ಶಿವಮೊಗ್ಗ: ಸಾಗರದ ಕಲ್ಮನೆ ಒಂದಿಲ್ಲೊಂದು ವಿಚಾರದಲ್ಲಿ ಸದಾ ಸುದ್ದಿಯಲ್ಲಿದೆ. ಕೆಲ ವರ್ಷಗಳ ಹಿಂದೆ ಕಲ್ಮನೆ ಸಹಕಾರ ಸಂಘದ ಹಗರಣದಿಂದ ಸುದ್ದಿಯಾಗಿತ್ತು. ಆ ಬಳಿಕ ಗ್ರಾಮ ಪಂಚಾಯ್ತಿ ನರೇಗಾ ಯೋಜನೆಗೆ ಹಗರಣದಿಂದ ಸದ್ದು ಮಾಡಿತ್ತು. ಇದೀಗ ರಾಜಕೀಯ ಜಿದ್ದಿಗೆ ಗೂಡು ಅಂಗಡಿ ಧ್ವಂಸದ ಮೂಲಕ ಮತ್ತೆ ಮುನ್ನೆಲೆಗೆ ಬಂದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದಿಂದ ಕೆಲವೇ ದೂರದಲ್ಲಿ ಕಲ್ಮನೆ ಗ್ರಾಮವಿದೆ. ಈ ಗ್ರಾಮವನ್ನು ಹಾದು ಸಿಗಂದೂರು ರಸ್ತೆ ಹೋಗುತ್ತದೆ. ಈ ರಸ್ತೆಯ ಒಂದು ಬದಿಯಲ್ಲಿ ಸುರೇಂದ್ರ ಶೆಟ್ಟಿ ಎಂಬುವರು ಗೂಡು ಅಂಗಡಿ ಇಟ್ಟುಕೊಂಡು ಅದರಲ್ಲಿ ಬಂದಂತ ಆದಾಯದಲ್ಲಿ ಜೀವನ, ಸಂಸಾರ ನಡೆಸುತ್ತಿದ್ದರು. ಅಂಗಡಿ ಅಂದಮೇಲೆ ಎಲ್ಲಾ ವರ್ಗದ ಜನರು ಬಂದು ಸೇರೋದು, ವಸ್ತು ಖರೀದಿಸೋದು ಮಾಮೂಲಿ. ಆದರೇ ಸುರೇಂದ್ರ ಶೆಟ್ಟಿ ಅಂಗಡಿಯಲ್ಲಿ ಹೆಚ್ಚು ಹೊತ್ತು ಕಳೆಯುತ್ತಿದ್ದದ್ದು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಎನ್ನಲಾಗುತ್ತಿದೆ. ಈ ಕಾರಣಕ್ಕೆ ಸುರೇಂದ್ರ ಶೆಟ್ಟಿ ಕಿರಾಣಿ ಅಂಗಡಿಯ ಮೇಲೆ ಬಿಜೆಪಿಗರ ಕಣ್ಣು ಬಿದ್ದಿದೆ ಎನ್ನಲಾಗುತ್ತಿದೆ.
ಮದ್ಯ ಮಾರಾಟವೆಂದು ನೆಪದಲ್ಲಿ ಗೂಡು ಅಂಗಡಿ ಧ್ವಂಸ
ರಾಜಕೀಯ ಜಿದ್ದಿಗೆ, ಕಾಂಗ್ರೆಸ್-ಬಿಜೆಪಿಗರ ಒಳ ಜಗಳದಲ್ಲಿ ಸುರೇಂದ್ರ ಶೆಟ್ಟಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. ಮದ್ಯ ರಾತ್ರಿಯವರೆಗೂ ಗೂಡು ಅಂಗಡಿಯಲ್ಲಿ ದಾರಿಹೋಕರು ಇದ್ದು, ಅನಧಿಕೃತ ತಾಣದಂತೆ ಎಂಬುದಾಗಿ ಕಲ್ಮನೆ ಗ್ರಾಮ ಪಂಚಾಯ್ತಿ ಸದಸ್ಯರ ಗಮನಕ್ಕೆ ಹೋಗುತ್ತದೆ. ಅಲ್ಲದೇ ಮದ್ಯ ಮಾರಾಟ ಮಾಡುತ್ತಿದ್ದಾರೆ. ಅದನ್ನು ನಿಲ್ಲಿಸುವಂತೆ ದೂರೊಂದು ಕಲ್ಮನೆ ಗ್ರಾಮ ಪಂಚಾಯ್ತಿಗೆ ಸಲ್ಲಿಕೆಯಾಗುತ್ತದೆ.
