ಬೆಂಗಳೂರು: ಸರಕಾರದ ಕೆಟ್ಟ ನಡೆಯನ್ನು ವಿರೋಧಿಸಲು ಇಡೀ ರಾಜ್ಯದಲ್ಲಿ ರೈತರು ಮುಂದಾಗಿದ್ದಾರೆ. ಬಿಜೆಪಿ ಮುಖಂಡತ್ವ ರೈತರ ಪರವಾಗಿ ನಿಲ್ಲುವ ತೀರ್ಮಾನ ಮಾಡಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಮೊದಲಿನಿಂದಲೂ ರೈತಪರ ನಿಲುವನ್ನು ತೆಗೆದುಕೊಂಡಿದೆ. ಕಾಂಗ್ರೆಸ್ಸಿನ ರೈತವಿರೋಧಿ ನೀತಿಯನ್ನು ಖಂಡಿಸುವುದಲ್ಲದೇ ವಿರೋಧಿಸುತ್ತೇವೆ ಎಂದು ತಿಳಿಸಿದರು. ಅತಿವೃಷ್ಟಿ ಆದಾಗ ಎಲ್ಲರಿಗಿಂತ ಮೊದಲು ನಾವೇ ಹೋಗಿದ್ದೇವೆ. ವಿಜಯೇಂದ್ರ, ನಾನು ಮತ್ತು ಅಶೋಕ್ ಅವರು ತೆರಳಿದ್ದೇವೆ ಎಂದು ಪ್ರಶ್ನೆಗೆ ಉತ್ತರವಾಗಿ ವಿವರಿಸಿದರು. ನಾವು ಹೋಗುವ ವರೆಗೆ ಸರಕಾರ ಎಚ್ಚತ್ತುಕೊಂಡಿರಲಿಲ್ಲ ಎಂದು ತಿಳಿಸಿದರು.
ನಾನು ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ಅವರು ನಾಳೆ ಗುಂಡ್ಲುಪೇಟೆಗೆ ಹೋಗಲಿದ್ದೇವೆ ಎಂದರು. ಬೆಳಗಾವಿಯಲ್ಲಿ ಸರಕಾರ ತಕ್ಷಣ ಕಬ್ಬು ಬೆಳೆಗೆ ಬೆಲೆ ನಿಗದಿಪಡಿಸಬೇಕು. ಹಳೆಯ ಬಾಕಿ ಸಿಗದೇ ರೈತರು ಕಂಗಾಲಾಗಿದ್ದು, ಅದನ್ನು ವಾಪಸ್ ಕೊಡಿಸಬೇಕು ಎಂದು ಒತ್ತಾಯಿಸಿದರು.
ನಮ್ಮ ಪಕ್ಷದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಈಗಾಗಲೇ ಬೆಳಗಾವಿಯಲ್ಲಿ ಬೀಡು ಬಿಟ್ಟಿದ್ದಾರೆ. ನಾಳೆ ಅವರ ಜನ್ಮ ದಿನಾಚರಣೆ ಇದೆ. ರೈತರ ಸಮಸ್ಯೆಗಿಂತ ನನ್ನ ಜನ್ಮ ದಿನಾಚರಣೆ ದೊಡ್ಡದಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ. ರೈತÀರ ಸಮಸ್ಯೆ ಪರಿಹಾರವೇ ಮುಖ್ಯ. ಅಂಥದ್ದೇನಾದರೂ ಆದರೆ, ಜನ್ಮ ದಿನಾಚರಣೆ ಮಾಡಿಕೊಳ್ಳದೇ ಇಲ್ಲೇ ಇರುವುದಾಗಿ ಹೇಳಿದ್ದಾರೆ. ಹಾಗೇನಾದರೂ ಆದರೆ ನಾನು ಮತ್ತು ಆರ್.ಅಶೋಕ್ ಅವರು ಗುಂಡ್ಲುಪೇಟೆ ಕಾರ್ಯಕ್ರಮ ಮುಗಿದ ತಕ್ಷಣ ನಾವು ಕೂಡ ಬೆಳಗಾವಿಗೆ ಹೋಗಲಿದ್ದೇವೆ ಎಂದರು.
