ಬೆಂಗಳೂರು; ನಾಯಿ, ಹಾವು ಅಥವಾ ಇತರೆ ಪ್ರಾಣಿಗಳ ದಾಳಿ ಪ್ರಕರಣದಲ್ಲಿ ಮುಂಗಡ ಹಣಕ್ಕೆ ಒತ್ತಾಯಿಸದೇ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳಿಗೆ ರಾಜ್ಯ ಸರ್ಕಾರ ಖಡಕ್ ಸೂಚನೆ ನೀಡಿದೆ.
ಸರ್ವೋಚ್ಚ ನ್ಯಾಯಾಲಯವು ನಾಯಿ ಕಡಿತಕ್ಕೆ ಚಿಕಿತ್ಸೆ ನೀಡುವ ಬಗ್ಗೆ ಸರ್ಕಾರಿ- ಖಾಸಗಿ ಆಸ್ಪತ್ರೆಗಳು ಅನುಸರಿಸಬೇಕಾದ ಕ್ರಮಗಳಿಗೆ ಸಂಬಂಧಿಸಿದಂತೆ ಈ ನಿರ್ದೇಶನಗಳನ್ನು ನೀಡಿದೆ. ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ನಾಯಿ, ಹಾವು/ ಇತರೆ ಪ್ರಾಣಿಗಳ ದಾಳಿ ಪ್ರಕರಣಗಳಲ್ಲಿ ಮುಂಗಡ ಹಣಕ್ಕೆ ಒತ್ತಾಯಿಸದೆ ಚಿಕಿತ್ಸೆ ನೀಡಬೇಕು ಎಂದಿದೆ.
ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಎಲ್ಲಾ ಸಮಯದಲ್ಲೂ ಕಡ್ಡಾಯವಾಗಿ ಆ್ಯಂಟಿ-ರೇಬೀಸ್ ಲಸಿಕೆಗಳು ಮತ್ತು ಇಮ್ಯುನೊಗ್ಲೋಬ್ಯುಲಿನ್‌ನ ದಾಸ್ತಾನು (Stock) ಇರಿಸಿಕೊಳ್ಳಬೇಕು ಎಂಬುದಾಗಿ ತಿಳಿಸಿದೆ.
ರೇಬೀಸ್ಅನ್ನು ರಾಜ್ಯದಲ್ಲಿ ಅಧಿಸೂಚಿಸಲಾದ ರೋಗವೆಂದು ಘೋಷಿಸಿದ್ದು, ನಾಯಿ ಅಥವಾ ಇತರೆ ಯಾವುದೇ ಪ್ರಾಣಿ ಕಡಿತದ ಪ್ರಕರಣಗಳು ಆದಾಗ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು. ನಿಯಮದಂತೆ, ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಈಗಾಗಲೇ ಉಲ್ಲೇಖಿಸಿದಂತೆ, ಈಕ್ವೈನ್ ರೇಬೀಸ್ ಇಮ್ಯುನೊಗ್ಲೋಬ್ಯುಲಿನ್ ಮತ್ತು ಆ್ಯಂಟಿ-ರೇಬೀಸ್ ಲಸಿಕೆಯನ್ನು ಹಾಗೂ ಅಗತ್ಯ ಚಿಕಿತ್ಸೆಯನ್ನು ಉಚಿತ ನೀಡತಕ್ಕದ್ದು.
ಈ ರೀತಿಯ ಪ್ರಕರಣಗಳು ಬಂದಾಗ ಸರ್ಕಾರಿ/ಖಾಸಗಿ ಆಸ್ಪತ್ರೆಗಳು ತಕ್ಷಣದ ವೈದ್ಯಕೀಯ ಸ್ಕ್ರೀನಿಂಗ್ ಸೇವೆಗಳು ಮತ್ತು ಪ್ರಥಮ ಚಿಕಿತ್ಸೆಯನ್ನು ಉಚಿತವಾಗಿ ಹಾಗೂ ಸಮಯಪ್ರಜ್ಞೆಯಿಂದ ನಿರ್ವಹಿಸಬೇಕು. ಒಂದುವೇಳೆ, ಆಸ್ಪತ್ರೆಯಲ್ಲಿ ಸೌಲಭ್ಯಗಳ ಕೊರತೆ ಇದ್ದಲ್ಲಿ ರೋಗಿಗೆ ಪ್ರಾಣಾಪಾಯವಾಗದಂತೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚುವರಿ ಚಿಕಿತ್ಸಾ ಸೌಲಭ್ಯವಿರುವ ಆಸ್ಪತ್ರೆಗೆ ರವಾನಿಸಬೇಕು.
ನಾಯಿ/ಹಾವು ಕಡಿತದ ಸಂತ್ರಸ್ತರಿಗೆ ನೀಡಿದ ಚಿಕಿತ್ಸೆಗಾಗಿ ಆಸ್ಪತ್ರೆ ಶುಲ್ಕವನ್ನು ಸರ್ಕಾರ ಮರುಪಾವತಿ ಮಾಡುತ್ತದೆ. ಆದರೆ ಆಸ್ಪತ್ರೆಗಳು SAST ಯೋಜನೆಯಡಿಯಲ್ಲಿ ನಿಗದಿಪಡಿಸಿರುವ ಮೊತ್ತ ಪಡೆದು ಚಿಕಿತ್ಸೆ ನೀಡಲು ನಿರಾಕರಿಸಿದರೆ ಅಂತಹ ಆಸ್ಪತ್ರೆಗಳ ವಿರುದ್ಧ ದೂರು ದಾಖಲಿಸಲಾಗುವುದು.
ನಾಯಿ,ಹಾವು ಇತರೆ ಪ್ರಾಣಿಗಳ ಕಡಿತ ಪ್ರಕರಣಗಳಲ್ಲಿ ವೈದ್ಯಕೀಯ ನಿರ್ಲಕ್ಷ್ಯದಿಂದ ಸಾವುಗಳಾದರೆ, ಸಂಬಂಧಿತ ವೈದ್ಯಾಧಿಕಾರಿ/ಸಂಸ್ಥೆಯ ಮುಖ್ಯಸ್ಥರಿಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಅಥವಾ ಆಸ್ಪತ್ರೆಗಳ ಪರವಾನಗಿಯನ್ನು ರದ್ದುಗೊಳಿಸಲಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದೆ.








