ಬೆಂಗಳೂರು: ನಗರದಲ್ಲಿ ಕುಡಿದು ಬರುತ್ತಿದ್ದಂತ ಚಾಲಕರಿಂದ ಲಂಚ ಪಡೆದು ಡ್ಯೂಟಿ ನೀಡುತ್ತಿದ್ದರು ಎನ್ನುವ ಕಾರಣಕ್ಕಾಗಿ ಬಿಎಂಟಿಸಿಯ ಅಧಿಕಾರಿಗಳು ಸೇರಿದಂತೆ 9 ಮಂದಿಯನ್ನು ಅಮಾನತುಗೊಳಿಸಲಾಗಿತ್ತು. ಆದರೇ ಈ ಅಮಾನತ್ತಿನ ಹಿಂದೆ ತನಿಖಾಧಿಕಾರಿ ಸರಿಯಾಗಿ ವರದಿ ನೀಡದೇ, ಮಹಾ ಎಡವಟ್ಟು ಮಾಡಿರುವುದೇ ಇದಕ್ಕೆಲ್ಲ ಕಾರಣ ಎಂಬುದಾಗಿ ಬಿಎಂಟಿಸಿ ಬಲ್ಲ ಮೂಲಗಳಿಂದ ಕನ್ನಡ ನ್ಯೂಸ್ ನೌಗೆ ತಿಳಿದು ಬಂದ ಮಾಹಿತಿಯಾಗಿದೆ. ಹಾಗಾದ್ರೆ ವಾಸ್ತವ ಸತ್ಯ ಏನು ಅಂತ ಮುಂದೆ ಓದಿ.
ಬಿಎಂಟಿಸಿ ಡಿಪೋದಲ್ಲಿ ಚಾಲಕರಿಗೆ ಡ್ಯೂಟಿಗೆ ಮುನ್ನ ಕುಡಿತ ತಪಾಸಣೆ
ಬಿಎಂಟಿಸಿ ಪ್ರತಿ ಡಿಪೋಗಳಲ್ಲಿಯೂ ಡ್ಯೂಟಿಗೆ ಹಾಜರಾಗುವಂತ ಚಾಲಕರನ್ನು ಕುಡಿತದ ತಪಾಸಣೆಗೆ ಒಳಪಡಿಸಿ, ಕುಡಿದ ಪ್ರಮಾಣವನ್ನು ಪತ್ತೆ ಹಚ್ಚುವ ಪರಿಪಾಟವಿದೆ. ಒಂದು ವೇಳೆ ತಪಾಸಣೆಯ ಸಂದರ್ಭದಲ್ಲಿ ಕುಡಿದು ಬಂದಿರೋದು ಪತ್ತೆಯಾದರೇ ಅಂತವರಿಗೆ ಡ್ಯೂಟಿಯನ್ನು ನೀಡೋದಿಲ್ಲ. ಕುಡಿದು ಡ್ಯೂಟಿಗೆ ಹಾಜರಾಗೋದಕ್ಕೆ ಬಂದಂತ ಚಾಲಕರ ಕುಡಿತರ ಪ್ರಮಾಣವನ್ನು ವರದಿ ಮಾಡಿಕೊಳ್ಳುವಂತ ಡಿಪೋದಲ್ಲಿನ ಅಧಿಕಾರಿಗಳು, ಅವರಿಗೆ ದಂಡವನ್ನು ವಿಧಿಸುವ ನಿಯಮವಿದೆ.
10ಎಂಜಿ/100ಎಂಎಲ್ ಪ್ರಮಾಣದಲ್ಲಿ ಕುಡಿದಿದ್ದರೂ ಡ್ಯೂಟಿ ನೀಡಿಲ್ಲ
ಈ ನಿಯಮ, ಪರಿಪಾಟವಿದ್ದರೂ, ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್ ಚಾಲಕರು ಕುಡಿದು ಬಂದರೂ ಅವರಿಂದ ಹಣ ಪಡೆದು ಡ್ಯೂಟಿ ನೀಡಿದಂತ ಆರೋಪ ಕೇಳಿ ಬಂದಿತ್ತು. ವಾಸ್ತವದಲ್ಲಿ ಈ ರೀತಿಯ ಒಂದೇ ಒಂದು ಪ್ರಕರಣಗಳು ಅಮಾನತ್ತುಗೊಂಡಂತ ಅಧಿಕಾರಿ, ಸಿಬ್ಬಂದಿಗಳ ಕೈವಾಡವಿಲ್ಲ ಎನ್ನಲಾಗುತ್ತಿದೆ. ಅಮಾನತ್ತು ಆದೇಶದಲ್ಲಿ ನೀಡಿರುವಂತ 14ಎಂಜಿ/100ಎಂಎಲ್ ಪ್ರಮಾಣದಲ್ಲಿ ಕುಡಿದಿರುವಂತ ಅಂಶವಿತ್ತು ಎಂಬುದಾಗಿ ನಮೂದಿಸಲಾಗಿದೆ.
