ಬೆಂಗಳೂರು: ಕಾಂಗ್ರೆಸ್ ಪಕ್ಷದ ಅಪಪ್ರಚಾರದ ನಡುವೆಯೂ ಬಿಹಾರ ರಾಜ್ಯದಲ್ಲಿ ಎನ್‍ಡಿಎ ಐತಿಹಾಸಿಕ ಗೆಲುವು ದಾಖಲಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ನಿನ್ನೆ ಬಿಹಾರ ರಾಜ್ಯದ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ- ಜೆಡಿಯು ಒಳಗೊಂಡ ಎನ್‍ಡಿಎ ಕೂಟ ಪ್ರಚಂಡ ಜಯಭೇರಿ ಬಾರಿಸಿದೆ ಎಂದು ವಿಶ್ಲೇಷಿಸಿದರು. ನರೇಂದ್ರ ಮೋದಿಜೀ ಅವರ ಜನಪ್ರಿಯತೆ, ಬಿಹಾರ ರಾಜ್ಯದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ನೋಡಿ ಬಿಹಾರ ರಾಜ್ಯದ ಮತದಾರರು ಮತ್ತೊಮ್ಮೆ ಎನ್‍ಡಿಎ ಕೂಟಕ್ಕೆ ಆಶೀರ್ವಾದ ಮಾಡಿದ್ದಾರೆ ಎಂದು ತಿಳಿಸಿದರು.
ಚುನಾವಣಾ ಚಾಣಕ್ಯ ಅಮಿತ್ ಶಾ ಜೀ ಅವರ ಕಾರ್ಯತಂತ್ರ, ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಜೀ ಅವರ ನೇತೃತ್ವ, ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಪ್ರಯತ್ನ, ಎರಡೂ ಪಕ್ಷಗಳ ಕಾರ್ಯಕರ್ತರ ಪರಿಶ್ರಮ- ಇದೆಲ್ಲದರ ಪರಿಣಾಮವಾಗಿ ಒಂದು ಐತಿಹಾಸಿಕ ಗೆಲುವು ದಾಖಲಾಗಿದೆ ಎಂದು ವಿವರಿಸಿದರು.
ರಾಹುಲ್ ಗಾಂಧಿಯವರು ಮತಗಳ್ಳತನದ ಕುರಿತು ಬಿಹಾರ ರಾಜ್ಯದ ಚುನಾವಣೆ ಮುಗಿಯುವವರೆಗೂ ಅಪಪ್ರಚಾರ ಮಾಡಿದ್ದರು. ಒಂದು ರೀತಿ ಅರಾಜಕತೆ ಸೃಷ್ಟಿಸುವ ಷಡ್ಯಂತ್ರ, ಕುತಂತ್ರವನ್ನು ಕಾಂಗ್ರೆಸ್ ಪಕ್ಷ ಮಾಡಿದ್ದರೂ ಅಲ್ಲಿನ ಮತದಾರರು ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ ಎಂದು ಅವರು ಹೇಳಿದರು.
IPL ಮಿನಿ-ಹರಾಜಿಗೂ ಮುನ್ನ RCB ಉಳಿಸಿಕೊಂಡ ಆಟಗಾರರ ಪಟ್ಟಿ ಇಲ್ಲಿದೆ | IPL retentions