ಇದೇ ಸರಿಯಾದ ಟೈಂ ಎಂಬುದಾಗಿ ಕಲ್ಮನೆ ಗ್ರಾಮ ಪಂಚಾಯ್ತಿಯ ಸದಸ್ಯರನ್ನು ಒಳಗೊಂಡು, ಕಂದಾಯ ಅಧಿಕಾರಿಗಳು ಸೇರಿಕೊಂಡು ಇಡೀ ಗೂಡು ಅಂಗಡಿಯನ್ನು ರಾತ್ರೋ ರಾತ್ರಿ ಧ್ವಂಸಗೊಳಿಸಿದ್ದಾರೆ. ಸುರೇಂದ್ರ ಶೆಟ್ಟಿ ಹಾಕಿಕೊಂಡಿದ್ದಂತ ತಗಡು ಸೇರಿದಂತೆ ಜೋಪಡಿಯಂತೆ ಇದ್ದಂತ ಗೂಡು ಅಂಗಡಿಯನ್ನು ಕಿತ್ತು ಕೆಡವಲಾಗಿದೆ.
ದೂರು ಬಂದಿದ್ದೇನು.? ಕ್ರಮ ಕೈಗೊಳ್ಳಬೇಕಿದ್ದವರು ಯಾರು.?
ಕಲ್ಮನೆ ಗ್ರಾಮ ಪಂಚಾಯ್ತಿಗೆ ಚಿಪ್ಪಳಿ ಆದಿಶಕ್ತಿನಗರ ಗ್ರಾಮಸ್ಥರು, ತಮ್ಮ ಗ್ರಾಮದ ಲಿಂಗದಹಳ್ಳಿ ರೈಸ್ ಮಿಲ್ ಪಕ್ಕದಲ್ಲಿ ಹಾಗೂ ಕುಂಟುಗೋಡು ಬಸ್ ನಿಲ್ದಾಣದ ಪಕ್ಕದ ಕಿರಾಣಿ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದಾಗಿ ಮನವಿ ಮಾಡಲಾಗಿದೆ.
ಈ ಮನವಿಗೆ ಕಲ್ಮನೆ ಗ್ರಾಮ ಪಂಚಾಯ್ತಿಯವರು ಸಕಾರಾತ್ಮಕವಾಗೇ ಸ್ಪಂದಿಸಿದ್ದು, ದೂರರ್ಜಿಯನ್ನು ಸೂಕ್ತ ಕ್ರಮಕ್ಕಾಗಿ ಸಾಗರ ತಹಶೀಲ್ದಾರ್ ಅವರಿಗೆ ವರ್ಗಾವಣೆ ಮಾಡಿದ್ದಾರೆ. ತಾಲ್ಲೂಕು ಆಡಳಿತಕ್ಕೆ ಅರ್ಜಿ ವರ್ಗಾವಣೆಗೊಂಡ ನಂತ್ರ, ಕಂದಾಯ ಇಲಾಖೆಯಿಂದ ಕ್ರಮ ಕೈಗೊಳ್ಳಬೇಕಿತ್ತು. ಅದನ್ನು ಬಿಟ್ಟು ಗ್ರಾಮ ಪಂಚಾಯ್ತಿ ಸದಸ್ಯರೇ ನಾ ಮುಂದು, ತಾ ಮುಂದು ಎನ್ನುವಂತೆ ಗೂಡು ಅಂಗಡಿ ಧ್ವಂಸಗೊಳಿಸಿದ್ದಾರೆ.
