ಶಿವಮೊಗ್ಗ: ಸಾಗರ ಪೇಟೆ ಠಾಣೆಯ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ 2 ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ 44 ಗ್ರಾಂ ತೂಕದ ಅಂದಾಯು 4,48,000 ಮೌಲ್ಯದ ಬಂಗಾರದ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ. ಒಂದು ಪ್ರಕರಣದಲ್ಲಂತೂ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕಳ್ಳತನವಾದಂತ 24 ಗಂಟೆಯಲ್ಲೇ ಆರೋಪಿಗಳನ್ನು ಪತ್ತೆಹಚ್ಚಿ ಜೈಲುಪಾಲು ಮಾಡಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ಸಾಗರ ಪೇಟೆ ಠಾಣೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಎಎಸ್ಪಿ ಡಾ.ಬೆನಕ ಪ್ರಸಾದ್ ಮಾಹಿತಿ ನೀಡಿದಂತ ಅವರು, ಮನೆಯಲ್ಲಿನ ಒಡವೆ ಕದ್ದ ಬಗ್ಗೆ ಸಾಗರ ಪೇಟೆ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು. ಈ ಸಂಬಂಧ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದಂತ ಕಾರಿಯಪ್ಪ, ರಮೇಶ್ ಅವರ ಮಾರ್ಗದರ್ಶನದಲ್ಲಿ ತಂಡವನ್ನು ರಚಿಸಲಾಗಿತ್ತು ಎಂದರು.
ನನ್ನ ಮೇಲ್ವಿಚಾರಣೆಯಲ್ಲಿ ಸಾಗರ ಪೇಟೆ ಠಾಣೆಯ ಪೊಲೀಸ್ ನಿರೀಕ್ಷಕರಾದಂತ ಪುಲ್ಲಯ್ಯ ರಾಥೋಡ್, ಎಎಸ್ಐ ಮೀರಾಬಾಯಿ, ಅಪರಾಧ ವಿಭಾಗದ ಸಿಬ್ಬಂದಿಗಳಾದಂತ ಹೆಚ್ ಸಿ ಸನಾವುಲ್ಲ, ಪಿಸಿ ಲೋಕೇಶ್, ವಿಶ್ವನಾಥ್, ಕೃಷ್ಣಮೂರ್ತಿ ಒಳಗೊಂಡ ತನಿಖಾ ತಂಡವು ಕ್ಷಿಪ್ರ ಕಾರ್ಯಾಚರಣೆಯನ್ನು ನಡೆಸಿ, ಆರೋಪಿಗಳನ್ನು ಪತ್ತೆ ಹಚ್ಚಿ, ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.

ದಿನಾಂಕ 09-08-2025ರಂದು ವಸಂತ ಲಕ್ಷ್ಮೀ ಎಂಬುವರು ಸಾಗರದ ತಮ್ಮ ಮನೆಯ ದೇವರ ಕೋಣೆಯಲ್ಲಿದ್ದಂತ 24 ಗ್ರಾಂ ತೂಕದ 2,30,000 ಮೌಲ್ಯದ ಬಂಗಾರದ ಸರವನ್ನು ಕಳ್ಳತನ ಮಾಡಿದ್ದಾಗಿ ದೂರು ನೀಡಿದ್ದರು. ಈ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ಪ್ರಕರಣ ದಾಖಲಾದಂತ 24 ಗಂಟೆಯಲ್ಲೇ ಸಾಗರದ ಅಶೋಕ ರಸ್ತೆಯ ನಿವಾಸಿಯಾದಂತ ಎ1 ಆರೋಪಿ ದರ್ಶನ್, ಜೆಪಿ ನಗರದ ಎ2 ಆರೋಪಿ ಅಶೋಕ್ ಎಂಬಾತನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ 23 ಗ್ರಾಂ ತೂಕದ ಚಿನ್ನದ ಸರವನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದರು.
ಇನ್ನೂ ದಿನಾಂಕ 28-10-2025ರಂದು ನಯನ ಎಂಬುವರು ಕೆ ಎಸ್ ಆರ್ ಟಿಸಿ ಬಸ್ಸಿನಲ್ಲಿ ತೆರಳೋದಕ್ಕೆ ನಿಲ್ದಾಣದಲ್ಲಿ ನಿಂತುಕೊಂಡಿದ್ದಾಗ, ಬಸ್ ಹತ್ತುವ ಸಂದರ್ಭದಲ್ಲಿ ತಮ್ಮ ಬ್ಯಾಗಿನಲ್ಲಿದ್ದಂತ 2 ಗ್ರಾಂ ತೂಕದ ಒಂದು ಜೊತೆ ಕಿವಿಯೋಲೆ, 20 ಗ್ರಾಂ ತೂಕದ ನೆಕ್ಲೆಸ್ ಸರ ಸೇರಿದಂತೆ 1,73,000 ಮೌಲ್ಯದ ಒಡವೆಗಳನ್ನು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ನೀಡಿದಂತ ದೂರಿನ ಹಿನ್ನಲೆಯಲ್ಲಿ ಸಿಸಿಟಿವಿ ಪರಿಶೀಲಿಸಿ ಶಂಕಿತ ಆರೋಪಿಯನ್ನು ಗುರುತಿಸಲಾಗಿತ್ತು ಎಂದರು.
ಶಂಕಿತ ಆರೋಪಿಯಾದಂತ ಭದ್ರಾವತಿಯ ಹನುಮಂತ ನಗರದ ನಿವಾಸಿ ಶಾಂತಿ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ವೆಸಗಿರುವುದು ಬೆಳಕಿಗೆ ಬಂದಿತು. ಈ ಪ್ರಕರಣ ಸಂಬಂಧ ಬಂಧಿತ ಆರೋಪಿಯಿಂದ 12 ಗ್ರಾಂ ತೂಕದ ನೆಕ್ಲೆಸ್, 3 ಗ್ರಾಂ ತೂಕದ ಒಂದು ಜೊತೆ ಕಿವಿಯೋಲೆ, 5 ಗ್ರಾಂ ತೂಕದ 2 ಉಂಗುರ ಸೇರಿದಂತೆ ಒಟ್ಟು 20 ಗ್ರಾಂ ತೂಕದ 2,18,000 ಮೌಲ್ಯ ಬಂಗಾರದ ಒಡವೆಗಳನ್ನು ಜಪ್ತಿ ಮಾಡಲಾಗಿದೆ ಎಂಬುದಾಗಿ ತಿಳಿಸಿದರು.
ಈ ತನಿಖಾ ತಂಡದ ಕಾರ್ಯವನ್ನು ಶಿವಮೊಗ್ಗ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್ ಅವರು ಪ್ರಶಂಶಿಸಿ, ಅಭಿನಂದಿಸಿರುವುದಾಗಿ ಸಾಗರ ಉಪ ವಿಭಾಗದ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದಂತ ಡಾ.ಬೆನಕ ಪ್ರಸಾದ್ ಹೇಳಿದರು.
ವರದಿ: ವಸಂತ ಬಿ ಈಶ್ವರಗೆರೆ.., ಸಂಪಾದಕರು








