ಶಿವಮೊಗ್ಗ: ಬೀದಿ ಬದಿಯ ವ್ಯಾಪಾರಿಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ಸಾಗರ ನಗರಸಭೆ ಪೌರಾಯುಕ್ತ ಹೆಚ್.ಕೆ ನಾಗಪ್ಪ ನಿಂದಿಸಿದ ವೀಡಿಯೋ ವೈರಲ್ ಆಗಿತ್ತು. ಈ ಬೆನ್ನಲ್ಲೇ ಸಾಗರ ನಗರಸಭೆ ಪೌರಾಯುಕ್ತರ ಹುದ್ದೆಯಿಂದ ಮುಕ್ತಗೊಳಿಸುವಂತೆ ಡಿಸಿ ಅವರಿಗೆ ಪತ್ರದಲ್ಲಿ ಮನವಿ ಮಾಡಿರುವುದಾಗಿ ಹೇಳಲಾಗುತ್ತಿದೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದಂತ ಹೆಚ್.ಕೆ ನಾಗಪ್ಪ ಅವರು, ನವೆಂಬರ್.31, 2025ರಂದು ಕನ್ನಡ ರಾಜ್ಯೋತ್ಸವದ ಹಿಂದಿನ ದಿನದಂದು ಕೆಳದಿ ರಸ್ತೆಯಲ್ಲಿನ ಕೆಳದಿ ಚೆನ್ನಮ್ಮ ವೃತ್ತದಲ್ಲಿ ಕನ್ನಡ ರಾಜ್ಯೋತ್ಸವ ನಡೆಸಲು ತಯಾರಿ ನಡೆಸಲಾಗಿತ್ತು. ಈ ವೃತ್ತದಲ್ಲಿ ಸುಮಾರು 14 ಪೆಟ್ಟಿಗೆ ಅಂಗಡಿಗಳಿದ್ದವು. ನವೆಂಬರ್.1, 2025ರ ಕನ್ನಡ ರಾಜ್ಯೋತ್ಸವದಂದು ವಿದ್ಯಾರಣ್ಯ ಜೋತಿಯನ್ನು ಅದ್ಧೂರಿಯಾಗಿ ಸ್ವೀಕರಿಸುವಂತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಎಂದರು.
ಸಾಗರದ ಕೆಳದಿ ಚೆನ್ನಮ್ಮ ವೃತ್ತದಲ್ಲಿ ನವೆಂಬರ್.1ರಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದಂತ ಕಾರ್ಯಕ್ರಮಕ್ಕೆ ಅಲ್ಲಿದ್ದಂತ ಗೂಡಂಗಡಿಗಳು ಅಡ್ಡಿಯಾಗುತ್ತಿದ್ದವು. ಅವುಗಳನ್ನು ಒಂದು ದಿನದ ಮಟ್ಟಿಗೆ ತೆರವುಗೊಳಿಸಲು ಎರಡು ದಿನಗಳ ಹಿಂದೆಯೇ ಸೂಚಿಸಲಾಗಿತ್ತು. ಸುಮಾರು 13 ಅಂಗಡಿಗಳು ನಗರಸಭೆಯ ಸೂಚನೆಯ ಮೇರೆಗೆ ತೆರವುಗೊಳಿಸಿದ್ದರು. ಆದರೇ ಒಂದು ಅಂಗಡಿಯವರು ಮಾತ್ರ ತೆರವುಗೊಳಿಸಿರಲಿಲ್ಲ. ನಮ್ಮ ನಗರಸಭೆ ನೌಕರರ ವಿರುದ್ಧ ದೌರ್ಜನ್ಯ ನಡೆಯುತ್ತಿದೆ ಎಂಬ ಮಾಹಿತಿ ಆಧರಿಸಿ, ಸ್ಥಳಕ್ಕೆ ತೆರಳಿದ್ದೆನು. ಅವರು ತೆರವುಗೊಳಿಸೋದಕ್ಕೆ ಒಪ್ಪದಿದ್ದಾಗ ಆಯ್ತು ಇಟ್ಟುಕೊಳ್ಳಿ ಎಂಬುದಾಗಿ ತಿಳಿಸಿ ಬಂದಿದ್ದೆ ಎಂದರು.
