ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಇಡೀ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು, ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಅಧ್ಯಕ್ಷರು ಮತ್ತು ಸದಸ್ಯರಿಗಾಗಿ ಗುರುವಾರ ಹಮ್ಮಿಕೊಂಡಿದ್ದ ವಿಡಿಯೋ ಕಾನ್ಫರೆನ್ಸ್ ಮೂಲಕದ ಯೂಟ್ಯೂಬ್ ಲೈವ್ ಕಾರ್ಯಾಗಾರವು ಯಶಸ್ವಿಯಾಗಿ ನಡೆಯಿತು.
ಈ ಮಹತ್ವದ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಸಚಿವ ಶ್ರೀ ಮಧು ಬಂಗಾರಪ್ಪ ಅವರು SDMC ಸದಸ್ಯರನ್ನು ಶಾಲಾ ವ್ಯವಸ್ಥೆಯ ಸಕ್ರಿಯ ಪಾಲುದಾರರೆಂದು ಬಣ್ಣಿಸಿದರು ಮತ್ತು ಸರ್ಕಾರಿ ಶಾಲೆಗಳ ಸುಧಾರಣೆಗಾಗಿ ಸರ್ಕಾರ ಕೈಗೊಂಡಿರುವ ಪ್ರಮುಖ ಯೋಜನೆಗಳನ್ನು ಹಂಚಿಕೊಂಡರು.
ಕಲ್ಯಾಣ ಕರ್ನಾಟಕ ಸೇರಿದಂತೆ ವಿವಿಧ ಭಾಗಗಳಿಗೆ ಸುಮಾರು 12,392 ಶಿಕ್ಷಕರನ್ನು ನೇಮಕಾತಿ ಮಾಡಲಾಗಿದೆ. ಇದಲ್ಲದೆ, ಈ ಹಿಂದೆ 10-15 ಸಾವಿರ ಅತಿಥಿ ಶಿಕ್ಷಕರನ್ನು ಮಾತ್ರ ನೇಮಕ ಮಾಡಲಾಗುತ್ತಿತ್ತು, ಆದರೆ ಪ್ರಸ್ತುತ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಮೊದಲೇ 51,000 ಅತಿಥಿ ಶಿಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ಹೇಳಿದರು
ಮುಂದಿನ ಯೋಜನೆಗಳ ಕುರಿತು ಮಾತನಾಡಿದ ಅವರು, ಮುಂದಿನ ಶೈಕ್ಷಣಿಕ ವರ್ಷದೊಳಗೆ 11,000ಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಸರ್ಕಾರಿ ಶಾಲಾ ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪೌಷ್ಟಿಕ ಆಹಾರ ಯೋಜನೆಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದ್ದು, ಈ ಮೊದಲು 8ನೇ ತರಗತಿಯವರೆಗೆ ನೀಡುತ್ತಿದ್ದ ವಾರದಲ್ಲಿ ಎರಡು ಮೊಟ್ಟೆಗಳನ್ನು (ಅಥವಾ ಬಾಳೆಹಣ್ಣು) ಈಗ 10ನೇ ತರಗತಿವರೆಗೂ ವಿಸ್ತರಿಸಲಾಗಿದೆ. ಜೊತೆಗೆ, ಅಜೀಂ ಪ್ರೇಮ್‌ಜಿ ಫೌಂಡೇಶನ್ (APF) ಸಹಕಾರದೊಂದಿಗೆ ಹೆಚ್ಚುವರಿಯಾಗಿ ವಾರಕ್ಕೆ ನಾಲ್ಕು ಮೊಟ್ಟೆಗಳನ್ನು (ಅಥವಾ ಬಾಳೆಹಣ್ಣು) ನೀಡಲಾಗುತ್ತಿದೆ. ‘ಸಾಯಿಸೋರ್’ ಯೋಜನೆಯಡಿ ವಾರದಲ್ಲಿ ಮೂರು ದಿನ ನೀಡುತ್ತಿದ್ದ ರಾಗಿ ಮಾಲ್ಟ್ ವಿತರಣೆಯನ್ನು ಈಗ ವಾರಕ್ಕೆ ಐದು ದಿನಗಳಿಗೆ ವಿಸ್ತರಿಸಲಾಗಿದೆ ಎಂದರು.
ಇನ್ನು ಶೈಕ್ಷಣಿಕ ಸುಧಾರಣಾ ಕ್ರಮಗಳ ಕುರಿತು ಪ್ರಸ್ತಾಪಿಸಿದ ಸಚಿವರು, ಮಾನ್ಯ ಮುಖ್ಯಮಂತ್ರಿಗಳು 2023ರ ನವೆಂಬರ್ 1ರಂದು ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಸೌಲಭ್ಯವನ್ನು ಘೋಷಿಸಿದ್ದು, ಉಚಿತ ವಿದ್ಯುತ್ ಸೌಲಭ್ಯದಿಂದಾಗಿ ಶಿಕ್ಷಕರು ಸಂಜೆ ವೇಳೆಯಲ್ಲಿ ವಿಶೇಷ ತರಗತಿಗಳನ್ನು (Special Classes) ನಡೆಸಲು ಸಾಧ್ಯವಾಗಿದ್ದು, ಎಸ್ ಡಿ ಎಮ್ ಸಿ ಸದಸ್ಯರು ಶಿಕ್ಷಕರನ್ನು ಪ್ರೋತ್ಸಾಹಿಸಿ, ವಾರದಲ್ಲಿ ಒಂದು ದಿನವಾದರೂ ವಿಶೇಷ ತರಗತಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದರು.
