: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಧನ್ಯವಾದಗಳನ್ನು ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರ ತಿಳಿಸಿದ್ದಾರೆ.
ಇಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು KUWJ ಚುನಾವಣೆಯಲ್ಲಿ ನೂತನ ಸಾಲಿನ ಆಡಳಿತ ಮಂಡಳಿಗೆ ಆಯ್ಕೆಯಾದ ಎಲ್ಲರಿಗೂ ಅಭಿನಂದನೆಗಳು ಎಂದು ಹೇಳಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಅನಿವಾರ್ಯ. ಸ್ಪರ್ಧಿಸಿದವರೆಲ್ಲರೂ ಗೆಲ್ಲಲು ಆಗುವುದಿಲ್ಲ. ಹಾಗೆಯೇ ಎಲ್ಲರೂ ಸೋಲಲು ಆಗುವುದಿಲ್ಲ. ಸ್ಪರ್ಧೆಯಲ್ಲಿ ಸೋಲು-ಗೆಲುವು ಅನಿವಾರ್ಯ. ಗೆದ್ದವರು ಹಿಗ್ಗಬೇಕಿಲ್ಲ. ಸೋತವರು ಕುಗ್ಗಬೇಕಿಲ್ಲ. ಇಂದಿನ ಸೋಲು ಮುಂದೆ ಗೆಲುವಾಗಬಹುದು. ಸಮಾನ ಮನಸ್ಥಿತಿಯಲ್ಲಿ ಎಲ್ಲವನ್ನೂ ಸ್ವೀಕರಿಸುವುದು ಆರೋಗ್ಯಕರ ಲಕ್ಷಣ ಎಂದಿದ್ದಾರೆ.
ಎಷ್ಟೇ ಆದರೂ ನಾವೆಲ್ಲರೂ ವೃತ್ತಿಬಾಂಧವರು. ನಾವೆ ಒಪ್ಪಿಕೊಂಡ ಆದರ್ಶಗಳನ್ನು ಪರಿಪಾಲನೆ ಮಾಡುವ ಮೂಲಕ ವೃತ್ತಿ ಘನತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾಯಕ ಮಾಡೋಣ ಅಂತ ತಿಳಿಸಿದ್ದಾರೆ.
ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ಸೊಬಗು. ಮುಂದೆಯೂ ಚುನಾವಣೆ ಬರುತ್ತದೆ. ಸಮಾಧಾನ, ಸಂಯಮ ನಮ್ಮನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸುತ್ತದೆ. ಪ್ರೀತಿ, ವಿಶ್ವಾಸದಿಂದ ಜಗತ್ತನ್ನು ಗೆಲ್ಲಬಹುದೇ ಹೊರತು ದ್ವೇಷದಿಂದ ಅಲ್ಲ. ಎಲ್ಲರಿಗೂ ಒಳಿತಾಗಲಿ. ಮತ್ತೊಮ್ಮೆ ತಮಗೆಲ್ಲರಿಗೂ ಶುಭಾಶಯಗಳು ಅಂತ ತಿಳಿಸಿದ್ದಾರೆ.
ಚುನಾವಣೆಯನ್ನು ಪಾರದರ್ಶಕ ಮತ್ತು ಶಾಂತಿಯುತವಾಗಿ ನಡೆಸಿಕೊಕೊಟ್ಟಿರುವ ಮುಖ್ಯಚುನಾವಣಾಧಿಕಾರಿ ಎನ್.ರವಿಕುಮಾರ್ (ಟೆಲೆಕ್ಸ್) ಅವರಿಗೆ, ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮತ್ತು ಸಹಾಯಕ ಚುನಾವಣಾಧಿಕಾರಿ ಹಾಗೂ ಸಿಬ್ಬಂದಿಗಳಿಗೂ ಧನ್ಯವಾದಗಳನ್ನ ಅರ್ಪಿಸಿದ್ದಾರೆ.
ಅಂದಹಾಗೆ ನಿನ್ನೆ ರಾಜ್ಯದ 20 ಜಿಲ್ಲೆಯ ಜಿಲ್ಲಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಚುನಾವಣೆ ನಡೆಯಿತು. ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಗಳ ವರೆಗೆ ಮತದಾನ ನಡೆಯಿತು. ಆ ಬಳಿಕ ಮತ ಏಣಿಕೆ ನಡೆದು ಫಲಿತಾಂಶ ಘೋಷಣೆ ಮಾಡಲಾಗಿದೆ.
-ವಸಂತ ಬಿ ಈಶ್ವರಗೆರೆ, ಸಂಪಾದಕರು