ನಾನು ಬೀದಿ ಬದಿ ವ್ಯಾಪಾರಿಗಳಿಗೆ ನಿಂದಿಸಿಲ್ಲ
ಕೆಳದಿ ಚೆನ್ನಮ್ಮ ವೃತ್ತದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವೇದಿಕೆಯನ್ನು ಸಿದ್ಧಗೊಳಿಸಲಾಗುತ್ತಿತ್ತು. ಅವರಿಗೆ ಕೆಲವು ಸೂಚನೆಗಳನ್ನು ನೀಡಲಾಗಿತ್ತು. ಆದರೇ ಅವರಲ್ಲಿ ಸರಿಯಾಗಿ ಹೊಂದಾಣಿಕೆಯಾಗದೇ ಸೂಕ್ತ ರೀತಿಯಲ್ಲಿ ವೇದಿಕೆಯನ್ನು ಸಿದ್ಧಗೊಳಿಸಿರಲಿಲ್ಲ. ಹೀಗಾಗಿ ಕಾರ್ಯಕ್ರಮ ಮಾಡುತ್ತಿದ್ದಂತ ಸಂಘಟನೆಯ ಪ್ರದೀಪ್ ಎಂಬುವರಿಗೆ ನಾನು ಮಾತನಾಡಿದ್ದೇನೆ. ಅದರ ಹೊರತಾಗಿ ನಾನು ಯಾವುದೇ ಬೀದಿ ಬದಿಯ ವ್ಯಾಪಾರಿಗೆ ನಿಂದಿಸಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದರು.
ನಾನೇ ಕಳೆದ ಕೆಲ ವರ್ಷಗಳಿಂದ ಬೀದಿ ಬದಿಯ ವ್ಯಾಪಾರಿಗಳ ಸಂಘದ ಅಧ್ಯಕ್ಷನಾಗಿದ್ದೇನೆ. ಅವರ ಕಷ್ಟ ಸುಖಗಳಿಗೆ ಹಲವು ವರ್ಷಗಳಿಂದ ಸ್ಪಂದಿಸಿದ್ದೇನೆ. ಹಲವು ಸಂದರ್ಭಗಳಲ್ಲಿ ನಾನು ಬೀದಿ ವ್ಯಾಪಾರಿಗಳಿಗೆ ನ್ಯಾಯ ಕೊಡಿಸಿದ್ದೇನೆ. ನಾನು ಯಾವುದೇ ಬೀದಿ ಬದಿಯ ವ್ಯಾಪಾರಿಗಳಿಗೆ ನಿಂದಿಸಿಲ್ಲ. ನಾನು ತಪ್ಪು ಮಾಡಿದ್ದರೇ ಕಾನೂನಿಗಿಂತ ದೊಡ್ಡವನೇನು ಅಲ್ಲ. ನನ್ನ ವಿರುದ್ಧ ದೂರು ನೀಡಲಾಗಿದೆ. ಕಾನೂನಾತ್ಮಕವಾಗಿ ಹೋರಾಡುತ್ತೇನೆ. ಇಂದಿನಿಂದ ಪೌರಾಯುಕ್ತರ ಹುದ್ದೆಯನ್ನು ಬೇರೆಯವರಿಗೆ ವಹಿಸಿಕೊಟ್ಟು, ನಾನು ಈ ಹಿಂದಿನ ಹುದ್ದೆಯಲ್ಲಿ ಮುಂದುವರೆಯುವುದಾಗಿ ತಿಳಿಸಿದರು.
ಸಾಗರ ನಗರಸಭೆ ಪೌರಾಯುಕ್ತರ ಹುದ್ದೆಗೆ ರಾಜೀನಾಮೆ
ಇನ್ನೂ ಅವಾಚ್ಯ ಶಬ್ದಗಳಿಂದ ಹೆಚ್.ಕೆ ನಾಗಪ್ಪ ಸಾರ್ವಜನಿಕವಾಗಿ ನಿಂದಿಸಿದ ವೀಡಿಯೋ ವೈರಲ್ ಆಗಿ, ದೊಡ್ಡಮಟ್ಟದ ಸುದ್ದಿಯಾಗಿತ್ತು. ಈ ಹಿನ್ನಲೆಯಲ್ಲಿ ಸಾಗರ ನಗರಸಭೆಯ ಪೌರಾಯುಕ್ತರ ಹುದ್ದೆಯಿಂದ ಬಿಡುಗಡೆಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರದಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಆ ಮೂಲಕ ಸಾಗರ ನಗರಸಭೆಯ ಪ್ರಭಾರ ಪೌರಾಯುಕ್ತರ ಹುದ್ದೆಯನ್ನು ಹೆಚ್.ಕೆ ನಾಗಪ್ಪ ತೊರೆದು, ಬೇರೆಯವರಿಗೆ ಅಧಿಕಾರ ವಹಿಸಿಕೊಟ್ಟು, ತಾವು ಈ ಹಿಂದಿನ ಎಇಇ ಹುದ್ದೆಯಲ್ಲೇ ಮುಂದುವರೆಯಲಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು








