ಮಂಡ್ಯ: ಯಾವುದೇ ರಾಜಕೀಯ ಹಿನ್ನಲೆಯಿಲ್ಲದ ಒಬ್ಬ ಸಾಮಾನ್ಯ ರೈತ ಕುಟುಂಬದ ಮಗನಾಗಿ ಜಿಲ್ಲೆಯ ರೈತರಿಗೆ ಅನುಕೂಲ ಕಲ್ಪಿಸಬೇಕೆಂಬ ಉದ್ದೇಶದಿಂದ ಕೃಷಿ ವಿಶ್ವವಿದ್ಯಾಲಯವನ್ನು ತಂದಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಮದ್ದೂರು ನಗರದ ಖಾಸಗಿ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಗೆ ನೂತನವಾಗಿ ಆಯ್ಕೆಯಾಗಿರುವ ನಿರ್ದೇಶಕರಗಳಿಗೆ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಿಸಿಸಿ ಬ್ಯಾಂಕ್ ಚುನಾವಣಾ ಇತಿಹಾಸದಲ್ಲಿ ಎಂದು ಸಹ 12 ಸ್ಥಾನಗಳಲ್ಲಿ 9 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿರಲಿಲ್ಲ. ಈ ಚುನಾವಣೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ಶಾಸಕರು, ಮಾಜಿ ಅಧ್ಯಕ್ಷ ಜೋಗಿಗೌಡ ಅವರ ಉಸ್ತುವಾರಿಯಲ್ಲಿ 9 ಸ್ಥಾನಗಳನ್ನು ಅವಿರೋಧವಾಗಿ ಆಯ್ಕೆಯಾಗಲು ಸಾಧ್ಯವಾಗಿದ್ದು, ಇನ್ನು ಮೂರು ಸ್ಥಾನಗಳಿಗೆ ಚುನಾವಣೆ ನಡೆದು 2 ರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಜಿಲ್ಲೆಯ ರೈತರ ಹಿತ ದೃಷ್ಟಿಯಿಂದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಸಂಪುಟದ ಸದಸ್ಯರ ವಿರೋಧದ ನಡುವೆಯೂ ಜಿಲ್ಲೆಗೆ ಕೃಷಿ ವಿಶ್ವ ವಿದ್ಯಾಲಯಯನ್ನು ಮಂಜೂರು ಮಾಡಿಸಿದ್ದೇನೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮುಂದಾಲೋಚನೆಯಿಂದಾಗಿ ಜಿಲ್ಲೆಗೆ ಅವರದೇ ಆದ ಕೊಡುಗೆಗಳಿವೆ. ಹೀಗಾಗಿ ವಿ.ಸಿ.ಫಾರಂ ಅನ್ನು ಮತ್ತಷ್ಟು ಮೇಲ್ದರ್ಜೆಗೆರಿಸುವ ಹಿನ್ನೆಲೆಯಲ್ಲಿ ವಿಶ್ವ ವಿದ್ಯಾಲಯಯನ್ನು ತೆರೆಯಲಾಗಿದ್ದು, ಈಗಾಗಲೇ 100 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ಮಂಡ್ಯ ಜಿಲ್ಲೆ ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಹೊಂದುತ್ತಿದೆ. ಐದು ಗ್ಯಾರಂಟಿ ಯೋಜನೆಗಳ ಜೊತೆಗೆ ಜಿಲ್ಲೆಯ ಅಭಿವೃದ್ಧಿಗೂ ಸಹ 7 ಸಾವಿರ ಕೋಟಿಗೂ ಹೆಚ್ಚು ಅನುದಾನ ನೀಡಿ ಅಭಿವೃದ್ಧಿಗೂ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಮುಂಬರುವ ಚುನಾವಣೆಗಳಲ್ಲೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಶಕ್ತಿ ತುಂಬುವ ಕೆಲಸ ಮಾಡಬೇಕೆಂದು ಮನವಿ ಮಾಡಿದರು.
ಶಾಸಕ ಕೆ.ಎಂ.ಉದಯ್ ಮಾತನಾಡಿ, ಮಣ್ಣಿನ ಮಕ್ಕಳು ಅಂತ ಹೇಳಿಕೊಳ್ಳುತ್ತಿದ್ದವರು ಯಾವುದೇ ಅಭಿವೃದ್ಧಿ ಮಾಡಿಲ್ಲ. ಮದ್ದೂರು ಕ್ಷೇತ್ರ ಅಭಿವೃದ್ಧಿಯಲ್ಲಿ 25 ವರ್ಷಗಳ ಹಿಂದೆ ಉಳಿದಿತ್ತು. ಆದರೆ, ನಮ್ಮ ಸರ್ಕಾರ ಬಂದ ಎರಡೇ ವರ್ಷಗಳಲ್ಲಿ 1500 ಕೋಟಿಗೂ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಗೆ ಮುನ್ನುಡಿ ಬರೆಯಲಾಗಿದೆ.
