ಬೆಂಗಳೂರು; ಮೆಕ್ಕೆಜೋಳ ಮತ್ತು ಹೆಸರುಕಾಳು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಪತ್ರದ ಬರೆದಿದ್ದಾರೆ. ಅವರು ಬರೆದ ಪತ್ರದಲ್ಲಿ ಏನಿದೆ ಅಂತ ಮುಂದಿದೆ ಓದಿ.
ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ, ಕರ್ನಾಟಕದಲ್ಲಿ ಮೆಕ್ಕೆ ಜೋಳ ಮತ್ತು ಹೆಸರುಕಾಳು (ಮೂಂಗ್) ಬೆಳೆಯ ಬೆಲೆಗಳ ತೀವ್ರ ಕುಸಿತದ ಬಗ್ಗೆ ಗಾಢ ಆತಂಕ ಮತ್ತು ತುರ್ತು ಗಮನ ಹರಿಸುವ ಉದ್ದೇಶದಿಂದ ನಿಮಗೆ ಈ ಪತ್ರ ಬರೆಯುತ್ತಿದ್ದೇನೆ. ಇವು ಲಕ್ಷಾಂತರ ರೈತರ ಜೀವನಕ್ಕೆ ಆಧಾರವಾಗಿರುವ ಬೆಳೆಗಳಾಗಿವೆ. ಭಾರತ ಸರ್ಕಾರ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆಗಿಂತ (MSP) ಗಣನೀಯವಾಗಿ ಕಡಿಮೆಯಾದ ಮಾರುಕಟ್ಟೆ ಬೆಲೆಗಳು ರೈತರಲ್ಲಿ ದೊಡ್ಡ ಆತಂಕವನ್ನು ಸೃಷ್ಟಿಸಿವೆ.
ಈ ಖಾರಿಫ್ ಋತುವಿನಲ್ಲಿ ಕರ್ನಾಟಕದಲ್ಲಿ 17.94 ಲಕ್ಷ ಹೆಕ್ಟೇರಿಗೂ ಅಧಿಕ ಪ್ರದೇಶದಲ್ಲಿ ಮೆಕ್ಕೆ ಜೋಳ ಹಾಗೂ ಹೆಸರುಕಾಳನ್ನು 4.16 ಲಕ್ಷ ಹೆಕ್ಟೇರಿಗೂ ಹೆಚ್ಚು ಪ್ರದೇಶದಲ್ಲಿ ಬೆಳೆಯಲಾಗಿದ್ದು, ರಾಜ್ಯದಲ್ಲಿ ಸುಮಾರು 54.74 ಲಕ್ಷ ಮೆಟ್ರಿಕ್ ಟನ್‌ಗಿಂತ ಹೆಚ್ಚು ಮೆಕ್ಕೆ ಜೋಳ ಮತ್ತು ಹೆಸರುಕಾಳು 1.983 ಲಕ್ಷ ಮೆಟ್ರಿಕ್ ಟನ್ ಗೂ ಹೆಚ್ಚು ಉತ್ಪಾದನೆಯಾಗುವ ನಿರೀಕ್ಷೆಯಿದೆ. ಇದು ಸಮೃದ್ಧಿಯ ಅವಕಾಶವಾಗಬೇಕಿತ್ತು, ಆದರೆ ಪ್ರಸ್ತುತ ಮಾರುಕಟ್ಟೆ ಸ್ಥಿತಿಯು ಇದನ್ನು ಸಂಕಷ್ಟವನ್ನಾಗಿ ಪರಿವರ್ತಿಸಿದೆ.
ಕೇಂದ್ರ ಸರ್ಕಾರವು ಮೆಕ್ಕೆ ಜೋಳಕ್ಕೆ ಪ್ರತಿ ಮೆಟ್ರಿಕ್ ಟನ್‌ಗೆ ₹2,400 ಹಾಗೂ ಹೆಸರುಕಾಳಿಗೆ ₹8,768 ಕನಿಷ್ಟ ಬೆಂಬಲ ಬೆಲೆ ಘೋಷಿಸಿದ್ದರೂ, ಕರ್ನಾಟಕದಲ್ಲಿ ಪ್ರಸ್ತುತ ಮಾರುಕಟ್ಟೆ ಬೆಲೆ ಜೋಳಕ್ಕೆ ₹1600-1800 ಮತ್ತು ಹೆಸರುಕಾಳಿಗೆ ₹5,400 ಆಸುಪಾಸಿನಲ್ಲಿರುವುದು ತೀವ್ರ ಮತ್ತು ಹಿಂದೆಂದೂ ಕಾಣದ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ, ಹಿಂದಿನ ಮೂರು ವರ್ಷಗಳ ಮಾದರಿ ಬೆಲೆಗಳು ಎಂಎಸ್‌ಪಿ ಗಿಂತ ಹೆಚ್ಚಿರುವಾಗ, ಈ ವರ್ಷ ಬಾಹ್ಯ ಒತ್ತಡಗಳ ಪರಿಣಾಮ ಮತ್ತು ಸರಬರಾಜು-ಬೇಡಿಕೆಗಳ ಅಸಮತೋಲನದಿಂದ ಬೆಲೆಗಳು ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿವೆ.
