ಬೆಂಗಳೂರು : “ಮೇಕೆದಾಟು ವಿರುದ್ಧದ ತಮಿಳುನಾಡು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿರುವುದು, ನ್ಯಾಯ ಪೀಠದಿಂದ ನಮಗೆ ನ್ಯಾಯ ಸಿಕ್ಕಂತಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು.
ಮೇಕೆದಾಟು ಯೋಜನೆ ಡಿಪಿಆರ್ ವಿರೋಧಿಸಿ ತಮಿಳುನಾಡು ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದ್ದು, ಇದರಿಂದ ತಮಿಳುನಾಡಿಗೆ ಹಿನ್ನಡೆಯಾಗಿದೆಯಲ್ಲಾ ಎಂದು ಕೇಳಿದಾಗ, “ಈ ಬಗ್ಗೆ ಸಂಪೂರ್ಣ ಮಾಹಿತಿ ಸಿಕ್ಕ ನಂತರ ವಿವರವಾಗಿ ಮಾತನಾಡುತ್ತೇನೆ. ಇದು ಯಾವುದೇ ರೀತಿಯ ಹಿನ್ನಡೆಯಲ್ಲ. ಬದಲಿಗೆ ನ್ಯಾಯ ಪೀಠದಿಂದ ನ್ಯಾಯ ಸಿಕ್ಕಂತಾಗಿದೆ. ಮೇಕೆದಾಟು, ‘ನಮ್ಮ ನೀರು, ನಮ್ಮ ಹಕ್ಕು’ ಯೋಜನೆ. ನಾವು ತಮಿಳುನಾಡಿಗೆ ಯಾವುದೇ ರೀತಿಯಲ್ಲೂ ಅಡ್ಡಿ ಮಾಡುತ್ತಿಲ್ಲ. ಈ ಯೋಜನೆಯಿಂದ ತಮಿಳುನಾಡಿಗೇ ಹೆಚ್ಚು ಲಾಭವಾಗಲಿದೆ. ರಾಜ್ಯದ ಜನರ ಪ್ರಾರ್ಥನೆ, ಜನರ ಕಷ್ಟಕ್ಕೆ ನ್ಯಾಯಾಲಯ ಸ್ಪಂದಿಸಿದೆ” ಎಂದು ತಿಳಿಸಿದರು.
“ನ್ಯಾಯಾಲಯಗಳ ತೀರ್ಮಾನದಂತೆ ತಮಿಳುನಾಡು ತನ್ನ ಪಾಲಿನ ನೀರನ್ನು ಪಡೆಯಲಿದೆ. ಹೀಗಾಗಿ ನಾವು ಈ ಯೋಜನೆ ಮುಂದುವರಿಸಿಕೊಂಡು ಹೋಗುತ್ತೇವೆ. ಈ ಯೋಜನೆಯನ್ನು ನಮ್ಮ ನೆಲದಲ್ಲಿ, ನಮ್ಮ ಹಣದಲ್ಲಿ ಮಾಡಲಾಗುತ್ತಿದೆ. ನೀರಿನ ಕೊರತೆ ಉಂಟಾದಾಗ ತಮಿಳುನಾಡಿಗೆ ನೀರು ಹರಿಸಲು ಈ ಸಮತೋಲಿತ ಅಣೆಕಟ್ಟೆ ನೆರವಾಗಲಿದೆ. ಇದು ಬೆಂಗಳೂರಿಗರ ಗೆಲುವು. ತಮಿಳುನಾಡು ಸೇರಿದಂತೆ ಬೇರೆ ರಾಜ್ಯಗಳಿಂದ ಬರುವ ಜನರಿಗೂ ನೀರು ಒದಗಿಸಲಾಗುವುದು. ಈಗಲಾದರೂ ಯೋಜನೆಗೆ ಸಹಕಾರ ನೀಡಿ ಎಂದು ತಮಿಳುನಾಡಿಗೆ ಮನವಿ ಮಾಡುತ್ತೇನೆ. ನಾವೆಲ್ಲರೂ ಮಾನವೀಯತೆ ದೃಷ್ಟಿಯಿಂದ ಒಟ್ಟಾಗಿ ಕೆಲಸ ಮಾಡೋಣ” ಎಂದು ಕರೆ ನೀಡಿದರು.
ಸಹಕಾರ ನೀಡದೇ ಸಿಡಬ್ಲ್ಯೂಸಿ ಮುಂದೆ ಬೇರೆ ಆಯ್ಕೆಯೇ ಇಲ್ಲ
ನ್ಯಾಯಾಲಯವು ಇಂತಹ ವಿಚಾರದಲ್ಲಿ ಕೇಂದ್ರ ಜಲ ಆಯೋಗಕ್ಕೆ (ಸಿಡಬ್ಲ್ಯೂಸಿ)ಗೆ ಮಾರ್ಗದರ್ಶನ ನೀಡಲಿದ್ದು, ನ್ಯಾಯಾಲಯ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೇಳಿದೆ. ಸಿಡಬ್ಲ್ಯೂಸಿ ಈ ಯೋಜನೆಗೆ ಸಹಕಾರ ನೀಡುವುದೇ ಎಂದು ಮಾಧ್ಯಮದವರು ಕೇಳಿದಾಗ, “ಈ ಯೋಜನೆಗೆ ಅನುಮತಿ ನೀಡದೇ ಬೇರೆ ಆಯ್ಕೆ ಅವರ ಮುಂದೆ ಇಲ್ಲ. ಅವರು ನ್ಯಾಯ ಒದಗಿಸಿಕೊಡಲೇಬೇಕು” ಎಂದು ತಿಳಿಸಿದರು.