ಕ್ಷೇತ್ರದಲ್ಲಿ ರೈತರ ಹಿತ ದೃಷ್ಟಿಯಿಂದ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈಗಾಗಲೇ ಸೂಳೆಕರೆ ಹಾಗೂ ದೇಶಹಳ್ಳಿ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದ್ದು, ಶಾಶ್ವತ ಪರಿಹಾರ ಸಿಗಲಿದೆ ಎಂದರು.
ಮುಂಬರುವ ಚುನಾವಣೆಗಳಲ್ಲಿ ನಿಮ್ಮ ಗ್ರಾಮಗಳಲ್ಲಿ ಮತ ಕೇಳಲು ಯಾವುದೇ ಮುಜುಗರ ಪಡಬೇಕಾಗಿಲ್ಲ ಎಂದು ಕಾರ್ಯಕರ್ತರಿಗೆ ವಿಶ್ವಾಸ ತುಂಬಿದರು.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿ ಗೌಡ ಮಾತನಾಡಿ, ಕೇಂದ್ರ ಸರ್ಕಾರ ನಬಾರ್ಡ್ ಬ್ಯಾಂಕ್ ಮೂಲಕ ಅಪೆಕ್ಸ್ ಬ್ಯಾಂಕ್ ಗೆ ಸಾಲ ಕೊಡುತ್ತಿತ್ತು. ಆದರೆ ಈ ಬಾರಿ ರಾಜ್ಯ ಸರ್ಕಾರ 9 ಸಾವಿರ ಕೋಟಿ ಸಾಲ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಮನವಿ ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಕೇವಲ 3 ಸಾವಿರ ಕೋಟಿ ರೂ ಮಾತ್ರ ಸಾಲ ನೀಡಿ ಅಸಹಕಾರ ತೋರಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಂಬರುವ ಹಿಂಗಾರು ಬೆಳೆಗೆ ಯಾವುದೇ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಕೊರತೆ ಉಂಟಾಗದಂತೆ ಈಗಾಗಲೇ 7 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ದಿನೇಶ್ ಗೂಳಿಗೌಡ ತಿಳಿಸಿದರು.
ಇನ್ನು ಕಾರ್ಯಕ್ರಮ ನಡೆಯುತ್ತಿದ್ದ ವೇಳೆಯೇ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಎಚ್.ವೈ.ಮೇಟಿ ಅವರು ಮೃತಪಟ್ಟಿದ್ದಾರೆ ಎಂಬ ಸುದ್ದಿ ತಿಳಿದು ಒಂದು ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನ ನೂತನ ನಿರ್ದೇಶಕರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮನ್ ಮುಲ್ ಅಧ್ಯಕ್ಷ ಉಮ್ಮಡಹಳ್ಳಿ ಶಿವಪ್ಪ, ಮದ್ದೂರು ನಗರಸಭಾ ಮಾಜಿ ಅಧ್ಯಕ್ಷೆ ಕೋಕಿಲ ಅರುಣ್, ಉಪಾಧ್ಯಕ್ಷ ಪ್ರಸನ್ನಕುಮಾರ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಬಸವರಾಜು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ಸತ್ಯಾನಂದ, ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ಭಾರತೀ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್, ಕದಲೂರು ರಾಮಕೃಷ್ಣ, ಸುರೇಶ್ ಸೇರಿದಂತೆ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ನಿಮಗೆ ಟೀ ಜೊತೆ ಸಿಗರೇಟ್ ಸೇದುವ ಅಭ್ಯಾಸ ಇದ್ಯಾ? ನಿಮ್ಮ ದೇಹಕ್ಕೆ ಈ ಹಾನಿ ಫಿಕ್ಸ್!
‘ಸಚಿವ ಸ್ಥಾನ’ಕ್ಕಾಗಿ ಅಗತ್ಯ ಬಿದ್ದರೇ ವರಿಷ್ಟರನ್ನು ಭೇಟಿಯಾಗಲು ದೆಹಲಿಗೆ ತೆರಳುವೆ: ಶಾಸಕ ಗೋಪಾಲಕೃಷ್ಣ ಬೇಳೂರು








