ಬೆಂಗಳೂರು : ಕಡಿಮೆ ಕಾರ್ಯಕ್ಷಮತೆ ಹೊಂದಿರುವ ನೇತ್ರಾಧಿಕಾರಿಗಳ ಹುದ್ದೆಗಳನ್ನು ಆಶಾಕಿರಣ ದೃಷ್ಟಿ ಕೇಂದ್ರಗಳಿಗೆ ಸ್ಥಳಾಂತರಿಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ರಾಷ್ಟ್ರೀಯ ಅಂಧತ್ವ ನಿಯಂತ್ರಣಾ ಕಾರ್ಯಕ್ರಮವು ಕೇಂದ್ರ ಸರ್ಕಾರದ ಒಂದು ಪುರಸ್ಕೃತ ಯೋಜನೆಯಾಗಿರುತ್ತದೆ. ಪ್ರತಿ ವರ್ಷವು ಜಿಲ್ಲೆಗಳ ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ನೇತ್ರ ತಪಾಸಣ ಶಿಬಿರ, ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ, ಶಾಲಾ ಮಕ್ಕಳ ನೇತ್ರ ತಪಾಸಣೆ ಮತ್ತು ಕನ್ನಡಕ ವಿತರಣೆ ಹಾಗೂ ಬಿ.ಪಿ.ಎಲ್ ಕಾರ್ಡ್ ಹೊಂದಿರುವ 45 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಉಚಿತ ಕನ್ನಡಕ ವಿತರಣೆ, ಇತರೆ ಚಟುವಟಿಕೆಗಳು ನಡೆಯುತ್ತಿದ್ದು, ಈ ಎಲ್ಲಾ ಚಟುವಟಿಕೆಗಳಿಗೆ ನೇತ್ರಾಧಿಕಾರಿಗಳ ಅವಶ್ಯಕವಿರುತ್ತದೆ.
ಈ ಮೇಲೆ ತಿಳಿಸಿದ ಎಲ್ಲಾ ಚಟುವಟಿಕೆಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ನೇತ್ರಾಧಿಕಾರಿಗಳ ಅವಶ್ಯಕವಿರುತ್ತದೆ. ರಾಜ್ಯದಲ್ಲಿ ಜಿಲ್ಲೆಗಳಿಂದ ಪಡೆದ ಮಾಹಿತಿಯ ಪ್ರಕಾರ ಒಟ್ಟು 619 ನೇತ್ರಾಧಿಕಾರಿಗಳ ಹುದ್ದೆ ಮಂಜೂರಾಗಿದ್ದು, ಪ್ರಸ್ತುತ ಒಟ್ಟಾರೆ 282 ಹುದ್ದೆಗಳು ಖಾಲಿ ಇರುತ್ತವೆ. ಕಾರ್ಯಕ್ರಮದ ಪ್ರಗತಿಯನ್ನು ಇನ್ನು ಹೆಚ್ಚು ಸಾಧಿಸಲು ಹಾಗು ಸಾರ್ವಜನಿಕರಲ್ಲಿ ಕಣ್ಣುಗಳ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದರಲ್ಲಿ ನೇತ್ರಾಧಿಕಾರಿಗಳ ಲಭ್ಯತೆ ಪ್ರಮುಖವಾಗಿದೆ. ಆದರೆ ಕೆಲವು 24/7 ಪಿ.ಹೆಚ್.ಸಿ., ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆ ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ನೇತ್ರಾಧಿಕಾರಿಗಳ ಹುದ್ದೆ ಮಂಜೂರಾಗಿರುವುದಿಲ್ಲ.
ಮುಂದುವರೆದು, ರಾಷ್ಟ್ರೀಯ ಅಂಧತ್ವ ನಿಯಂತ್ರಣಾ ಕಾರ್ಯಕ್ರಮದಡಿಯಲ್ಲಿ ಆಶಾಕಿರಣ ಹೊಸ ವಿಧಾನದ ಅಡಿಯಲ್ಲಿ, ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳು, ತಾಲ್ಲೂಕು ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಶಾಶ್ವತ ಆಧಾರದ ಮೇಲೆ ತೆರೆಯಲಾಗಿರುವ ದೃಷ್ಟಿ ಕೇಂದ್ರಗಳಲ್ಲಿ ನೇತ್ರಾಧಿಕಾರಿಗಳ ಲಭ್ಯತೆಯ ಹಿತದೃಷ್ಟಿಯಿಂದ, ಅನುಬಂಧ-1 ರಲ್ಲಿ ಇರುವಂತೆ ಪ್ರಸ್ತುತ ಕಡಿಮೆ ಕಾರ್ಯಕ್ಷಮತೆ ಹೊಂದಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ನೇತ್ರಾಧಿಕಾರಿ ಹುದ್ದೆಗಳನ್ನು ಅನುಬಂಧ-2 ರಲ್ಲಿ ನಮೂದಿಸಿರುವಂತೆ ನೇತ್ರಾಧಿಕಾರಿ ಹುದ್ದೆಗಳು ಇಲ್ಲದಿರುವ ಸಮುದಾಯ ಆರೋಗ್ಯ ಕೇಂದ್ರಗಳಿಗೆ 40 ಹುದ್ದೆಗಳು, ಹೊಸದಾಗಿ ಸೃಜಿಸಿರುವ ಸಮುದಾಯ ಆರೋಗ್ಯ ಕೇಂದ್ರಗಳಿಗೆ – 43 ಹುದ್ದೆಗಳು, ನೇತ್ರಾಧಿಕಾರಿಗಳ ಹುದ್ದೆಗಳು ಇಲ್ಲದ ತಾಲ್ಲೂಕು ಆಸ್ಪತ್ರೆಗಳಿಗೆ – 34 ಹುದ್ದೆಗಳು, ವರ್ಷಕ್ಕೆ 200 ಕ್ಕೂ ಹೆಚ್ಚು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳನ್ನು ನಡೆಸುವ ತಾಲ್ಲೂಕು ಆಸ್ಪತ್ರೆಗಳಿಗೆ -30 ಹುದ್ದೆಗಳು, ಜಿಲ್ಲಾ ಆಸ್ಪತ್ರೆ ರಾಮನಗರಕ್ಕೆ – 2 ಹುದ್ದೆಗಳು ಹಾಗೂ ಜಿಲ್ಲಾ ಆಸ್ಪತ್ರೆ ಬಳ್ಳಾರಿ ಇಲ್ಲಿಗೆ – 1 ಹುದ್ದೆಯನ್ನು ಹಸ್ತಾಂತರಿಸಲು ಕೋರಿ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.
ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ:-
ಸರ್ಕಾರದ ಆದೇಶ ಸಂಖ್ಯೆ: ಆಕುಕ 64 ಹೆಚ್.ಪಿ.ಸಿ 2025
ಬೆಂಗಳೂರು, ದಿನಾಂಕ:14-11-2025
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ಆಶಾಕಿರಣ ಹೊಸ ವಿಧಾನದ ಅಡಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳು, ತಾಲ್ಲೂಕು ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಶಾಶ್ವತ ಆಧಾರದ ಮೇಲೆ ತೆರೆಯಲಾಗಿರುವ ದೃಷ್ಟಿ ಕೇಂದ್ರಗಳಲ್ಲಿ ನೇತ್ರಾಧಿಕಾರಿಗಳ ಲಭ್ಯತೆಯ ಹಿತದೃಷ್ಟಿಯಿಂದ, ಅನುಬಂಧ-1 ರಲ್ಲಿ ಇರುವಂತೆ ಪ್ರಸ್ತುತ ಕಡಿಮೆ ಕಾರ್ಯಕ್ಷಮತೆ ಹೊಂದಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ನೇತ್ರಾಧಿಕಾರಿ ಹುದ್ದೆಗಳನ್ನು ಅನುಬಂಧ-2 ರಲ್ಲಿ ನಮೂದಿಸಿರುವಂತೆ ನೇತ್ರಾಧಿಕಾರಿ ಹುದ್ದೆಗಳು ಇಲ್ಲದಿರುವ ಸಮುದಾಯ ಆರೋಗ್ಯ ಕೇಂದ್ರಗಳಿಗೆ – 40 ಹುದ್ದೆಗಳು, ಹೊಸದಾಗಿ ಸೃಜಿಸಿರುವ ಸಮುದಾಯ ಆರೋಗ್ಯ ಕೇಂದ್ರಗಳಿಗೆ – 43 ಹುದ್ದೆಗಳು, ನೇತ್ರಾಧಿಕಾರಿಗಳ ಹುದ್ದೆಗಳು ಇಲ್ಲದ ತಾಲ್ಲೂಕು ಆಸ್ಪತ್ರೆಗಳಿಗೆ – 34 ಹುದ್ದೆಗಳು, ವರ್ಷಕ್ಕೆ 200 ಕ್ಕೂ ಹೆಚ್ಚು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳನ್ನು ನಡೆಸುವ ತಾಲ್ಲೂಕು ಆಸ್ಪತ್ರೆಗಳಿಗೆ- 30 ಹುದ್ದೆಗಳು, ಜಿಲ್ಲಾ ಆಸ್ಪತ್ರೆ ರಾಮನಗರ ಇಲ್ಲಿಗೆ -2 ಹುದ್ದೆಗಳು ಹಾಗೂ ಜಿಲ್ಲಾ ಆಸ್ಪತ್ರೆ ಬಳ್ಳಾರಿ ಇಲ್ಲಿಗೆ – 1 ಹುದ್ದೆಯನ್ನು ಸ್ಥಳಾಂತರಿಸಲು / ಹಸ್ತಾಂತರಿಸಲು ಅನುಮತಿ ನೀಡಿ ಆದೇಶಿಸಿದೆ.
ಹೀಗೆ ಸ್ಥಳಾಂತರಗೊಳ್ಳುವ ಸದರಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೇತ್ರಾಧಿಕಾರಿಗಳನ್ನು ಸ್ಥಳಾಂತರಿಸಿದ ಆಶಾಕಿರಣದ ದೃಷ್ಟಿ ಕೇಂದ್ರಗಳಿಗೆ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ನಿಯಮಗಳು, 2025 ರ ನಿಯಮ 15(1)(c) ರಂತೆ ಕೌನ್ಸಿಲಿಂಗ್ ಮುಖೇನವೇ ಸ್ಥಳ ನಿಯುಕ್ತಿಗೊಳಿಸಲು ಸೂಚಿಸಿದೆ.
ಈ ಆದೇಶವನ್ನು ಸರ್ಕಾರದ ಆದೇಶ ಸಂ:ಎಫ್ ಡಿ 01 ಟಿಎಫ್ಪಿ 1996, ದಿನಾಂಕ: 10/07/1996 ರಲ್ಲಿ ಇಲಾಖಾ ಪ್ರಧಾನ ಕಾರ್ಯದರ್ಶಿರವರಿಗೆ ಪ್ರತ್ಯಾಯೋಜಿಸಲಾಗಿರುವ ಅಧಿಕಾರದನ್ವಯ ಹೊರಡಿಸಿದೆ.