ಕರ್ನಾಟಕದಲ್ಲಿ ಸುಮಾರು 32 ಲಕ್ಷ ಮೆಟ್ರಿಕ್ ಟನ್ ಮೆಕ್ಕೆ ಜೋಳ ಮಾರುಕಟ್ಟೆಯಲ್ಲಿ ಹೆಚ್ಚುವರಿಯಾಗಿ ಲಭ್ಯವಿದ್ದು, ಸ್ಥಳೀಯ ಕೈಗಾರಿಕೆಗಳ ಬಳಕೆಯ ಸಾಮರ್ಥ್ಯಕ್ಕಿಂತ ಇದು ಹೆಚ್ಚಾಗಿದೆ. ಆದ್ದರಿಂದ ಭಾರತ ಸರ್ಕಾರವು ತಕ್ಷಣ ಮಧ್ಯಪ್ರವೇಶಿಸಿ, ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ವಿನಂತಿಸುತ್ತೇನೆ:
1. NAFED, FCI ಮತ್ತು NCCF ಗೆ ತಕ್ಷಣ ಎಂಎಸ್‌ಪಿ ದರದಲ್ಲಿ ಖರೀದಿ ಆರಂಭಿಸಲು ನಿರ್ದೇಶನ ನೀಡಬೇಕು
ಕರ್ನಾಟಕದಲ್ಲಿ ಮೆಕ್ಕೆ ಜೋಳವನ್ನು PDS ವಿತರಣೆಯಲ್ಲಿ ಸೇರಿಸದಿರುವುದರಿಂದ, FCI, NAFED ಹಾಗೂ ಇತರ ಖರೀದಿ ಸಂಸ್ಥೆಗಳು ತಕ್ಷಣ ಬೆಲೆ ಬೆಂಬಲ ಯೋಜನೆ ಅಥವಾ ಸೂಕ್ತ ಮಾರುಕಟ್ಟೆ ಹಸ್ತಕ್ಷೇಪ ಯೋಜನೆಯಡಿ ಮೆಕ್ಕೆ ಜೋಳ ಮತ್ತು ಹೆಸರುಕಾಳನ್ನು ಎಂಎಸ್‌ಪಿ ದರದಲ್ಲಿ ಖರೀದಿಸಲು ಆದೇಶಿಸಬೇಕು.
2. ಎಥೆನಾಲ್ ಪೂರೈಕೆಯ ಇಡಿ ವ್ಯವಸ್ಥೆಯಲ್ಲಿ ಕರ್ನಾಟಕದ ರೈತರ ನ್ಯಾಯಯುತ ಭಾಗವಹಿಸುವಿಕೆಯನ್ನು ಖಾತ್ರಿಪಡಿಸಿ
ಮೆಕ್ಕೆ ಜೋಳದಿಂದ ಉತ್ಪಾದಿತ ಎಥೆನಾಲ್‌ಗೆ ಮೂಲ ದರ ಲೀಟರ್‌ಗೆ ₹66.07 ಇದ್ದು, ಮೆಕ್ಕೆ ಜೋಳದಿಂದ ಪಡೆದ ಎಥೆನಾಲ್‌ಗೆ ಲೀಟರ್‌ಗೆ ₹5.79 (GST ಹೊರತುಪಡಿಸಿ) ಹೆಚ್ಚುವರಿ ಪ್ರೋತ್ಸಾಹಧನ ನೀಡಲಾಗುತ್ತಿದೆ.