ತನಿಖಾಧಿಕಾರಿಗಳು ದಾಖಲಿಸಿರುವಂತ 14ಎಂಜಿ/100ಎಂಎಲ್ ಪ್ರಮಾಣವು ಓರ್ವ ಕಂಡಕ್ಟರ್ ಪರೀಕ್ಷೆಯನ್ನು ಮಾಡಿದಂತ ಸಂದರ್ಭದಲ್ಲಿ ಬಂದಿದೆ ಎನ್ನಲಾಗುತ್ತಿದೆ. ಆವರು ಚಾಲಕರಾಗಿ ಕರ್ತವ್ಯ ನಿರ್ವಹಿಸಿಲ್ಲ.
ಮದ್ಯಪಾನ ಸೇವನೆಯ ಸರ್ಕಾರ ನಿಯಮಗಳೇನು?
ಅಂದಹಾಗೇ ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು ಎಂಬುದು ಸರ್ಕಾರದ ನಿಯಮ. ಸರ್ಕಾರದ ನಿಯಮದಂತೆ ವಾಹನ ಚಲಾಯಿಸುವವರು ಪರೀಕ್ಷೆಗೆ ಒಳಪಟ್ಟಂತ ಸಂದರ್ಭದಲ್ಲಿ ಅವರ ದೇಹದಲ್ಲಿ ಮೋಟರ್ ವೆಹಿಕಲ್ ಆಕ್ಟ್ 185ರ 1988ರಡಿಯಲ್ಲಿ ಮದ್ಯಪಾನ ಪ್ರಮಾಣ 30ಎಂಜಿ/100ಎಂಎಲ್ ಇದ್ದದ್ದು ಕಂಡು ಬಂದರೇ ಶಿಕ್ಷಾರ್ಹ ಅಪರಾಧ, ದಂಡ, ವಾಹನ ಸೀಜ್, ಡ್ರೈವಿಂಗ್ ಲೈಸೆನ್ಸ್ ಅಮಾನತು ಸೇರಿದಂತೆ ವಿವಿಧ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ.
ಸರ್ಕಾರದ ನಿಯಮವೇ ಹೀಗೆ ಇರುವಾಗ 14ಎಂಜಿ/100ಎಂಎಲ್ ಪ್ರಮಾಣದಲ್ಲಿ ಕುಡಿದಿದ್ದರೂ ಡ್ಯೂಟಿ ನೀಡಿದ್ದಾರೆ ಎಂಬುದಾಗಿ ಬಿಎಂಟಿಸಿ ತನಿಖಾಧಿಕಾರಿಗಳು ವರದಿಯನ್ನು ನೀಡಿ ಮಹಾ ಎಡವಟ್ಟು ಮಾಡಿದ್ದಾರೆ. ಆದರೇ ಹೀಗೆ ಮದ್ಯಪಾನ ವರದಿಯಾದ ನಿರ್ವಾಹಕ ರಾತ್ರಿ ಡಿಪೋದಲ್ಲಿ ಮಲಗಿದ್ದು, ಮರುದಿನ ಮಧ್ಯಾಹ್ನದ ಡ್ಯೂಟಿಗೆ ಹಾಜರಾಗಿರುವುದಾಗಿ ಡಿಪೋದಲ್ಲಿನ ದಾಖಲೆಗಳಲ್ಲೇ ಉಲ್ಲೇಖವಿದೆ ಎಂಬುದಾಗಿ ಹೇಳಲಾಗುತ್ತಿದೆ. ಹೀಗಿದ್ದರೂ ನಿಯಮವನ್ನು ಪಾಲಿಸಿ, ಕರ್ತವ್ಯ ನಿರ್ವಹಿಸಿದರೂ ತನಿಖಾಧಿಕಾರಿ ಎಡವಟ್ಟು ವರದಿಯಿಂದಾಗಿ 9 ಮಂದಿಯನ್ನು ಅಮಾನತುಗೊಂಡಂತೆ ಆಗಿದೆ.