ಕಾಂಗ್ರೆಸ್ಸಿನ ಬಹುಮತದ ಸರಕಾರವಿದ್ದರೂ ಬೀದಿನಾಟಕ..
ಕಾಂಗ್ರೆಸ್ಸಿಗೆ ಸಂಪೂರ್ಣ ಬಹುಮತವಿದ್ದರೂ ಈ ರೀತಿ ಬೀದಿನಾಟಕ ಮಾಡುತ್ತಿರುವುದೇಕೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ಸಂಪೂರ್ಣ ಬಹುಮತ ಇದ್ದಾಗ ಜನರ ಸಮಸ್ಯೆ ಆಲಿಸಿ, ಪರಿಹಾರಕ್ಕೆ ಉತ್ತಮ ಅವಕಾಶ. ಆ ಕೆಲಸ ಮಾಡದೇ ಒಂದು ವರ್ಷದಿಂದ ಸಂಪುಟ ಪುನಾರಚನೆ ಮಾತನಾಡುತ್ತಿದ್ದಾರೆ; ಅಧಿಕಾರ ಹಸ್ತಾಂತರ, ನವೆಂಬರ್ ಕ್ರಾಂತಿ- ಇವೆಲ್ಲ ಏನು? ಈ ನಾಟಕ ಬಿಡಿ ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಬದಲಾವಣೆ ಅವರ ಇಷ್ಟ. ಏನಾದರೂ ಮಾಡಿ; ನಾವು ಅದನ್ನು ಕೇಳುತ್ತಿಲ್ಲ; ಸಂಪುಟ ಪುನಾರಚನೆಯನ್ನು ಹಬ್ಬದಂತೆ ಮಾಡದಿರಿ. ಅದು ಜನರಿಗೆ, ವಿಪಕ್ಷಕ್ಕೆ ಬೇಕಾಗಿಲ್ಲ. ನಮಗೆ ಬೇಕಾಗಿರುವುದು ಜನರ ಸಮಸ್ಯೆಗೆ ಪರಿಹಾರ ಎಂದು ತಿಳಿಸಿದರು. ಗುಂಡಿ ಮುಚ್ಚಲಾಗದೇ ಇವರು ಮೂರು- ನಾಲ್ಕು ವರ್ಷಗಳ ಹಿಂದೆ ಇದ್ದ ಸರಕಾರವನ್ನು ದೂಷಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ನಿಮ್ಮ ಸರಕಾರ ಬಂದ ಬಳಿಕ ಹಳ್ಳಗಳು ಬಿದ್ದಿವೆ. ಅದನ್ನು ಮುಚ್ಚಿರಿ ಎಂದು ಆಗ್ರಹಿಸಿದರು. ಅದನ್ನು ಬಿಟ್ಟು ಅಧಿಕಾರ ಹಸ್ತಾಂತರ, ಕ್ರಾಂತಿ ಎನ್ನುತ್ತೀರಿ. ಏನಿದೆಲ್ಲ ಎಂದು ಪ್ರಶ್ನಿಸಿದರು.
ಸಚಿವ ಸಂಪುಟದ ವಿರೋಧದ ನಡುವೆಯೂ ಕೃಷಿ ವಿಶ್ವವಿದ್ಯಾಲಯ ತಂದಿದ್ದೇನೆ: ಸಚಿವ ಎನ್.ಚಲುವರಾಯಸ್ವಾಮಿ
ಬಿಹಾರದಲ್ಲಿ ಬದಲಾವಣೆಗಾಗಿ ತೇಜಸ್ವಿ ಯಾದವ್ ಸಿಎಂ ಆಗಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್








