ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಇಬ್ಬರು ಇಮ್ಮಿಡಿಯಟ್ ಸೂಪರಿಡೆಂಟ್ ಹಾಗೂ ಸಹಾಯಕ ಸೂಪರಿಂಟ್‌ಡೆಂಟ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ತಿಳಿಸಿದರು.
ಕಾರಾಗೃಹಗಳ ಪ್ರಧಾನ ಕಚೇರಿಯಲ್ಲಿ ‘ರಾಜ್ಯದ ಕಾರಾಗೃಹಗಳಲ್ಲಿ ಆಡಳಿತ ಮತ್ತು ಭದ್ರತೆಯ’ ಕುರಿತಂತೆ ಕರ್ನಾಟಕ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪತ್ರಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹ ಘಟನೆಯ ಜವಾಬ್ದಾರಿಯನ್ನು ಮೂವರು ಅಧಿಕಾರಿಗಳ ಮೇಲೆ ಹಾಕಲಾಗಿದೆ. ಚೀಫ್ ಸೂಪರಿಡೆಂಟ್ ಕೆ.ಸುರೇಶ್ ಅವರನ್ನು ಕೂಡಲೇ ವರ್ಗಾವಣೆ ಮಾಡಲಾಗಿದೆ. ಇಮ್ಮಿಡಿಯಟ್ ಸೂಪರಿಡೆಂಟ್ ಮ್ಯಾಗೇರಿ ಹಾಗೂ ಸಹಾಯಕ ಸೂಪರಿಡೆಂಟ್ ಅಶೋಕ್ ಭಜಂತ್ರಿ ಅವರನ್ನು ಅಮಾನತುಗೊಳಿಸಲಾಗಿದೆ.
ಚೀಫ್ ಸೂಪರಿಡೆಂಟ್ ಸ್ಥಳಕ್ಕೆ, ಇದೇ ಮೊದಲ ಬಾರಿಗೆ ಐಪಿಎಸ್ ಅಧಿಕಾರಿಯನ್ನು ನಿಯೋಜಿಸಲಾಗುವುದು. ಇನ್ನು ಮುಂದೆ ಪರಪ್ಪನ ಅಗ್ರಹಾರಕ್ಕೆ ಚೀಫ್ ಸೂಪರಿಡೆಂಟ್ ಹುದ್ದೆಯ ಅಧಿಕಾರವನ್ನು ಐಪಿಎಸ್ ಅಧಿಕಾರಿಗೆ ವಹಿಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿನ ಕಾರಾಗೃಹಗಳ ಈವರೆಗಿನ ಬೆಳವಣಿಗೆಗಳ ಬಗ್ಗೆ ಸಭೆಯಲ್ಲಿ ಪರಿಶೀಲನೆ ಮಾಡಿದ್ದೇನೆ. ಕೆಲವು ವೀಡಿಯೋಗಳು 2023ರಲ್ಲಿ ಆಗಿರುವಂಥದ್ದು. ನಿನ್ನೆ, ಮೊನ್ನೆ ಅಗಿರುವ ವೀಡಿಯೋಗಳಲ್ಲ. ಒಂದೆರಡು ವೀಡಿಯೋಗಳು ಮಾತ್ರ ಕಳೆದ ಮೂರು-ನಾಲ್ಕು ತಿಂಗಳ ಹಿಂದೆ ನಡೆದಿರುವುದು. 2023ರಲ್ಲಿ ಯಾರು ಇದ್ದರು, 2024ರಲ್ಲಿ ಯಾರು ಇದ್ದರು, ಈಗ ಯಾರು ಇದ್ದಾರೆ ಅವರಿಂದ ಚರ್ಚೆ ಮಾಡಿ, ಉತ್ತರ ಪಡೆದುಕೊಂಡಿದ್ದೇವೆ ಎಂದರು.
