ನವದೆಹಲಿ : ರಾಜ್ಯದ ಪಡಿತರ ಚೀಟಿದಾರರಿಗೆ ಸಚಿವ ಕೆ.ಹೆಚ್. ಮುನಿಯಪ್ಪ ಸಿಹಿಸುದ್ದಿ ನೀಡಿದ್ದು, ಮುಂದಿನ ವರ್ಷ ಫೆಬ್ರವರಿಗೆ ಇಂದಿರಾ ಕಿಟ್ ಯೋಜನೆ ಜಾರಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಅಡಿಯಲ್ಲಿ ‘ಇಂದಿರಾ ಗಾಂಧಿ’ ಹೆಸರಿನ ಹೊಸ ರೇಷನ್ ಕಿಟ್ ಅನ್ನು ಪರಿಚಯಿಸಲಾಗುವುದು. ಈ ಕಿಟ್‌ನಲ್ಲಿ ಬೇಳೆ, ಎಣ್ಣೆ, ಉಪ್ಪು ಮತ್ತು ಸಕ್ಕರೆ ಇರುತ್ತದೆ ಎಂದು ಸಚಿವರು ವಿವರಿಸಿದರು.
ಪಡಿತರ ಚೀಟಿದಾರರ ಸಂಖ್ಯೆಗೆ ಅನುಗುಣವಾಗಿ ಮೂರು ವಿಭಾಗಗಳಾಗಿ ವಿಂಗಡಿಸಿ ಈ ಕಿಟ್‌ನಲ್ಲಿ ಆಹಾರ ಪದಾರ್ಥಗಳನ್ನು ವಿತರಿಸಲಾಗುವುದು. ಒಬ್ಬರು ಅಥವಾ ಇಬ್ಬರು ಸದಸ್ಯರಿದ್ದರೆ ಕಿಟ್‌ನಲ್ಲಿ 750 ಗ್ರಾಂ ತೊಗರಿ ಬೇಳೆ, ಅರ್ಧ ಲೀಟರ್ ಅಡುಗೆ ಎಣ್ಣೆ, ತಲಾ ಅರ್ಧ ಕಿಲೋ ಸಕ್ಕರೆ ಮತ್ತು ಉಪ್ಪು, ಮೂವರು ಅಥವಾ ನಾಲ್ವರು ಸದಸ್ಯರಿದ್ದರೆ ಒಂದೂವರೆ ಕಿಲೋ ಗ್ರಾಂ ತೊಗರಿ ಬೇಳೆ, ಒಂದು ಲೀಟರ್ ಅಡುಗೆ ಎಣ್ಣೆ, ತಲಾ ಒಂದು ಕಿಲೋ ಸಕ್ಕರೆ ಮತ್ತು ಉಪ್ಪು, ಐವರು ಅಥವಾ ಅದಕ್ಕಿಂತ ಹೆಚ್ಚು ಸದಸ್ಯರಿದ್ದರೆ 2,250 ಗ್ರಾಂ ತೊಗರಿ ಬೇಳೆ, ಒಂದೂವರೆ ಲೀಟರ್ ಅಡುಗೆ ಎಣ್ಣೆ, ತಲಾ ಒಂದೂವರೆ ಕಿಲೋ ಸಕ್ಕರೆ ಮತ್ತು ಉಪ್ಪು ವಿತರಿಸಲಾಗುವುದು.








