ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು, ರಾಜ್ಯದಲ್ಲಿ ಅಕ್ಕಿ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
ಅತ್ಯಧಿಕ ಭತ್ತ ಬೆಳೆಯುವ ಅಚ್ಚುಕಟ್ಟು ಪ್ರದೇಶವಾದ ತುಂಗಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನ ಬೇಸಿಗೆ ಬೆಳಗೆ ನೀರು ಬಿಡುವುದಿಲ್ಲ ಎಂದು ಸರ್ಕಾರ ಅಧಿಕೃತ ಘೋಷಣೆ ಮಾಡಿದೆ. ಇದರ ಪರಿಣಾಮ ಭತ್ತ ಮತ್ತು ಅಕ್ಕಿ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸೇರಿ 12.5 ಲಕ್ಷಕ್ಕೂ ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. 2.5 ಕೋಟಿ ಕ್ವಿಂಟಲ್ ಭತ್ತ ಉತ್ಪಾದನೆ ಸಾಮರ್ಥ್ಯ ಹೊಂದಿರುವ ಈ ಪ್ರದೇಶದಲ್ಲಿ ಈ ಬಾರಿ ಬೆಳೆ ಬೆಳೆಯುವುದಿಲ್ಲ. ಇದು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.
ಬೇಸಿಗೆ ಬೆಳೆಗೆ ನೀರು ಬಿಡುವುದಿಲ್ಲ ಎಂದು ಸರ್ಕಾರ ಹೇಳುತ್ತಿದ್ದಂತೆ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಆರ್.ಎನ್.ಆರ್. ಭತ್ತದ ದರ 75 ಕೆಜಿಗೆ 1950-2000 ರೂ. ವರೆಗೆ ಏರಿಕೆಯಾಗಿದೆ. ಸೋನಾ ಮಸೂರಿ ದರ ಕೂಡ ಏರಿಕೆ ಆಗುವ ಸಾಧ್ಯತೆ ಇದೆ. ಕೆಲವು ದಲ್ಲಾಳಿಗಳು ಮುಂಗಾರು ಬೆಳೆ ಕಟಾವು ಪ್ರಾರಂಭವಾಗುತ್ತಿದ್ದಂತೆ ಭತ್ತ, ಅಕ್ಕಿಸಂಗ್ರಹಿಸಿ ಅಭಾವ ಸೃಷ್ಟಿಸುವ ಸಾಧ್ಯತೆ ಇದೆ.








