ಬೆಂಗಳೂರು: ರಾಜ್ಯ ಸರ್ಕಾರವು ಕಬ್ಬು ಬೆಳೆಗಾರರ ಹೋರಾಟಕ್ಕೆ ಮಣಿದಿದೆ. ನಿನ್ನೆ ರೂ.3,200 ಪ್ರತಿ ಟನ್ ಗೆ ನೀಡುವುದಾಗಿ ತಿಳಿಸಿದ್ದಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಇಂದು ರೂ.3,200 ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರಿಂದ ಹೆಚ್ಚುವರಿಯಾಗಿ ರೂ.50 ಮತ್ತು ಸರ್ಕಾರದಿಂದ 50 ರೂ ಸೇರಿದಂತೆ ಪ್ರತಿ ಟನ್ ಕಬ್ಬಿಗೆ ರೂ.3,300 ನೀಡುವುದಾಗಿ ಘೋಷಣೆ ಮಾಡಿದರು.
ಇಂದು ಸಕ್ಕರೆ ಕಾರ್ಖಾನೆ ಮಾಲೀಕರು, ಕಬ್ಬು ಬೆಳೆಗಾರ ರೈತರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ರಾಜ್ಯದಲ್ಲಿ 12 ಕಾರ್ಖಾನೆ ಹೊರತುಪಡಿಸಿದರೇ ಉಳಿದೆಲ್ಲವೂ ಖಾಸಗಿಯವು. ದಿನಾಂಕ 06-05-2025ರಂದು ಎಫ್ ಆರ್ ಸಿ ಯನ್ನು ಕೇಂದ್ರ ಸರ್ಕಾರ ನಿಗದಿ ಮಾಡಿದೆ. 2025-26ನೇ ಸಾಲಿನಲ್ಲಿ 10.25 ರಿಕವರಿ ಇದ್ದರೇ ಟನ್ ಗೆ ರೂ.3,550 ರೂ ನಿಗದಿ ಪಡಿಸಲಾಗಿದೆ. ಇದರಲ್ಲಿ ಕಟಾವು, ಸಾರಿಗೆ ವೆಚ್ಚವೂ ಸೇರಿರುತ್ತದೆ ಎಂಬುದಾಗಿ ತಿಳಿಸಿದರು.
9.5 ರಿಕವರಿಗಿಂತ ಕಡಿಮೆ ಇದ್ದರೇ 3290.50 ರೂಪಾಯಿ ನಿಗದಿ ಪಡಿಸಲಾಗಿದೆ. ಎಫ್ ಆರ್ ಪಿ ಗಿಂತ ಹೆಚ್ಚಿನ ದರವನ್ನು ನೀಡುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾನಿರತ ರೈತರ ಜೊತೆಗೆ ಡಿಸಿ, ಎಸ್ ಪಿ ಸಭಎ ವಿಫಲವಾಗಿತ್ತು ಎಂದರು.
ಪ್ರತಿ ಟನ್ ಕಬ್ಬಿಗೆ ರೂ.3,500 ನೀಡುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಈಗಾಗಲೇ ಈ ವಿಷಯ ಸಂಬಂಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಇಂದು 11.30ರಿಂದ ರೈತ ಪ್ರತಿನಿಧಿಗಳು, ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆಗೆ ಇಲ್ಲಿಯವರೆಗೆ ಮಾತನಾಡಿ, ಚರ್ಚಿಸಿದ್ದೇನೆ ಎಂದರು.
ರೈತರ ಸಮಸ್ಯೆ ಕಬ್ಬು ಬೆಳೆಗಾರರು ಪ್ರಸ್ತಾಪಿಸಿದ್ದಾರೆ. ಸಕ್ಕರೆ ಕಾರ್ಖಾನೆ ಮಾಲೀಕರು ಅವರ ಸಮಸ್ಯೆ ತಿಳಿಸಿದ್ದಾರೆ. ಇಬ್ಬರ ವಿಚಾರಗಳನ್ನು ಚರ್ಚಿಸಿ ಅಂತಿಮವಾಗಿ ಪ್ರತಿ ಟನ್ ಕಬ್ಬಿಗೆ ರೂ.3,300 ನೀಡಲು ನಿಗದಿ ಪಡಿಸಲು ನಿರ್ಧರಿಸಲಾಗಿದೆ ಎಂದರು.
