು ಹಾಗೂ ಮಂಡ೪/ನಿಗಮ:ಸ್ಥಳೀಯ ಸಂಸ್ಥೆಗಳ/ಸ್ವಾಯತ್ತ ಸಂಸ್ಥೆಗಳ/ಶಾಸನಬದ್ಧ ಸಂಸ್ಥೆಗಳ ‘ಸಿ’ ವೃಂದದ ನೌಕರರನ್ನು ತಮ್ಮ ಆಪ್ತ ಸಹಾಯಕರನ್ನಾಗಿ ನೇಮಿಸಿಕೊಳ್ಳಬಹುದಾಗಿದೆ.
2. ತಮ್ಮ ಆಪ್ತ ಸಹಾಯಕರನ್ನು ನಿಯೋಜನೆಯ ಮೇರೆಗೆ ನೇಮಿಸಿಕೊಳ್ಳುವ ಸಮಯದಲ್ಲಿ ಆಪ್ತ ೧ ಸಹಾಯಕರಿಗೆ ಹೆಚ್.ಆರ್.ಎ ದರಗಳನ್ನು ನಿಗದಿ ಮಾಡುವ ಸಲುವಾಗಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ/ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುವ ಆಪ್ತ ಸಹಾಯಕರು ಎಂದು ಮಾನ್ಯ ಶಾಸಕರು ತಮ್ಮ ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸತಕ್ಕದ್ದು.
3. ಮಾನ್ಯ ಶಾಸಕರು ತಮ್ಮ ಆಪ್ತ ಸಹಾಯಕರಾಗಿ ಪರೀಕ್ಷಾರ್ಥ ಅವಧಿ (Probationary Period) ಯಲ್ಲಿರುವ ‘C’ ಗುಂಪಿನ ಸರ್ಕಾರಿ ನೌಕರರನ್ನು ಹಾಗೂ ‘A’ ಮತ್ತು ‘B’ ಗುಂಪಿನ ಅಧಿಕಾರಿಯವರನ್ನು ನಿಯೋಜನೆ ಮೇರೆಗೆ ನೇಮಿಸಿಕೊಳ್ಳಲು ಸರ್ಕಾರಿ ಅವಕಾಶವಿರುವುದಿಲ್ಲ.
4. ನಿಯೋಜನೆ/ಒಪ್ಪಂದದ ಆಧಾರದ ಮೇಲೆ ಮಾನ್ಯ ಶಾಸಕರುಗಳ ಆಪ್ತ ಸಹಾಯಕರುಗಳಾಗಿ ಕಾರ್ಯನಿರ್ವಹಿಸುತ್ತಿರುವ ನೌಕರರುಗಳು ಅವರ ಕಾರ್ಯನಿರ್ವಹಣಾ ವರದಿಯನ್ನು ಅವರ ಮಾತೃ ಇಲಾಖೆಗೆ ಕಳುಹಿಸಲು ಅನುವಾಗುವಂತೆ ಮಾನ್ಯ ಶಾಸಕರು ದೃಢೀಕರಿಸಿರುವ ಪತ್ರದೊಂದಿಗೆ ಲಗತ್ತಿಸಿ ಈ ಸಚಿವಾಲಯಕ್ಕೆ ಸಲ್ಲಿಸತಕ್ಕದ್ದು.
5. ನಿಯೋಜನೆ ಆಧಾರದ ಮೇಲೆ ಮಾನ್ಯ ಶಾಸಕರುಗಳ ಆಪ್ತ ಸಹಾಯಕರುಗಳಾಗಿ ನೇಮಕಗೊಂಡು ಕಾರ್ಯನಿರ್ವಹಿಸುತ್ತಿರುವ ನೌಕರರುಗಳು ತಮ್ಮ ಆಸ್ತಿ ಮತ್ತು ಹೊಣೆಗಾರಿಕೆ ಪಟ್ಟಿಯನ್ನು ಅವರವರ ಮಾತೃ ಇಲಾಖೆಗೆ ಸಲ್ಲಿಸಲು ಅವರೇ ಸ್ವತಃ ಜವಾಬ್ದಾರರಾಗಿರುತ್ತಾರೆ.
6. ನಿಯೋಜನೆ/ಒಪ್ಪಂದದ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಆಪ್ತ ಸಹಾಯಕರು ಪದೋನ್ನತಿ ಹೊಂದಿದಲ್ಲಿ, ಸಚಿವಾಲಯಕ್ಕೆ ಕೂಡಲೇ ಮಾಹಿತಿಯನ್ನು ಒದಗಿಸಿ, ಆಪ್ತ ಸಹಾಯಕರ ಹುದ್ದೆಯಿಂದ ಬಿಡುಗಡೆಗೊಂಡು ತದನಂತರ ಮಾತ್ರ ಇಲಾಖೆಯಲ್ಲಿ ಪದೋನ್ನತಿ ಹೊಂದಿದ ಹುದ್ದೆಯ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳತಕ್ಕದ್ದು.
7. ಮಾನ್ಯ ಶಾಸಕರು ತಮ್ಮ ಆಪ್ತ ಸಹಾಯಕರನ್ನು ಬದಲಾವಣೆ ಮಾಡಲು ಇಚ್ಚಿಸಿದ ಪಕ್ಷದಲ್ಲಿ, ಬಿಡುಗಡೆ ಮಾಡಬೇಕಾದ ದಿನಾಂಕದ 15 ದಿನಗಳು ಮುಂಚಿತವಾಗಿ ಪತ್ರವನ್ನು ಈ ಸಚಿವಾಲಯಕ್ಕೆ ಸಲ್ಲಿಸುವುದು ಹಾಗೂ ಬಿಡುಗಡೆಗೊಳ್ಳುವ ಆಪ್ತ ಸಹಾಯಕರು ಕಡ್ಡಾಯವಾಗಿ ತಮ್ಮ ಗುರುತಿನ ಚೀಟಿಯನ್ನು ಕಾರ್ಯಕಾರಿ ಶಾಖೆಗೆ ಹಿಂದಿರುಗಿಸುವುದು. ತಪ್ಪಿದ್ದಲ್ಲಿ ವೇತನವನ್ನು ತಡೆಹಿಡಿಯಲಾಗುವುದು.
ಗುತ್ತಿಗೆ ಸಿಬ್ಬಂದಿಗೆ ಸಂಬಂಧಿಸಿದಂತೆ:
1. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(ಆಡಳಿತ)ಯು ಗುತ್ತಿಗೆ ಆಧಾರದ ನೇಮಕಾತಿ ಬಗ್ಗೆ ಕಾಲಕಾಲಕ್ಕೆ ವಿಧಿಸುವ ಷರತ್ತು ಮತ್ತು ನಿಬಂಧನೆಗಳಿಗನುಸಾರವಾಗಿ ಅದೇ ನಿಮಿತ್ತ ನೌಕರರು ಹಾಗೂ ಅರ್ಹ ಖಾಸಗಿ ವ್ಯಕ್ತಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಬಹುದಾಗಿದೆ.
2. ಮಾನ್ಯ ಸದಸ್ಯರುಗಳು ಗುತ್ತಿಗೆ ಆಧಾರದ ಮೇರೆಗೆ ಆಪ್ತ ಸಹಾಯಕರನ್ನು ನೇಮಿಸಿಕೊಳ್ಳಲು ಇಚ್ಛಿಸಿದ್ದಲ್ಲಿ, ಅಂತಹವರನ್ನು ನೇಮಿಸುವಂತೆ ಕೋರುವ ಪತ್ರದೊಂದಿಗೆ ಅವರ ವಿದ್ಯಾರ್ಹತೆ ಹಾಗೂ ಇತರೆ ದಾಖಲೆಗಳನ್ನು ದೃಢೀಕರಣದೊಂದಿಗೆ ಈ ಸಚಿವಾಲಯಕ್ಕೆ ಸಲ್ಲಿಸತಕ್ಕದ್ದು, ನೇಮಕಾತಿ ಆದೇಶ ಹೊರಡಿಸಿದ 07 ದಿನಗಳೊಳಗಾಗಿ ಮಾನ್ಯ ಶಾಸಕರ ಆಪ್ತ ಸಹಾಯಕರಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುವ ಮಾಹಿತಿಯನ್ನು ವೈದ್ಯಕೀಯ ತಪಾಸಣಾ ಪತ್ರ ಇತ್ಯಾದಿ ದಾಖಲೆಗಳೊಂದಿಗೆ ಅವರ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ 02 ಭಾವಚಿತ್ರಗಳನ್ನು ಕಚೇರಿಗೆ ತಪ್ಪದೇ ಸಲ್ಲಿಸತಕ್ಕದ್ದು, ಇಲ್ಲದಿದ್ದಲ್ಲಿ, ವರದಿ ಮಾಡಿಕೊಂಡಿರುವ ಮಾಹಿತಿಯು ಈ ಸಚಿವಾಲಯಕ್ಕೆ ತಲುಪಿದ ದಿನಾಂಕದಿಂದ ಮಾತ್ರ ವೇತನ ಪಾವತಿಗೆ ಪರಿಗಣಿಸಲಾಗುವುದು.
3. ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ಅಭ್ಯರ್ಥಿಯು ಭವಿಷ್ಯಾವರ್ತಿಯಾಗಿ ಹೆಚ್ಚಿನ ವಿದ್ಯಾರ್ಹತೆಯನ್ನು ಪಡೆದಲ್ಲಿ ಅಭ್ಯರ್ಥಿಯು ಈ ಸಚಿವಾಲಯಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿ ಪರಿಷ್ಕೃತ ನೇಮಕಾತಿ ಆದೇಶ ಹೊರಡಿಸಿದ ದಿನಾಂಕದಿಂದ ಮಾತ್ರ ಸಂಬಂಧಪಟ್ಟ ಹುದ್ದೆಯ ಕ್ರೋಢೀಕೃತ ಮಾಸಿಕ ವೇತನಕ್ಕೆ ಅರ್ಹರಾಗುತ್ತಾರೆ.
4. ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಹೊಂದುವ ಆಪ್ತ ಸಹಾಯಕರುಗಳಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ ಹೊರಡಿಸಿರುವ ಎಲ್ಲಾ ಮಾರ್ಗಸೂಚಿಗಳು ಅನ್ವಯವಾಗುತ್ತದೆ.
5. ಗುತ್ತಿಗೆ ಆಧಾರದ ಮೇಲೆ ಹಾಗೂ ನಿಯೋಜನೆಯ ಮೇಲೆ ಶಾಸಕರ ಆಪ್ತ ಸಹಾಯಕರಾಗಿ ನಿಯುಕ್ತಿಗೊಳ್ಳುವ/ನೇಮಕಗೊಳ್ಳುವ ನೌಕರರು ಅಧಿವೇಶನ ಭತ್ಯೆಗೆ ಅರ್ಹರಿರುವುದಿಲ್ಲ.
6. ಮಾನ್ಯ ಶಾಸಕರು ತಮ್ಮ ಆಪ್ತ ಸಹಾಯಕರಲ್ಲಿ ಒಬ್ಬರನ್ನು ಅನಿವಾರ್ಯ ಕಾರಣಗಳಿಂದ ಬಿಡುಗಡೆಗೊಳಿಸಿ ಬೇರೊಬ್ಬರನ್ನು ನೇಮಕ ಮಾಡುವಂತೆ ಕೋರಿಕೆ ಸಲ್ಲಿಸಿದ್ದಲ್ಲಿ, ಸದರಿ ಆಪ್ತ ಸಹಾಯಕರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದ ತರುವಾಯವೇ ಮತ್ತೊಬ್ಬ ಆಪ್ತ ಸಹಾಯಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಏತನ್ಮಧ್ಯೆ ನೇಮಕಾತಿಗೆ ಸಂಬಂಧಿಸಿದಂತೆ ಯಾವುದೇ ಒತ್ತಡ ತರತಕ್ಕದ್ದಲ್ಲ.
7. ಸಾಧ್ಯವಾದಷ್ಟು ಸರ್ಕಾರಿ ನಿವೃತ್ತ ಅಧಿಕಾರಿ/ನೌಕರರನ್ನು ಆಪ್ತ ಸಹಾಯಕರನ್ನಾಗಿ ನೇಮಿಸಿಕೊಳ್ಳುವುದನ್ನು ಕೈಬಿಡುವುದು.
8. ಮಾನ್ಯ ಶಾಸಕರುಗಳ ಆಪ್ತ ಸಹಾಯಕರುಗಳನ್ನು ಪೂರ್ವಾನ್ವಯವಾಗಿ ನೇಮಿಸುವಂತೆ ಸಲ್ಲಿಸುವ ಕೋರಿಕೆಗಳನ್ನು ಪರಿಗಣಿಸಲಾಗುವುದಿಲ್ಲ. ಆದರೆ ಮಾನ್ಯ ಸದಸ್ಯರುಗಳು ಆಪ್ತ ಸಹಾಯಕರುಗಳನ್ನು ಗುತ್ತಿಗೆ ಆಧಾರದ ಮೇರೆಗೆ ನೇಮಿಸುವಂತೆ ಕೋರಿಕೆ ಪತ್ರ ಸಲ್ಲಿಸುವ ದಿನಾಂಕದಿಂದ ಮಾತ್ರ ಪರಿಗಣಿಸಲಾಗುವುದು.




BIG NEWS: ಅಪರಾಧ ಚಟುವಟಿಕೆಯಲ್ಲಿ ‘ಪೊಲೀಸ’ರು ಭಾಗಿಯಾದರೆ ‘ಸೇವೆಯಿಂದ ವಜಾ’: ಗೃಹ ಸಚಿವ ಪರಮೇಶ್ವರ್ ಎಚ್ಚರಿಕೆ
ಈ ಹಂತ ಅನುಸರಿಸಿ ಬ್ಯಾಂಕ್ ಖಾತೆಯೊಂದಿಗೆ ಪ್ಯಾನ್ ನಂಬರ್ ಕುಳಿತಲ್ಲೇ ಲಿಂಕ್ ಮಾಡಿ | Link PAN With Bank Account








