ಬಳ್ಳಾರಿ: ರಾಜ್ಯಾಧ್ಯಂತ ನಿನ್ನೆ ಕೆ-ಸೆಟ್ ಪರೀಕ್ಷೆ ನಡೆಯಿತು. ಈ ಪರೀಕ್ಷೆಯ ಸಂದರ್ಭದಲ್ಲಿ ಕೆಇಎ ಮತ್ತೊಂದು ಎಡವಟ್ಟು ಮಾಡಿದೆ. ಪರೀಕ್ಷೆಗೆ ಹಾಜರಾದಂತ ಮಹಿಳಾ ಅಭ್ಯರ್ಥಿಗಳ ಕಿವಿಯೋಲೆ, ಮೂಗುತಿಯನ್ನೇ ಸಿಬ್ಬಂದಿಗಳು ಬಿಚ್ಚಿಸಿರುವುದಾಗಿ ತಿಳಿದು ಬಂದಿದೆ.
ನಿನ್ನೆ ರಾಜ್ಯದ 11 ಜಿಲ್ಲೆಗಳ 316 ಕೇಂದ್ರಗಳಲ್ಲಿ ಕೆ-ಸೆಟ್ ಪರೀಕ್ಷೆಯನ್ನು ಅಭ್ಯರ್ಥಿಗಳು ಬರೆದಿದ್ದಾರೆ. ಒಟ್ಟು 33 ವಿಷಯಗಳಿಗೆ ನಡೆಯದಂತ ಕೆ-ಸೆಟ್ ಪರೀಕ್ಷೆಗೆ 1.36 ಲಕ್ಷ ಮಂದಿ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು.
ಬೆಂಗಳೂರು, ಬಳ್ಳಾರಿ, ಬೆಳಗಾವಿ, ದಾವಣಗೆರೆ, ಧಾರವಾಡ, ಕಲಬುರ್ಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು ಹಾಗೂ ವಿಜಯಪುರದ 316 ಕೇಂದ್ರಗಳಲ್ಲಿ ನಿನ್ನೆ ಕೆ-ಸೆಟ್ ಪರೀಕ್ಷೆ ನಡೆಯಿತು.ಬಳ್ಳಾರಿಯಲ್ಲಿ ಪರೀಕ್ಷಾ ಕೇಂದ್ರವೊಂದರಲ್ಲಿ ಕೆ-ಸೆಟ್ ಪರೀಕ್ಷೆಗೆ ಹಾಜರಾದಂತ ಮಹಿಳಾ ಅಭ್ಯರ್ಥಿಗಳ ಕಿವಿಯೋಲೆ, ಮೂಗುತಿ, ಕೈಕಡಗ ಸೇರಿದಂತೆ ಮೈಮೇಲೆ ಹಾಕಿಕೊಂಡಿರೋ ದೇವರ ದಾರವನ್ನು ಬಿಡದೇ ಬಿಚ್ಚಿಸಿರುವುದಾಗಿ ತಿಳಿದು ಬಂದಿದೆ.
ಕೆ-ಸೆಟ್ ಪರೀಕ್ಷೆಯ ವೇಳೆಯಲ್ಲಿ ಮಹಿಳಾ ಅಭ್ಯರ್ಥಿಗಳ ಕಿವಿಯೋಲೆ, ಮೂಗುತಿ ಹಾಗೂ ದೇವರ ದಾರ ಬಿಚ್ಚಿಸಿದ್ದರಿಂದ ಕೆಲ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಬಳಿಯಲ್ಲೇ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಇದರ ನಡುವೆಯೂ ಪರೀಕ್ಷೆ ಬರೆದರು.
ಪರೀಕ್ಷೆ ಬರೆದು ಹೊರ ಬಂದ ಮಹಿಳಾ ಅಭ್ಯರ್ಥಿಯೊಬ್ಬರು ಕಿವಿಯೋಲೆ, ಮೂಗುತಿ ಬಿಚ್ಚಿದ್ದು ನನ್ನ ಮನಸ್ಸಿಗೆ ನೋವಾಗಿದೆ. ಬೇಜಾರು ತಂದಿದೆ. ನಮಗೆ ಮಾಂಗಲ್ಯ, ಕಾಲುಂಗರ ಹೇಗೋ, ಹಾಗೆಯೇ ಮೂಗುತಿಯೂ ಬಹಳ ಮುಖ್ಯವಾದದ್ದು ಆಗಿದೆ. ನಿಯಮದ ಕಾರಣಕ್ಕೆ ಹೆಣ್ಣು ಮಕ್ಕಳ ಆಭರಣಗಳನ್ನು ಬಿಚ್ಚಿಸಿದ್ದು ಸರಿಯಲ್ಲ ಎಂಬುದಾಗಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.








