ಬೆಂಗಳೂರು : ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯಲ್ಲಿ ಹುಲಿಗಳು ಪದೇ ಪದೇ ದಾಳಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಕಾಡಿನಂಚಿನ ಪ್ರದೇಶದಲ್ಲಿ ಕ್ಯಾಮರಾ ಅಳವಡಿಸಿ, ಹುಲಿಗಳ ಸಂಚಾರದ ಮೇಲೆ 24×7 ನಿಗಾ ಇಟ್ಟು, ಸ್ಥಳೀಯರಿಗೆ ಸಕಾಲಿಕ ಮಾಹಿತಿ ನೀಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದ್ದಾರೆ.
ಅರಣ್ಯ ಭವನದಲ್ಲಿಂದು ಮಾನವ-ವನ್ಯಜೀವಿ ಸಂಘರ್ಷ ಕುರಿತಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ರೈತರು ತಮ್ಮ ಹೊಲ, ಗದ್ದೆ, ತೋಟದಲ್ಲಿ ಕೆಲಸಕ್ಕೆ ಬರುತ್ತಾರೆ ವನ್ಯಜೀವಿಗಳು ದಾಳಿ ಮಾಡುತ್ತಿವೆ. ಹೀಗಾಗಿ ಜನ ವಸತಿ, ರೈತರ ಜಮೀನಿನ ಬಳಿ ಕ್ಯಾಮರಾ ಅಳವಡಿಸಿ ನಿಗಾ ಇಟ್ಟು ಮುನ್ನೆಚ್ಚರಿಕೆ ನೀಡಿದರೆ ಜೀವಹಾನಿ, ಬೆಳೆ ಹಾನಿ ತಪ್ಪಿಸಿ ಎಂದರು.
ಮಾನವ-ವನ್ಯಜೀವಿ ಸಮಸ್ಯೆಗೆ ಅಲ್ಪಾವಧಿ ಮತ್ತು ದೀರ್ಘಕಾಲೀನ ಪರಿಹಾರ ಕ್ರಮಗಳನ್ನು ರೂಪಿಸಿ. ಥರ್ಮಲ್ ಕ್ಯಾಮರಾಗಳ ನೆರವಿನಿಂದ ನಿಗಾ ಇಡುವುದರ ಜೊತೆಗೆ ಗಸ್ತು ಹೆಚ್ಚಳ ಮಾಡಿ ಎಂದೂ ಸ್ಪಷ್ಟ ಸೂಚನೆ ನೀಡಿದರು.
ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಿ:
ಬಂಡೀಪುರ ಮತ್ತು ನಾಗರಹೊಳೆಯ ಕಾಡಿನಂಚಿನಲ್ಲಿ ಇರುವ ಗ್ರಾಮಗಳ ಪೈಕಿ ಯಾವ ಗ್ರಾಮದಲ್ಲಿ ಹೆಚ್ಚು ಸಂಘರ್ಷ ಇದೆ ಎಂಬುದನ್ನು ಗುರುತಿಸಿ, 5-6 ಕಿಲೋ ಮೀಟರ್ ದೂರದಲ್ಲಿ ಒಂದು ಅರಣ್ಯ ಗಸ್ತು ಶಿಬಿರ ಸ್ಥಾಪಿಸಿ, ಸ್ಥಳೀಯ ಯುವಕರನ್ನೂ ನೇಮಿಸಿಕೊಂಡು ನಿಗಾ ಇಡಲು ಕ್ರಮ ಕೈಗೊಳ್ಳಿ. ಇದು ಸಮರೋಪಾದಿಯಲ್ಲಿ ಆಗಬೇಕು ಎಂದರು.
ಯಾವುದೇ ಗ್ರಾಮದ ಬಳಿ ಹುಲಿ ಜಾನುವಾರುಗಳ ಮೇಲೆ ದಾಳಿ ಮಾಡಿದರೆ ಕೂಡಲೇ ಅಲ್ಲಿಗೆ ಆನೆಗಳ ಸಹಿತ ರಕ್ಷಣಾ ತಂಡ ರವಾನಿಸಿ ಕಾರ್ಯಾಚರಣೆ ನಡೆಸಬೇಕು. ಹುಲಿಗಳು ಗಾಯಗೊಂಡಿದ್ದರೆ ಅಥವಾ ವಯಸ್ಸಾಗಿದ್ದರೆ ಅಂತಹ ಹುಲಿಗಳನ್ನು ಸೆರೆ ಹಿಡಿಯಲು ಕ್ರಮ ವಹಿಸಬೇಕು ಎಂದರು.