ಪ್ರತಿ ಟನ್ ಗೆ ರೂ.3,200 ದರ ನಿಗದಿ ಮಾಡಲಾಗಿದೆ. ಇದಕ್ಕೆ ಸಕ್ಕರೆ ಕಾರ್ಖಾನೆ ಮಾಲೀಕರು ರೂ.50 ಹಾಗೂ ಸರ್ಕಾರದಿಂದ ರೂ.50 ಸೇರಿಸಿ ಒಟ್ಟು ರೂ.3,300 ಪ್ರತಿ ಟನ್ ಕಬ್ಬಿಗೆ ಬೆಲೆ ನಿಗದಿ ಪಡಿಸಲಾಗಿದೆ. ಅದರಂತೆ ನೀಡಲು ಸರ್ಕಾರ ರೈತರು, ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಂಡಿದೆ ಎಂಬುದಾಗಿ ತಿಳಿಸಿದರು.
• ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿಯೇ, ಸಕ್ಕರೆ ಎಂಎಸ್ಪಿ ಹೆಚ್ಚಳ ಸೇರಿದಂತೆ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲು ಕೋರಿ ಪ್ರಧಾನಿಯವರಿಗೆ ಈಗಾಗಲೇ ಪತ್ರ ಬರೆಯಲಾಗಿದ್ದು, ಅವರು ಸಮಯ ನೀಡಿದರೆ ನಾಳೆಯೇ ಕೇಂದ್ರಕ್ಕೆ ನಿಯೋಗ ಕರೆದುಕೊಂಡು ಹೋಗಲು ಸಿದ್ಧರಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ರೈತರ ಹಿತದೃಷ್ಟಿಯಿಂದ ಕೈಗೊಳ್ಳುವ ತೀರ್ಮಾನಗಳನ್ನು ಎಲ್ಲರೂ ಒಪ್ಪಿಕೊಳ್ಳಬೇಕು.
• ಸಕ್ಕರೆಗೆ ಎಮ್ಎಸ್ಪಿ ನಿಗದಿಪಡಿಸುವುದು ಕೇಂದ್ರ ಸರ್ಕಾರ. ಇದೇ ರೀತಿ ಕಬ್ಬಿಗೆ ಎಫ್ಆರ್ಪಿ ನಿಗದಿಪಡಿಸುವವರು ಕೇಂದ್ರ ಸರ್ಕಾರ. ಎಥೆನಾಲ್ ಹಂಚಿಕೆ ನಿಗದಿಪಡಿಸುವವರು ಕೇಂದ್ರ ಸರ್ಕಾರ. ಸಕ್ಕರೆ ರಫ್ತು ಮಿತಿ ನಿಗದಿಪಡಿಸುವವರು ಸಹ ಕೇಂದ್ರ ಸರ್ಕಾರ.
• ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಎಫ್ಆರ್ಪಿ ನಿಗದಿಪಡಿಸುವುದು ಕೇಂದ್ರ ಸರ್ಕಾರದ ಕೆಲಸ. ಕೇಂದ್ರ ಸರ್ಕಾರ ದಿನಾಂಕ 6-05-2025ರಂದು ಕಬ್ಬಿಗೆ ಎಫ್ಆರ್ಪಿ ನಿಗದಿಪಡಿಸಿದೆ. ಈ ಎಫ್ಆರ್ಪಿಯಲ್ಲಿ ಸಾಗಾಟ ಮತ್ತು ಕಟಾವು ವೆಚ್ಚ ಸಹ ಸೇರಿದೆ. ಸಕ್ಕರೆಯ ಎಂಎಸ್ಪಿ ಹೆಚ್ಚಳ ಮಾಡುವಂತೆ ಈ ಹಿಂದೆಯೇ ಕೇಂದ್ರ ಸರ್ಕಾರಕ್ಕೆ ನಾವು ಮನವಿ ಸಲ್ಲಿಸಿದ್ದೇವೆ. ಆದರೆ ಕೇಂದ್ರ ಸರ್ಕಾರ ಇದುವರೆಗೆ ಎಂಎಸ್ಪಿ ಹೆಚ್ಚಳ ಮಾಡಿಲ್ಲ.