ಗೂಡು ಅಂಗಡಿ ಕಟ್ಟಿದ್ದು ಅಕ್ರಮ, ಮದ್ಯ ಮಾರಾಟ ತಪ್ಪು ಹಾಗಾಂತ ಕಾನೂನು ಪಾಲನೆ ಏಕಿಲ್ಲ?
ಕಳೆದ ಕೆಲ ವರ್ಷಗಳಿಂದ ಸುರೇಂದ್ರ ಶೆಟ್ಟಿ ಅವರಿಗೆ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಗೂಡು ಅಂಗಡಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಹೀಗೆ ಗೂಡು ಅಂಗಡಿ ನಿರ್ಮಿಸುವ ವೇಳೆಯಲ್ಲೇ ಗ್ರಾಮ ಪಂಚಾಯ್ತಿಯಿಂದ ಅನುಮತಿ ಪಡೆಯೋದಕ್ಕೆ ಸೂಚಿಸಬೇಕಿತ್ತು. ಕಂದಾಯ ಇಲಾಖೆಯಿಂದ ಸರ್ಕಾರಿ ಜಾಗವಾಗಿದೆ. ಅತಿಕ್ರಮಿಸಿ ಅಂಗಡಿ ಹಾಕಿಕೊಳ್ಳುವುದು ತಪ್ಪು ಎಂಬುದಾಗಿ ಎಚ್ಚರಿಸಬೇಕಿತ್ತು. ಆದರೇ ಇದ್ಯಾವುದನ್ನೂ ಮಾಡದೇ ಸುರೇಂದ್ರ ಶೆಟ್ಟಿ ಗೂಡು ಅಂಗಡಿ ಕಟ್ಟಿಕೊಂಡು, ಜೀವನಕ್ಕೊಂದು ದಾರಿ ಮಾಡಿಕೊಂಡಿದ್ದಾಗ ಏಕಾಏಕಿ ಕಿತ್ತು ಹಾಕಿದ್ದು ಎಷ್ಟು ಸರಿ ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ.
ಇನ್ನೂ ಸುರೇಂದ್ರ ಶೆಟ್ಟಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರು ಎನ್ನುವ ಆರೋಪದ ಹಿನ್ನಲೆಯಲ್ಲಿ ಅಬಕಾರಿ ಇಲಾಖೆಗೆ ಸೂಚಿಸಿ, ರೈಡ್ ಮಾಡಿಸಿ ಕಾನೂನು ಕ್ರಮವನ್ನು ವಹಿಸಬೇಕಿತ್ತು. ಅದರಿಂದ ಸುರೇಂದ್ರ ಶೆಟ್ಟಿಗೆ ಕಾನೂನಿನ ಬಿಸಿ ಮುಟ್ಟಿಸುವಂತ ಕೆಲಸವನ್ನು ಮಾಡಬೇಕಿತ್ತು. ಆದರೇ ಅದ್ಯಾವುದನ್ನು ಕಲ್ಮನೆ ಗ್ರಾಮ ಪಂಚಾಯ್ತಿ ಸದಸ್ಯರು ಮಾಡದೇ ಇರುವುದು ಹಲವು ಅನುಮಾನಗಳಿಗೂ ಕಾರಣವಾಗಿದೆ.
ಕಲ್ಮನೆ ಗ್ರಾಮ ಪಂಚಾಯ್ತಿ ಮುಂದೆ ವಿಷವಿಡಿದು ಆತ್ಮಹತ್ಯೆ ಹೈಡ್ರಾಮಾ
ದೂರು ಸಲ್ಲಿಕೆಯಾದಾಗ, ದೂರರ್ಜಿ ಬಂದಾಗ, ಸುರೇಂದ್ರ ಶೆಟ್ಟಿಗೆ ಕಲ್ಮನೆ ಗ್ರಾಮ ಪಂಚಾಯ್ತಿ ಸದಸ್ಯರು, ಕಂದಾಯ ಇಲಾಖೆಯವರು ಗೂಡು ಅಂಗಡಿ ತೆರವಿಗೆ ಮುನ್ನ ನೋಟಿಸ್ ನೀಡಬೇಕಿದ್ದಿದ್ದು ಕಾನೂನು ನಿಯಮ. ಆದರೇ ಇದ್ಯಾವುದನ್ನು ಪಾಲಿಸದ ಕಲ್ಮನೆ ಗ್ರಾಮ ಪಂಚಾಯ್ತಿ ಸದಸ್ಯರು, ವಿಎ ಸೇರಿಕೊಂಡು ಏಕಾಏಕಿ ಸುರೇಂದ್ರ ಶೆಟ್ಟಿ ಗೂಡು ಅಂಗಡಿಯನ್ನು ಕಿತ್ತು ಹಾಕಿದ್ದಾರೆ.
