ಹಿಂದುಳಿದ ವರ್ಗಗಳ ಆಯೋಗದ ಆದೇಶದಂತೆ ಧಾರವಾಡ ಜಿಲ್ಲೆಯಲ್ಲಿ ಕೈಗೊಂಡ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯದಲ್ಲಿ ಭಾಗವಹಿಸಿದ್ದ ಶಿಕ್ಷಕರು ಆಕಸ್ಮಿಕವಾಗಿ ಬೈಕ್ ಅಪಘಾತ ಹಾಗೂ ಜಾರಿ ಬಿದ್ದು ಮೂಳೆ ಮುರಿತವಾಗಿದ್ದ ಓರ್ವ ಶಿಕ್ಷಕ ಹಾಗೂ ಇಬ್ಬರು ಶಿಕ್ಷಕೀಯರಿಗೆ ವಿಶೇಷ ರಜೆ ಮಂಜೂರು ಮಾಡಲು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ನೀಡಿದ್ದ ನಿರ್ದೇಶನವನ್ನು ಪಾಲಿಸಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ವಿಶೇಷ ರಜೆಯನ್ನು ಮಂಜೂರು ಮಾಡಿ ಆದೇಶಿಸಿದ್ದಾರೆ.
ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯದಲ್ಲಿ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು.
ಧಾರವಾಡ ತಾಲೂಕಿನ ದುರ್ಗದಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸುರೇಶ ಪೂಜಾರ ಅವರು ಭಾಗವಹಿಸಿದ್ದರು. ಅವರು ಸಮೀಕ್ಷಾ ಕಾರ್ಯಕ್ಕೆ ತೆರಳುವಾಗ ಬೈಕ್ ಸ್ಕೀಡ್ ಆಗಿ, ಅಪಘಾತವಾಗಿತ್ತು. ಗಂಭೀರ ಗಾಯವಾಗಿ ಕಾಲಿನ ಮೂಳೆ ಮುರಿತದಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ. ಇವರಿಗೆ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಕೆ.ಸಿ.ಎಸ್.ಆರ್. ನಿಯಮದಂತೆ ವಿಶೇಷ ಅಂಗವೈಕಲ್ಯ ರಜೆ ಮಂಜೂರು ಮಾಡಿ ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ಆದೇಶಿಸಿದ್ದಾರೆ.
ಅದರಂತೆ ಕುಂದಗೋಳ ತಾಲೂಕಿನ ಕಮಡೊಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆಯ ಪ್ರಧಾನ ಗುರು ಸುಶೀಲಾ ಶಂ. ಪಾಟೀಲ ಹಾಗೂ ಹಿರೇಹರಕುಣಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆಯ ಸಹಶಿಕ್ಷಕಿ ವೀಣಾ ಬ. ಚನ್ನಿ ಅವರಿಗೆ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಕೆ.ಸಿ.ಎಸ್.ಆರ್. ನಿಯಮದಂತೆ ವಿಶೇಷ ಅಂಗವೈಕಲ್ಯ ರಜೆ ಮಂಜೂರು ಮಾಡಿ ಕುಂದಗೋಳ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವಿ ಮಾಡಲಗೇರಿ ಅವರು ಆದೇಶಿಸಿದ್ದಾರೆ.
ಸರ್ಕಾರದ ಆದೇಶದಂತೆ ಆಯೋಗದ ಸಮೀಕ್ಷಾ ಕಾರ್ಯದಲ್ಲಿ ಭಾಗವಹಿಸಿದ್ದ ಶಿಕ್ಷಕರು ಆಕಸ್ಮಿಕ ಅಪಘಾತಕ್ಕೆ ಒಳಗಾಗಿ ಅನಾರೋಗ್ಯ ಪೀಡಿತರಾಗಿದ್ದಕ್ಕೆ ಶಿಕ್ಷಕರ ಮನವಿ ಮೇರೆಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ನೀಡಿದ್ದ ಭರವಸೆಯಂತೆ ನೌಕರರ ಬಗ್ಗೆ ವಿಶೇಷ ಕಾಳಜಿ ಮತ್ತು ಮುತ್ತುವರ್ಜಿ ವಹಿಸಿ 120 ದಿನಗಳ ವಿಶೇಷ ಅಂಗವೈಕಲ್ಯ ರಜೆಗಳನ್ನು ಮಂಜೂರು ಮಾಡಿಸಿದ್ದಾರೆ.
ಜಿಲ್ಲಾಧಿಕಾರಿಗಳ ಈ ಸ್ಪಂದನೆಗೆ ಚಿಕಿತ್ಸೆಯಲ್ಲಿರುವ ಗಾಯಾಳು ಶಿಕ್ಷಕರು, ಶಿಕ್ಷಕರ ಸಂಘದ ಪದಾಧಿಕಾರಿಗಳು ಮತ್ತು ಜಿಲ್ಲೆಯ ಸರ್ಕಾರಿ ನೌಕರರು ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.