ತಪ್ಪು ಮುಚ್ಚಿಕೊಳ್ಳಲು ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆ
ಬಿಎಂಟಿಸಿ ತನಿಖಾಧಿಕಾರಿಗಳು ತಪ್ಪು ವರದಿಯನ್ನು ನೀಡಿದ ನಂತ್ರ, ಸಿಬ್ಬಂದಿಗಳು ತನಿಖಾಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಸರ್ಕಾರದ ನಿಯಮಗಳು, ತಾವು ಪಾಲಿಸಿದಂತ ಕರ್ತವ್ಯ ನಿಷ್ಠಯನ್ನು ಉನ್ನತ ಮಟ್ಟದ ಅಧಿಕಾರಿಗಳ ಬಳಿಯಲ್ಲಿ ಅಳಲು ತೋಡಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಎಡವಟ್ಟಿನ ವರದಿ ನೀಡಿದ ತಪ್ಪು ಮುಚ್ಚಿಕೊಳ್ಳಲು ಈಗ ಉನ್ನತ ಮಟ್ಟದ ಅಧಿಕಾರಿಗಳು ಮತ್ತೊಮ್ಮೆ ತನಿಖೆ ನಡೆಸಿದ್ದಾರೆ. ತನಿಖೆ ನಡೆಸಿದಂತ ಉನ್ನತ ಮಟ್ಟದ ಅಧಿಕಾರಿಗಳಾದರೂ ಸರಿಯಾದ ವರದಿಯನ್ನು ನೀಡಿ, ತಪ್ಪೇ ಮಾಡದೇ ಶಿಕ್ಷೆಗೆ ಗುರಿಯಾದಂತ ಅಧಿಕಾರಿ, ಸಿಬ್ಬಂದಿಗಳಿಗೆ ನ್ಯಾಯ ಒದಗಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ತನಿಖಾಧಿಕಾರಿ ತಪ್ಪು ವರದಿಯಿಂದ ಬಿಎಂಟಿಸಿಗೆ ಕೆಟ್ಟ ಹೆಸರು, ಕಳಂಕ
ಬೆಂಗಳೂರಲ್ಲಿ ಬಿಎಂಟಿಸಿಯಿಂದ ಜನತೆಗೆ ಉತ್ತಮ ಪ್ರಯಾಣದ ಸೌಲಭ್ಯವನ್ನು ಕಲ್ಪಿಸಿದೆ. ಉತ್ತಮ ಹೆಸರು ಗಳಿಸಿರುವಂತ ಬಿಎಂಟಿಸಿಗೆ ತನಿಖಾಧಿಕಾರಿಗಳ ತಪ್ಪು ವರದಿಯಿಂದಲೇ ಕೆಟ್ಟ ಹೆಸರು, ಕಳಂಕ ಮೂಡಿದಂತೆ ಈಗ ಆಗಿದೆ. ಬಿಎಂಟಿಸಿ ಬಸ್ ಅಪಘಾತದಂತ ಸಂದರ್ಭದಲ್ಲಿ ಕುಡಿತು ಅಪಘಾತವಾದಂತ ಪ್ರಮಾಣಗಳ ಸಂಖ್ಯೆ ಅತೀ ವಿರಳ. ಇದಕ್ಕೆ ಕಾರಣ ಡಿಪೋದಲ್ಲಿ ಪ್ರತಿನಿತ್ಯ ಡ್ಯೂಟಿಗೆ ಹಾಜರಾಗುವಂತ ಚಾಲಕವನ್ನು ಮದ್ಯಪಾನ ಸೇವನೆ ಪತ್ತೆಗೆ ಕಟ್ಟು ನಿಟ್ಟಿನ ರೀತಿಯಲ್ಲಿ ಒಳಪಡಿಸುವುದೇ ಆಗಿದೆ.