ಇದರಿಂದ ಕೋಪಗೊಂಡು, ಬೀದಿಗೆ ಬಿದ್ದಂತ ಸುರೇಂದ್ರ ಶೆಟ್ಟಿ ತಡರಾತ್ರಿಯಲ್ಲೇ ಕಲ್ಮನೆ ಗ್ರಾಮ ಪಂಚಾಯ್ತಿ ಮುಂದೆ ಕಾನೂನು ಮೀರಿದ ನಡೆಯನ್ನು ಹೋರಾಟದ ಮೂಲಕ ಖಂಡಿಸಿದ್ದಾರೆ. ಯಾವುದೇ ನೋಟಿಸ್ ನೀಡದೇ ಗೂಡು ಅಂಗಡಿ ಕಿತ್ತು ಹಾಕಿದ್ದು ಸರಿಯಲ್ಲ. ಮರು ನಿರ್ಮಿಸಿಕೊಡಿ, ಇಲ್ಲವೇ ಕಲ್ಮನೆ ಗ್ರಾಮ ಪಂಚಾಯ್ತಿ ಮುಂದೆಯೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೈಡ್ರಾಮಾವೇ ನಡೆಸಿದ್ದಾರೆ. ಈ ವೇಳೆಯಲ್ಲಿ ಅದೇ ಕಲ್ಮನೆ ಗ್ರಾಮ ಪಂಚಾಯ್ತಿಯ ಸದಸ್ಯರು ಸಮಾಧಾನಿಸಿ, ಮರು ನಿರ್ಮಾಣಕ್ಕೆ ಬಾಯಿ ಮಾತಿನಲ್ಲಿ ಹೇಳಿ ಕಳುಹಿಸಿದ್ದರು ಎನ್ನಲಾಗಿದೆ.
ಗ್ರಾಮ ಪಂಚಾಯ್ತಿ ಸದಸ್ಯರ ದೌರ್ಜನ್ಯದ ವಿರುದ್ಧ ಸಿಡಿದೆದ್ದ ಸುರೇಂದ್ರ ಶೆಟ್ಟಿ, ಪೊಲೀಸರಿಗೆ ದೂರು
ಯಾವುದೇ ನೋಟಿಸ್ ನೀಡದೇ ಏಕಾಏಕಿ ಗೂಡು ಅಂಗಡಿ ಕಿತ್ತು ಹಾಕಿದ್ದಕ್ಕೆ ಸುರೇಂದ್ರ ಶೆಟ್ಟಿ ಗ್ರಾಮ ಪಂಚಾಯ್ತಿ ಸದಸ್ಯರು, ವಿಎ ವಿರುದ್ಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ. ದೂರು ಅರ್ಜಿಯಲ್ಲಿ ನನ್ನ ಗೂಡು ಅಂಗಡಿಯನ್ನು ಕಲ್ಮನೆ ಗ್ರಾಮ ಪಂಚಾಯ್ತಿ ಸದಸ್ಯರು, ವಿಎ ಸಂಪೂರ್ಣ ನಾಶ ಮಾಡಿದ್ದಾರೆ. ಕೂಲಿ ಕೆಲಸ ಮಾಡಿ ಬಂದ ಹಣದಲ್ಲಿ ಗೂಡು ಅಂಗಡಿ ಕಟ್ಟಿಕೊಂಡು ಬದುಕು ಸಾಗಿಸುತ್ತಿದ್ದೆ. ಧ್ವಂಸ ಮಾಡಿದವರಿಂದಲೇ ಮರು ನಿರ್ಮಿಸಿಕೊಡಿಸಲು ಕೋರಿದ್ದರು. ಅಲ್ಲದೇ ನನಗೆ ಅವಾಚ್ಯ ಶಬ್ದಗಳಿಂದ ಬೈದು ಮಾನಸಿಕವಾಗಿ ಹಿಂಸೆ ನೀಡಿರುವುದಾಗಿಯೂ ಆರೋಪಿಸಿದ್ದಾರೆ.
