ಮೈಸೂರು : ಅನರ್ಹ ಪಡಿತರ ಚೀಟಿಗಳನ್ನು ಗುರುತಿಸುವುದು ಮತ್ತು ಅವುಗಳನ್ನು ರದ್ದು ಮಾಡಲು ಕ್ರಮಕೈಗೊಳ್ಳಲಾಗುವುದು. ಬಾಕಿ ಇರುವ ಯೋಜನೆಗಳನ್ನು ಆದ್ಯತೆ ಮೇರೆ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ( ಕೆಡಿಪಿ ) ಸಭೆಯಲ್ಲಿ ಮಾತನಾಡಿದ ಅವರು, ಎಲ್ಲಾ ಯೋಜನೆಗಳ ಕಾರ್ಯಾದೇಶವನ್ನು ನವೆಂಬರ್-2025 ರ ಅಂತ್ಯದೊಳಗೆ ನೀಡತಕ್ಕದ್ದು. ರಸ್ತೆ ಗುಂಡಿಗಳಿದ್ದಲ್ಲಿ ಅವುಗಳನ್ನು ಗುರುತಿಸಿ ಅದನ್ನು ದುರಸ್ತಿ ಮಾಡಲು ತಕ್ಷಣವೇ ಕ್ರಮವಹಿಸಬೇಕು. ಮೈಸೂರು ನಗರದಲ್ಲಿ ವೈಟ್ ಟಾಪಿಂಗ್ ಕಾಮಗಾರಿಯನ್ನು ತಕ್ಷಣವೇ ಪ್ರಾರಂಭಿಸಲು ಕ್ರಮವಹಿಸಬೇಕು ಎಂದು ಹೇಳಿದ್ದಾರೆ.
ಹೀಗಿದೆ ಸಿಎಂ ಸಿದ್ದರಾಮಯ್ಯ ಸಭೆಯ ಮುಖ್ಯಾಂಶಗಳು
*ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಪ್ರತೀ ಹಾಸ್ಟೆಲ್‌ಗಳಿಗೆ ಒಬ್ಬ ನೋಡೆಲ್ ಅಧಿಕಾರಿಯನ್ನು ನೇಮಿಸಬೇಕು. ಆಹಾರದ ಗುಣಮಟ್ಟ, ಶೈಕ್ಷಣಿಕ ವಾತಾವರಣ, ಕಟ್ಟಡಗಳ ಸ್ಥಿತಿಗತಿಯನ್ನು ಅವಲೋಕಿಸಬೇಕು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ನೋಡಲ್ ಅಧಿಕಾರಿಗಳ ಮೇಲೆ ನಿಗಾ ಇಡಬೇಕು.
* ಹೆಚ್.ಡಿ.ಕೋಟೆ ವ್ಯಾಪ್ತಿಯ 16 ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ, ಆದರೆ ವಿದ್ಯುತ್ ಮಾತ್ರ ಬರುತ್ತಿಲ್ಲ ಎಂಬ ದೂರಿದೆ. ಹಾಡಿಗಳ ಕುಡಿಯುವ ನೀರು, ಹಕ್ಕು ಪತ್ರ, ಅಂಗನವಾಡಿ, ಮನೆ, ಆಹಾರ ವಿತರಣೆ, ಆರೋಗ್ಯ ಕಿಟ್ ವಿತರಣೆಯಲ್ಲಿ ಆಗುತ್ತಿರುವ ಲೋಪಗಳನ್ನು ಈ ಕೂಡಲೇ ಬಗೆಹರಿಸಬೇಕು.
* ಹಾಡಿ ನಿವಾಸಿಗಳ ಅರಣ್ಯ ಉತ್ಪನ್ನ ಸಂಗ್ರಹ, ಮಾರಾಟದ ವಿಚಾರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ದೌರ್ಜನ್ಯ ನಡೆಸುತ್ತಿರುವ ಬಗ್ಗೆ ದೂರಿದೆ. ಇಂಥಾ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ. ಕಣ್ಣಿಗೆ ಪಟ್ಟಿ ಕಟ್ಟಿಕೊಂಡವರ ರೀತಿ ವರ್ತಿಸಬಾರದು. ಸ್ವಲ್ಪ ಉದಾರವಾಗಿ, ಮಾನವೀಯವಾಗಿ ನಡೆದುಕೊಳ್ಳಬೇಕು.
* ಆಹಾರ ಇಲಾಖೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ಸಭೆಯನ್ನು ಪ್ರತ್ಯೇಕವಾಗಿ ನಡೆಸಿ ಹಾಸ್ಟೆಲ್‌ಗಳ ಗುಣಮಟ್ಟ ಮತ್ತು ಆಹಾರ ಗುಣಮಟ್ಟದ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಇದನ್ನು ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
*ವಸತಿ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಯಲ್ಲಿ ಶೇ.89 ಮತ್ತು ಪಿಯುಸಿಯಲ್ಲಿ ಶೇ65 ರಷ್ಟು ಫಲಿತಾಂಶ ಬಂದಿದೆ. ಸರ್ಕಾರ ಸಾಕಷ್ಟು ಅನುಕೂಲಗಳನ್ನು ಕಲ್ಪಿಸುತ್ತಿದೆ, ಕೇಳಿದಷ್ಟು ಅನುದಾನ ನೀಡುತ್ತಿದೆ, ಆದರೂ ಈ ಫಲಿತಾಂಶ ಸಮಾಧಾನಕರವಲ್ಲ. ಮಕ್ಕಳು ಹಾಸ್ಟೆಲ್‌ಗಳಲ್ಲೇ ಇರುವುದರಿಂದ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೆ ವಿಶೇಷ ತರಗತಿಗಳನ್ನು ನಡೆಸಿ ಅವರ ಕಲಿಕೆಯ ಗುಣಮಟ್ಟ ಹೆಚ್ಚಿಸಬೇಕು.