ಹೈಪವರ್ ಕಮಿಟಿ ರಚನೆ
ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ 5000 ಕೈದಿಗಳಿದ್ದಾರೆ. ಅಂಡರ್ ಟ್ರಯಲ್ಸ್, ಸಜಾ ಕೈದಿಗಳಿದ್ದಾರೆ. ಬೇರೆಬೇರೆ ಬ್ಯಾರಕ್‌ಗಳಲ್ಲಿ ಇದ್ದಾರೆ. ಈ ಕಾರಾಗೃಹದಲ್ಲಿ ಸೆಲಿಬ್ರಿಟಿಗಳು ಹೆಚ್ಚಿನ ಗಮನ ಈ ಕಾರಾಗೃಹದ ಮೇಲಿರುತ್ತದೆ. ಇಲ್ಲಿ ನಡೆದಿರುವ ಚಟುವಟಿಕೆಯನ್ನು ಗಮನದಲ್ಲಿಟ್ಟುಕೊಂಡು ಹೈಪವರ್ ಸಮಿತಿ ರಚನೆ ಮಾಡಿದ್ದೇವೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಮಾತ್ರವಲ್ಲದೆ ರಾಜ್ಯದ ಎಲ್ಲ ಕಾರಾಗೃಹಗಳನ್ನು ಪರಿಶೀಲನೆ ಮಾಡಿ, ಸಮಗ್ರವಾದ ವರದಿಯನ್ನು ಕೊಡಬೇಕು. ಇದಕ್ಕೆ ಟರ್ಮ್ಶ್ ಆಫ್ ರೆಫರೆನ್ಸ್ ಕೊಡುತ್ತೇವೆ. ಈ ರೀತಿಯ ಘಟನೆಗಳಾಗುವುದು ಒಂದು ಭಾಗವಾದರೆ, ಸಿಸಿಟಿವಿ ಕೆಲಸ ಮಾಡದಿರುವುದು ಸೇರಿದಂತೆ ಎಲ್ಲ ರೀತಿಯ ಲೋಪಗಳ ಬಗ್ಗೆ ವರದಿಯಲ್ಲಿ ಕೊಡಬೇಕು ಎಂದು ಸಮಿತಿಗೆ ತಿಳಿಸಲಾಗುವುದು ಎಂದರು.
ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಅವರನ್ನು ಮುಖ್ಯಸ್ಥರನ್ನಾಗಿ ಮಾಡಲಾಗುವುದು. ಐಜಿಪಿ ಸಂದೀಪ್ ಪಾಟೀಲ್, ಎಸ್‌ಪಿ ಅಮರನಾಥ್ ರೆಡ್ಡಿ, ಎಸ್‌ಪಿ ರಿಷ್ಯಾಂತ್ ಅವರಿಗೂ ಜವಾಬ್ದಾರಿ ಕೊಡುತ್ತೇವೆ. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಎಸ್‌ಪಿಗಳು ಸಮಿತಿಯ ಸಹ ಸದಸ್ಯರಾಗಿರುತ್ತಾರೆ.
ಹೈಪವರ್ ಕಮಿಟಿ ನೀಡುವ ವರದಿ ಆಧರಿಸಿ ಘಟನೆಯಲ್ಲಿ ಯಾರೆಲ್ಲ ಭಾಗಿಯಾಗಿರುತ್ತಾರೆ, ಅವರನ್ನು ಸೇವೆಯಿಂದ ವಜಾ ಮಾಡುವ ಅಥವಾ ಅಮಾನತುಗೊಳಿಸುವ ಕ್ರಮ ತೆಗೆದುಕೊಳ್ಳಲಾಗುವುದು. ಒಂದು ತಿಂಗಳೊಳಗೆ ವರದಿ ನೀಡಬೇಕು ಎಂದು ಸೂಚಿಸಲಾಗಿದ್ದು, ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿನ ಘಟನೆಯ ಪ್ರಾಥಮಿಕ ಮಾಹಿತಿ ಅಧರಿಸಿ ಇಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು ವಿವರಿಸಿದರು.
ಎಲ್ಲ ಎಲ್ಲ ಕಾರಾಗೃಹಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ರಾಜ್ಯದ ಎಲ್ಲ ಕಾರಾಗೃಹಗಳಲ್ಲಿನ ಚಟುವಟಿಕೆಗಳನ್ನು ಕಾರಾಗೃಹ ಪ್ರಧಾನ ಕಚೇರಿಯಿಂದ ನಿಗಾವಹಿಸಲು ಕಮಾಂಡ್ ಸೆಂಟರ್ ಸ್ಥಾಪಿಸಲಾಗುವುದು. ಹಿರಿಯ ಅಧಿಕಾರಿಗಳು, ಡಿಜಿ ಅಥವಾ ಎಡಿಜಿಪಿ ಕಾರಾಗೃಹ ಅವರು ನಿಗಾವಹಿಸುವ ವ್ಯವಸ್ಥೆಯನ್ನು ಮಾಡಲಾಗುವುದು. ಇದಕ್ಕೆ 15 ದಿನದೊಳಗೆ ಸಮಯ ನೀಡಲಾಗಿದೆ ಎಂದು ತಿಳಿಸಿದರು.