ರಾಜಕೀಯ ಜಿದ್ದಾಜಿದ್ದಿಗೆ ಸುರೇಂದ್ರ ಶೆಟ್ಟಿ ಗೂಡು ಅಂಗಡಿ ಧ್ವಂಸ
ಅಂದಹಾಗೇ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ರಾಜಕೀಯ ಜಿದ್ದಾ ಜಿದ್ದಿನಿಂದಾಗಿ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುರೇಂದ್ರ ಶೆಟ್ಟಿ ಅವರ ಗೂಡು ಅಂಗಡಿ ಧ್ವಂಸಗೊಂಡಿದೆ ಎನ್ನಲಾಗುತ್ತಿದೆ. ಜೊತೆ ಜೊತೆಗೆ ಸುರೇಂದ್ರ ಶೆಟ್ಟಿ ತಮ್ಮ ಗೂಡು ಅಂಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದರೇ ಸಂಬಂಧ ಪಟ್ಟ ಇಲಾಖೆಯಿದೆ. ಅವರಿಗೆ ಕಲ್ಮನೆ ಗ್ರಾಮ ಪಂಚಾಯ್ತಿಯವರು ಮಾಹಿತಿ ನೀಡಿ, ಕಾನೂನು ಕ್ರಮವಹಿಸಬಹುದಾಗಿತ್ತು. ಆದರೇ ಅದ್ಯಾವುದನ್ನು ಮಾಡದೇ, ಸುರೇಂದ್ರ ಶೆಟ್ಟಿಗೆ ನೋಟಿಸ್ ನಂತಹ ಸೂಚನೆಯನ್ನು ನೀಡದೇ ಗೂಡು ಅಂಗಡಿಯನ್ನು ಧ್ವಂಸ ಮಾಡಿದ್ದು ಮಾತ್ರ ಎರಡು ಪ್ರಮುಖ ರಾಜಕೀಯ ಪಕ್ಷಗಳ ಜಿದ್ದಾಜಿದ್ದಿನಿಂದ ಎಂಬುದು ಕಲ್ಮನೆ ಗ್ರಾಮದ ಹಲವರ ಮಾತಾಗಿದೆ. ಒಟ್ಟಾರೆ ಇಲ್ಲಿ ಕಾನೂನು ಪಾಲಿಸಬೇಕಿದ್ದವರೇ ಕಾನೂನು ಕೈಗೆತ್ತಿಕೊಂಡು ಬಡವನೊಬ್ಬನ ಗೂಡು ಧ್ವಂಸಗೊಳಿಸಿದ್ದು ಎಷ್ಟು ಸರಿ ಎಂಬುದು ಜನರ ಪ್ರಶ್ನಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ಪರಪ್ಪನ ಅಗ್ರಹಾರ ಜೈಲಲ್ಲಿ ಶಾಸಕರಾದ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿ ಭೇಟಿ ಮಾಡಿದ ಡಿಸಿಎಂ ಡಿ ಕೆ ಶಿವಕುಮಾರ್
BREAKING : ‘ಕಾರ್ಮಿಕರ ಕಲ್ಯಾಣಕ್ಕೆ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ’ ; ಇಂದಿನಿಂದ ‘ಹೊಸ ಕಾರ್ಮಿಕ ಸಂಹಿತೆ’ಗಳು ಜಾರಿ