ಅಲ್ಲದೆ, ಎಸ್ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಮೂರು ಪರೀಕ್ಷೆಗಳ (ಎರಡನೇ ಮತ್ತು ಮೂರನೇ ಪರೀಕ್ಷೆಗಳು) ಪರಿಚಯಿಸಿರುವುದು ವಿದ್ಯಾರ್ಥಿಗಳು ಒಂದು ವರ್ಷ ಕಾಯುವ ಅನಿವಾರ್ಯತೆಯನ್ನು ತಪ್ಪಿಸಿದೆ ಎಂದು ಹೇಳಿದರು.
ಈ ಪರೀಕ್ಷಾ ಸುಧಾರಣೆಯಿಂದಾಗಿ, ಎಸ್ಎಸ್‌ಎಲ್‌ಸಿ ಫಲಿತಾಂಶವು 60% ರಿಂದ 79.81% ಕ್ಕೆ ಮತ್ತು ಪಿಯುಸಿ ಫಲಿತಾಂಶವು 85.19% ಕ್ಕೆ ಏರಿಕೆಯಾಗಿದೆ ಎಂದು ಅವರು ತಿಳಿಸಿದರು.
ಸಚಿವರು ರಾಜ್ಯಾದ್ಯಂತ ನಡೆಯಲಿರುವ ಎರಡು ಪ್ರಮುಖ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಮೊದಲಿಗೆ, ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (KPS) 900 ಶಾಲೆಗಳಾಗಿ ಮೇಲ್ದರ್ಜೆಗೇರಿಸುವ ಕಾರ್ಯ ನಡೆಯುತ್ತಿದ್ದು (ಹಿಂದಿನ 308 ಶಾಲೆಗಳಿಂದ), ಇದಕ್ಕಾಗಿ ಸುಮಾರು ₹3500 ಕೋಟಿಗೂ ಹೆಚ್ಚು ಹಣವನ್ನು ಬಳಸಲಾಗುತ್ತಿದೆ.
KPS ಶಾಲೆಗಳಲ್ಲಿ ಎಲ್‌ಕೆಜಿ ಯಿಂದ ಪಿಯುಸಿವರೆಗೆ ಒಂದೇ ಸೂರಿನಡಿ ಶಿಕ್ಷಣ, ಕಂಪ್ಯೂಟರ್ ಶಿಕ್ಷಣ, ದ್ವಿಭಾಷಾ ಮಾಧ್ಯಮ ಮತ್ತು ಸ್ಕಿಲ್ ಡೆವಲಪ್‌ಮೆಂಟ್ ಲಭ್ಯವಿದೆ.
ಎರಡನೆಯದಾಗಿ, ಮಕ್ಕಳ ದಿನಾಚರಣೆಯಾದ ನವೆಂಬರ್ 14ರಂದು ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರಾಜ್ಯದ ಸುಮಾರು 56,000 ಶಾಲೆ/ಕಾಲೇಜುಗಳಲ್ಲಿ ಪೋಷಕ-ಶಿಕ್ಷಕರ ಸಭೆ (ಮೆಗಾ ಪಿಟಿಎಂ) ನಡೆಯಲಿದ್ದು, ಅಂದು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ವಿಶೇಷ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಘೋಷಿಸಿದರು.
ಸಚಿವರು SDMC ಸದಸ್ಯರು ರಾಜಕಾರಣದಿಂದ ಹೊರತಾಗಿ ಶಾಲೆಯ ಹಿತಕ್ಕಾಗಿ ಕೆಲಸ ಮಾಡುವಂತೆ ಕರೆ ನೀಡಿದರು ಮತ್ತು ಇಲಾಖೆಯ ಯಾವುದೇ ನಿರ್ಧಾರದ ಮಾಹಿತಿ ಮೊದಲು SDMC ಸದಸ್ಯರಿಗೆ ತಲುಪಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಯೂಟ್ಯೂಬ್ ಲೈವ್ ಮುಖಾಂತರ ನಡೆದ ಈ ಕಾರ್ಯಗಾರದಲ್ಲಿ, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಆಯುಕ್ತ ವಿಕಾಶ್ ಕಿಶೋರ್ ಸುರಳ್ಕರ್, ಪಿಯುಸಿ ನಿರ್ದೇಶಕರಾದ ಭರತ್ ಎಸ್., ಶಾಲಾ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳಾದ ಡಾ. ಕೆ. ವಿದ್ಯಾಕುಮಾರಿ ಮತ್ತು ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ, ಸಚಿವ ರಾಮಲಿಂಗಾ ರೆಡ್ಡಿ ದಿಢೀರ್ ಭೇಟಿ