ಹೀಗಿದ್ದರೂ ಬಿಎಂಟಿಸಿಯ ಕೇಂದ್ರ ಕಚೇರಿಯ ತನಿಖಾಧಿಕಾರಿ ರಮ್ಯಾ ಎಂಬುವರು ಕುಡಿದು ಚಾಲನೆ ಮಾಡೋದಕ್ಕೆ ಚಾಲಕರಿಗೆ ಡಿಪೋದಲ್ಲಿ ಅವಕಾಶ ಮಾಡಿಕೊಡಲಾಗಿದೆ ಎಂಬುದಾಗಿ ವರದಿಯನ್ನು ನೀಡಿದ್ದಾರೆ. ಇದಕ್ಕೂ ಮುನ್ನಾ ನೌಕರರಿಗೆ ಲಂಚಕ್ಕೆ ಆಮಿಷವೊಡ್ಡಿದ್ದ ಆರೋಪ ಕೇಳಿ ಬಂದಿದೆ. ಆದರೇ ಬಿಎಂಟಿಸಿ ಅಧಿಕಾರಿ, ಸಿಬ್ಬಂದಿಗಳು ನಾವು ತಪ್ಪೇ ಮಾಡಿಲ್ಲ. ಹೀಗಿರುವಾಗ ನಿಮಗೆ ಲಂಚವೇಕೆ ನೀಡಬೇಕು ಎಂಬುದಾಗಿ ತಿರುಗಿ ಬಿದ್ದಿದ್ದರು ಎನ್ನಲಾಗಿದೆ. ಇರಿ ನಿಮಗೆ ಬುದ್ಧಿ ಕಲಿಸುವೆ ಎನ್ನುವಂತೆ ಕೋಪಗೊಂಡ ಅವರು ಇಲಾಖೆಗೆ ತಪ್ಪು ವರದಿಯನ್ನು ನೀಡಿ, ಆ ಮೂಲಕ ಬಿಎಂಟಿಸಿಗೆ ಕೆಟ್ಟ ಹೆಸರು ಬರುವಂತೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಬಿಲ್ ಉಳಿಸಿಕೊಂಡಿಲ್ಲ, ಎಲ್ಲವೂ ಪಾವತಿ. ತಪ್ಪು ವರದಿ ನೀಡಿದ ತನಿಖಾಧಿಕಾರಿ ವಿರುದ್ಧ ಕ್ರಮಕ್ಕೆ ಒತ್ತಾಯ
ಬಿಎಂಟಿಸಿ ಸಹಾಯಕ ಭದ್ರತಾ ಮತ್ತು ಜಾಗೃತಾಧಿಕಾರಿ ಸಿ.ಕೆ ರಮ್ಯಾ ಅವರು ಮದ್ಯಪಾನ ಮಾಡಿರುವ ಪ್ರಕರಣಗಳಲ್ಲಿ ದಂಡದ ಹಣ ಕಡಿತಗೊಳಿಸದೇ ಇರುವ ಬಗ್ಗೆ ವರದಿ ನೀಡಿದ್ದಾರೆ. ಆದರೇ ಡಿಪೋದಲ್ಲಿ ಬಿಲ್ ಜನರೇಟ್ ಮಾಡಿ ಕಳುಹಿಸಿದರೇ, ದಂಡವನ್ನು ಕೇಂದ್ರ ಕಚೇರಿಯಲ್ಲಿ ಪಾವತಿಸಿ ಬರುವಂತ ಪರಿಪಾಟವಿದೆ. ಹೀಗಿದ್ದರೂ ಬಿಲ್ ಪಾವತಿಯಲ್ಲಿ ವ್ಯತ್ಯಯ ಉಂಟಾಗುವುದು ಹೇಗೆ ಎಂಬುದಾಗಿ ಹಲವು ನೌಕರರ ಪ್ರಶ್ನೆಯಾಗಿದೆ. ಅಲ್ಲದೇ ಎರಡನೇ ಬಾರಿಯ ತನಿಖೆಯಲ್ಲಿ ಮದ್ಯಪಾನ ಮಾಡಿರುವಂತ ಪ್ರಕರಣದಲ್ಲಿ ಯಾವುದೇ ಬಿಲ್ ಬಾಕಿ ಇಲ್ಲ ಎಂಬುದಾಗಿಯೂ ತನಿಖಾಧಿಕಾರಿಗಳ ಗಮನಕ್ಕೆ ಸೂಕ್ತ ದಾಖಲೆಯಿಂದ ಬಂದಿರುವುದಾಗಿ ಹೇಳಲಾಗುತ್ತಿದೆ.
ಅಂದಹಾಗೇ ಸಿ.ಕೆ ರಮ್ಯ ಅವರು ಮಾಡಿದಂತ ತಪ್ಪು ಮುಚ್ಚಿ ಹಾಕಲು, ತನಿಖೆಗೆ ಇಳಿದಿರುವಂತ ಹಿರಿಯ ಅಧಿಕಾರಿಗಳು ಅದನ್ನು ಮುಚ್ಚಿ ಹಾಕಲು, ನಿಯಮಾವಳಿ ಮೀರಿ, ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ತಪ್ಪು ವರದಿ ನೀಡಿ, ತಪ್ಪೇ ಮಾಡದ ಅಧಿಕಾರಿ, ನೌಕರರ ಅಮಾನತಿಗೆ ಕಾರಣವಾದಂತ ಸಹಾಯ ಭದ್ರತಾ ಮತ್ತು ಜಾಗೃತಾಧಿಕಾರಿ ಸಿ.ಕೆ ರಮ್ಯಾ ವಿರುದ್ಧವೂ ಕ್ರಮವಾಗಬೇಕು ಎಂಬುದು ಬಿಎಂಟಿಸಿ ನೌಕರರ ಒತ್ತಾಯವಾಗಿದೆ.