ಆದರೆ ಕರ್ನಾಟಕದ ಅನೇಕ ಎಥೆನಾಲ್ ಘಟಕಗಳು ರೈತರನ್ನು ಬಿಟ್ಟು ಮಧ್ಯವರ್ತಿಗಳಿಂದ ಮತ್ತು ವ್ಯಾಪಾರಿಗಳಿಂದ ಮೆಕ್ಕೆ ಜೋಳ ಖರೀದಿಸುತ್ತಿವೆ. ಇದು ಎಂಎಸ್‌ಪಿ ಮತ್ತು ಕೇಂದ್ರ ಸರ್ಕಾರದ ಪ್ರೋತ್ಸಾಹಧನ ಉದ್ದೇಶವನ್ನೇ ವಿಫಲಗೊಳಿಸುತ್ತದೆ.
ಎಥೆನಾಲ್ ಘಟಕಗಳು ರೈತರಿಂದ ಅಥವಾ ರೈತ ಉತ್ಪಾದಕ ಸಂಘಗಳಿಂದ (FPO) ನೇರವಾಗಿ ಮೆಕ್ಕೆ ಜೋಳ ಖರೀದಿಸುವಂತೆ ಕೇಂದ್ರ ಸರ್ಕಾರವು ಆದೇಶಿಸಬೇಕು. ನೇರ ಖರೀದಿ ಖಾತ್ರಿಗೊಳ್ಳದಿದ್ದಲ್ಲಿ, ರೈತರಿಗೆ ಪ್ರೋತ್ಸಾಹಧನ ತಲುಪದಿದ್ದ ಪಕ್ಷದಲ್ಲಿ ಎಥೆನಾಲ್ ಉತ್ಪಾದಕರಿಗೆ ನೀಡುತ್ತಿರುವ ಪ್ರೋತ್ಸಾಹಧನವನ್ನು ಮರುಪರಿಶೀಲಿಸಬೇಕು.
3. ಕರ್ನಾಟಕಕ್ಕೆ ಎಥೆನಾಲ್ ಹಂಚಿಕೆ ಪ್ರಮಾಣವನ್ನು ಹೆಚ್ಚಿಸಿ
ಕರ್ನಾಟಕದಲ್ಲಿ ಮೆಕ್ಕೆ ಜೋಳದ ಉತ್ಪಾದನೆ ಗರಿಷ್ಠ ಪ್ರಮಾಣದಲ್ಲಿದ್ದು, ಸುಮಾರು 272 ಕೋಟಿ ಲೀ. ಡಿಸ್ಟಿಲರಿ ಸಾಮರ್ಥ್ಯ ಹೊಂದಿದೆ. ಹಾಗಾಗಿ ಎಥೆನಾಲ್ ಉತ್ಪಾದನೆಗೆ ಅಧಿಕ ಪ್ರಮಾಣದ ಮೆಕ್ಕೆ ಜೋಳದ ಉತ್ಪಾದನೆಯು ತಕ್ಕುದಾಗಿದೆ.
2025-26ರ ಎಥೆನಾಲ್ ಟೆಂಡರ್ ಹಂಚಿಕೆಯ ಪ್ರಕಾರ ತೈಲ ಉತ್ಪಾದಕಾ ಕಂಪನಿಗಳು 1,050 ಕೋಟಿ ಲೀಟರ್ ಎಥೆನಾಲ್ ಉತ್ಪಾದಿಸಲು ಟೆಂಡರ್ ನೀಡಿವೆ. ಈ ಪೈಕಿ 758.6 ಕೋಟಿ ಲೀ. (72.45%) ಧಾನ್ಯಗಳ ಆಧಾರಿತ ಎಥೆನಾಲ್ ಉತ್ಪಾದನೆಗೆ ಹಂಚಿಕೆಯಾಗಿದ್ದು, ಇದರಲ್ಲಿ ಮೆಕ್ಕೆಜೋಳ ಒಂದರಿಂದಲೇ 478 ಕೋಟಿ ಲೀ. ಎಥೆನಾಲ್ ಉತ್ಪಾದಿಸಬೇಕಿದೆ. ಕರ್ನಾಟಕದಲ್ಲಿರುವ 49 ಘಟಕಗಳಿಂದ 272 ಕೋಟಿ ಲೀ. ಎಥೆನಾಲ್ ಉತ್ಪಾದಿಸುವ ಸಾಮರ್ಥ್ಯವಿದ್ದರೂ ನಮ್ಮ ರಾಜ್ಯಕ್ಕೆ ಅತ್ಯಂತ ಕಡಿಮೆ ಹಂಚಿಕೆ ಮಾಡಲಾಗಿದೆ. ರಾಜ್ಯದ ಮೆಕ್ಕೆಜೋಳದ ಉತ್ಪಾದನಾ ಸಾಮರ್ಥ್ಯ ಹೆಚ್ಚಿದ್ದು, ನಮ್ಮ ಎಥೆನಾಲ್ ಉತ್ಪಾದನಾ ಸಾಮರ್ಥ್ಯಕ್ಕೆ ಹೋಲಿಸಿದರೆ ಅತ್ಯಂತ ಕನಿಷ್ಠ ಪ್ರಮಾಣವಾಗಿದೆ.
ಧಾನ್ಯ ಆಧಾರಿತ ಎಥೆನಾಲ್ ಉತ್ಪಾದನೆಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಪ್ರಮುಖವಾಗಿರುವುದರಿಂದ ಹಂಚಿಕೆಯ ವ್ಯತ್ಯಾಸವು ಅತ್ಯಂತ ಕಳವಳಕಾರಿಯಾಗಿದೆ. ಪ್ರಸಕ್ತ ವರ್ಷದ ವಲಯವಾರು ಹಂಚಿಕೆ ವ್ಯವಸ್ಥೆಯು ಕರ್ನಾಟಕದಂತಹ ಗರಿಷ್ಠ ಉತ್ಪದನಾ ಸಾಮರ್ಥ್ಯದ ರಾಜ್ಯಕ್ಕೆ ಅನನುಕೂಲವಾಗಿದೆ. ನಮ್ಮ ಉತ್ಪಾದನಾ ಸಾಮರ್ಥ್ಯಕ್ಕೆ ತಕ್ಕಂತೆ ಹೆಚ್ಚಿನ ಪ್ರಮಾಣದ ಧಾನ್ಯ ಆಧಾರಿತ ಎಥೆನಾಲ್ ಉತ್ಪಾದನೆಯ ಹಂಚಿಕೆಯನ್ನು ಪಡೆಯಲು ಕರ್ನಾಟಕವು ಯೋಗ್ಯವಾಗಿದೆ. ಇದರಿಂದ ಬೇಡಿಕೆಯ ಎಂಎಸ್‌ಪಿ ಬೆಲೆಯನ್ನು ಸರಿದೂಗಿಸಲು ಮತ್ತು ತೆರೆದ ಮಾರುಕಟ್ಟೆಗಳಲ್ಲಿ ರೈತರ ಹಿತಾಸಕ್ತಿಯನ್ನು ಕಾಪಾಡಲು ಸಾಧ್ಯವಾಗುತ್ತದೆ.
4. ಮೆಕ್ಕೆಜೋಳ ಆಮದು ಕಡಿಮೆ ಮಾಡಿ
ಕಳೆದ ವರ್ಷ ಮಯನ್ಮಾರ್, ಉಕ್ರೇನ್ ಮತ್ತಿತರ ರಾಷ್ಟ್ರಗಳಿಂದ ಹೆಚ್ಚಾಗಿ ಮೆಕ್ಕೆಜೋಳವನ್ನು ಆಮದು ಮಾಡಿಕೊಂಡಿದ್ದರಿಂದ ದೇಶದ ರೈತರಿಗೆ ದೊಡ್ಡ ಹೊಡೆತ ಬಿದ್ದಿದೆ. ಇಂತಹ ಆಮದು ಪ್ರಕ್ರಿಯೆಯಿಂದ ದೇಶಿಯವಾಗಿ ಬೆಲೆ ಕುಸಿಯಲು ಕಾರಣವಾಗಿದೆ ಮತ್ತು ರೈತರ ನ್ಯಾಯಯುತ ಆದಾಯಕ್ಕೆ ಬರೆ ಎಳೆದಂತಾಗಿದೆ. ಹಾಗಾಗಿ ಮೆಕ್ಕೆಜೋಳವನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ನಾನು ಕೇಂದ್ರ ಸರ್ಕಾರವನ್ನು ಬಲವಾಗಿ ಒತ್ತಾಯಿಸುತ್ತಿದ್ದೇನೆ. ಇದರಿಂದ ವಿಶ್ವದಲ್ಲೇ ಅತ್ಯುತ್ತಮ ಮೆಕ್ಕೆಜೋಳ ಉತ್ಪಾದಿಸುವ ಭಾರತದ ರೈತರಿಗೆ ನ್ಯಾಯ ಒದಗಿಸಿದಂತಾಗುತ್ತದೆ.
5. ಹೆಸರುಕಾಳು ಖರೀದಿಗೆ ಗುಣಮಟ್ಟದ ನಿಯಮಗಳಲ್ಲಿ ಸಡಿಲಿಕೆ
ಅನಿರೀಕ್ಷಿತ ಮಳೆಯಿಂದಾಗಿ ಕರ್ನಾಟಕದ ಹೆಸರುಕಾಳು ಬೆಳೆಯು ಕೆಲವು ಭಾಗದಲ್ಲಿ 6-10% ವರೆಗೆ ಬಣ್ಣ ಮಾಸಿದೆ. ಕೇಂದ್ರ ಸರ್ಕಾರದ FAQ ಗಳು MSP ಅಡಿ ಗರಿಷ್ಠ 4% ಬಣ್ಣ ಮಾಸಿದ್ದರೂ ಖರೀದಿಗೆ ಅವಕಾಶ ನೀಡಿದೆ, ನಮ್ಮ ಬೆಳೆ ಸ್ವಲ್ಪ ಹೆಚ್ಚು ಬಣ್ಣ ಮಾಸಿದ್ದರೂ ಆಹಾರ ಉದ್ದೇಶದ ಬಳಕೆಗೆ ಯೋಗ್ಯವಾಗಿದೆ. ಆದ್ದರಿಂದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಿಗೆ ನಿರ್ದೇಶನ ನೀಡಿ 10% ವರೆಗೆ ಬಣ್ಣ ಮಾಸಿರುವ ಹೆಸರುಕಾಳನ್ನು MSP ದರದಲ್ಲಿ ಖರೀದಿಸಲು ಅವಕಾಶ ನೀಡಬೇಕು. ಇದರಿಂದ ರೈತರು ತಮ್ಮ ನಿಯಂತ್ರಣದಲ್ಲಿ ಇಲ್ಲದ ಹವಾಮಾನ ವೈಪರಿತ್ಯಗಳು ಉಂಟುಮಾಡುವ ನಷ್ಟವನ್ನು ತಪ್ಪಿಸಿಕೊಳ್ಳಬಹುದಾಗಿದೆ.
ಕರ್ನಾಟಕದ ಪ್ರತಿಯೊಂದು ರೈತ ಕುಟುಂಬವು ಎಂಎಸ್‌ಪಿಯನ್ನು ಗೌರವಯುತ ಹಾಗೂ ನ್ಯಾಯಯುತ ಆದಾಯ ಎಂದು ಪರಿಗಣಿಸಿದೆ. ಇಂದು ಬೆಲೆಯು ಎಂಎಸ್‌ಪಿಗಿಂತ ಕೆಳಗೆ ಬಿದ್ದಾಗ ಮತ್ತು ಮಾರುಕಟ್ಟೆಗಳು ಅವರ ವಿರುದ್ಧ ನಿಂತಾಗ ತಕ್ಷಣ ಕೇಂದ್ರ ಸರ್ಕಾರವು ಮಧ್ಯ ಪ್ರವೇಶಿಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕು. ದೇಶದ ಆಹಾರ ಭದ್ರತೆಗೆ, ಎಥೆನಾಲ್ ಉತ್ಪಾದನೆಯ ಸಾಮರ್ಥ್ಯ ವಿಸ್ತರಿಸಲು ಮತ್ತು ಆರ್ಥಿಕ ಬೆಳವಣಿಗೆಗೆ ಕರ್ನಾಟಕದ ರೈತರು ಗರಿಷ್ಠ ಪ್ರಮಾಣದ ಕೊಡುಗೆಯನ್ನು ನೀಡುತ್ತಿದ್ದಾರೆ. ನ್ಯಾಯಯುತ ಬೆಲೆ ಮತ್ತು ಸಮಾನ ಎಥೆನಾಲ್ ಹಂಚಿಕೆಯು ರೈತರ ಹಕ್ಕು ಮಾತ್ರವಲ್ಲ, ಅದು ರಾಷ್ಟ್ರೀಯ ಜವಾಬ್ದಾರಿಯು ಹೌದು. ಸಂಕಷ್ಟದಲ್ಲಿರುವ ಕರ್ನಾಟಕದ ರೈತರ ನೆರವಿಗೆ ತಕ್ಷಣ ಧಾವಿಸಬೇಕು ಮತ್ತು ನಮ್ಮ ರಾಷ್ಟ್ರದ ಬೆನ್ನೆಲುಬು ಆಗಿರುವ ಕೃಷಿ ಕ್ಷೇತ್ರವನ್ನು ಶಕ್ತಿಯುತವಾಗಿಸಬೇಕು ಎಂದು ಸಿಎಂ ಸಿದ್ಧರಾಮಯ್ಯ ಒತ್ತಾಯಿಸಿದ್ದಾರೆ.