ಮಾನವ-ವನ್ಯಜೀವಿ ಸಂಘರ್ಷ ಇರುವ ಕಾನನ ಪ್ರದೇಶಕ್ಕೆ ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯಾಗಿ ನಿಯೋಜಿಸಿ, ಅವರು ಸ್ಥಳದಲ್ಲಿ ಮೊಕ್ಕಾಂಹೂಡಿ ಸಮಸ್ಯೆ ಪರಿಹರಿಸಬೇಕು ಎಂದೂ ಈಶ್ವರ ಖಂಡ್ರೆ ಸೂಚಿಸಿದರು.
ಪರಿಸರ ಧಾರಣಾ ಸಾಮರ್ಥ್ಯ ಅಧ್ಯಯನಕ್ಕೆ ಸಮಿತಿ:
ಹೆಚ್ಚುತ್ತಿರುವ ವನ್ಯಜೀವಿಗಳಿಗೆ ಅನುಗುಣವಾಗಿ ಕಾನನ ಪ್ರದೇಶ ಇದೆಯೇ. ಈ ವನ್ಯಜೀವಿಧಾಮಗಳ ಪರಿಸರ ಧಾರಣಾ ಸಾಮರ್ಥ್ಯದ ಬಗ್ಗೆ ಅಧ್ಯಯನ ಮಾಡಿ ವರದಿ ನೀಡಲು ತಜ್ಞರ ತಂಡವನ್ನು ರಚಿಸಿ, ವನ್ಯಜೀವಿಗಳು ಕಾಡಿನಿಂದ ನಾಡಿಗೆ ಬರುವುದಕ್ಕೆ ಕಾರಣವೇನು ಎಂಬ ಬಗ್ಗೆ ಸಮಿತಿ ಅಧ್ಯಯನ ವರದಿ ನೀಡಬೇಕು. ಆ ವರದಿ ಆಧರಿಸಿ ನಾವು ಮುಂದಿನ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ಸಚಿವ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು.
ಸನ್ನಾ, ಲಂಟನಾ ತೆರವಿಗೆ ಸೂಚನೆ :
ಸನ್ನಾ ಮತ್ತು ಲಂಟನಾ ಕಳೆ ವ್ಯಾಪಕವಾಗಿ ಅರಣ್ಯದಲ್ಲಿ ಬೆಳೆದಿದ್ದು, ಇದರಿಂದ ಸಸ್ಯಹಾರಿ ಪ್ರಾಣಿಗಳಿಗೆ ಹುಲ್ಲು ಸಿಗದಂತಾಗಿದೆ. ಇದರಿಂದ ಆನೆಗಳು ಹೊರಬರುತ್ತಿವೆ. ಕಾಡಿನ ಸ್ವರೂಪವನ್ನೇ ನಾಶ ಮಾಡುತ್ತಿರುವ ಲಂಟನಾ, ಸನ್ನಾ ತೆರವಿಗೆ ವೈಜ್ಞಾನಿಕವಾಗಿ ಕ್ರಮ ಕೈಗೊಳ್ಳಿ, ಬೇರೆ ರಾಜ್ಯಗಳು ಸನ್ನಾ, ಲಂಟನಾ ತೆರವಿಗೆ ಕೈಗೊಂಡಿರುವ ಕ್ರಮಗಳ ಅಧ್ಯಯನ ಮಾಡಿ, ಉತ್ತಮ ರೂಢಿ ಅಳವಡಿಸಿಕೊಳ್ಳಿ ಎಂದರು.
ಸಭೆಯಲ್ಲಿ ಪ್ರಧಾನಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಪಿ.ಸಿ. ರೇ ಹಾಗೂ ಉನ್ನತಾಧಿಕಾರಿಗಳು ಪಾಲ್ಗೊಂಡಿದ್ದರು.
ಊರಿಗೆ ವನ್ಯಜೀವಿ ಆನೆ, ಹುಲಿ, ಚಿರತೆ, ಕರಡಿ ಬಂದ್ರೆ ‘1926’ಗೆ ಕರೆ ಮಾಡಿ: ಸಚಿವ ಈಶ್ವರ್ ಖಂಡ್ರೆ