• ಕೇಂದ್ರ ಸರ್ಕಾರ ಕಬ್ಬಿಗೆ ನಿಗದಿಪಡಿಸಿರುವ ಎಫ್ಆರ್ಪಿ ವೈಜ್ಞಾನಿಕವಾಗಿಲ್ಲ. ಸಕ್ಕರೆ ಕಾರ್ಖಾನೆಗಳು ಇಳುವರಿ ರಿಕವರಿ ಕಡಿಮೆ ತೋರಿಸುತ್ತಿವೆ. ಇದನ್ನು ತಪ್ಪಿಸಲು ಪ್ರತಿ ಕಾರ್ಖಾನೆ ಎದುರು ಸರ್ಕಾರದ ವತಿಯಿಂದ ಪ್ರಯೋಗಾಲಯ ತೆರೆಯಬೇಕು. ಕೆಲವು ಕಾರ್ಖಾನೆಗಳು ಹಳೆಯ ಬಾಕಿಯನ್ನು ಉಳಿಸಿಕೊಂಡಿದ್ದು, ಇದರ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡರು ಮನವಿ ಮಾಡಿದ್ದಾರೆ.
• ತೂಕದಲ್ಲಿ ಮೋಸ, ರಿಕವರಿ ಕಡಿಮೆ ತೋರಿಸುವುದು ಸೇರಿದಂತೆ ಸಕ್ಕರೆ ಕಾರ್ಖಾನೆಗಳ ಕುರಿತು ಕಬ್ಬು ಬೆಳೆಗಾರರಿಗೆ ಇರುವ ಎಲ್ಲಾ ಅಹವಾಲುಗಳನ್ನು ಬಗೆಹರಿಸಲಾಗುವುದು ಎಂದು ರೈತ ಮುಖಂಡರಿಗೆ ತಿಳಿಸಿದ್ದೇವೆ.
• ಕಬ್ಬಿನ11.25 ರಿಕವರಿಗೆ ರೂ.3250 ಸಕ್ಕರೆ ಕಾರ್ಖಾನೆಗಳು ಪಾವತಿಸಬೇಕು. ಇದಕ್ಕೆ ಸರ್ಕಾರ ರೂ.50 ಹೆಚ್ಚುವರಿಯಾಗಿ ಪಾವತಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಇದು ಇಡೀ ರಾಜ್ಯಕ್ಕೆ ಅನ್ವಯವಾಗಲಿದೆ.
• ಸಕ್ಕರೆ ಕಾರ್ಖಾನೆಗಳು ಮಾರಾಟ ಮಾಡುವ ವಿದ್ಯುತ್ ಮೇಲೆ ಪ್ರತಿ ಯುನಿಟ್ಗೆ 60 ಪೈಸೆ ತೆರಿಗೆ ನಿಗದಿಪಡಿಸುವ ಪ್ರಸ್ತಾವನೆಯನ್ನು ಮರು ಪರಿಶೀಲಿಸಬೇಕು ಎಂದು ಕಾರ್ಖಾನೆ ಮಾಲೀಕರು ಮನವಿ ಮಾಡಿದ್ದು, ಇದರ ಮರು ಪರಿಶೀಲನೆ ನಡೆಸಲಾಗುವುದು.
• ಸಕ್ಕರೆ ಕಾರ್ಖಾನೆಗಳು ಎದುರಿಸುತ್ತಿರುವ ಸಮಸ್ಯೆಗಳು ಅದೇ ರೀತಿ ಕಬ್ಬು ಬೆಳೆಗಾರರು ಸಕ್ಕರೆ ಕಾರ್ಖಾನೆಗಳಿಂದ ಎದುರಿಸುತ್ತಿರುವ ಸಮಸ್ಯೆ ಕುರಿತು ಸಮಾಲೋಚನೆ ನಡೆಸಿ ಪರಿಹಾರ ಒದಗಿಸಲು ಪ್ರತ್ಯೇಕ ಸಭೆ ನಡೆಸಲಾಗುವುದು.
ಸಿಎಂ ಸಿದ್ಧರಾಮಯ್ಯ ಪ್ರತಿ ಟನ್ ಕಬ್ಬಿಗೆ ರೂ.3,300 ನೀಡುವುದಾಗಿ ಘೋಷಿಸುತ್ತಿದ್ದಂತೆ, ಅತ್ತ ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಂತ ರೈತರು ಸಂಭ್ರಮಾಚರಣೆಯನ್ನು ಮಾಡಿದ್ದು ಕಂಡು ಬಂದಿತು. ಆ ಮೂಲಕ ತಮ್ಮ ಸಂತಸವನ್ನು ಹೊರ ಹಾಕಿದರು.