* ಜಾತಿ ಪ್ರಮಾಣ ಪತ್ರಗಳನ್ನು ನೀಡುವ ವಿಚಾರದಲ್ಲಿ ನಿಧಾನ ಮಾಡಬಾರದು. ತಕ್ಷಣ ನೀಡುವ ಪದ್ಧತಿ ರೂಢಿಸಿಕೊಳ್ಳಬೇಕು.
* ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಸಂಖ್ಯೆ 6,73,050 ಇದ್ದು, ಜುಲೈ ಅಂತ್ಯದವರೆಗೆ ಶೇ.100 ರಷ್ಟು ಫಲಾನುಭವಿಗಳಿಗೆ ಗೃಹಲಕ್ಷ್ಮಿ ಹಣ ಪಾವತಿಯಾಗಿದೆ. ಸದ್ಯ ಖಚಿತಗೊಂಡಿರುವ ಫಲಾನುಭವಿಗಳಲ್ಲಿ ಅಷ್ಟೂ ಮಂದಿಗೆ ಹಣ ಪಾವತಿಯಾಗಿದೆ. ಕೆಲವರು ಅರ್ಹರಿದ್ದು, ದಾಖಲಾತಿ ಸರಿ ಇಲ್ಲದ ಕಾರಣದಿಂದ ನೋಂದಣಿ ಆಗದಿದ್ದರೆ ಅವರಿಗೆ ಸಂದಾಯವಾಗಿಲ್ಲ. ಇದನ್ನು ಕೂಡ ಬಗೆಹರಿಸಬೇಕು.
* ಹಾಲು, ಊಟ, ಸಮವಸ್ತ್ರ, ಶೂ, ಬಾಳೆಹಣ್ಣು, ಸ್ಕಾಲರ್‌ಶಿಪ್ ಸೇರಿ ಅಗತ್ಯ ಎಲ್ಲಾ ಸವವಲತ್ತುಗಳನ್ನು ಒದಗಿಸುತ್ತಿದ್ದರೂ ಶಾಲಾ ದಾಖಲಾತಿ ಪ್ರಮಾಣ ಕಳೆದ ವರ್ಷಕ್ಕಿಂತ ಈ ವರ್ಷ ಶೇ.2.5 ರಷ್ಟು ಕಡಿಮೆ ಆಗಿದೆ. ಶಿಕ್ಷಣದ ಗುಣಮಟ್ಟ ಉನ್ನತೀಕರಿಸಿ, ದಾಖಲಾತಿ ಪ್ರಮಾಣ ಹೆಚ್ಚಿಸುವ ಕೆಲಸ ಆಗಬೇಕು.
* ಆರೋಗ್ಯ ಮತ್ತು ಶಿಕ್ಷಣ ನನ್ನ ಮೊದಲ ಆದ್ಯತೆ. ಮೈಸೂರು ಜಿಲ್ಲೆಗೆ ಈ ಎರಡೂ ಕ್ಷೇತ್ರಕ್ಕೆ ಅಗತ್ಯ ಸವಲತ್ತು ಮತ್ತು ಅನುದಾನಗಳನ್ನು ಕಲ್ಪಿಸುತ್ತಿದ್ದೇವೆ. ಆದರೆ ಫಲಿತಾಂಶ ಮತ್ತು ಕಾರ್ಯಕ್ಷಮತೆಯಲ್ಲಿ ಕೊರತೆ ಆಗಬಾರದು. ಇದನ್ನು ನಾನು ಬಹಳ ಗಂಭೀರವಾಗಿ ಪರಿಗಣಿಸಿದ್ದೇನೆ. ನೀವೂ ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕು.
ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ( ಕೆಡಿಪಿ ) ಸಭೆಯಲ್ಲಿ ನನ್ನ ಮಾತುಗಳು:
– ಅನರ್ಹ ಪಡಿತರ ಚೀಟಿಗಳನ್ನು ಗುರುತಿಸುವುದು ಮತ್ತು ಅವುಗಳನ್ನು ರದ್ದು ಮಾಡಲು ಕ್ರಮಕೈಗೊಳ್ಳಲಾಗುವುದು.
ಬಾಕಿ ಇರುವ ಯೋಜನೆಗಳನ್ನು ಆದ್ಯತೆ ಮೇರೆ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು.
ಎಲ್ಲಾ… pic.twitter.com/3fpNNXdTlK
— Siddaramaiah (@siddaramaiah) November 10, 2025