ಇದಕ್ಕು ಮುನ್ನ ಟೆಕ್ನಿಕಲ್ ಆಡಿಟ್ ಮಾಡಿಸಲಾಗುವುದು. ಎಲ್ಲ ಕಾರಾಗೃಹಗಳಲ್ಲಿ ಸಿಸಿಟಿವಿ ಸೇರಿದಂತೆ ತಂತ್ರಜ್ಞಾನಗಳ ಕುರಿತು ಆಡಿಟ್ ಮಾಡಿಸಲಾಗುವುದು. ಪ್ರಧಾನ ಕಚೇರಿಗೆ ಮಾಹಿತಿ ಬರುವ ಹಾಗೆ ಕ್ರಮ ತೆಗೆದುಕೊಳ್ಳಲಾಗುವುದು.
ಕಾರಾಗೃಹಗಳಲ್ಲಿ ಜಾಮರ್ ಅಳವಡಿಸಿರುವ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಗಳಿಗೆ ಸಾಕಷ್ಟು ತೊಂದರೆ ಅಗುತ್ತಿದೆ. ಟೆಕ್ನಿಕಲ್ ಟೀಮ್ ಸೆಟ್ ಮಾಡಿ, ಶಾಡೋ ಏರಿಯಾಗಳಲ್ಲಿ (ಕಾರಾಗೃಹಗಳಲ್ಲಿ ಸಿಗ್ನಲ್ ಬರುವ ಕಡೆ) ಸಿಗ್ನಲ್ ಬಾರದಂತೆ ಕ್ರಮ ವಹಿಸಲಾಗುವುದು. ಯಾವುದೇ ಫೋನ್ ಒಳಗೆ ತೆಗೆದುಕೊಂಡು ಹೋದರು ಕೆಲಸ ಮಾಡದಂತೆ ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ಕಾರಾಗೃಹಗಳಲ್ಲಿ ಬ್ಯಾಗೇಜ್ ಸ್ಕ್ಯಾನರ್ ಸೇರಿದಂತೆ ಎಲ್ಲ ರೀತಿಯ ತಾಂತ್ರಿಕ ಉಪಕರಣಗಳನ್ನು ದ್ವಿಗುಣ ಮಾಡಲು ಕ್ರಮ ವಹಿಸಲಾಗುವುದು.
ಕಾರಾಗೃಹಗಳಲ್ಲಿ ಸಿಸಿಟಿವಿ ಅಳವಡಿಸಲು ಕ್ಯಾಬಿನೆಟ್‌ನಲ್ಲಿ 2 ಕೋಟಿ ರೂ. ಮಂಜೂರು ಮಾಡಲಾಗಿದೆ. ಹತ್ತು ಟವರ್ ಹಾಕಿಸಲು ಕ್ಯಾಬಿನೆಟ್‌ನಲ್ಲಿ 15 ಕೋಟಿ ರೂ. ಮಂಜೂರಾಗಿದೆ. ಕೂಡಲೇ ಟೆಂಡರ್ ಕರೆದು, ಕೆಲಸ ಆರಂಭಿಸಲು ಕ್ರಮ ವಹಿಸಲು ಸೂಚನೆ.
ಎಲ್ಲ ಕಾರಾಗೃಹಗಳ ಸೂಪರಿಡೆಂಟ್ ಮತ್ತು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಇಂತಹ ಘಟನೆಗಳು ಮರುಕಳಿಸಿದರೆ ಮತ್ತಷ್ಟು ಕಠಿಣ ಕ್ರಮ ಜರುಗಿಸಕಾಗುವುದು. ಘಟನೆ ಹಳೇದು, ಹೊಸದು ಎಂಬ ಸಬೂಬು ಹೇಳುವಂತಿಲ್ಲ. ನಿಷೇಧಿತ ವಸ್ತು ಯಾವಾಗ ಕಾರಾಗೃಹದೊಳಗೆ ಹೋಗಿತ್ತು,, ಆಗ ಯಾವ ಅಧಿಕಾರಿ ಕರ್ತವ್ಯದಲ್ಲಿದ್ದರು ಅವರನ್ನೇ ಹೊಣೆ ಮಾಡಲಾಗುವುದು ಎಂಬುದನ್ನು ಸೂಚಿಸಲಾಗಿದೆ. ಕೆಳ ಹಂತದ ಅಧಿಕಾರಿ ಮತ್ತು ಸಿಬ್ಬಂದಿಗಳು ಏನು ಮಾಡುತ್ತಿದ್ದಾರೆ ಎಂಬುದನ್ನು ನಿಗಾವಹಿಸುವುದು ಮೇಲಾಧಿಕಾರಿಗಳ ಜವಾಬ್ದಾರಿ. ಹೀಗಾಗಿ ಅವರನ್ನರೆ ಹೊಣೆ ಮಾಡುತ್ತೇವೆ ಎಂದು ತಿಳಿಸಿದರು.
