ಬೆಂಗಳೂರು: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಇಂದು ಪಂಚಭೂತಗಳಲ್ಲಿ ಲೀನವಾದರು. ಜ್ಞಾನಭಾರತಿ ಕಲಾಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೇರವೇರಿದೆ.
ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ (114)ಅವರು ತೀವ್ರ ಅನಾರೋಗ್ಯದಿಂದ ಶುಕ್ರವಾರ ನಿಧನರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾಲುಮರದ ತಿಮ್ಮಕ್ಕ ಚಿಕಿತ್ಸೆ ಪಡೆಯುತ್ತಿದ್ದರು.
8,000 ಕ್ಕೂ ಅಧಿಕ ಸಸಿಗಳನ್ನು ನೆಟ್ಟು ಪೋಷಿಸಿ ಬೆಳೆಸಿದ್ದಾರೆ. ಪರಿಸರದ ಉಳಿವಿಗೆ ಅವರ ನೀಡಿರುವ ಮಹತ್ತರ ಕೊಡುಗೆಯನ್ನು ಗೌರವಿಸಿ ಭಾರತ ಸರ್ಕಾರ 2019ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿಯಿಂದ ಪುರಸ್ಕರಿಸಿದೆ. ಪತಿ ಚಿಕ್ಕರಂಗಯ್ಯ ಕೂಡ ಸಸಿನೆಡುವಲ್ಲಿ ತಿಮ್ಮಕ್ಕನಿಗೆ ನೆರವಾಗುತ್ತಿದ್ದರು. ದಂಪತಿಗೆ ಸಂತಾನ ಭಾಗ್ಯವಿರಲಿಲ್ಲ. ಆ ಕೊರತೆ, ದುಃಖ ಮತ್ತು ನೋವನ್ನು ಸಸಿ ನೆಟ್ಟು ಪೋಷಿಸುವ ಮೂಲಕ ನೀಗಿಸಿಕೊಳ್ಳುತ್ತಿದ್ದರು.
ಹೀಗಿದೆ ನಾಡಿನ ಜನತೆಗೆ ಸಾಲು ಮರದ ತಿಮ್ಮಕ್ಕ ಕೊಟ್ಟ ಕೊನೆಯ ಸಂದೇಶ
“ ನನ್ನ ಸಂದೇಶ “
ಪ್ರೀತಿಯ ನನ್ನ ನಾಡಿನ ಜನತೆಗೆ ನಿಮ್ಮ ಪ್ರೀತಿಯ ಅಜ್ಜಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಮಾಡುವ ನಮಸ್ಕಾರಗಳು. ಈ ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ, ಇರುವಷ್ಟು ದಿನ ಯಾರಿಗೂ ತೊಂದರೆ, ಹಿಂಸೆಯಾಗದಂತೆ ಪ್ರೀತಿ ಬದುಕಿ, ಬಡವ, ಶ್ರೀಮಂತ, ಭಿಕ್ಷುಕ. ಅಸಹಾಯಕ ಎನ್ನದೆ ಎಲ್ಲರೂ ಒಂದೇ ತರಹ ಬದುಕಿ. ಎಲ್ಲರನ್ನು ಗೌರವಿಸಿ, ಪ್ರೀತಿಸಿ, ದೇಶವನ್ನು ಪ್ರೀತಿಸಿ, ದೇಶ ಚೆನ್ನಾಗಿದ್ದರೆ ಎಲ್ಲರೂ ಚಂದ.
ಚಿಕ್ಕವರಾಗಲಿ, ದೊಡ್ಡವರಾಗಲಿ, ಬಡವರಾಗಲಿ, ಶ್ರೀಮಂತರಾಗಲಿ, ಗಿಡ ನೆಟ್ಟು ಮರಗಳನ್ನಾಗಿ ಬೆಳೆಸಿ, ಗೋ ಕಟ್ಟಿಗಳನ್ನು ಕಟ್ಟಿಸಿ, ಕೆರೆ ಕಟ್ಟಿಸಿ, ಮೂಕ ಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಮಾಡಿಸಿ, ಹಣ್ಣು ಬಿಡುವ ಮರಗಳನ್ನು ಬೆಳೆಸಿ, ಹಕ್ಕಿಪಕ್ಷಿಗಳ ಆಧಾರವಾಗಲಿ, ದೇಶದಲ್ಲಿರುವ ಎಲ್ಲರಿಗೂ ಒಳ್ಳೆಯದಾಗಲಿ, ದೇಶ ಚೆನ್ನಾಗಿರಲಿ ಬಡವನನ್ನು ಕಂಡು ಬಿನ್ನ ಭೇಧ ಮಾಡಬೇಡಿ. ಮನುಷ್ಯರೆಲ್ಲ ಒಂದೇ, ಹಸಿದವರಿಗೆ ಅನ್ನ ಕೊಡಿ. ನಾನು ಮಾಡಿದ ಗಿಡ ನೆಡುವ ಉಳಿಸುವ ಕಾರ್ಯವನ್ನು ನಿರಂತರವಾಗಿ ಮುಂದುವರಿಸಿ, ಮತ್ತು ನನ್ನ ಮಗನಾದ ಉಮೇಶ ದೇಶದಲ್ಲೆಲ್ಲ ಗಿಡ ನೆಡುವ ಮತ್ತು ನಡೆಸುವ ಕಾರ್ಯ ಮಾಡುತ್ತಾ ಸಾಗು.
ಮತ್ತೊಮ್ಮೆ ಎಲ್ಲರಿಗೂ ದೇವರು ಒಳ್ಳೆಯದಾಗಲಿ, ಎಲ್ಲರಿಗೂ ಸತಿಪತಿ ಭಾಗ್ಯ ಇರಲಿ, ಮಕ್ಕಳ ಭಾಗ್ಯವಿರಲಿ, ನಿಮ್ಮ ಮನೆ ಚೆನ್ನಾಗಿರಲಿ, ದೇಶ ಚೆನ್ನಾಗಿರಲಿ, ಮಕ್ಕಳಿಗೆಲ್ಲ ಒಳ್ಳೆಯ ವಿದ್ಯೆ ಬರಲಿ, ಎಲ್ಲರೂ ಗಿಡ ಮರಗಳನ್ನು ಬೆಳೆಸಿ.
ನನ್ನ ಪತಿ ದೇವರ ಆಶೀರ್ವಾದ ಮತ್ತು ನನ್ನ ಆಶೀರ್ವಾದ ನನ್ನ ಮಗನ ಮೇಲಿರಲಿ, ಎಲ್ಲರಿಗೂ ಒಳ್ಳೆಯದಾಗಲಿ.








