ಹಾಸನ : ರಾಜ್ಯದ ರೈತರಿಗೆ ಸಚಿವ ಕೃಷ್ಣ ಬೈರೇಗೌಡ ಸಿಹಿಸುದ್ದಿ ನೀಡಿದ್ದು, ನಕಾಶೆಯಲ್ಲಿ ರಸ್ತೆ ಇದ್ದರೆ ಮುಲಾಜಿಲ್ಲದೆ ತೆರವುಗೊಳಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಚನ್ನರಾಯಪಟ್ಟಣ ತಾಲ್ಲೂಕು ಕಚೇರಿಯ ಆವರಣದಲ್ಲಿ ಆಯೋಜಿಸಲಾಗಿದ್ದ ಜನಸ್ಪಂದನಾ ಹಾಗೂ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಿ ಮಾತನಾಡಿದ ಅವರು, ಎಲ್ಲಾ ಅರ್ಜಿಗಳಿಗೂ ಒಂದೇ ರೂಪದಲ್ಲಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದ ಸಚಿವರು ಬೋರವೆಲ್ ಗೆ ಸಂಬಂಧಿಸಿದಂತೆ ಶಾಸಕರ ವ್ಯಾಪ್ತಿಗೆ ಬರುತ್ತದೆ, ಮನೆ ಮಂಜೂರು ಗ್ರಾಮ ಪಂಚಾಯಿತಿ ಸಮಿತಿ ಬರುತ್ತದೆ. ಸ್ವೀಕೃತವಾದ ಇಂತಹ ಅರ್ಜಿಗಳನ್ನು ಸಂಬಂಧಿಸಿದಂತೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಸ್ವೀಕಾರವಾದ ಅರ್ಜಿಗಳಲ್ಲಿ ಸಾಧ್ಯವಿರುವ ಕೆಲವು ಅರ್ಜಿಗಳಿಗೆ ಸ್ಥಳದಲ್ಲಿ ಪರಿಹಾರ ಒದಗಿಸಲಾಗುತ್ತದೆ ಉಳಿದವುಗಳ ವಿಲೇವಾರಿಗೆ ಹೆಚ್ಚಿನ ಆದ್ಯತೆ ನೀಡಿ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಅರ್ಜಿಗಳನ್ನು ಸ್ವೀಕರಿಸಿ ಸ್ಥಳೀಯ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಪರಿಹಾರಕ್ಕೆ ಪ್ರಯತ್ನಿಸಲು ಸಹಕಾರಿ ಆಗುತ್ತದೆ ಎಂದು ಸಚಿವರು ತಿಳಿಸಿದರು.
ಕಾನೂನು ಚೌಕಟ್ಟಿನಲ್ಲಿರು ವುದನ್ನು ಪರಿಹಾರ ಮಾಡಲಾಗುವುದು, ಉಳಿದ ಸಮಸ್ಯೆಗಳನ್ನು ಬಗೆಹರಿಸಲು ಸಮಯ ತೆಗೆದುಕೊಳ್ಳುತ್ತದೆ. ಪರಿಹಾರ ದೊರಕಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಹೆಚ್ಚು ಅರ್ಜಿಗಳು ದುರಸ್ತಿಗೆ ಸಂಬಂಧಿಸಿದಂತೆ ಬರುತ್ತವೆ. ಕಳೆದ ಐದು ವರ್ಷಗಳಲ್ಲಿ ಕೇವಲ 500 ಪ್ರಕರಣ ದುರಸ್ತಿ ಮಾಡಲಾಗಿದೆ 2025 ರಲ್ಲಿ 25000 ಪ್ರಕರಣ ದುರಸ್ತಿಗೆ ಕ್ರಮವಹಿಸಿದ್ದು, ಈಗಾಗಲೇ 13-14 ಸಾವಿರ ಪ್ರಕರಣಗಳು ದುರಸ್ತಿ ಮಾಡಲಾಗಿದೆ ಎಂದು ತಿಳಿಸಿದರು.
ನಕಾಶೆಯಲ್ಲಿ ರಸ್ತೆ ಇದ್ದರೆ ಮುಲಾಜಿಲ್ಲದೆ ತೆರವುಗೊಳಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ದುರಸ್ತಿಯಾದ ನಂತರ ಇಂಡೀಕರಣ ಆಗಬೇಕು ಇದರ ಬಗ್ಗೆ ಅರ್ಜಿಗಳು ಬರುತ್ತಿವೆ. ಇವುಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ ಪಟ್ಟಿಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕು ವಸತಿ ಪ್ರದೇಶಗಳಿಗೆ ಕುರಿತಂತೆ ದಾಖಲೆ ಇರುವುದು ಮತ್ತು ಇಲ್ಲದಿರುವ ಬಗ್ಗೆ ತಹಸೀಲ್ದಾರ್ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ಪರಿಶೀಲನೆ ಮಾಡುವಂತೆ ಸೂಚಿಸಿದರು.
ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ದೇವಸ್ಥಾನದ ಜಾಗ ಬಂದುಬಸ್ತು ಮಾಡಿಸಲು ಕ್ರಮವಹಿಸುವಂತೆ ಸೂಚಿಸಿದರು.ಸಾರ್ವಜನಿಕರು ಖುದ್ದು ಹಾಜರಾಗಿ ಮನವಿಗಳನ್ನು ನೀಡಲು ತೆರೆಯಲಾದ ಕೌಂಟರ್ಗಳಲ್ಲಿ ಅರ್ಜಿಗಳನ್ನು ದಾಖಲಿಸಿಕೊಂಡು ಟೋಕನ್ ನಂಬರ್ಗಳನ್ನು ಸ್ವೀಕರಿಸಿ ತಮ್ಮ ಅಹವಾಲನ್ನು ಸಲ್ಲಿಸಿದರು ಒಟ್ಟು 786 ಅರ್ಜಿಗಳನ್ನು ಸ್ವೀಕರಿಸಲಾಯಿತು.
ಸಂಸದರಾದ ಶ್ರೇಯಸ್ ಎಂ ಪಟೇಲ್, ಶಾಸಕರಾದ ಸಿ.ಎನ್.ಬಾಲಕೃಷ್ಣ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಂ.ಎ.ಗೋಪಾಲಸ್ವಾಮಿ ಜಿಲ್ಲಾಧಿಕಾರಿ ಲತಾ ಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಬಿ.ಆರ್.ಪೂರ್ಣಿಮಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಬ್ ಕುಮಾರ್ ,ಅಪರ ಜಿಲ್ಲಾಧಿಕಾರಿ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ಉಪ ವಿಭಾಗಾಧಿಕಾರಿಗಳಾದ ಜಗದೀಶ್ ಗಂಗಣ್ಣನವರ್, ರಾಜೇಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.