ಎಲ್ಲ ಕಾರಾಗೃಹಗಳ ಅಧಿಕಾರಿಗಳು ಪ್ರಧಾನ ಕಚೇರಿ ಜೊತೆ ನೇರವಾಗಿ ಸಂಪರ್ಕದಲ್ಲಿ ಇರಬೇಕು. ಹಿರಿಯ ಅಧಿಕಾರಿಗಳು ಕಾರಾಗೃಹಗಳಿಗೆ ನಿರಂತರವಾಗಿ ಭೇಟಿ ನೀಡಬೇಕು. ತಿಂಗಳಿಗೆ ಒಂದು ಅಥವಾ ಎರಡು ಬಾರಿ ಕಡ್ಡಾಯವಾಗಿ ಭೇಟಿ ನೀಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಾರಾಗೃಹಗಳಿಗೆ ಭೇಟಿ ನೀಡಿ, ಪ್ರಧಾನ ಕಚೇರಿಗೆ ವರದಿ ನೀಡಬೇಕು. ಯಾವುದೇ ರೀತಿಯ ತಪ್ಪುಗಳಾದಗ ಕ್ರಮ ತೆಗೆದುಕೊಳ್ಳಲು ಸರ್ಕಾರ ಸಿದ್ಧವಾಗಿದೆ. ಹೈಪವರ್ ಕಮಿಟಿ ವರದಿ ಬಂದ ನಂತರ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು. ಇಂತಹ ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ ಮಾಧ್ಯಮದವರ ಸಹಕಾರ ಕೇಳಲಾಗುವುದು. ಎನ್‌ಐಎ ವರದಿಯನ್ನು ಕೂಡ ಸಭೆಯಲ್ಲಿ ಚರ್ಚಿಸಲಾಗಿದೆ. ಇದು ಕೂಡ ಹೈಪವರ್ ಕಮಿಟಿ ವರದಿಯಲ್ಲಿ ಬರುತ್ತದೆ ಎಂದರು.
ಹೈಪವರ್ ಕಮಿಟಿ ವರದಿಗೆ ಒಂದು ತಿಂಗಳು ಗಡುವು ನೀಡಲಾಗಿದೆ. ವರದಿಯನ್ನು ಬಹಿರಂಗ ಪಡಿಸುತ್ತೇನೆ. ಎಲ್ಲರಿಗೂ ಗೊತ್ತಾಗಲಿ. ಒಂದು ತಿಂಗಳೊಳಗೆ ವರದಿ ನೀಡಲೇಬೇಕು. ಈವರೆಗೆ ಚೀಫ್ ಸೂಪರಿಡೆಂಟ್ ಹುದ್ದೆಗೆ ಐಪಿಎಸ್‌ಗಳನ್ನು ನೇಮಿಸಿಲ್ಲ. ಸದ್ಯಕ್ಕೆ ಎಸ್‌ಪಿ ಯನ್ನು ನೇಮಿಸುತ್ತೇವೆ. ಮುಂದಿನ ದಿನಗಳಲ್ಲಿ ಡಿಐಜಿ ಶ್ರೇಣಿಯ ಅಧಿಕಾರಿಗಳನ್ನು ನಿಯೋಜಿಸಲಾಗುವುದು ಎಂದರು.
ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ.ಸಲೀಂ, ಗೃಹ ಇಲಾಖೆಯ ಕಾರ್ಯದರ್ಶಿ ಕೆ.ವಿ.ಶರತ್‌ಚಂದ್ರ, ಬೆಂಗಳೂರು ನಗರ ಪೊಲೀಸ್ ಅಯುಕ್ತ ಸೀಮಾಂತ್ ಕುಮಾರ್, ಐಎಸ್‌ಡಿ ವಿಭಾಗದ ಎಡಿಜಿಪಿ ಚಂದ್ರಶೇಖರ್ ಇದ್ದರು.
BREAKING: ಬ್ಯಾಂಕ್ ಖಾತೆಯಿಲ್ಲದೇ ‘ಮಕ್ಕಳು UPI ವರ್ಗಾವಣೆ’ಗೆ ಅನುಮೋದಿಸಿದ RBI | Junio Payments
BIG NEWS : `ಜಾತಿ ಗಣತಿ’ ಸಮೀಕ್ಷೆದಾರರು, ಮೇಲ್ವಿಚಾರಕರಿಗೆ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ `ಗೌರವಧನ’ ಬಿಡುಗಡೆ