ಹಿಂದಿನ ಎಂಡಿ ತನಿಖೆಯನ್ನೇ ನಡೆಸದೇ ಫೈಲ್ ಪೆಂಡಿಂಗ್, ಹಾಲಿ ಎಂಡಿ ಕಿವಿಚುಚ್ಚಿ ಕೇಸ್ ಓಪನ್
ಈ ಹಿಂದಿನ ಬಿಎಂಟಿಸಿ ಎಂಡಿಯವರು ಈ ಪ್ರಕರಣದ ಬಗ್ಗೆ ಮಾಹಿತಿ ತಿಳಿದಾಗ ಇದೊಂದು ಸಣ್ಣ ಪ್ರಕರಣ, ತನಿಖೆ ನಡೆಸಿ ಅಧಿಕಾರಿ, ಸಿಬ್ಬಂದಿಗಳನ್ನು ಅಮಾನತ್ತಿನಂತ ಶಿಕ್ಷೆಗೆ ಗುರಿಪಡಿಸಬಹುದಾದ ಕೇಸ್ ಅಲ್ಲ ಎಂಬುದನ್ನು ಅರಿತು, ಪ್ರಕರಣದ ಬಗ್ಗೆ ಅಷ್ಟೇನು ಪ್ರಾಮುಖ್ಯತೆ ನೀಡಿರಲಿಲ್ಲ. ಆದರೇ ಹಾಲಿ ಎಂಡಿಗೆ ಬಿಎಂಟಿಸಿ ಕೇಂದ್ರ ಕಚೇರಿಯ ಅಧಿಕಾರಿ, ಸಿಬ್ಬಂದಿಗಳು ಕಿವಿಚುಚ್ಚಿ, ಇಲ್ಲ ಸಲ್ಲದ ತಪ್ಪು ಮಾಹಿತಿಗಳನ್ನು ಪ್ರಕರಣದ ಬಗ್ಗೆ ನೀಡಿದ್ದೇ ಈಗ ಬಿಎಂಟಿಸಿ ಬಸ್ ಚಾಲಕರು ಕುಡಿದು ಚಾಲನೆ ಮಾಡುತ್ತಾರೆ ಎಂಬ ಕೆಟ್ಟ ಹೆಸರು ಬರುವಂತೆ ಆಗಿದೆ.
ಒಟ್ಟಾರೆಯಾಗಿ ತಪ್ಪು, ಎಡವಟ್ಟಿನ ವರದಿಯನ್ನು ತನಿಖಾಧಿಕಾರಿಗಳು ನೀಡಿದ್ದರಿಂದ ಬಿಎಂಟಿಸಿಯ ಚಾಲಕರಿಗೆ ಕುಡಿದಿದ್ದರೂ ಡ್ಯೂಟಿ ನೀಡಲಾಗುತ್ತಿದೆ ಎನ್ನುವ ಮನೋಭಾವನೆಯು ಸಾರ್ವಜನಿಕರಲ್ಲಿ ಬರುವಂತೆ ಮಾಡಿದಂತೆ ಆಗಿದೆ. ಹೀಗಾಗಿ ತನಿಖಾಧಿಕಾರಿ ವಿರುದ್ಧವೂ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಆ ಮೂಲಕ ಯಾವುದೇ ತಪ್ಪು ಮಾಡದವರನ್ನು ಅಮಾನತಿಗೆ ಕಾರಣವಾದವರ ವಿರುದ್ಧವೂ ಕ್ರಮವಾಗಬೇಕು ಎಂಬುದು ಬಿಎಂಟಿಸಿ ಸಿಬ್ಬಂದಿಗಳ ಒತ್ತಾಯವಾಗಿದೆ. ಆ ನಿಟ್ಟಿನಲ್ಲಿ ಬಿಎಂಟಿಸಿ ಕ್ರಮ ಕೈಗೊಳ್ಳುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BREAKING: ಬೆಳಗಾವಿಯಲ್ಲಿ ಭುಗಿಲೆದ್ದ ರೈತರ ಕಿಚ್ಚು: ಪೊಲೀಸರು, ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ
PAN Card Alert: ಜನವರಿ 1, 2026ರಿಂದ ನಿಮ್ಮ ‘ಪ್ಯಾನ್ ಕಾರ್ಡ್’ ನಿಷ್ಕ್ರಿಯ, ಏಕೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ








